ಕೊರೊನಾದಿಂದ JDS ಸಂಘಟನೆಯಲ್ಲಿ ಹಿನ್ನಡೆಯಾಗಿತ್ತು. ಸಂಕ್ರಾಂತಿಯಿಂದ ಮತ್ತೆ ಪಕ್ಷ ಸಂಘಟನೆ ಆರಂಭಿಸಲಾಗಿದೆ.. ಕಲಬುರಗಿಯಲ್ಲಿ HDK ಸುದ್ದಿಗೋಷ್ಠಿ

ಕಲಬುರಗಿ ಭೇಟಿ ವೇಳೆ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ H.D.ಕುಮಾರಸ್ವಾಮಿ ಬಿಜೆಪಿಯ ಕೆಲವರ ತಂತ್ರಗಾರಿಕೆಯಿಂದ ಈ ಸರ್ಕಾರ ರಚನೆಯಾಗಿದೆ ಎಂದು ಹೇಳಿದರು. ನಾಡಿನ ಜನರ ದುರಾದೃಷ್ಟವೋ, ಸರ್ಕಾರದ ದುರಾದೃಷ್ಟವೋ ಬಿಜೆಪಿ ಸರ್ಕಾರ ಬಂದ ಮೇಲೆ ಪ್ರಕೃತಿ ವಿಕೋಪವಾಯ್ತು. ಈ ಸರ್ಕಾರಕ್ಕೆ ಜನರ ಸಮಸ್ಯೆಗೆ ಸ್ಪಂದಿಸುವ ಕಾಳಜಿ ಇಲ್ಲ ಎಂದರು.

  • TV9 Web Team
  • Published On - 12:06 PM, 25 Feb 2021
ಕೊರೊನಾದಿಂದ JDS ಸಂಘಟನೆಯಲ್ಲಿ ಹಿನ್ನಡೆಯಾಗಿತ್ತು. ಸಂಕ್ರಾಂತಿಯಿಂದ ಮತ್ತೆ ಪಕ್ಷ ಸಂಘಟನೆ ಆರಂಭಿಸಲಾಗಿದೆ.. ಕಲಬುರಗಿಯಲ್ಲಿ HDK ಸುದ್ದಿಗೋಷ್ಠಿ
ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಕಲಬುರಗಿ: ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಗೆ JDS ಪ್ಲ್ಯಾನ್ ಮಾಡಿಕೊಂಡಿದ್ದು ಇಂದು ಕಲಬುರಗಿ ಜಿಲ್ಲೆಗೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಹಾಗೂ ಸೇಡಂನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಉದ್ಯಮಿ ಬಾಲರಾಜ್ ಗುತ್ತೇದಾರ್ JDSಗೆ ಸೇರ್ಪಡೆಯಾಗಲಿದ್ದಾರೆ. ಇನ್ನು ಹೊಸ ಮುಖಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಪಕ್ಷ ಸಂಘಟನೆಗೆ ಸಿದ್ಧತೆ ನಡೆಸಿದ್ದಾರೆ.

ಕಲಬುರಗಿ ಭೇಟಿ ವೇಳೆ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ H.D.ಕುಮಾರಸ್ವಾಮಿ ಬಿಜೆಪಿಯ ಕೆಲವರ ತಂತ್ರಗಾರಿಕೆಯಿಂದ ಈ ಸರ್ಕಾರ ರಚನೆಯಾಗಿದೆ ಎಂದು ಹೇಳಿದರು. ನಾಡಿನ ಜನರ ದುರಾದೃಷ್ಟವೋ, ಸರ್ಕಾರದ ದುರಾದೃಷ್ಟವೋ ಬಿಜೆಪಿ ಸರ್ಕಾರ ಬಂದ ಮೇಲೆ ಪ್ರಕೃತಿ ವಿಕೋಪವಾಯ್ತು. ಈ ಸರ್ಕಾರಕ್ಕೆ ಜನರ ಸಮಸ್ಯೆಗೆ ಸ್ಪಂದಿಸುವ ಕಾಳಜಿ ಇಲ್ಲ. ಪ್ರತಿ ಸಲ ಉಡಾಫೆ ಉತ್ತರ ಕೊಟ್ಟುಕೊಂಡು ಹೋಗುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಹಣ ಲೂಟಿಯಾಗ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಅವರದೇ ಶಾಸಕರಿಂದ ಭ್ರಷ್ಟಾಚಾರದ ಬಗ್ಗೆ ಮಾತು ಕೇಳಿಸುತ್ತಿದೆ. ಶಾಸಕ ಯತ್ನಾಳ್ ಸೇರಿದಂತೆ ಹಲವರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿಗೆ ರಾಜ್ಯ ಸರ್ಕಾರದ ಭ್ರಷ್ಟಾಚಾರ ತಿಳಿದಿಲ್ಲವೇ? ಎಂದು H.D.ಕುಮಾರಸ್ವಾಮಿ ಪ್ರಶ್ನಿಸಿದರು.

ಕಲ್ಯಾಣ ಕರ್ನಾಟಕ ಭಾಗವನ್ನು ರಾಜ್ಯ ಸರ್ಕಾರ ಕಡೆಗಣಿಸಿದೆ
ಕೊವಿಡ್‌ನಿಂದ ಜೆಡಿಎಸ್ ಸಂಘಟನೆಯಲ್ಲಿ ಹಿನ್ನಡೆಯಾಗಿತ್ತು. ಸಂಕ್ರಾಂತಿಯಿಂದ ಮತ್ತೆ ಪಕ್ಷ ಸಂಘಟನೆ ಆರಂಭಿಸಲಾಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನವನ್ನು ಕಡಿತ ಮಾಡಿದೆ. ಅದನ್ನು ಪ್ರಶ್ನಿಸುವ ಅಧಿಕಾರ ಈ ಸರ್ಕಾರ ಕಳೆದುಕೊಂಡಿದೆ. ಕಲ್ಯಾಣ ಕರ್ನಾಟಕ ಭಾಗವನ್ನು ರಾಜ್ಯ ಸರ್ಕಾರ ಕಡೆಗಣಿಸಿದೆ. ಕೊವಿಡ್‌ನಿಂದಾಗಿ ಹಣವಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದ್ರೆ ಕೆಲವು ಸ್ವೇಚ್ಛಾಚಾರದ ಕೆಲಸಗಳಿಗೆ ಹಣ ಕೊಡುತ್ತಿದೆ. ಕೊವಿಡ್ ಹೆಸರಿನಲ್ಲಿ ರಾಜ್ಯ ಸರ್ಕಾರ ಸಾಲವನ್ನೂ ಮಾಡಿದೆ ಎಂದು H.D.ಕುಮಾರಸ್ವಾಮಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಚಿವರು, ಸಂಸದರಿಗೆ ಕಾರು ಖರೀದಿಸಲು ಹಣ ಹೆಚ್ಚಳ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಕುಮಾರಸ್ವಾಮಿ.. ಕಾರು ಖರೀದಿ 1 ವರ್ಷ ಮುಂದೂಡಿದ್ರೆ ದರಿದ್ರ ಬರ್ತಿರಲಿಲ್ಲ. ಸರ್ಕಾರದ ಅಧಿಕಾರ ಯಾರ ಕೈಯಲ್ಲಿದೆ ಎಂದು ತಿಳಿಯುತ್ತಿಲ್ಲ. ಹೆಸರಿಗಷ್ಟೇ ಬಿಎಸ್‌ವೈ ಕೈಯಲ್ಲಿ ಅಧಿಕಾರ ಇದೆ ಅನಿಸುತ್ತಿದೆ. ಬಿ.ಎಸ್.ಯಡಿಯೂರಪ್ಪ ಕಷ್ಟಪಟ್ಟು ಅಧಿಕಾರಕ್ಕೆ ಬಂದಿದ್ದಾರೆ. ಅವರಿಗೆ ಆಸೆಯಿದ್ದರೂ ಕೆಲಸ ಮಾಡಲು ಬಿಡ್ತಿಲ್ಲ ಅನಿಸುತ್ತಿದೆ ಎಂದು ಹೇಳಿದ್ದಾರೆ.

ಜವಾಬ್ದಾರಿಯುತ ಸ್ಥಾನದಲ್ಲಿರುವವರಿಂದ ಮೀಸಲಾತಿಯ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಸರ್ಕಾರವೂ ಇದನ್ನು ಲಘುವಾಗಿ ಪರಿಗಣಿಸಬಾರದು. ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆ ಮಾಡುತ್ತದೆ. ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸಿಎಂ ಯಡಿಯೂರಪ್ಪನವರು ನನ್ನ ಮೇಲೆ 100 ಕೇಸ್ ಬಂದ್ರೂ ಎದುರಿಸ್ತೇನೆಂದು ಹೇಳ್ತಾರೆ. ಆದ್ರೆ ಅದು ಹೇಗೆ ಎದುರಿಸುತ್ತಾರೆ. ವ್ಯವಸ್ಥೆ ದುರುಪಯೋಗ ಮಾಡಿಕೊಂಡು ಎದುರಿಸುತ್ತಾರಾ? ಎಂದು ಮಾಜಿ ಸಿಎಂ H.D.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಅವರವರ ಸ್ವಾರ್ಥಕ್ಕೆ ಸಿದ್ಧಾಂತಗಳನ್ನು ಇಟ್ಟುಕೊಂಡಿದ್ದಾರೆ
ಮೈಸೂರು ಪಾಲಿಕೆಯಲ್ಲಿ JDS, ಕಾಂಗ್ರೆಸ್ ಮೈತ್ರಿ ವಿಚಾರ ಸಂಬಂಧ ಸಿದ್ದರಾಮಯ್ಯ ಉದ್ಧಟತನದಿಂದ ಅವರ ಜತೆ ಮೈತ್ರಿಯ ಬಗ್ಗೆ ಸಿದ್ದರಾಮಯ್ಯ ಜತೆ ಮಾತನಾಡಿರಲಿಲ್ಲ. ಬಿಜೆಪಿ ಜೊತೆ ಮೈತ್ರಿಯಿಂದ ಜನರು ಹಿಂದೆ ಸರಿಯುತ್ತಾರೆ ಅನ್ನೋ ಅಭಿಪ್ರಾಯವಿತ್ತು. ಪಾಲಿಕೆಯಲ್ಲಿ ನಮ್ಮ ಶಕ್ತಿ ಏನೆಂಬುದು ತೋರಿಸಿದ್ದೇವೆ. ಅವರವರ ಸ್ವಾರ್ಥಕ್ಕೆ ಸಿದ್ಧಾಂತಗಳನ್ನು ಇಟ್ಟುಕೊಂಡಿದ್ದಾರೆ. ಹಿಂದುತ್ವ, ಅಹಿಂದ ಇವೆಲ್ಲಾ ಡೋಂಗಿ‌ ಸಿದ್ಧಾಂತಗಳು. ಅವರವರು ಮತಕ್ಕಾಗಿ ಸಿದ್ಧಾಂತಗಳನ್ನು ಇಟ್ಟುಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: HD Kumaraswamy | ‘ಹಳ್ಳಿಗಳಲ್ಲಿ ಇತ್ತೀಚೆಗೆ ಒಂದು ಹೊಸ ಸ್ಟೈಲ್ ಶುರುವಾಗಿದೆ.. ಕೇಸರಿ ಟವಲ್ ಹಾಕಿಕೊಂಡು ಓಡಾಡೋದು’