Women’s Day Special: ಮಗ್ಗುಲ ಮುಳ್ಳಂತಿದ್ದ ಕ್ಯಾನ್ಸರ್ ಜತೆ ಹೋರಾಡುತ್ತ, ಕೊರೊನಾ ರೋಗಿಗಳ ಸೇವೆ ಮಾಡಿದ ನರ್ಸ್ ಕೃಪಾ ಶಿಲಬದ್ರ
ಕ್ಯಾನ್ಸರ್ ರೋಗ ತಗುಲಿದ್ದರೂ ಧೃತಿಗೆಡದೆ ಕೊರೊನಾ ಸೋಂಕಿತರ ಸೇವೆ ಮಾಡುತ್ತಾ, ಕರ್ತವ್ಯವೇ ತನಗೆ ಮುಖ್ಯ ಎಂದು ತೋರಿಸಿದ ಶುಷ್ರೂಷಕಿ ಕೃಪಾ ಶಿಲಬದ್ರ ಅವರ ಸಾಧನೆಯ ಕಥೆ ಇಲ್ಲಿದೆ. .
‘ಸ್ತ್ರೀ’ ಇದು ಬರೀ ಪದವಲ್ಲ. ಶಕ್ತಿ, ಮನಸ್ಥಿತಿ, ಸಾಧ್ಯತೆ, ಮಮತೆ, ಸ್ಫೂರ್ತಿ, ಸಂಭ್ರಮ. ಸಮತೆಯೂ. ಪೂಜ್ಯನೀಯ ಪಟ್ಟದಿಂದಾಚೆಯೂ ಆಕೆ ತನ್ನನ್ನು ತಾನಿವತ್ತೂ ನಿಭಾಯಿಸಿಕೊಳ್ಳುವಷ್ಟು ಸ್ವತಂತ್ರ ಮನೋಭಾವವನ್ನು ಹೊಂದಿದ್ದಾಳೆ. ಹಾಗಂತ ಪೂರ್ತಿಯಾಗಿ ಶೋಷಣೆಯಿಂದ ಹೊರಗಾಗಿದ್ದಾಳೆ ಎನ್ನುವುದನ್ನೂ ಒಪ್ಪಲಾಗದು. ಕೂಲಿಯಿಂದ ಸೇನೆಯವರೆಗೂ ಆಕೆ ಶಕ್ತಿಯಾಗಿ ಚಿಮ್ಮಿದ್ದಾಳೆಂದರೆ ಆಕೆಯ ದಿಟ್ಟತೆಗೆ ದೊಡ್ಡ ಇತಿಹಾಸವೇ ಇದೆ. ಅವಳು ಕಾಲಿಟ್ಟಲ್ಲೆಲ್ಲ ಹೊಳಹಿನ ಛಾಯೆ ಆವರಿಸುತ್ತದೆಯೆಂದರೆ ಒಡಲೊಳಗೆ ಕಟ್ಟಿಟ್ಟುಕೊಂಡ ತಾಳ್ಮೆ ಇದೆ, ವಿವೇಚನೆ ಇದೆ, ಸ್ವಾವಲಂಬೀ ಮನೋಭಾವವಿದೆ. ಹೀಗೆ ಅವಳ ಆತ್ಮಗೌರವವನ್ನು ದ್ವಿಗುಣಗೊಳಿಸುತ್ತಿರುವ ಬೆನ್ನಲ್ಲೇ ಮತ್ತೊಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅವಳನ್ನಪ್ಪಿದೆ (International Women’s Day 2021). ನಮ್ಮನಿಮ್ಮ ನಡುವೆಯೇ ಇರುವ ಸಾಧಕ ಮನಸ್ಥಿತಿಗಳನ್ನು ಈ ಸಂದರ್ಭದಲ್ಲಿ ನಾವು ನಿಮಗೆ ಪರಿಚಯಿಸುತ್ತಿದ್ದೇವೆ. ಅದರಲ್ಲಿ ಈಗ ನಾವು ಹೇಳಹೊರಟಿರುವುದು ನರ್ಸ್ ಕೃಪಾ ಶಿಲಬದ್ರ ಅವರ ಧೈರ್ಯದ ಹೆಜ್ಜೆಯ ಬಗ್ಗೆ..
ಸ್ವತಃ ತಾವು ಕ್ಯಾನ್ಸರ್ನಿಂದ ಬಳಲುತ್ತಿದ್ದರೂ ಕೊರೊನಾ ವಿರುದ್ಧ ದಿಟ್ಟ ಹೋರಾಟ ನಡೆಸಿದ ನರ್ಸ್ ಈ ಕೃಪಾ ಶಿಲಬದ್ರ. ಆಕೆಯ ಮನಸ್ಸಲ್ಲಿ ಹೇಳಿಕೊಳ್ಳಲಾಗದಷ್ಟು ನೋವು. ದಿನ ಬೆಳಗಾದ್ರೆ ಕೊರೊನಾ ಎಂಬ ಮಹಾಮಾರಿಯ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಇತ್ತ ಮನೆಯವರು ಕೆಲಸವೇ ಬೇಡ ಅಂದ್ರೆ ಪತಿ ಮಾತ್ರ ಧೈರ್ಯದ ಮಾತುಗಳನ್ನು ಹೇಳ್ತಿದ್ರು. ಎಲ್ಲ ಗೊಂದಲ, ನೋವಿನ ಮಧ್ಯೆಯೂ ಕಳೆದ ಏಪ್ರಿಲ್ನಿಂದ..ಡಿಸೆಂಬರ್ವರೆಗೆ ಕೊರೊನಾ ವಾರಿಯರ್ ಆಗಿ ದುಡಿದ ಕೃಪಾ ಶಿಲಬದ್ರ ನಿಜಕ್ಕೂ ಧೀರ ಮಹಿಳೆ.
ಕೃಪಾ ಶಿಲಬದ್ರ ಮೂಲತಃ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕಳೆದ 15 ವರ್ಷಗಳಿಂದ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ 2009 ರಲ್ಲಿ ಕ್ಯಾನರ್ ಎಂಬ ಹೆಮ್ಮಾರಿ ತಗುಲಿತ್ತು. ಎದೆ ಗುಂದದೇ ಹುಬ್ಬಳ್ಳಿಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಳ್ಳಲು ಪ್ರಾರಂಭಿಸಿದರು. ಕ್ಯಾನ್ಸರ್ ಚಿಕಿತ್ಸೆಗಾಗಿ ಆಪರೇಷನ್ ಕೂಡಾ ಮಾಡಿಕೊಂಡರು. ಅವರ ಸೇವಾ ಮನೋಭಾವ ಎಂಥದ್ದು ಅಂದರೆ, ತಮಗೆ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ಆಗಿದೆ ಎಂದು ಗೊತ್ತಿದ್ದರೂ ಆಪರೇಷನ್ ಆದ 12ನೇ ದಿನಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದರು.
ಕಳೆದ ವರ್ಷ ಇಡೀ ವಿಶ್ವವನ್ನೇ ನಡುಗಿಸಿದ ಮಹಾ ಹೆಮ್ಮಾರಿ ಕೊರೊನಾ ಕಾಲದಲ್ಲೂ ಕೃಪಾ ಅವರ ಕ್ಯಾನ್ಸರ್ ಚಿಕಿತ್ಸೆ ನಡೆಯುತ್ತಲೇ ಇತ್ತು. ಆಗಲೇ ಕೊರೊನಾ ಎಂಬ ಹೆಮ್ಮಾರಿ ಇವರನ್ನು ಕಂಗೆಡಿಸಿತ್ತು. ತನ್ನ ಕರ್ತವ್ಯದಿಂದ ಹಿಂದೆ ಸರಿಯಬಾರದು ಎಂದು ನಿರ್ಧರಿಸಿದ ಕೃಪಾ, ತಾವು ಕ್ಯಾನ್ಸರ್ ಎಂಬ ರೋಗದ ವಿರುದ್ಧ ಹೋರಾಡುತ್ತಲೇ, ಕೊರೊನಾ ಸೋಂಕಿತರ ಸೇವೆ ಮಾಡುತ್ತಿದ್ದರು. ತಮ್ಮ ಹಾಗೇ ಎಲ್ಲರೂ ಕೂಡಾ ಮನುಷ್ಯರು ಹೀಗಾಗೇ ನಮ್ಮ ಕೈಲಾದ ಸಹಾಯ ಮಾಡೋಣ ಎನ್ನುವ ಸದುದ್ದೇಶದಿಂದ ಕೃಪಾ ಕೊರೊನಾ ವಾರಿಯರ್ ಆಗಿ ಕೆಲಸ ನಿರ್ವಹಿಸಿದರು. ಕೊವಿಡ್ ವಾರ್ಡ್ನಲ್ಲಿ ಬರೋಬ್ಬರಿ ಆರು ತಿಂಗಳು ಸೇವೆ ಸಲ್ಲಿಸಿದ್ದಾರೆ.
ಮನೆಯವರು ಬೇಡ ಅಂದರೂ ಪತಿ ಧೈರ್ಯ ತುಂಬಿದ್ದರು ಮೊದಲೇ ಹೇಳಿ ಕೇಳಿ ಕ್ಯಾನ್ಸರ್ ಬೇರೆ, ಜೊತೆಗೆ ಈ ಭಯಾನಕ ಕೊರೊನಾ ಸೋಂಕಿನ ಹಾವಳಿ. ಇಂತಹ ಸಮಯದಲ್ಲಿ ಕೆಲಸ ಮಾಡೋದು ಬೇಡ ಎನ್ನುವ ನಿರ್ಧಾರಕ್ಕೆ ಮನೆಯವರು ಬಂದಿದ್ದರು. ಆದರೆ, ಕೃಪಾ ಮಾತ್ರ ಜನರ ನೋವು ಕಷ್ಟ ನೋಡಲಾರದೇ, ತಮ್ಮ ಪತಿ ಬಳಿ ಜನರ ಕಷ್ಟವನ್ನು ತೋಡಿಕೊಂಡಿದ್ದಾರೆ. ಹೀಗಾಗಿಯೇ ಪತಿ ಕೂಡಾ ಕೆಲಸಕ್ಕೆ ಹಿಂದಿರುಗಲು ಧೈರ್ಯ ನೀಡಿದ್ದಾರೆ.
ತಾವು ಇನ್ನೊಬ್ಬರ ಜೊತೆ ಬೆರೆತು ತಮ್ಮ ಮಾನಸಿಕ ನೋವನ್ನ ಮರೆಯುತ್ತಿದ್ದರು ಕೃಪಾ. ಹೀಗಾಗೇ ಕ್ಯಾನ್ಸರ್ ಎನ್ನೋ ಮಾಹಾಮಾರಿಯನ್ನೇ ಸೋಲಿಸಿದ್ದಾರೆ. ತಾವೇ ಖುದ್ದು ಸರಿಯಾದ ಸಮಯಕ್ಕೆ ಔಷಧ ಹಾಗೂ ಊಟ ಮಾಡಬೇಕು ಎನ್ನುವ ನಿಯಮ ಇದ್ದಾಗಲೂ ಕೃಪಾ ಕ್ಯಾನ್ಸರ್ ಕುರಿತಂತೆ ತಲೆ ಕೆಡಿಸಿಕೊಳ್ಳದೇ ತನ್ನ ಕರ್ತವ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕರ್ತವ್ಯ ನಿರ್ವಹಿಸುತ್ತಿದ್ದ ಕೃಪಾ, ಕೆಲವು ಬಾರಿ ಮನೆಗೆ ಬಾರದೇ ಕೆಲವು ಬಾರಿ ಆಸ್ಪತ್ರೆಯಲ್ಲಿಯೇ ಉಳಿದುಕೊಳ್ಳುವ ಪ್ರಸಂಗವೂ ಎದುರಾಗಿತ್ತು. ತಮ್ಮ ಆರೋಗ್ಯದ ಜೊತೆ ಇರತರರ ಆರೋಗ್ಯವನ್ನೂ ಕಾಪಾಡಿಕೊಂಡು ಹೋರಾಟ ನಡೆಸಿದ್ದಾರೆ. ಒಟ್ಟಿನಲ್ಲಿ ಕಳೆದ ಆರು ತಿಂಗಳ ಸೇವೆ ತಮ್ಮ ಜೀವಮಾನದಲ್ಲಿ ಮರೆಯೋಕ್ಕೇ ಸಾಧ್ಯವಿಲ್ಲ ಎನ್ನುತ್ತಾರೆ ಕೃಪಾ.
ಇದನ್ನೂ ಓದಿ: Women’s Day Special: ಮಹಾಮಾರಿ ಕೊರೊನಾವನ್ನು ಹತ್ತಿಕ್ಕಲು ನಿರಂತರವಾಗಿ ಶ್ರಮಿಸಿದ ಮಹಿಳಾ ಅಧಿಕಾರಿ ಡಾ. ಪದ್ಮಾ
Published On - 3:38 pm, Mon, 8 March 21