Karnataka Budget 2021: ಕರ್ನಾಟಕ ಬಜೆಟ್ ಇತಿಹಾಸ, 10 ಆಸಕ್ತಿಕರ ಸಂಗತಿ

ಬಜೆಟ್ ದಾಖಲೆ ಹಿಡಿದು ವಿಧಾನಸೌಧ ಪ್ರವೇಶಿಸುತ್ತಿರುವ ಬಿ.ಎಸ್.ಯಡಿಯೂರಪ್ಪ (ಸಂಗ್ರಹ ಚಿತ್ರ)
Karnataka Budget 2021: ಕೆಂಗಲ್ ಹನುಮಂತಯ್ಯರಿಂದ ಆರಂಭವಾಗಿ ಇಲ್ಲಿಯ ತನಕದ ಕರ್ನಾಟಕ ಬಜೆಟ್ ಬಗೆಗಿನ 10 ಆಸಕ್ತಿಕರ ಸಂಗತಿಗಳು ಇಲ್ಲಿವೆ.
ಬಜೆಟ್ ಅಂದರೆ, ಅದರಲ್ಲೂ ಕರ್ನಾಟಕ ರಾಜ್ಯ ಬಜೆಟ್ (Karnataka Budget 2021) ಅಂದರೆ ಹಣಕಾಸು ವರ್ಷದಲ್ಲಿ (ಏಪ್ರಿಲ್ 1ರಿಂದ ಮಾರ್ಚ್ 31ರ ತನಕ) ರಾಜ್ಯ ಸರ್ಕಾರಕ್ಕೆ ಬರುವ ಆದಾಯ ಮತ್ತು ವೆಚ್ಚದ ಅಂದಾಜು ಪಟ್ಟಿ. ಇದೇ ಮಾರ್ಚ್ 8ನೇ ತಾರೀಕು 2021- 22ನೇ ಸಾಲಿನ ಕರ್ನಾಟಕ ಬಜೆಟ್ ಅನ್ನು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Ydiyurappa) ಮಂಡಿಸಲಿದ್ದಾರೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್, ಮಕ್ಕಳಿಗಾಗಿ ಬಜೆಟ್ ಮಂಡಿಸಿದ ಅಗ್ಗಳಿಕೆ ಬಿಎಸ್ವೈ ಅವರಿಗಿದೆ. ಈ ಬಾರಿ ಬಜೆಟ್ ಮಂಡಿಸುವ ಹೊತ್ತಿಗೆ ಯಡಿಯೂರಪ್ಪನವರಿಗೆ ವಯಸ್ಸು 78 ವರ್ಷ ದಾಟಿರುತ್ತದೆ.
ಕೆಂಗಲ್ ಹನುಮಂತಯ್ಯರಿಂದ ಆರಂಭವಾಗಿ ಇಲ್ಲಿಯ ತನಕದ ಕರ್ನಾಟಕ ಬಜೆಟ್ ಬಗೆಗಿನ 10 ಆಸಕ್ತಿಕರ ಸಂಗತಿಗಳು ಇಲ್ಲಿವೆ.
- ಕರ್ನಾಟಕ ಏಕೀಕರಣದ ನಂತರ 1951-52ರಲ್ಲಿ ಮೊದಲ ಬಾರಿಗೆ ರಾಜ್ಯ ಬಜೆಟ್ ಮಂಡಿಸಿದವರು ಕೆಂಗಲ್ ಹನುಮಂತಯ್ಯ. ಆಗಿನ ಬಜೆಟ್ ಗಾತ್ರ ಎಷ್ಟಿತ್ತು ಗೊತ್ತಾ? 21 ಕೋಟಿ ರೂಪಾಯಿ.
- ಇದುವರೆಗೆ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿರುವವರು ರಾಮಕೃಷ್ಣ ಹೆಗ್ಗಡೆ ಹಾಗೂ ಸಿದ್ದರಾಮಯ್ಯ. ಇಬ್ಬರು ತಲಾ 13 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ.
- ಈ ಸಲ ಬಜೆಟ್ ಯಡಿಯೂರಪ್ಪ ಅವರಿಗೆ ಎಂಟನೆಯದು. ಆ ಮೂಲಕ ಅವರು ಹೆಚ್ಚು ಬಾರಿ ಬಜೆಟ್ ಮಂಡಿಸಿದವರ ಸಾಲಿನಲ್ಲಿ ಮೂರನೆಯವರಾಗುತ್ತಾರೆ.
- 2012- 13ನೇ ಸಾಲಿನಲ್ಲಿ ಬಜೆಟ್ ಗಾತ್ರವನ್ನು 1 ಲಕ್ಷ ಕೋಟಿ ರೂಪಾಯಿ ದಾಟಿಸಿದವರು ಆಗಿನ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ.
- ಕೃಷಿ ಕ್ಷೇತ್ರಕ್ಕೆ ಪ್ರತ್ಯೇಕವಾದ ಬಜೆಟ್ ನೀಡಿದ ಶ್ರೇಯ ಬಿಎಸ್ ವೈದು. ಅದೇ ರೀತಿ ಮಕ್ಕಳಿಗಾಗಿ ಪ್ರತ್ಯೇಕ ಬಜೆಟ್ ನೀಡಿದ್ದು ಸಹ ಅವರೇ.
- 2018- 19ನೇ ಸಾಲಿನಲ್ಲಿ ಬಜೆಟ್ ಗಾತ್ರವನ್ನು 2 ಲಕ್ಷ ಕೋಟಿ ದಾಟಿಸಿದವರು ಸಿದ್ದರಾಮಯ್ಯ.
- 2020- 21ನೇ ಸಾಲಿನಲ್ಲಿ ಮಂಡಿಸಿದ ಬಜೆಟ್ ಗಾತ್ರ 2,37,893.33 ಕೋಟಿ ರೂಪಾಯಿ.
- 1962- 63ರಲ್ಲಿ ಒಮ್ಮೆ ಮಾತ್ರ ಬಜೆಟ್ ಮಂಡಿಸಿದ ದಾಖಲೆ ಎಸ್.ಆರ್. ಕಂಠಿ ಅವರ ಹೆಸರಲ್ಲಿದೆ. ಅವರು ಆ ಬಾರಿ ರಾಜ್ಯ ಬಜೆಟ್ ವೆಚ್ಚವನ್ನು ನೂರು ಕೋಟಿ (102.93 ಕೋಟಿ ರೂಪಾಯಿ) ದಾಟಿಸಿದರು.
- ದೇಶದಾದ್ಯಂತ ಕೊರೊನಾ ಲಾಕ್ ಡೌನ್ ಘೋಷಿಸಿದ ಮೇಲೆ ರಾಜ್ಯಕ್ಕೆ ಆರ್ಥಿಕ ಸವಾಲು ಎದುರಾಗಿರುವಾಗ 2021- 22ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಆಗುತ್ತಿದೆ.
- ರೂಪಾಯಿಗೆ ಇಳಿಸಿ, ವಿಂಗಡಿಸಿ ಹೇಳಬೇಕೆಂದರೆ 2020- 21ನೇ ಸಾಲಿನ ಬಜೆಟ್ ಆದಾಯ ಹೀಗಿದೆ: ರಾಜ್ಯ ತೆರಿಗೆ ಆದಾಯ 54 ಪೈಸೆ, ಸಾಲ 22 ಪೈಸೆ, ಕೇಂದ್ರ ತೆರಿಗೆ ಪಾಲು 12 ಪೈಸೆ, ಕೇಂದ್ರ ಸರ್ಕಾರದ ಅನುದಾನ 7 ಪೈಸೆ, ಸರ್ಕಾರದ ತೆರಿಗೆಯೇತರ ಆದಾಯ 3 ಪೈಸೆ ಹಾಗೂ ಸಾರ್ವಜನಿಕ ಲೆಕ್ಕ (ನಿವ್ವಳ) 2 ಪೈಸೆ.