ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಆರೋಗ್ಯ ಸುಧಾರಣೆಗೆ 300 ಕೋಟಿ ರೂ. ಮೀಸಲು

ಕಲ್ಯಾಣ ಕರ್ನಾಟಕ ಪ್ರದೇಶದ 7 ಜಿಲ್ಲೆಗಳಲ್ಲಿ 70 ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸಕ್ತ ಸಾಲಿನ ಆಯವ್ಯಯದಲ್ಲಿ 221 ಕೋಟಿ ರೂ. ವೆಚ್ಚದಲ್ಲಿ 46 ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಸರ್ಕಾರ ಘೋಷಿಸಿದ್ದು, ಇದರಲ್ಲಿ 33ಕ್ಕೆ ಮಂಡಳಿ ಅನುದಾನ ನೀಡಲಿದೆ.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಆರೋಗ್ಯ ಸುಧಾರಣೆಗೆ 300 ಕೋಟಿ ರೂ. ಮೀಸಲು
ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ವಿವೇಕ ಬಿರಾದಾರ

Updated on: Mar 03, 2024 | 2:54 PM

ಕಲಬುರಗಿ, ಮಾರ್ಚ್​ 03: ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿನ ಅಪೌಷ್ಟಿಕತೆ ನಿವಾರಣೆ ಮತ್ತು ಆರೋಗ್ಯ ಸೌಕರ್ಯ ಹೆಚ್ಚಿಸಲು ಪ್ರಸಕ್ತ ವರ್ಷ ಕಲ್ಯಾಣ ಕರ್ನಾಟಕ ಅಭಿವೃಧಿ ಮಂಡಳಿಯು (KKRDB) ಆರೋಗ್ಯ ಆವಿಷ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದಕ್ಕಾಗಿ 250 ರಿಂದ 300 ಕೋಟಿ ರೂ. ಅನುದಾನ ಮೀಸಲಿರಿಸಿದೆ ಎಂದು ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಮಾಹಿತಿ ನೀಡಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶದ 7 ಜಿಲ್ಲೆಗಳಲ್ಲಿ 70 ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸಕ್ತ ಸಾಲಿನ ಆಯವ್ಯಯದಲ್ಲಿ 221 ಕೋಟಿ ರೂ. ವೆಚ್ಚದಲ್ಲಿ 46 ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಸರ್ಕಾರ ಘೋಷಿಸಿದ್ದು, ಇದರಲ್ಲಿ 33ಕ್ಕೆ ಮಂಡಳಿ ಅನುದಾನ ನೀಡಲಿದೆ. ಉಳಿದ ಆಸ್ಪತ್ರೆಗೆ ಆರೋಗ್ಯ ಇಲಾಖೆ, ವಿಜಯನಗರ ಜಿಲ್ಲೆಯಲ್ಲಿ ಮಿನರಲ್ ಫಂಡ್‍ನಿಂದ ಹಣ ಪಡೆಯಲಾಗುತ್ತದೆ ಎಂದರು.

ರಾಜ್ಯದ ಗಾಮೀಣ ಪ್ರದೇಶದಲ್ಲಿ ವಿಭಾಗವಾರು ಪಿ.ಹೆಚ್.ಸಿ. ಸಂಖ್ಯೆ ಗಮನಿಸಿದಾಗ: ಬೆಂಗಳೂರು ವಿಭಾಗದಲ್ಲಿ 1.13 ಕೋಟಿ ಜನಸಂಖ್ಯೆಗೆ 646, ಬೆಳಗಾವಿ ವಿಭಾಗದಲ್ಲಿ 1.18 ಕೋಟಿ ಜನಸಂಖ್ಯೆಗೆ 455, ಮೈಸೂರು ವಿಭಾಗದಲ್ಲಿ 94.95 ಲಕ್ಷ ಜನಸಂಖ್ಯೆಗೆ 659 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೆ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 1.08 ಕೋಟಿ ಜನಸಂಖ್ಯೆಗೆ 333 ಪಿ.ಹೆಚ್.ಸಿ. ಇವೆ. ಇವು ಇತರೆ ಭಾಗಕ್ಕಿಂತ ತುಂಬಾನೆ ಕಡಿಮೆ ಇದೆ. ಇದು ಸಹ ಆರೋಗ್ಯ ಕ್ಷೇತ್ರದಲ್ಲಿ ಪ್ರದೇಶ ಹಿಂದುಳಿಯಲು ಕಾರಣವಾಗಿದ್ದು, ಈ ಅಂತರವನ್ನು ಕಡಿಮೆ ಮಾಡಲು ಪಿ.ಹೆಚ್.ಸಿ. ಸ್ಥಾಪಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: ಶಿಕ್ಷಕರಿಗೇ ಪಾಠ – ಇದು ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳ ಏಳಿಗೆಗಾಗಿ

ಪ್ರದೇಶದಲ್ಲಿ ಅಪೌಷ್ಠಿಕತೆ ನಿವಾರಣೆ, ತಾಯಿ-ಶಿಶು ಮರಣ ತಗ್ಗಿಸುವುದು ಸೇರಿದಂತೆ ಆರೋಗ್ಯ ಸಮಸ್ಯೆ ಸುಧಾರಣೆಗಳ ಅಧ್ಯಯನಕ್ಕೆ ರಾಯಚೂರಿನಲ್ಲಿ 48 ಕೊಟಿ ರೂ. ವೆಚ್ಚದಲ್ಲಿ ಹ್ಯೂಮನ್ ಜಿನೋಮ್ ಸೆಂಟರ್ ಸ್ಥಾಪನೆ, ತಲಾ 14 ಕೋಟಿ ರೂ. ವೆಚ್ಚದಲ್ಲಿ 17 ಸಮುದಾಯ ಆರೋಗ್ಯ ಕೇಂದ್ರ ನಿರ್ಮಿಸಲಾಗುತ್ತಿದೆ. 41 ಬಿ.ಎಲ್.ಎಸ್., 7 ಎ.ಎಲ್.ಎಸ್. ಅತ್ಯಾಧುನಿಕ ಅಂಬುಲೆನ್ಸ್‍ಗಳನ್ನು ಖರೀದಿಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಇದಕ್ಕಾಗಿ ಪ್ರಾದೇಶಿಕ ನಿಧಿಯಡಿ 16.40 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಮಹಿಳೆಯರಲ್ಲಿ ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಮೆನ್ಸಟ್ರೂಯಲ್ ಕಪ್ ವಿತರಣೆಗೆ 2.10 ಕೊಟಿ ರೂ. ವ್ಯಯ ಮಾಡಲಾಗುತ್ತಿದೆ. ಕಲಬುರಗಿಯಲ್ಲಿ ಆರೋಗ್ಯ ಸೌಧ ನಿರ್ಮಾಣಕ್ಕೆ 10 ಕೋಟಿ ರೂ. ಮೀಸಲಿರಿಸಿದೆ. ಡಾ.ಡಿ.ಎಂ. ನಂಜುಂಡಪ್ಪ ವರದಿಯಲ್ಲಿ ಶಿಕ್ಷಣ, ಆರೋಗ್ಯ, ಪರಿಸರಕ್ಕೆ ಹೆಚ್ಚಿನ ಒತ್ತು ನೀಡಲು ತಿಳಿಸಿದ್ದು, ಅದರಂತೆ ಪ್ರಸಕ್ತ 2023-24ನೇ ಸಾಲಿನಲ್ಲಿ ಮಂಡಳಿಯು ಅಕ್ಷರ ಆವಿಷ್ಕಾರಕ್ಕೆ 750 ಕೋಟಿ ರೂ. ಮತ್ತು ಆರೋಗ್ಯ ಆವಿಷ್ಕಾರಕ್ಕೆ ಸುಮಾರು 300 ಕೋಟಿ ರೂ. ಖರ್ಚು ಮಾಡುತ್ತಿದೆ. ಒಟ್ಟಾರೆಯಾಗಿ ಪ್ರದೇಶದ 41 ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 50 ರಿಂದ 75 ಕೋಟಿ ರೂ. ವರೆಗೆ ಹಣ ಖರ್ಚು ಮಾಡಲಾಗುತ್ತಿದೆ ಎಂದರು.

ಪ್ರಸಕ್ತ 2023-24ನೇ ಸಾಲಿಗೆ ಹಂಚಿಕೆಯಾದ 3,000 ಕೋಟಿ ರೂ. ಅನುದಾನದಲ್ಲಿ 2,600 ಕೋಟಿ ರೂ. ಅನುದಾನಕ್ಕೆ ಈಗಾಗಲೆ ಮಂಡಳಿ ಅನುಮೋದನೆ ನೀಡಿದೆ. ಮುಂದಿನ 2024-25ನೇ ಸಾಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5,000 ಕೋಟಿ ರೂ. ಆಯವ್ಯಯದಲ್ಲಿ ಘೋಷಿಸಿ ಅಷ್ಟು ಹಣ ನೀಡುವುದಾಗಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಬರುವ ಮೇ ಒಳಗೆ ಶಾಸಕರಿಂದ ಕ್ರಿಯಾ ಯೋಜನೆ ಪಡೆಯಲಾಗುವುದು ಎಂದರು.

ಹೃದಯಾಘಾತ ಚಿಕಿತ್ಸೆಗೆ ತಂತ್ರಾಂಶ ಅಭಿವೃದ್ಧಿ

ಹೈದಯಾಘಾತವಾದಾಗ ಗೋಲ್ಡನ್ ಅವರ್‍ನಲ್ಲಿ ಚಿಕಿತ್ಸೆ ಅವಶ್ಯಕ. ಈ ನಿಟ್ಟಿನಲ್ಲಿ ಪ್ರದೇಶದ ಗ್ರಾಮೀಣ ಭಾಗದ ಜನರು ಹೃದಯಾಘಾತಕ್ಕೆ ಒಳಗಾದ ಸಂದರ್ಭದಲ್ಲಿ ಪಿ.ಹೆಚ್.ಸಿಯಿಂದ ತಾಲೂಕು ಅಥವಾ ಜಿಲ್ಲಾ ಆಸ್ಪತ್ರೆಗೆ ಬರುವ ಮುನ್ನ ಟೆಲಿ ಮೆಡಿಸಿನ್ ಮಾದರಿಯಲ್ಲಿ ಸೇವೆ ನೀಡಲು ಜಯದೇವ ಆಸ್ಪತ್ರೆ ಸಹಯೋಗದೊಂದಿಗೆ ಹಬ್ & ಸ್ಪೋಕ್ ಮಾದರಿಯಲ್ಲಿ ಮೋಬೈಲ್ ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದಿನ 6 ತಿಂಗಳಿನಲ್ಲಿ ಇದು ಜಾರಿಗೆ ಬರಲಿದೆ. ಇದರಿಂದ ಆರೋಗ್ಯ ಕ್ಷೇತ್ರದಲ್ಲಿ ಬಹುದೊಡ್ಡ ಬದಲಾವಣೆ ಕಾಣಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ