ಬಾಲಕನ ಮರ್ಮಾಂಗ ಕತ್ತರಿಸಿ, ಚಿತ್ರಹಿಂಸೆ ನೀಡಿ ಕೊಲೆ: ಭೀಮಾ ನದಿಯ ದಡದಲ್ಲಿ ವಿದ್ಯಾರ್ಥಿ ಶವ ಪತ್ತೆ

ಶುಕ್ರವಾರ ರಾತ್ರಿ ಭೀಮಾ ನದಿಯಲ್ಲಿ ಬಾಲಕನ ಶವ ಪತ್ತೆಯಾದ ನಂತರ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಮೃತ ವ್ಯಕ್ತಿಯನ್ನು 7 ನೇ ತರಗತಿಯ ವಿದ್ಯಾರ್ಥಿ ಮಹೇಶ್ ಕೊಳ್ಳಿ(14) ಎಂದು ಗುರುತಿಸಲಾಗಿದೆ.

  • TV9 Web Team
  • Published On - 14:41 PM, 1 Mar 2021
ಬಾಲಕನ ಮರ್ಮಾಂಗ ಕತ್ತರಿಸಿ, ಚಿತ್ರಹಿಂಸೆ ನೀಡಿ ಕೊಲೆ: ಭೀಮಾ ನದಿಯ ದಡದಲ್ಲಿ ವಿದ್ಯಾರ್ಥಿ ಶವ ಪತ್ತೆ
ಪ್ರಾತಿನಿಧಿಕ ಚಿತ್ರ

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದಲ್ಲಿ 14 ವರ್ಷದ ಬಾಲಕನ್ನು ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದು, ಬಾಲಕನ ಮೂಗು ಮತ್ತು ಮರ್ಮಾಂಗ ಕತ್ತರಿಸಿ ಹತ್ಯೆಗೈಯಲಾಗಿದೆ. ಶುಕ್ರವಾರ ರಾತ್ರಿ ಭೀಮಾ ನದಿಯಲ್ಲಿ ಬಾಲಕನ ಶವ ಪತ್ತೆಯಾದ ನಂತರ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಮೃತ ವ್ಯಕ್ತಿಯನ್ನು 7 ನೇ ತರಗತಿಯ ವಿದ್ಯಾರ್ಥಿ ಮಹೇಶ್ ಕೊಳ್ಳಿ (14) ಎಂದು ಗುರುತಿಸಲಾಗಿದೆ.

ಕಳೆದ ಒಂದು ವರ್ಷದಿಂದ ಕೋವಿಡ್ -19 ಕಾರಣ ಶಾಲೆಯನ್ನು ಮುಚ್ಚಿದ್ದರಿಂದ ಬಾಲಕ ಮನೆಯಲ್ಲೇ ಕಾಲ ಕಳೆಯುತ್ತಿದ್ದು, ಸೋಮವಾರ ಸಂಜೆ ಮನೆಯಿಂದ ಹೊರ ಹೋಗಿದ್ದ ಬಾಲಕ ನಾಲ್ಕು ದಿನಗಳ ನಂತರ ಅಂದರೆ ಶುಕ್ರವಾರ ನದಿಯ ದಂಡೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಹತ್ಯೆಯ ಹಿಂದಿನ ಉದ್ದೇಶದ ಬಗ್ಗೆ ಇನ್ನೂ ಕೂಡ ಯಾವುದೇ ಸುಳಿವು ಸಿಕ್ಕಿಲ್ಲ.

ಪೊಲೀಸರ ಪ್ರಕಾರ, ಬಾಲಕನನ್ನು ಕೊಲೆ ಮಾಡುವ ಮೊದಲು ಬಲವಂತವಾಗಿ ಮದ್ಯಪಾನ ಮಾಡಿಸಿದ್ದಾರೆ. ನಂತರ ಮತ್ತು ಬರಿಸುವ ಔಷಧ ನೀಡಿ, ಬಾಲಕನ ಮೂಗು ಮತ್ತು ಮರ್ಮಾಂಗವನ್ನು ಕತ್ತರಿಸಿದ್ದಾರೆ. ಇಷ್ಟೇ ಅಲ್ಲದೇ ಮುಖಕ್ಕೆ ಗುದ್ದಿ, ಹಲ್ಲಗಳನ್ನು ಕಿತ್ತುಹಾಕಿದ್ದು, ಚಿತ್ರಹಿಂಸೆ ನೀಡಿದ್ದಾರೆ. ದುಷ್ಕರ್ಮಿಗಳು ಬಾಲಕನಿಗೆ ಹಿಂಸೆ ನೀಡಿ ಕೊಲೆ ಮಾಡಿದ ನಂತರ, ಆತನ ದೇಹವನ್ನು ಗೋಣಿ ಚೀಲದಲ್ಲಿ ತುಂಬಿಸಿ ಭೀಮಾ ನದಿಗೆ ಎಸೆದಿದ್ದಾರೆ ಎಂದು ತಿಳಿಸಿದ್ದಾರೆ.

ಸ್ವಲ್ಪ ದಿನಗಳ ಹಿಂದೆ ಮಹೇಶ್ ಅನ್ಯ ಕೋಮಿನ ಬಾಲಕಿಯೊಬ್ಬಳಿಗೆ ಮೊಬೈಲ್ ಫೋನ್ ಕೊಡಿಸಿದ್ದ, ಇಬ್ಬರೂ ಆಗಾಗ ಕರೆ ಮಾಡಿ ಮಾತನಾಡುತ್ತಿದ್ದರು. ಈ ವಿಷಯ ಆತನ ಕುಟುಂಬದವರಿಗೆ ಗೊತ್ತಾಗಿ ಈ ರೀತಿಯ ಕೃತ್ಯ ಎಸಗಿದ್ದಾರೆ. ಬಾಲಕಿಯ ಮನೆಯವರ ಮೇಲೆಯೇ ಅನುಮಾನವಿದೆ ಎಂದು ಕೊಲೆಯಾದ ಬಾಲಕನ ತಾಯಿ ಭೀಮಾಬಾಯಿ ದೂರು ನೀಡಿದ್ದಾರೆ.

ಇದನ್ನೂ ಓದಿ: ಯೋಗೀಶ್‌ಗೌಡ ಕೊಲೆ ಕೇಸ್‌ನಲ್ಲಿ ವಿನಯ್‌ಗೆ ಜೈಲು: ವಿನಯ್ ಕುಲಕರ್ಣಿ ನಿವಾಸಕ್ಕೆ ನಟ ದರ್ಶನ್ ಭೇಟಿ