ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಾದ ಆಕ್ಸಿಜನ್ ಕೊರತೆ; ಕೊವಿಡ್​ನಿಂದ ಉಸಿರು ಚೆಲ್ಲುತ್ತಿರುವ ಸೋಂಕಿತರು

ಐದು ಖಾಲಿ ಸಿಲಿಂಡರ್​ಗಳನ್ನು ಕಲಬುರಗಿ ನಗರದಲ್ಲಿರುವ ಆಕ್ಸಿಜನ್ ಘಟಕಕ್ಕೆ ಕಳುಹಿಸಿ, ಅವುಗಳನ್ನು ತುಂಬಿಸಿಕೊಂಡು ಬರಲು ತಿಳಿಸಲಾಗಿತ್ತು. ಆದರೆ ಕಳೆದ ರಾತ್ರಿ ಒಂಬತ್ತು ಗಂಟೆಗೆ ಐದು ಜಂಬೂ ಸಿಲಿಂಡರ್ ತಂದಿದ್ದ ಆಸ್ಪತ್ರೆಯ ಸಿಬ್ಬಂದಿಗೆ ಆಕ್ಸಿಜನ್ ಘಟಕದಲ್ಲಿ ಮುಂಜಾನೆ ಎಂಟು ಗಂಟೆವರೆಗೆ ಆಕ್ಸಿಜನ್ ಸಿಲಿಂಡರ್ ಸಿಕ್ಕಿಲ್ಲಾ.

  • ಸಂಜಯ್
  • Published On - 13:47 PM, 5 May 2021
ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಾದ ಆಕ್ಸಿಜನ್ ಕೊರತೆ;  ಕೊವಿಡ್​ನಿಂದ ಉಸಿರು ಚೆಲ್ಲುತ್ತಿರುವ ಸೋಂಕಿತರು
ಪ್ರಾತಿನಿಧಿಕ ಚಿತ್ರ

ಕಲಬುರಗಿ: ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ದೊಡ್ಡಮಟ್ಟದಲ್ಲಿ ಉಂಟಾಗಿದೆ. ಕಳೆದ ನಾಲ್ಕು ದಿನದ ಹಿಂದೆ ಕಲಬುರಗಿ ನಗರದ ಕೆಬಿಎನ್ ಆಸ್ಪತ್ರೆಯಲ್ಲಿ ಮೂವರು ಆಕ್ಸಿಜನ್ ಕೊರತೆಯಿಂದ ಸತ್ತಿದ್ದಾರೆ. ನಿನ್ನೆ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಇಬ್ಬರು ಸತ್ತಿದ್ದಾರೆ. ಇನ್ನು ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿರುವ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿಯಿಂದ ಮುಂಜಾನೆವರಗೆ ನಾಲ್ವರು ಸತ್ತಿದ್ದು, ಇದರಲ್ಲಿ ಇಬ್ಬರು ಆಕ್ಸಿಜನ್ ಕೊರತೆಯಿಂದಲೇ ಸತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಫಜಲಪುರ ಪಟ್ಟಣದಲ್ಲಿ ತಾಲೂಕು ಆಸ್ಪತ್ರೆಯಿದ್ದು ಇಲ್ಲಿರುವ ಆಸ್ಪತ್ರೆಯಲ್ಲಿ ಐವತ್ತು ಬೆಡ್​ಗಳನ್ನು ಕೊರೊನಾ ರೋಗಿಗಳಿಗೆ ಇಡಲಾಗಿದೆ. ಹೀಗಾಗಿ ಕೊರೊನಾ ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಇಂದು ಮುಂಜಾನೆ ಆರು ಗಂಟೆಯಿಂದ ಮುಂಜಾನೆ ಒಂಬತ್ತು ಗಂಟೆವರಗೆ ಆಕ್ಸಿಜನ್ ಸಿಲಿಂಡರ್​ಗಳು ಖಾಲಿಯಾದ ಹಿನ್ನೆಲೆಯಲ್ಲಿ ರೋಗಿಗಳಿಗೆ ಆಕ್ಸಿಜನ್ ಪೂರೈಕೆ ಸ್ಥಗಿತವಾಗಿತ್ತು. ಈ ಸಂದರ್ಭದಲ್ಲಿ ಸೋಂಕಿತರು ಪರದಾಡಿದ್ದಾರೆ.

ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ಹತ್ತು ಜಂಬೂ ಸಿಲಿಂಡರ್​ಗಳಿವೆ. ಐದು ಸಿಲಿಂಡರ್​ಗಳನ್ನು ಏಕಕಾಲಕ್ಕೆ ಬಳಸಲಾಗುತ್ತದೆ. ಐದು ಖಾಲಿ ಸಿಲಿಂಡರ್​ಗಳನ್ನು ಕಲಬುರಗಿ ನಗರದಲ್ಲಿರುವ ಆಕ್ಸಿಜನ್ ಘಟಕಕ್ಕೆ ಕಳುಹಿಸಿ, ಅವುಗಳನ್ನು ತುಂಬಿಸಿಕೊಂಡು ಬರಲು ತಿಳಿಸಲಾಗಿತ್ತು. ಆದರೆ ಕಳೆದ ರಾತ್ರಿ ಒಂಬತ್ತು ಗಂಟೆಗೆ ಐದು ಜಂಬೂ ಸಿಲಿಂಡರ್ ತಂದಿದ್ದ ಆಸ್ಪತ್ರೆಯ ಸಿಬ್ಬಂದಿಗೆ ಆಕ್ಸಿಜನ್ ಘಟಕದಲ್ಲಿ ಮುಂಜಾನೆ ಎಂಟು ಗಂಟೆವರೆಗೆ ಆಕ್ಸಿಜನ್ ಸಿಲಿಂಡರ್ ಸಿಕ್ಕಿಲ್ಲಾ. ಮತ್ತೊಂದಡೆ ಮುಂಜಾನೆ ಆರು ಗಂಟೆಗೆ ತಾಲೂಕು ಆಸ್ಪತ್ರೆಯಲ್ಲಿದ್ದ ಐದು ಜಂಬೂ ಸಿಲಿಂಡರ್ ಖಾಲಿಯಾಗಿವೆ.

ಎಂಟು ಗಂಟೆಗೆ ಸಿಲಿಂಡರ್ ಸಿಕ್ಕಿದ್ದು, ಅವುಗಳನ್ನು ಒಂಬತ್ತು ಗಂಟೆ ಮೇಲೆ ತಂದು ಅಳವಡಿಸಲಾಗಿದೆ. ಅಲ್ಲಿವರಗೆ ಇಬ್ಬರು ಸೋಂಕಿತರು ಸತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಆಸ್ಪತ್ರೆ ಸಿಬ್ಬಂದಿಗಳು ಮಾತ್ರ ಇದನ್ನು ಕೈ ಚೆಲ್ಲಿದ್ದಾರೆ. ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ಕಳೆದ ರಾತ್ರಿಯಿಂದ ಮುಂಜಾನೆವರಗೆ ನಾಲ್ವರು ಸತ್ತಿದ್ದು ನಿಜ. ಆದರೆ ಅವರು ಆಕ್ಸಿಜನ್ ಕೊರತೆಯಿಂದ ಸತ್ತಿಲ್ಲಾ. ಅವರಿಗೆ ಉಸಿರಾಟದ ಸಮಸ್ಯೆ ಹೆಚ್ಚಾಗಿತ್ತು. ಆದ್ದರಿಂದ ಸತ್ತಿದ್ದಾರೆ. ಅವರ ಸಾವಿಗೂ ಆಕ್ಸಿಜನ್ ಕೊರತೆಗೆ ಯಾವುದೇ ಸಂಬಂಧವಿಲ್ಲಾ ಎಂದು ಇಲ್ಲಿನ ಸಿಬ್ಬಂದಿಗಳು ಹೇಳಿದ್ದಾರೆ.

ಇನ್ನು ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ಕೊವಿಡ್ ಸೆಂಟರ್ ಮಾಡಿದರೂ ಕೂಡಾ ಕೊವಿಡ್ ರೋಗಿಗಳನ್ನು ನೋಡಲು ವೈದ್ಯರು ಇಲ್ಲ. ತಾಲೂಕು ಆಸ್ಪತ್ರೆಯಲ್ಲಿ ಒಬ್ಬನೇ ಒಬ್ಬ ಪಿಜಿಸಿಯನ್ ಕೂಡಾ ಇಲ್ಲ. ಇರುವ ಏಳು ಜನ ವೈದ್ಯರಲ್ಲಿ ಮೂವರಿಗೆ ಕೊರೊನಾ ಪಾಜಿಟಿವ್ ಬಂದಿದೆ. ಹೀಗಾಗಿ ಡಿ ಗ್ರೂಪ್ ಸಿಬ್ಬಂದಿ ಮೇಲೆಯೇ ಆಸ್ಪತ್ರೆಯನ್ನು ನಡೆಸುಕೊಂಡು ಹೋಗುತ್ತಿದ್ದೇವೆ. ನಮ್ಮ ಗೋಳು ಯಾರು ಕೇಳುತ್ತಿಲ್ಲ ಎಂದು ಅಫಜಲಪುರ ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಮಹಂತಪ್ಪ ಹೇಳಿದ್ದಾರೆ

ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್ ಸಿಗದೇ ಅನೇಕರು ಸಾಯುತ್ತಿದ್ದಾರೆ. ಮತ್ತೊಂದಡೆ ಆಕ್ಸಿಜನ್ ಕೊರತೆಯಿಂದ ಅನೇಕರು ಸಾಯುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಇನ್ನಷ್ಟು ಮುತುವರ್ಜಿವಹಿಸಿ, ಆಕ್ಸಿಜನ್ ಕೊರತೆಯನ್ನು ನಿವಾರಿಸುವ ಕೆಲಸವನ್ನು ಮಾಡಬೇಕಿದೆ.

ಇದನ್ನೂ ಓದಿ:

ಸರಿಯಾದ ಸಮಯಕ್ಕೆ ಆಕ್ಸಿಜನ್ ಕೊಟ್ಟಿದ್ದರೆ ಬದುಕುಳಿಯುತ್ತಿದ್ದ, ತಮ್ಮನ ಸಾವಿಗೆ ಮಿಮ್ಸ್ ಆಸ್ಪತ್ರೆ ವೈದ್ಯರೇ ಕಾರಣ; ಅಣ್ಣನ ಕಣ್ಣೀರು

ಮಂಡ್ಯ ಜಿಲ್ಲೆಯಲ್ಲೂ ಶುರುವಾಯ್ತು ಆಕ್ಸಿಜನ್ ಕೊರತೆ; ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ