ನವಲಗುಂದ ಪಟ್ಟಣದ ಕಾಮದೇವನಿಗೆ ಹರಕೆ ಹೊತ್ತರೆ ಒಂದೇ ವರ್ಷದಲ್ಲಿ ಈಡೇರುತ್ತೆ ಅನ್ನೋ ನಂಬಿಕೆ!
ನವಲಗುಂದ ಪಟ್ಟಣದ ರಾಮಲಿಂಗ ದೇವಸ್ಥಾನದ ಕಾಮದೇವನಿಗೆ ಹರಕೆ ಹೊತ್ತರೆ ಮಕ್ಕಳಾಗದವರಿಗೆ ಮಕ್ಕಳು, ಮದುವೆಯಾಗದವರಿಗೆ ಮದುವೆ ಭಾಗ್ಯ ಲಭಿಸುತ್ತೆ ಅನ್ನೋ ನಂಬಿಕೆ ಇದೆ. ಹೀಗಾಗಿಯೇ ಭಕ್ತರು ಇಲ್ಲಿಗೆ ಬಂದು ದರ್ಶನ ಪಡೆಯುತ್ತಾರೆ. ಅನಾರೋಗ್ಯ ಪೀಡಿತರು ಕೂಡ ಇಲ್ಲಿಗೆ ಬಂದು ಹರಕೆ ಮಾಡಿಕೊಳ್ಳುತ್ತಾರೆ. ಒಂದೇ ವರ್ಷದಲ್ಲಿ ಅವರ ಹರಕೆ ತೀರುತ್ತೆ ಅನ್ನೋ ನಂಬಿಕೆ ಅನೇಕ ಭಕ್ತರದ್ದು.
ಹೋಳಿ ಹುಣ್ಣಿಮೆ ಬಂದ್ರೆ ಸಾಕು ಎಲ್ಲೆಡೆ ಮೋಜು, ಮಸ್ತಿ, ಬಣ್ಣದೋಕುಳಿ, ನೃತ್ಯಗಳದ್ದೇ ದರ್ಬಾರು. ಆದರೆ ಧಾರವಾಡ ಜಿಲ್ಲೆಯಲ್ಲೊಂದು ದೇವಸ್ಥಾನವಿದೆ. ಆ ದೇವಸ್ಥಾನದಲ್ಲಿ ಈ ವೇಳೆ ಐದು ದಿನಗಳ ಕಾಲ ಕಾಮಣ್ಣನ (Kamadeva) ವಿಗ್ರಹ ಸ್ಥಾಪಿಸಿ, ಪೂಜೆಗೈಯಲಾಗುತ್ತೆ. ಅಚ್ಚರಿಯ ನಂಬಿಕೆ ಏನೆಂದರೆ, ಈ ಕಾಮಣ್ಣ ತನ್ನ ಭಕ್ತರು ಕೇಳಿದ್ದನ್ನೆಲ್ಲಾ ಕೊಡೋ ಕಾಮಧೇನು. ಇದೇ ಕಾರಣಕ್ಕೆ ಈ ಕಾಮಣ್ಣನ ದರ್ಶನಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅಂಥದ್ದೊಂದು ದೇವಸ್ಥಾನದ ವರದಿ ಇಲ್ಲಿದೆ. ಸಾಲು ಸಾಲಾಗಿ ನಿಂತಿರೋ ಭಕ್ತರು; ಸುಂದರವಾಗಿ ಅಲಂಕರಿಸಿರೋ ದೇವರಿಗೆ ಭಕ್ತಿಯ ನಮನ; ಆತನಿಗಾಗಿಯೇ ತಂದಿರೋ ಬಗೆ ಬಗೆಯ ಹೂವು-ಹಣ್ಣು; ದರ್ಶನದ ಬಳಿಕ ಪ್ರಸಾದ ಸೇವಿಸಿ ಭಕ್ತಿ ಮೆರೆಯೋ ಭಕ್ತರು – ಇದೆಲ್ಲ ಕಂಡು ಬರೋದು ಧಾರವಾಡ ಜಿಲ್ಲೆಯ (Dharwad) ನವಲಗುಂದ (Navlagunda) ಪಟ್ಟಣದ ರಾಮಲಿಂಗ ದೇವಸ್ಥಾನದ ಬಳಿ… ( Village Festival)
ಹೌದು; ಹೋಳಿ ಹುಣ್ಣಿಮೆ ಅಂಗವಾಗಿ ನಡೆಯೋ ಭಕ್ತಿಯ ಜಾತ್ರೆಯಿದು. ರಾಮಲಿಂಗ ಕಾಮದೇವರ ದರ್ಶನಕ್ಕೆಂದು ಕರ್ನಾಟಕವಷ್ಟೇ ಅಲ್ಲ, ಅಕ್ಕಪಕ್ಕದ ರಾಜ್ಯಗಳಿಂದಲೂ ಜನರು ಆಗಮಿಸುತ್ತಾರೆ. ಹೋಳಿ ಹುಣ್ಣಿಮೆ ಹಿಂದಿನ ಏಕಾದಶಿ ರಾತ್ರಿ ಕಾಮಣ್ಣನ ಮೂರ್ತಿಯ ನಿರ್ಮಾಣ ಕಾರ್ಯ ಶುರುವಾಗಿ ದ್ವಾದಶಿ ಮುಕ್ತಾಯವಾಗುತ್ತೆ. ಅಂದು ಬೆಳಿಗ್ಗೆ ಕಾಮಣ್ಣನ ಪ್ರತಿಷ್ಠಾಪನೆ ಆಗುತ್ತಲೇ ಐದು ದಿನಗಳ ಅವಧಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬಂದು, ದರ್ಶನ ತೆಗೆದುಕೊಂಡು ಹೋಗುತ್ತಾರೆ. ನಿನ್ನೆ ಗುರುವಾರ ಆ ದಿನ ಆರಂಭವಾಗಿದ್ದು, ಐದು ದಿನಗಳ ಕಾಲ ಕಾಮದೇವನ ಜಾತ್ರೆ ನಡೆಯಲಿದೆ.
Also Read: ಸ್ನೇಹಿತನ ಪತ್ನಿಯನ್ನೇ ಪಟಾಯಿಸಿ ಬಾಳು ಕೊಟ್ಟಿದ್ದ! ಇದೀಗ ದೋಖಾ, ಬೀದಿಗೆ ಬಂದ ಮಹಿಳೆಯಿಂದ ತಮಟೆ ಹೊಡೆದು ಧರಣಿ
ಈ ರಾಮಲಿಂಗ ಕಾಮದೇವನಿಗೆ ನಡೆದುಕೊಂಡರೆ ಮಕ್ಕಳಾಗದವರಿಗೆ ಮಕ್ಕಳು, ಮದುವೆಯಾಗದವರಿಗೆ ಮದುವೆ ಭಾಗ್ಯ ಲಭಿಸುತ್ತೆ ಅನ್ನೋ ನಂಬಿಕೆ ಇದೆ. ಹೀಗಾಗಿಯೇ ಮಕ್ಕಳಾಗದವರು, ಮದುವೆಯಾಗದ ಯುವಕ-ಯುವತಿಯರು ಬಂದು ದರ್ಶನ ಪಡೆಯುತ್ತಾರೆ. ಅನಾರೋಗ್ಯ ಪೀಡಿತರು ಕೂಡ ಇಲ್ಲಿಗೆ ಬಂದು ಹರಕೆ ಮಾಡಿಕೊಳ್ಳುತ್ತಾರೆ. ಒಂದೇ ವರ್ಷದಲ್ಲಿ ಅವರ ಹರಕೆ ತೀರುತ್ತೆ ಅನ್ನೋ ನಂಬಿಕೆ ಅನೇಕ ಭಕ್ತರದ್ದು.
ತಮ್ಮ ಬೇಡಿಕೆ ಈಡೇರಿದ ಬಳಿಕ ಮತ್ತೆ ಬರೋ ಜನರು, ಭಕ್ತಿಯಿಂದ ಕಾಮಣ್ಣನ ದರ್ಶನ ಪಡೆದು ಹೋಗುತ್ತಾರೆ. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಬರೋ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗೆ ಬರೋ ಭಕ್ತರಿಗೆ ದೇವಸ್ಥಾನದ ಸಮಿತಿ ವತಿಯಿಂದ ಭಕ್ತರಿಗೆ ಉಚಿತ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಇನ್ನು ಈ ರೀತಿ ದರ್ಶನ ಪಡೆದು ಹೋದವರ ವರ ಸಿದ್ಧಿಸಿದ ಬಳಿಕ ಅವರು ಮತ್ತೆ ಬಂದು ಕಾಮದೇವರ ದರ್ಶನ ಪಡೆದು ಹೋಗುತ್ತಾರೆ.
ಇನ್ನು ದೇವಸ್ಥಾನಕ್ಕೆ ಬೇರೆ ಬೇರೆ ರಾಜ್ಯಗಳಿಂದಲೂ ಜನರು ಬರೋ ಹಿನ್ನೆಲೆಯಲ್ಲಿ ಸ್ಥಳೀಯರು ಅವರಿಗೆ ತೊಂದರೆಯಾಗದಂತೆ ಎಲ್ಲ ವ್ಯವಸ್ಥೆ ಮಾಡುತ್ತಾರೆ. ಇನ್ನು ಸ್ಥಳೀಯರೇ ಎಲ್ಲಡೆ ನಿಂತು, ದರ್ಶನಕ್ಕೆ ಬರೋ ಭಕ್ತರ ಸೇವೆ ಮಾಡುತ್ತಾರೆ. ಹೋಳಿ ಬಂದರೆ ಎಲ್ಲೆಡೆ ಕಾಮದಹನ, ಬಣ್ಣದೋಕುಳಿ ಸೇರಿದಂತೆ ವಿವಿಧ ಬಗೆಯ ಮನರಂಜನೆಯ ಆಚರಣೆಗಳಿದ್ದರೆ, ಇಲ್ಲಿ ಮಾತ್ರ ಭಕ್ತಿಯ ವಿಭಿನ್ನ ಬಗೆಯ ಆಚರಣೆ ಕಂಡು ಬರುತ್ತದೆ. ಹಲವಾರು ದಶಕಗಳಿಂದ ನಡೆದುಕೊಂಡು ಬಂದಿರೋ ಈ ಆಚರಣೆ ಇಂದಿಗೂ ಮುಂದುವರೆದಿದ್ದು ಕಾಮಣ್ಣನ ಮೇಲಿನ ಭಕ್ತಿ ಜನರಿಗೆ ಎಷ್ಟಿದೆ ಅನ್ನೋದನ್ನು ಎತ್ತಿ ತೋರಿಸುತ್ತೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ