Mannettina Amavasya: ರೈತರ ಜೀವನಾಡಿ ಎತ್ತುಗಳಿಗೆ ಇಂದು ವಿಶೇಷ ದಿನ.. ಇಲ್ಲಿದೆ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬ ಆಚರಣೆಯ ಪರಿ

| Updated By: ಆಯೇಷಾ ಬಾನು

Updated on: Jul 09, 2021 | 12:05 PM

ಕಾರ ಹುಣ್ಣಿವೆ ಮುಗಿದು ಬರುವ ಅಮವಾಸ್ಯೆಯೇ ಮಣ್ಣೆತ್ತಿನ ಅಮವ್ಯಾಸ್ಯೆ. ಹೊಲಗಳಿಗೆ ಹೋಗಿ ಜಿಗುಟಿನಿಂದ ಕೂಡಿದ ಮಣ್ಣನ್ನು ತಂದು ಎತ್ತುಗಳನ್ನು ತಯಾರಿಸುತ್ತಾರೆ. ಭೂತಾಯಿಯನ್ನು ಉಳುವ ಸಂಕೇತವಾದ ಎತ್ತುಗಳನ್ನು ದೊಡ್ಡ ಸಣ್ಣ ಆಕಾರಗಳಲ್ಲಿ ತಯಾರಿಸಿಕೊಳ್ಳುತ್ತಾರೆ.

Mannettina Amavasya: ರೈತರ ಜೀವನಾಡಿ ಎತ್ತುಗಳಿಗೆ ಇಂದು ವಿಶೇಷ ದಿನ.. ಇಲ್ಲಿದೆ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬ ಆಚರಣೆಯ ಪರಿ
ಮಣ್ಣೆತ್ತಿನ ಅಮಾವಾಸ್ಯೆ ಹಬ್ಬ
Follow us on

ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಸಂಪ್ರದಾಯದ ಮುಂಗಾರಿನ ಆರಂಭದ ಹಬ್ಬ ಮಣ್ಣೆತ್ತಿನ ಅಮವಾಸ್ಯೆ. ಕಾರ ಹುಣ್ಣಿವೆ ನಂತರ ಬರುವ ಈ ಹಬ್ಬ ರೈತಾಪಿ ಜನರು ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ಪೂಜಿಸಿ ಸಂಭ್ರಮ ಪಡುವ ಹಬ್ಬ. ಮಣ್ಣು ಒಕ್ಕಲು ಮಕ್ಕಳಿಗೆ ಅತ್ಯಂತ ಪವಿತ್ರವಾದುದ್ದು ವರ್ಷಾರಂಭದಿಂದ ಐದು ಮುಖ್ಯ ಮಣ್ಣಿನ ಪೂಜೆಯನ್ನು ನೆರವೇರಿಸುವ ಸಂಪ್ರದಾಯವಿದೆ.

ಆಷಾಢ, ಶ್ರಾವಣ ಮತ್ತು ಭಾದ್ರಪದ ಮಾಸಗಳು ಮಣ್ಣು ಪೂಜೆಯದ್ಯೋತಕವಾಗಿವೆ. ಮಣ್ಣೆತ್ತು, ಗುಳ್ಳವ್ವ, ಹುತ್ತಪ್ಪ, ಗಣಪ್ಪ ಹಾಗೂ ಜೋಕುಮಾರ ಈ ಐದೂ ಮಣ್ಣಿನಿಂದ ಮಾಡಿದ ದೈವಗಳನ್ನು ಮೂರು ಮಾಸಗಳಲ್ಲಿ ಪೂಜಿಸುತ್ತಾರೆ. ಕೃಷಿಕರ ಅತ್ಯಂತ ಒಡನಾಡಿಯಾಗಿರುವ ದನಕರುಗಳನ್ನು ಕಾರ ಹುಣ್ಣಿಮೆಯಲ್ಲಿ ವಿಶೇಷವಾಗಿ ಮೈ ತೊಳೆದು, ಬಣ್ಣ ಹಚ್ಚಿ, ವಿವಿಧ ಪರಿಕರಗಳಿಂದ ಸಿಂಗಾರ ಮಾಡಿ, ಹೋಳಿಗೆ, ಕಡಬು ಮುಂತಾದ ಸಿಹಿ ತಿನಿಸುಗಳನ್ನು ಮಾಡಿ ಎಡೆ ಹಿಡಿದು ಸಂಜೆಗೆ ಕರಿ ಹರಿಯುವ ಸಂಭ್ರಮ ಹೇಳತೀರದು. ದನಕರುಗಳನ್ನು ಮನಬಂದಂತೆ ಒಡಾಡಿಸುವ ಮೂಲಕ ತಿಂಗಳೊಪ್ಪತ್ತಿನಿಂದ ವಿಶ್ರಾಂತಿಗೆ ಸರಿದಿದ್ದ ಅವುಗಳನ್ನು ಮತ್ತೆ ಕೃಷಿಕಾಯಕಕ್ಕೆ ಸಜ್ಜು ಮಾಡುತ್ತಾರೆ.

ಕಾರ ಹುಣ್ಣಿವೆ ಮುಗಿದು ಬರುವ ಅಮವಾಸ್ಯೆಯೇ ಮಣ್ಣೆತ್ತಿನ ಅಮವ್ಯಾಸ್ಯೆ. ಹೊಲಗಳಿಗೆ ಹೋಗಿ ಜಿಗುಟಿನಿಂದ ಕೂಡಿದ ಮಣ್ಣನ್ನು ತಂದು ಎತ್ತುಗಳನ್ನು ತಯಾರಿಸುತ್ತಾರೆ. ಭೂತಾಯಿಯನ್ನು ಉಳುವ ಸಂಕೇತವಾದ ಎತ್ತುಗಳನ್ನು ದೊಡ್ಡ ಸಣ್ಣ ಆಕಾರಗಳಲ್ಲಿ ತಯಾರಿಸಿಕೊಳ್ಳುತ್ತಾರೆ. ಇಲ್ಲವೇ ಊರ ಕುಂಬಾರ ಮನೆಗಳಿಂದಲೂ ತಯಾರಿಸಿದ ಜೋಡಿ ಎತ್ತುಗಳನ್ನು ಜೋಳ ಕಾಳು ಹಣಕೊಟ್ಟು ಖರೀದಿಸಿ ತರುತ್ತಾರೆ.

ಲೇಖನ – ಡಾ. ಪ್ರಕಾಶ ಖಾಡೆ

ಕುಂಬಾರರು ಎತ್ತುಗಳೊಂದಿಗೆ ಒಂದಿಷ್ಟು ಹಸಿ ಮಣ್ಣನ್ನೂ ಕೊಡುತ್ತಾರೆ. ಈ ಹಸಿ ಮಣ್ಣಲ್ಲಿ ದನಗಳಿಗೆ ಹುಲ್ಲು ತಿನ್ನಲು ಗ್ವಾದಲಿ ಮಾಡುತ್ತಾರೆ. ಬಣ್ಣಗಳ ಬ್ಯಾಗಡಿ ಚೂರು, ಬಣ್ಣದಲ್ಲಿ ತೊಯಿಸಿದ ಜೋಳ. ಕುಸುಬಿ ಕಾಳುಗಳಿಂದ ಎತ್ತುಗಳಿಗೆ ಕೊಂಬಣಸು, ಇಣಿಗವಚ, ಜೂಲು, ತೋಡೆ, ಗಂಟೆ ಸರಗಳಿಂದ ಸಿಂಗರಿಸುತ್ತಾರೆ. ಸಿಂಗರಿಸಿದ ಜೋಡೆತ್ತುಗಳನ್ನು ನೋಡುವದೇ ಒಂದು ಸೊಗಸು. ನಂತರ ದೇವರ ಜಗುಲಿಯ ಮೇಲಿಟ್ಟು ಪೂಜೆಗೆ ಅಣಿಯಾಗುವ ಹೊತ್ತಿಗೆ ಮನೆ ಹೆಣ್ಣು ಮಕ್ಕಳು ಹೋಳಿಗೆ, ಕಡಬು ಸವಿ ಸವಿ ಅಡುಗೆ ಸಿದ್ದಪಡಿಸಿತ್ತಾರೆ.

ಮನೆಯ ದನಕರುಗಳನ್ನೂ ಮೈತೊಳೆದು ಪೂಜೆಗೆ ಸಿಂಗರಿಸುತ್ತಾರೆ. ಮಣ್ಣೆತ್ತುಗಳಿಗೆಕಾಯಿ, ಕರ್ಪೂರ, ಊದುಬತ್ತಿ, ಲೋಬಾನ ಹಾಕಿ ಎಡೆ ಹಿಡಿದು ಪೂಜೆ ಮಾಡುತ್ತಾರೆ. ಸಕಲ ಜೀವ ರಾಶಿಗಳಿಗೆ ಅನ್ನ ಹಾಕುವ ಭೂತಾಯಿಗೆ ಈ ಮೂಲಕ ಪೂಜೆ ಸಲ್ಲಿಸಿ ಕೃತಜ್ಞತೆ ಅರ್ಪಿಸುತ್ತಾರೆ. ಹೊಸ ಬಟ್ಟೆಗಳನ್ನು ತೊಟ್ಟು ಊರಲ್ಲಿ ದೇವರುಗಳಿಗೆ ಕಾಯಿ, ಕರ್ಪೂರದೊಂದಿಗೆ ಹೋಗಿ ಎಡೆ ಹಿಡಿದು ಬಂದು ಒಟ್ಟಾಗಿ ಕುಳಿತು ಊಟ ಮಾಡುತ್ತಾರೆ. ಸಂಜೆ ಆರತಿ ಹಿಡಿದ ಹೆಣ್ಣುಮಕ್ಕಳು ಮನೆ ಮನೆ ತೆರಳಿ ಪೂಜಿತ ಎತ್ತುಗಳಿಗೆ ಆರತಿ ಬೆಳಗಿ ಸಂಭ್ರಮಿಸುತ್ತಾರೆ.

ಮಣ್ಣೆತ್ತಿನ ಅಮಾವಾಸ್ಯೆ ಹಬ್ಬ

ಮರುದಿನ ಮಕ್ಕಳು ಎತ್ತುಗಳನ್ನು ತೆಗೆದುಕೊಂಡು ಅದರಲ್ಲಿ ಒಂದು ಎತ್ತಿನ ಕಾಲು ಮುರಿದು ತಟ್ಟೆಯಲ್ಲಿಟ್ಟುಕೊಂಡು ಮನೆ ಮನೆಗೆ ತೆರಳಿ ‘ಎಂಟತ್ತಿನ್ಯಾಗ ಒಂದ ಕುಂಟೆತ್ತ ಬಂದೈತಿ ಜ್ವಾಳಾ ನೀಡಿರಿ’ ಎಂದು ತಿರುಗುತ್ತಾರೆ. ಮನೆಯವರು ಜೋಳ, ಗೋದಿ, ಸಜ್ಜೆ, ಅಕ್ಕಿ, ಹಣ ನೀಡಿ ಕಳಿಸುತ್ತಾರೆ. ಸಂಗ್ರಹಿಸಿದ ದವಸ ಧಾನ್ಯಗಳನ್ನು ಊರ ಅಂಗಡಿಗೆ ಹಾಕಿ ಪಂಚ ಪಳಾರ, ಊದಬತ್ತಿ, ಕುಂಕುಮ, ವಿಭೂತಿ, ತೆಂಗಿನಕಾಯಿ, ಬೆಲ್ಲ, ಚುರಮುರಿ ಖರೀದಿಸುತ್ತಾರೆ.

ಎತ್ತುಗಳನ್ನು ತೆಗೆದುಕೊಂಡು ಹೊಳೆ, ಕೆರೆ, ಹಳ್ಳದ ದಂಡೆಗೆ ಹೋಗಿ ಅಲ್ಲಿ ಎಲ್ಲ ಮಣ್ಣೆತ್ತುಗಳಿಗೆ ಮುಖ ತೊಳೆದು ವಿಭೂತಿ, ಕುಂಕುಮ ಹಚ್ಚಿ ಉದುಬತ್ತಿ ಬೆಳಗಿ ಪಂಚ ಪಳಾರು ಹಾಕಿ, ಕಾಯಿ ಒಡೆದು ಕಾಲು ಮುಗಿದು ಊರ ಸಮೃದ್ಧಿಗೆ ಬೇಡಿಕೊಂಡು ಎತ್ತುಗಳನ್ನು ಹೊಳೆಗೆ ಬಿಡುತ್ತಾರೆ. ನಂತರ ದಾರಿಯಲ್ಲಿ ಸಿಕ್ಕವರಿಗೆ ಪಳಾರು ಹಂಚುತ್ತಾರೆ. ಇದು ಹಳ್ಳಿಯ ಮಕ್ಕಳ ಮಣ್ಣೆತ್ತಿನ ಅಮವಾಸ್ಯೆಯ ಸಂಭ್ರಮ. ಭೂತಾಯಿಗೆ ರೈತಾಪಿ ಜನ ಮಳೆ ಬೆಳೆ ಚೆನ್ನಾಗಿ ಆಗಲೆಂದು ಕೃಷಿ ವರ್ಷಾರಂಭದಲ್ಲಿ ಬೇಡಿಕೊಳ್ಳುವ ಹಬ್ಬವಾಗಿದೆ.

ಅರಳೆಲೆ ಬಸವನ ಪೂಜೆ
ಉತ್ತರ ಕರ್ನಾಟಕದಲ್ಲಿ ಜ್ಯೇಷ್ಠ ಬಹುಳ ಅಮವಾಸ್ಯೆಗೆ ಮಣ್ಣೆತ್ತಿನ ಅಮವಾಸ್ಯೆ ಎಂದು ಕರೆಯುತ್ತಾರೆ. ನಮ್ಮ ಹಳ್ಳಿಯ ಹೆಣ್ಣು ಮಕ್ಕಳು ಅರಳೆಲೆ ಬಸವನನ್ನು ಎಲೆಯ ಮಂಟಪದಲ್ಲಿ ಸಿಂಗಾರ ಮಾಡಿ ಊರ ಮಠದಲ್ಲಿಟ್ಟು ಪೂಜೆ ಮಾಡಿ ಹಾಡು ಹೇಳುತ್ತಾರೆ. ಕನ್ನಡದ ಮೊದಲ ಜಾನಪದ ಸಂಶೋಧನಾ ಪ್ರಬಂಧಕಾರ ಬಾದಾಮಿ ತಾಲೂಕು ಕೆರೂರಿನ ಡಾ.ಬಿ,ಎಸ್,ಗದ್ದಗಿಮಠರು ಸಂಗ್ರಹಿಸಿದ ಹೆಣ್ಣು ಮಕ್ಕಳು ಹಾಡುವ ಅರಳೆಲೆ ಬಸವನ ಪದ ಹೀಗಿದೆ…

ಒಂದು ಸುತ್ತಿನ ಕ್ವಾಟಿ
ಅದರೊಳು ಹೊಂದಿ ನಿಂತನು ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ಎರಡು ಸುತ್ತಿನ ಕ್ವಾಟಿ
ಅದರೊಳು ಸೊಡರು ತೂಗುವ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ಮೂರು ಸುತ್ತಿನ ಕ್ವಾಟಿ
ಅದರೊಳು ಮೂರ್ತಗೊಂಡನ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ನಾಲ್ಕು ಸುತ್ತಿನ ಕ್ವಾಟಿ
ಅದರೊಳು ನ್ಯಾಯಮೂರ್ತಿಯು ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ಐದು ಸುತ್ತಿನ ಕ್ವಾಟಿ
ಅದರೊಳು ಐಕ್ಯಮೂರ್ತಿಯು ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ಆರು ಸುತ್ತಿನ ಕ್ವಾಟಿ
ಅದರೊಳು ಅರಳಿ ನಿಂತಾನ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ಏಳು ಸುತ್ತಿನ ಕ್ವಾಟಿ
ಅದರೊಳು ಜಗವನಾಳುವ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ಎಂಟು ಸುತ್ತಿನ ಕ್ವಾಟಿ
ಶಿವನಿಗೆ ಕಂಟಲೆತ್ತೇನೋ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ಒಂಭತ್ತು ಸುತ್ತಿನ ಕ್ವಾಟಿ
ಅದರೊಳು ತುಂಬಿ ಬಂದಾನೊ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ
ಹತ್ತು ಸುತ್ತಿನ ಕ್ವಾಟಿ
ಅದರೊಳು ಸುತ್ತ ನೋಡಲು ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ಮಣ್ಣೆತ್ತಿನ ಅಮಾವಾಸ್ಯೆ ಹಬ್ಬ

ಇದನ್ನೂ ಓದಿ: ರೈತ, ಎತ್ತು ಹಾಗೂ ನೆಲಕ್ಕಿದೆ ಅವಿನಾಭಾವದ ನಂಟು: ಜಿಲ್ಲೆಯಲ್ಲಿ ಮಣ್ಣೆತ್ತಿನ ಅಮವಾಸೆ ಸಂಭ್ರಮ