ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಸಿಗದ ಅನುದಾನ; 1127 ಕೋಟಿ ರೂ. ಬಿಡುಗಡೆಗೆ 3 ತಿಂಗಳಷ್ಟೇ ಬಾಕಿ
ಇದೀಗ ಡಿಸಂಬರ್ ತಿಂಗಳು ಮುಗಿಯಲಿಕ್ಕೆ ಬಂದಿರೋದರಿಂದ, ಇನ್ನು ಹಣ ಖರ್ಚು ಮಾಡಲು ಬಾಕಿ ಉಳದಿರುವುದು ಮೂರು ತಿಂಗಳು ಮಾತ್ರ. 2022 ರ ಮಾರ್ಚ್ ಮೂವತ್ತರೊಳಗೆ ಈ ವರ್ಷದ ಹಣವನ್ನು ಖರ್ಚು ಮಾಡಬೇಕು. ಆದರೆ ಹಣವೇ ಬಿಡುಗಡೆಯಾಗದೇ ಇರೋದರಿಂದ ಮಂಡಳಿಗೆ ಘೋಷಣೆಯಾಗಿರುವ 1500 ಕೋಟಿ ರೂಪಾಯಿ ಹಣವೇ ಖರ್ಚಾಗುವುದು ಅನುಮಾನವಾಗಿದೆ.
ಕಲಬುರಗಿ: ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಭಾಗ ಎನ್ನುವ ಹಣೆಪಟ್ಟಿಯನ್ನು ಕಟ್ಟಿಕೊಂಡಿರುವುದು ಕಲ್ಯಾಣ ಕರ್ನಾಟಕ ಭಾಗ. ದೇಶಕ್ಕೆ ಸ್ವತಂತ್ರ ಸಿಕ್ಕು ದಶಕಗಳು ಕಳೆದರು ಕೂಡಾ ಕಲ್ಯಾಣ ಕರ್ನಾಟಕ ಭಾಗದ, ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳು, ರಾಜ್ಯದ ಬೇರೆ ಜಿಲ್ಲೆಗಳಿಗಿಂತ, ಮೂಲಭೂತ ಸೌಲಭ್ಯಗಳಿಂದ, ಆರ್ಥಿಕವಾಗಿವಾಗಿ, ಸಾಮಾಜಿಕವಾಗಿ ಹಿಂದುಳಿದ ಜಿಲ್ಲೆಗಳಾಗಿಯೇ ಉಳಿದಿವೆ. ಹೀಗಾಗಿಯೇ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ 2013 ರಲ್ಲಿ ರಾಜ್ಯ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮಂಡಳಿಯನ್ನು ರಚಿಸಿದೆ. ಕೇಂದ್ರ ಸರ್ಕಾರ ಈ ಭಾಗಕ್ಕೆ 371 ಜೆ ವಿಧಿಯಡಿ ವಿಶೇಷ ಸ್ಥಾನಮಾನ ಕೂಡ ನೀಡಿದೆ. ಆದರೂ ಅಭಿವೃದ್ಧಿ ಎನ್ನುವುದು ಮಾತ್ರ ಇನ್ನು ಮರಿಚಿಕೆಯಾಗಿದೆ. ಇದಕ್ಕೆ ಕಾರಣ, ಸರ್ಕಾರ ನುಡಿದಂತೆ ನಡೆಯದೇ ಇರುವುದು ಎಂದು ಇಲ್ಲಿನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನುಡಿದಂತೆ ನಡೆಯದ ರಾಜ್ಯ ಸರ್ಕಾರ ರಾಜ್ಯ ಸರ್ಕಾರ ಈ ಭಾಗದ ಜನರಿಗೆ ಹೇಳುವುದು ಒಂದು ಮಾಡುವುದು ಮತ್ತೊಂದು ಎನ್ನುವ ಹಾಗಾಗಿದೆ. ಈ ಭಾಗದ ಅಭಿವೃದ್ಧಿಗಾಗಿ ಮಂಡಳಿಗೆ ನೀಡಿರುವ 1500 ಕೋಟಿ ಹಣವನ್ನು ಖರ್ಚು ಮಾಡಿದರೆ ಮತ್ತೆ 1500 ಕೋಟಿ ರೂಪಾಯಿ ನೀಡುವುದಾಗಿ ಸ್ವತಃ ಸಿಎಂ ಬಸವರಾಜ್ ಬೊಮ್ಮಾಯಿ ಕಳೆದ ಸೆಪ್ಟಂಬರ್ 17 ರಂದು ಕಲ್ಯಾಣ ಕರ್ನಾಟಕ ಉತ್ಸವ ದಿನದ ಸಂದರ್ಭದಲ್ಲಿ ಹೇಳಿದ್ದರು. ಇದು ಕಲ್ಯಾಣ ಕರ್ನಾಟಕ ಭಾಗದ ಜನರ ಸಂತಸವನ್ನು ಇಮ್ಮಡಿಗೊಳಿಸಿತ್ತು. ಒಂದೇ ವರ್ಷ ಈ ಭಾಗಕ್ಕೆ ಮೂರು ಸಾವಿರ ಕೋಟಿ ಅನುಧಾನ ಸಿಕ್ಕರೆ, ಅಭಿವೃದ್ಧಿಯ ವೇಗ ಹೆಚ್ಚಾಗುತ್ತದೆ ಎಂದು ತಿಳಿದಿದ್ದರು. ಆದರೆ ಸರ್ಕಾರ ಈ ಮೊದಲು ಅಂದರೆ 2020-21 ರ ಸಾಲಿಗೆ ಘೋಷಣೆ ಮಾಡಿದ್ದ 1500 ಕೋಟಿ ಹಣದ ಪೈಕಿ, ಇಲ್ಲಿವರಗೆ ಬಿಡುಗಡೆ ಮಾಡಿದ್ದು ಕೇವಲ 343 ಕೋಟಿ ರೂಪಾಯಿ ಮಾತ್ರ.
ಇದು ಸರ್ಕಾರದ ದ್ವಂಧ್ವ ನೀತಿಯನ್ನು ಎತ್ತಿ ತೋರಿಸುತ್ತಿದೆ. ರಾಜ್ಯ ಸರ್ಕಾರ ಈ ಹಿಂದೆ ಬಜೆಟ್ನಲ್ಲಿ ಘೋಷಣೆ ಮಾಡಿದ ಹಣದ ಪೈಕಿಯೇ ಇನ್ನು ಬರೋಬ್ಬರಿ 1127 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಬೇಕಿದೆ. ಆದರೆ ಇಲ್ಲಿವರಗೆ ಮೊದಲ ಕಂತನ್ನು ಬಿಟ್ಟು, ಎರಡನೇ ಕಂತಿನ ಹಣವನ್ನು ಬಿಡುಗಡೆಯೇ ಮಾಡಿಲ್ಲ.
ಹಣ ನೀಡದೆ ಖರ್ಚು ಮಾಡೋದು ಹೇಗೆ? ಕಳೆದ ಬಜೆಟ್ನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ರಾಜ್ಯ ಸರ್ಕಾರ 1500 ಕೋಟಿ ರೂಪಾಯಿ ಹಣವನ್ನು ನೀಡುವುದಾಗಿ ಘೋಷಣೆ ಮಾಡಿದೆ. ಹೀಗಾಗಿ ಮಂಡಳಿಯಿಂದ 1500 ಕೋಟಿ ರೂಪಾಯಿಗೆ ಕ್ರಿಯಾ ಯೋಜನೆಯನ್ನು ರೂಪಿಸಿ, ಸರ್ಕಾರಕ್ಕೆ ನೀಡಿದೆ. 1500 ಕೋಟಿ ರೂಪಾಯಿ ಹಣದ ಪೈಕಿ ಇಲ್ಲಿವರಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ 343 ಕೋಟಿ ರೂಪಾಯಿ. ಇಲ್ಲಿವರಗೆ ಕಳೆದ ಸಾಲಿನ ಉಳಿದ ಬಾಕಿ ಮೊತ್ತ 413 ಕೋಟಿ ರೂಪಾಯಿ ಸೇರಿದಂತೆ ಮಂಡಳಿಯಿಂದ ಈ ವರ್ಷ 786 ಕೋಟಿ ರೂಪಾಯಿ ಆಗಿದೆ. ಅದರಲ್ಲಿ ಇಲ್ಲಿವರಗೆ 587 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಲಾಗಿದೆ.
ಸರ್ಕಾರದ ನಿಯಮದ ಪ್ರಕಾರ, ಸರ್ಕಾರದಿಂದ ನೀಡಿರುವ ಹಣದ ಪೈಕಿ, ಶೇಕಡಾ 75 ರಷ್ಟು ಹಣವನ್ನು ಖರ್ಚು ಮಾಡಿ, ಅದರ ಬಳಕೆ ಪ್ರಮಾಣ ಪತ್ರ ನೀಡಿದರೆ, ಮುಂದಿನ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಅದೇ ರೀತಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಶೇಕಡಾ 75 ರಷ್ಟು ಅನುದಾನ ಖರ್ಚು ಮಾಡಿದ್ದು, ಮುಂದಿನ ಕಂತಿನ ಹಣವನ್ನು ಪಡೆಯಲು ಅರ್ಹತೆಯನ್ನು ಪಡೆದಿದೆ. ಆದರೆ ಎರನಡೇ ಕಂತಿನ ಹಣವನ್ನು ಬಿಡುಗಡೆ ಮಾಡಬೇಕಿದ್ದ ಸರ್ಕಾರ, ಹಣ ಬಿಡುಗಡೆಗೆ ಮೀನಾಮೇಷ ಎನಿಸುತ್ತಿರುವುದರಿಂದ ನಿಗದಿತ ಗುರಿಯನ್ನೇ ಮುಟ್ಟಲು ಮಂಡಳಿಗೆ ಸಾಧ್ಯವಾಗದಂತಾಗಿದೆ.
ಇದೀಗ ಡಿಸೆಂಬರ್ ತಿಂಗಳು ಮುಗಿಯಲಿಕ್ಕೆ ಬಂದಿರೋದರಿಂದ, ಇನ್ನು ಹಣ ಖರ್ಚು ಮಾಡಲು ಬಾಕಿ ಉಳದಿರುವುದು ಮೂರು ತಿಂಗಳು ಮಾತ್ರ. 2022 ರ ಮಾರ್ಚ್ ಮೂವತ್ತರೊಳಗೆ ಈ ವರ್ಷದ ಹಣವನ್ನು ಖರ್ಚು ಮಾಡಬೇಕು. ಆದರೆ ಹಣವೇ ಬಿಡುಗಡೆಯಾಗದೇ ಇರೋದರಿಂದ ಮಂಡಳಿಗೆ ಘೋಷಣೆಯಾಗಿರುವ 1500 ಕೋಟಿ ರೂಪಾಯಿ ಹಣವೇ ಖರ್ಚಾಗುವುದು ಅನುಮಾನವಾಗಿದೆ.
ಈ ವರ್ಷ ಖರ್ಚು ಮಾಡಲು ಕೆಕೆಆರ್ಡಿಬಿ ಬಳಿ ಹಣವೇ ಇಲ್ಲಾ, ಬಜೆಟ್ನಲ್ಲಿ ಘೋಷಣೆ ಮಾಡಿದಂತೆ 1500 ಕೋಟಿ ರೂಪಾಯಿ ಖರ್ಚು ಮಾಡಿದರೆ, ಮತ್ತೆ 1500 ಕೋಟಿ ರೂಪಾಯಿ ನೀಡೋದಾಗಿ ಸಿಎಂ ಹೇಳಿದ್ದಾರೆ. ಹಣವೇ ನೀಡದೆ ಖರ್ಚು ಮಾಡುವುದು ಹೇಗೆ? ಕಲ್ಯಾಣ ಕರ್ನಾಟಕ ಅಂತ ಹೆಸರು ಬದಲಾವಣೆ ಮಾಡಿದ್ದೇ ಬಿಜೆಪಿಯವರ ಸಾಧನೆಯಾಗಿದೆ. ಈ ಭಾಗದ ಸರ್ವತೋಮುಖ ಅಭಿವೃದ್ಧಿಗಾಗಿ ರಚನೆಯಾಗಿದ್ದ ಮಂಡಳಿಯ ಕತ್ತು ಹಿಸಕುತ್ತಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮಂಡಳಿಗೆ ಸರ್ಕಾರದಿಂದ ಒಂದು ಕಂತಿನ ಹಣ ಬಂದಿದೆ. ಎರಡನೇ ಕಂತಿನ ಹಣ ಬರಬೇಕಿದ್ದು, ಬೆಳಗಾವಿ ಅಧಿವೇಶನದಲ್ಲಿ ಎರಡನೇ ಕಂತಿನ ಹಣಕ್ಕೆ ಅನುಮೋದನೆ ಪಡೆಯಲಾಗುವುದು. ಹಣ ಬಿಡುಗಡೆಯಾದ ತಕ್ಷಣವೇ, ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ವೇಗ ನೀಡುತ್ತೇವೆ ಎಂದು ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ್ ಪಾಟೀಲ್ ಹೇಳಿದ್ದಾರೆ.
ವರದಿ: ಸಂಜಯ್ ಚಿಕ್ಕಮಠ
ಇದನ್ನೂ ಓದಿ: ಜಿಮ್ಸ್ ಆಸ್ಪತ್ರೆಯ ಔಷಧಿಗಳಲ್ಲಿ ಧೂಳು; ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ
ಕಲಬುರಗಿ ಲಘುಭೂಕಂಪನಕ್ಕೆ ಪರಿಹಾರ: ತಾತ್ಕಾಲಿಕ ಟಿನ್ ಶೆಡ್ ನಿರ್ಮಾಣಕ್ಕೆ 3 ಕೋಟಿ ರೂ. ಅನುದಾನ ಮಂಜೂರು
Published On - 12:02 pm, Tue, 21 December 21