ಕನ್ನಡ ರಾಜ್ಯೋತ್ಸವ 2021: ಹೆಚ್ಚುತ್ತಿದೆ ಪರಭಾಷಿಕರ ಹಾವಳಿ; ಕನ್ನಡಿಗರನ್ನಾಳಬೇಕೆಂಬ ಅಪಾಯಕಾರಿ ಧೋರಣೆ ಮೊಳಕೆಯೊಡೆಯುತ್ತಿದೆ’

Karnataka Rajyotsava 2021: ಪಂಪ, ರನ್ನ, ಪೊನ್ನ, ಜನ್ನ, ಹರಿಹರ, ಬಸವಣ್ಣ, ಅಲ್ಲಮ, ಕನಕ, ಪುರಂದರಾದಿಗಳಾಗಿ ಬಿ.ಎಂ.ಶ್ರೀ, ಕುವೆಂಪು, ಮಾಸ್ತಿ, ಬೇಂದ್ರೆ, ಕಾರಂತ, ಕಂಬಾರ, ದೊಡ್ಡರಂಗೇ ಗೌಡರೂ ಸೇರಿದಂತೆ ಸಾವಿರಾರು ಕವಿಗಳು ನಮ್ಮ ಕನ್ನಡ ನುಡಿಯ ಶ್ರೀಮಂತಿಕೆಯನ್ನು ಜಗದಲ್ಲಿ ಸಾರಿದರು.

ಕನ್ನಡ ರಾಜ್ಯೋತ್ಸವ 2021: ಹೆಚ್ಚುತ್ತಿದೆ ಪರಭಾಷಿಕರ ಹಾವಳಿ; ಕನ್ನಡಿಗರನ್ನಾಳಬೇಕೆಂಬ ಅಪಾಯಕಾರಿ ಧೋರಣೆ ಮೊಳಕೆಯೊಡೆಯುತ್ತಿದೆ'
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Nov 01, 2021 | 10:34 AM

ತಾಯೆ ಬಾರೆ, ಮೊಗವ ತೋರೆ, ಕನ್ನಡಿಗರ ಮಾತೆಯೇ! ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೇ! ( ಮಂ.ಗೋವಿಂದ ಪೈ) ಭಾಷೆಯು ಸಂಹನದ ಅನರ್ಘ ರತ್ನ. ತಾಯಿಯ ಮಡಿಲಲ್ಲಿದ್ದುಕೊಂಡೇ ಮಗುವಿಗೆ ಅದರ ಪಾಠ. ಕವಿ ದಂಡಿಯ “ಭಾಷೆ ಇರದಿರೆ ಜಗದಿ ವ್ಯವಹಾರ ಕಷ್ಟವಾಗುತ್ತಿತ್ತು. ಮೂರೂ ಲೋಕಗಳೂ ಅಂಧಕಾರದಿ ಮುಳುಗುತ್ತಿತ್ತು” ಎನ್ನುವ ಮಾತು ಗಮನಾರ್ಹ. ಭಾಷೆ ಲಿಪಿ, ಸಾಹಿತ್ಯಗಳ ಮೂಲಕ ಜನಮಾನಸಕ್ಕೆ ಹತ್ತಿರವಾಗಿ ಸಂಸ್ಕೃತಿಯೇ ಆಗಿ ನಿಲ್ಲುತ್ತದೆ.

ಕನ್ನಡ ಭಾಷೆ ಎಂಬುದು ಕರ್ನಾಟಕದ ಭಾಷೆ. ರಸ ಋಷಿ ಕುವೆಂಪು ಪ್ರಕಾರ ಕರ್ನಾಟವೆಂದರೆ ಬರೀ ಹೆಸರಲ್ಲ ಅದು ಮಂತ್ರ, ಶಕ್ತಿ.2500 ವರ್ಷಕ್ಕಿಂತಲೂ ಹೆಚ್ಚಿನ ಪ್ರಾಚೀನತೆ ಕನ್ನಡಕ್ಕಿದೆ. ಶಿಲಾಶಾಸನಗಳು, ನಾಣ್ಯಗಳು, ಇಂದಿಗೂ ವಿಜೃಂಭಿಸುತ್ತಿರುವ ವಾಸ್ತುಶಿಲ್ಪಗಳು, ದಾಖಲೆಗಳು ಮತ್ತು ವಿವಿಧ ಸಾಹಿತ್ಯಗಳು ನಾಡಿನ, ಭಾಷೆಯ ವೈಭವವನ್ನು ಸಾರುತ್ತಿವೆ. ಬರೆದಂತೆ ಓದಲ್ಪಡುವ, ದುಂಡಗಿನ ಲಿಪಿ ಹೊಂದಿದ ಭಾಷೆ ನಮ್ಮದು.

ಮೌರ್ಯ, ಶಾತವಾಹನಾದಿ ಸಾಮ್ರಾಜ್ಯ ದೊರೆಗಳು, ಚುಟುಕುಗಳು, ಬಾಣರು, ಅಳುಪಾದಿ ಮಾಂಡಲಿಕರೂ ನಮ್ಮನ್ನಾಳಿದವರೇ. ಕರುನಾಡ ಕೀರ್ತಿಪತಾಕೆ ಹಾರಿಸಿದವರಲ್ಲಿ ಅರಸೊತ್ತಿಗೆಗಳ ಪಾತ್ರ ಹಿರಿದು. ಗಂಗ, ಕದಂಬ, ಚಾಲುಕ್ಯ, ರಾಷ್ಟ್ರಕೂಟ, ವಿಜಯನಗರ ಹಾಗೂ ಮೈಸೂರಿನ ರಾಜರು ಕರ್ನಾಟಕವನ್ನು ಕನ್ನಡವನ್ನೂ ಪೋಷಿಸಿದವರು. ಕವಿಗಳಿಗೆ ರಾಜಾಶ್ರಯ ಇತ್ತವರು. ಆರಂಭದ ಶತಮಾನಗಳಲ್ಲಿ ಶಾಸನದಲ್ಲಿ ಕನ್ನಡಬಳಸಿದ್ದರೂ ಸಾಹಿತ್ಯ ಉದಯಿಸಿದ್ದು ಆರು ಏಳನೇ ಶತಮಾನದ ಅನಂತರ. ಭಾಷೆ ನಿಂತ ನೀರಲ್ಲವಾದ್ದರಿಂದ ಹಳೆಗನ್ನಡ, ನಡುಗನ್ನಡ, ಹೊಸಗನ್ನಡದ ರೂಪಗಳಲ್ಲಿ ಪರಿವರ್ತಿಸಲ್ಪಟ್ಟದ್ದಲ್ಲದೆ ಅದು ಜನಮಾನಸ ತಲುಪಲೋಸುಗ ಕಾವ್ಯ, ಜನಪದ, ವಚನ, ಹರಿದಾಸ, ನವ್ಯ ಸಾಹಿತ್ಯದ ರೂಪ ಪಡೆಯಿತು. ಪಂಪ, ರನ್ನ, ಪೊನ್ನ, ಜನ್ನ, ಹರಿಹರ, ಬಸವಣ್ಣ, ಅಲ್ಲಮ, ಕನಕ, ಪುರಂದರಾದಿಗಳಾಗಿ ಬಿ.ಎಂ.ಶ್ರೀ, ಕುವೆಂಪು, ಮಾಸ್ತಿ, ಬೇಂದ್ರೆ, ಕಾರಂತ, ಕಂಬಾರ, ದೊಡ್ಡರಂಗೇ ಗೌಡರೂ ಸೇರಿದಂತೆ ಸಾವಿರಾರು ಕವಿಗಳು ನಮ್ಮ ಕನ್ನಡ ನುಡಿಯ ಶ್ರೀಮಂತಿಕೆಯನ್ನು ಜಗದಲ್ಲಿ ಸಾರಿದರು.

ಕನ್ನಡವು ಕಾದಂಬರಿ, ಕಾವ್ಯ ನಾಟಕ, ರಗಳೆ, ಚಂಪೂ, ಪ್ರವಾಸ ಸಾಹಿತ್ಯ, ಲಲಿತ ಪ್ರಬಂಧ, ಅನುವಾದ, ಕಥೆ, ಕವನ ಹೀಗೆ ಹಲವು ಕೊಂಬೆಗಳ ಹೆಮ್ಮರ. ನಮ್ಮ ಸಂಸ್ಕೃತಿ, ಧರ್ಮಗಳನ್ನು, ಸಾಮಾಜಿಕ, ಆರ್ಥಿಕ ಸ್ಥಿತಿಗಳನ್ನು, ಕಲ್ಪನೆಗಳನ್ನು ರಸಾತ್ಮಕವಾಗಿ ಗುಣಾಲಂಕಾರಗಳ ಮೂಲಕ ನಾಣ್ಣುಡಿಯಿಂದ ಉದಾಹರಣೆಗಳ ಚಾಕಚಕ್ಯತೆಯಿಂದ, ವ್ಯಾಕರಣ ಶುದ್ಧತೆಯಿಂದ, ಜೋಡುಪದ, ಭಿನ್ನಾರ್ಥಕ ಪದಗಳ ಬಳೆಸುವಿಕೆಯಿಂದ ಮೆರಗನ್ನು ನೀಡಿ ಸಾಹಿತ್ಯದ ಅಂದವನ್ನು ಶ್ರೀಮಂತಗಳಿಸಿರುವರರು ನಮ್ಮ ಕವಿಗಳು. ಇತ್ತೀಚೆಗೆ ಹೈಕುಗಳು, ಗಜಲ್ಗಳು, ರುಬಾಯಿ ,ಅಬಾಬಿ, ಟಂಕಾಮೊದಲಾದವೂ ಕನ್ನಡಸಾಹಿತ್ಯದಲ್ಲಿ ನೆಲೆವೂರುತ್ತಿವೆ.

kannada rajyotsava

ಸಾಂದರ್ಭಿಕ ಚಿತ್ರ

ಕನ್ನಡ ಎನೆ ಕುಣಿದಾಡುವುದೆನ್ನೆದೆ (ಕುವೆಂಪು), ಸಿಂಗರದ ಗಣಿ(ದಿನಕರ ದೇಸಾಯಿ), ಪರಮತಸಹಿಷ್ಣು ಭಾವಶ್ರೀ (ಅಕ್ಬರ್ ಆಲಿ), ಕನ್ನಡಿಗರ ಒಡಲೇ ಶ್ರೀ ರಾಜೇಶ್ವರೀ (ಬಿ.ಎಂ.ಶ್ರೀ), ಜಗದ ಏಳಿಗೆ ಕರ್ನಾಟಕದಿಂದ(ದ.ರಾ.ಬೇಂದ್ರೆ)…ಇಂಥ ಮಾತುಗಳಿಂದಲೆ ಕನ್ನಡಾಂಬೆಯ ಭವ್ಯ ಪರಂಪರೆ, ವೈಭವ ಹೇಳಲ್ಪಟ್ಟಿದೆ. ನಾವಿಂದು ಕರ್ನಾಟಕದ ಅರವತ್ತಾರನೆ ರಾಜ್ಯೋತ್ಸವದ ಹೊಸ್ತಿಲ್ಲಿದ್ದೇವೆ. ಕನ್ನಡದ ವೈಭವ ಪ್ರೌಢಿಮೆಯನ್ನು ನಾವು ರಕ್ಷಿಸುತ್ತಿದ್ದೇವೆಯೇ ಎಂಬುದನ್ನೂ ಗಮನಿಸಬೇಕಾಗಿದೆ. ಕನ್ನಡಮ್ಮನ ಇಂದಿನ ಸ್ಥಿತಿ ತುಸು ಬೇಸರವನ್ನೇ ನನ್ನೆದೆಯಲ್ಲಿ ಮೂಡಿಸುತ್ತಿದೆ. ಕನ್ನಡದ ಹೆಸರಲ್ಲಿ ನಾಡಲ್ಲಿ ಹತ್ತು ಹಲವು ಸಂಘಟನೆಗಳಿದ್ದರೂ ಅವು ಸ್ವಾರ್ಥಹಿತಕ್ಕಾಗಿ ಇದ್ದಂತೆ ಎಷ್ಟೋ ಸಂದರ್ಭದಲ್ಲಿ ಕಂಡುಬರುತ್ತಿದೆ. ಬೇರೆಯವರ ನಾ ಏಕೆ ದೂರಲಿ?ಪರಭಾಷೆ ನನ್ನಮನೆಯನ್ನೇ ಆಳುತ್ತಿದೆ. ಪೇಪರ್, ಹಾಲ್, ಕೀ, ಸೋಫಾ, ಚೇರ್, ಕಿಚನ್, ಸಾಲ್ಟ್, ಶುಗರ್, ಸೋಪು… ಎಲ್ಲ ನನ್ನ ಅಣಕಿಸುತ್ತಿವೆ. ಹೊರಬಂದರೆ ಪಾದರಕ್ಷೆ ಕಾಣೆಯಾಗಿ ಸ್ಲಿಪ್ಪರ್, ಬೂಟ್ಸ್ ಕಣ್ಣಿಗೆ ರಾಚುತ್ತವೆ. ಮಾರ್ಗಕ್ಕೆ ಕಾಲಿಟ್ಟೆನೆಂದರೆ ರೋಡಲ್ಲಿ ಟ್ರಾವೆಲ್ ಮಾಡಲು ಬಸ್, ಕಾರು, ಹಾರ್ನ್ ಶಾಪ್ಗಳೇ ಕಣ್ಣಮುಂದೆ ಕಿವಿಯಮುಂದೆ ಅಪ್ಪಳಿಸುತ್ತಿವೆ.

ನವ್ಯಗನ್ನಡದ ಹೆಸರಲ್ಲಿ ಬರೆದದ್ದೆಲ್ಲ ಸಾಹಿತ್ಯ ಎಂಬ ಮನೋಭಾವ ಹೆಚ್ಚುತ್ತಿದೆ.”ವಾಕ್ಯಂ ರಸಾತ್ಮಕಂ ಕಾವ್ಯಂ” ಆದರೂ ವಾಕ್ಯವನ್ನೇ ತುಂಡರಿಸಿ ಬರೆದರೆ ಕವನ ಎನ್ನಬಹುದೇ? ಅಲ್ಪಪ್ರಾಣ, ಮಹಾಪ್ರಾಣ ಅಕ್ಷರ, ಷ, ಹ ಕಾರ ಸ ಅ ಕಾರ, ಪದ ಬಳಕೆಯಲ್ಲಿ ಜಾಗೃತಿ ಇರಬೇಕಲ್ಲವೆ? ಹೊಸ ಪದಗಳ ಬಳಕೆ ಎಂದು ಯಾವ್ಯಾವುದೋ ಎರವಲು ಪದ, ಗ್ರಾಮ್ಯಪದ ಬಳಸಿದಾಗ ಕನ್ನಡದ ಅಸ್ಮಿತೆಗೆ ಧಕ್ಕೆಯಾಗುವುದಲ್ಲವೇ?. ಅರಿಸಿನ, ಕುಂಕುಮ, ಕಂಕಣ, ಕುಂಡಲಾದಿಗಳು ನಾರಿಗೆ ಶೋಭೆ ದಿಟ. ಆದರೆ ಅಸ್ಥಾನದಿ ಬಳಸಿದರೆ ಅದು ಸೌಭಾಗ್ಯ ಹೇಗಲ್ಲವೋ ಹಾಗೇ ಅಲಂಕಾರ ಪ್ರಾಸಗಳನ್ನು ಒತ್ತಾಯ ಪೂರ್ವಕ ತುರುಕಿದರೆ ಶೋಭೆಯಲ್ಲ. ಪರಭಾಷಿಕರ ಹಾವಳಿಯಿಂದ ಕನ್ನಡಮ್ಮ ಥರಗುಟ್ಟುತ್ತಿದ್ದಾಳೆ. ಇಲ್ಲಿ ನೆಲೆವೂರುವ ಅವರಲ್ಲಿ ನಾವೇ ಅವರ ಭಾಷೆ ಮಾತನಾಡುವರೇ ವಿನಾ ಮೂವತ್ತು ವಸಂತ ದಾಟಿದರೂ ಅವರು ಅವರ ಮಾತೃಭಾಷೆ ಬಿಡಲ್ಲ.

ವಾಹಿನಿಗಳಲ್ಲೂ ಪತ್ರಿಕಾ ಮಾಧ್ಯಮಗಳಲ್ಲೂ ಸ್ವಚ್ಛ ಸ್ಫುಟ ಕನ್ನಡದ ಕ್ಷತಿಯೂ ಒಮ್ಮೊಮ್ಮೆ ಕಂಡುಬರುವಂತಾಗಲು ಬೆಳೆದು ಬಂದ ಪರಿಸರ, ಸಂಸ್ಕಾರ ಕಾರಣವಾಗುತ್ತದೆ. ನಮ್ಮ ನೇತಾರರಿಂದಲೂ ಗ್ರಾಮ್ಯಕ್ಕೇ ಒತ್ತು ನೀಡುವಿಕೆ ಖೇದನೀಯ. ಕನ್ನಡದ ಉದ್ಧಾರಕ್ಕೆ ಸರ್ಕಾರೀ ಸರ್ಕಾರೇತರ ಸಂಘಗಳಿದ್ದರೆ ಸಾಲದು. ಅವುಗಳ ಕರ್ತೃತ್ವ ಶಕ್ತಿ ಜನಮಾನಸಕ್ಕೆ ಹುರಿದು ಬರಬೇಕೇ ವಿನಾ ದಾಖಲೆಗೆ ಸೀಮಿತವಾಗಬಾರದು.ಕನ್ನಡ ಮಾಧ್ಯಮ ಶಾಲೆಗೆ, ಕಲಿಕೆಗೆ ಪ್ರೋತ್ಸಾಹ ನಿರಂತರ ಬೇಕು. ಕರ್ನಾಟಕದಲ್ಲಾದರೂ ಕನ್ನಡ ಕಲಿತವನಿಗೇ ಉದ್ಯೋಗ ಎಂಬ ಆದೇಶವಾಗ ಬೇಕು. ಆಗಲಾದರೂ ಕನ್ನಡ ಕಲಿಯುವವರ ಸಂಖ್ಯೆ ಹೆಚ್ಚಾದೀತು. ಸರ್ಕಾರಿ, ಸರ್ಕಾರೇತರ ಎರಡೂ ಕಡೆ ಪರಭಾಷಿಕರ ಸಂಖ್ಯೆ ಏರುತ್ತಿದೆ ಅಷ್ಟೇ ಅಲ್ಲ ಅವರು ಕನ್ನಡಿಗರನ್ನಾಳುವ ಧೋರಣೆ ತೋರುತ್ತಿರುವುದೂ ಸುಳ್ಳಲ್ಲ. ಕನ್ನಡಿಗರೆಲ್ಲ ಈ ನಿಟ್ಟಿನಲ್ಲಾದರೂ ಒಗ್ಗಟ್ಟಾಗಿ ಕನ್ನಡವೇ ನಮ್ಮ ಉಸಿರಾಗಿ ಅದರ ಏಳ್ಗೆಗೆ ದುಡಿಯಬೇಕಿದೆ.ವಿಧಾನಸೌಧ ಮೆಟ್ಟಿಲಿಗೆ ಕನ್ನಡದ ಹಾಡು ಸೀಮಿತವಾಗದೇ ಎಲ್ಲಡಿಯೂ ಕನ್ನಡ ಡಿಂಡಿಮ ಬಾರಿಸಬೇಕಿದೆ.ಸತ್ತಂತಿಹರನ್ನು ಬಡಿದೆಚ್ಚರಿಸೆ ಕ್ಷಯಿಸಿ ಶಿವೇತರ ಕೃತಿಕೃತಿಯಲ್ಲಿ ಆಗುವುದು ಖಂಡಿತ. ಹಾಗಾಗೀ ಬಿ.ಎಂ ಶ್ರೀಯವರ ಕರೆಗೆ ಓಗೊಟ್ಟು ಏರಿಸಿ,ಹಾರಿಸಿ,ಕನ್ನಡದ ಬಾವುಟ ಹಾರಿಸಿ, ತೋರಿಸಿ, ಕೆಚ್ಚೆದೆಯ ಬಾವುಟ… ನಾವೆಲ್ಲ ಬೀಗೋಣ.

ವಿಶೇಷ ಲೇಖನ: ಡಾllಗೀತಾ ಎನ್

Published On - 7:51 am, Mon, 1 November 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್