ಉಡುಪಿ: ಇದೊಂದು ವಿಶಿಷ್ಟ ಬೆಳೆ. ದೇಶದಲ್ಲಿ ಪೇಟೆಂಟ್ ಪಡೆದ ಮೊಟ್ಟಮೊದಲ ತರಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ತರಕಾರಿಯಿದು. ಅದ್ಯಾವುದೆಂದರೆ ಮಟ್ಟು ಗುಳ್ಳ ಎಂಬ ಬದನೆಕಾಯಿ. ಈ ತರಕಾರಿಯ ನಾಟಿಯ ವೇಳೆ ಪ್ರವಾಹ ಬಂದು ಕೃಷಿ ನಾಶವಾಗಿತ್ತು. ಕೃಷಿಯಲ್ಲಿ ತೊಡಗಿದ್ದ ಸಣ್ಣ ರೈತರಿಗೆ ಸರಕಾರ ಸ್ಪಂದಿಸಬೇಕಿದೆ.
ಏನಿದು ಮಟ್ಟು ಗುಳ್ಳ ಬದನೆಕಾಯಿ: ಮಟ್ಟು ಎಂಬ ಗ್ರಾಮದಲ್ಲಿ ಈ ಹೆಸರಿನ ಬದನೆಕಾಯಿ ಬೆಳೆಯುವುದರಿಂದ ಊರಿನ ಹೆಸರನ್ನೇ ಈ ವಿಶಿಷ್ಟ ಬದನೆಕಾಯಿಗೆ ನೀಡಲಾಗಿದೆ. ಮಟ್ಟು ಎಂಬ ಗ್ರಾಮದಲ್ಲಿ ಮಾತ್ರ ಈ ತಳಿಯ ಬದನೆಯನ್ನು ಬೆಳೆಸಲಾಗುತ್ತದೆ. ಸ್ಥಳೀಯ ಬೆಳೆಗಾರರ ಪಾಲಿಗೆ ಇದೊಂದು ವರದಾನವಾಗಿತ್ತು. ಆದರೆ ಈ ಬಾರಿ ಅದು ಶಾಪವಾಗಿ ಬದಲಾಗಿದೆ. ಈ ಬದನೆ ನಾಟಿಯ ವೇಳೆ ಉಡುಪಿಯಲ್ಲಿ ಮಹಾ ಪ್ರವಾಹ ಉಂಟಾದ ಕಾರಣ, ಬೆಳೆ ನಾಶವಾಗಿದೆ.
ಕೇವಲ ಸಣ್ಣಪುಟ್ಟ ರೈತರು ಮಾತ್ರ ಈ ತಳಿಯ ಬದನೆಯನ್ನು ಬೆಳೆಸುತ್ತಾರೆ. ಚಿಕ್ಕದಾದ ಭೂಮಿಯಲ್ಲಿ ಇವರು ನಾಟಿ ಮಾಡುತ್ತಾರೆ. ನಾಡಿನ ಇತರ ಭಾಗಗಳಿಗೆ ಹೋಲಿಸಿದಾಗ ಈ ಬೆಳೆ ಬೆಳೆಯುವ ಕೃಷಿಕರ ಸಂಖ್ಯೆ ಮತ್ತು ಭೂಮಿಯ ಪ್ರಮಾಣ ತುಂಬಾ ಕಡಿಮೆ ಇದೆ. ಹಾಗಾಗಿ ಸರ್ಕಾರ ಪರಿಹಾರ ನೀಡುವ ಪಟ್ಟಿಯಲ್ಲಿ ಈ ನಷ್ಟ ಪರಿಗಣನೆಗೆ ಬರುವುದಿಲ್ಲ. ಸರ್ವೇ ಮಾಡಿರುವ ಜಿಲ್ಲಾಡಳಿತ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ.
ಅಕಾಲಿಕ ಮಳೆಯ ಜೊತೆಗೆ ಉಪ್ಪು ನೀರಿನ ಸಮಸ್ಯೆಯೂ ಈ ಬೆಳೆಗಾರನನ್ನು ಬಾಧಿಸುತ್ತಿದೆ. ಸ್ಥಳೀಯವಾಗಿ ಪೂರ್ಣಗೊಳ್ಳದ ಸೇತುವೆ ಕಾಮಗಾರಿಯಿಂದ ತೋಟಗಳಿಗೆ ಉಪ್ಪು ನೀರು ನುಗ್ಗಿ ಮತ್ತಷ್ಟು ಸಮಸ್ಯೆ ಬಿಗಡಾಯಿಸಿದೆ. ಪೇಟೆಂಟ್ ಪಡೆದಾಕ್ಷಣ ಏನು ಲಾಭ? ಕಣ್ಣೀರಿಡುವುದು ತಪ್ಪಲಿಲ್ಲ ಎಂದು ಮಟ್ಟುಗುಳ್ಳ ಬೆಳೆಗಾರರು ರೋಧಿಸುತ್ತಿದ್ದಾರೆ.
ಗುಳ್ಳ ಬೆಳೆ ನೆರೆ ಬಂದರೆ ಬೆಳೆಯುವ ಬೆಳೆಯಲ್ಲ. ಮಳೆಯಿಂದ ರೈತರು ಸೋತಿದ್ದಾರೆ. ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೇವೆ ಎಂದು ಮಟ್ಟು ಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ಸುನಿಲ್ ಬಂಗೇರ ಅಭಿಪ್ರಾಯ ಹಂಚಿಕೊಂಡಿದ್ದಾರೆ.