Tv9 Facebook Live | ಯಡಿಯೂರಪ್ಪ ಮಂಡನೆ ಮಾಡಿದ ಮುಂಗಡಪತ್ರದಲ್ಲಿ ಜನ ಸಾಮಾನ್ಯರಿಗೆ ಏನಿದೆ?
Karnataka Budget 2021: ನಿರ್ಭಯಾ ಯೋಜನೆ ತುಂಬಾ ಖುಷಿ ಅನಿಸಿತು. ಮಹಿಳೆಯರು ಹೊರಗಡೆ ಕೆಲಸಕ್ಕೆ ಹೋಗುತ್ತಾರೆ. ನಿರ್ಭಯಾ ಯೋಜನೆಯಡಿ ಎಲ್ಲ ಕಡೆ ಸಿಸಿಟಿವಿ ಸೌಲಭ್ಯ ಕೊಡ್ತೀನಿ ಅಂದಿದ್ದು ಖುಷಿ ಕೊಟ್ಟಿದೆ
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಕರ್ನಾಟಕದ 2021-22ರ ಸಾಲಿನ ಮುಂಗಡಪತ್ರ ಮಂಡಿಸಿದ್ದಾರೆ. ಇದು ಅವರ ಎಂಟನೇ ಬಜೆಟ್. ಈ ಮುಂಗಡಪತ್ರದಲ್ಲಿ ಸಾಮಾನ್ಯ ಜನರಿಗೆ ಏನಿದೆ ಎಂಬ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಸಂವಾದ ನಡೆಸಿತು. ಆ್ಯಂಕರ್ ಹರಿಪ್ರಸಾದ್ ಈ ಚರ್ಚೆಯನ್ನು ನಡೆಸಿಕೊಟ್ಟರು. ಮಹಿಳಾ ಉದ್ಯಮಿ ಅಶ್ವಿನಿ ಅನ್ವೇಕರ್, ಎಫ್ಕೆಸಿಸಿಐ ಮಾಜಿ ಅಧ್ಯಕ್ಷ ಜೆ.ಆರ್.ಬಂಗೇರ, ಗೃಹಿಣಿ ದೀಪಿಕಾ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
2021-22ರ ಸಾಲಿನ ಬಜೆಟ್ ಬಗ್ಗೆ ಮಾತನಾಡಿದ ಬಂಗೇರಾ ಅವರು ಈ ಬಜೆಟ್ ಚೆನ್ನಾಗಿದೆ ಎಂದು ಸಮರ್ಥಿಸಿಕೊಂಡರು. ಈ ಬಜೆಟ್ ಸರ್ವವ್ಯಾಪಿ ಸರ್ವಸ್ಪರ್ಶಿ ಆಗಿದೆ. ಕೃಷಿ, ಆರೋಗ್ಯ, ಶಿಕ್ಷಣ ವಲಯ, ನಿಗಮಗಳಿಗೆ, ಮಠಗಳಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಪೀಣ್ಯ ಟೌನ್ಶಿಪ್ಗೆ ₹ 100 ಕೋಟಿ ಮೀಸಲಿಟ್ಟಿದ್ದಾರೆ. ಕೈಗಾರಿಕೆಗಳಿಗೆ ಒತ್ತು ಕೊಟ್ಟಿದ್ದಾರೆ. ಗ್ರಾಮೀಣ ಅಭಿವೃದ್ಧಿ, ಆರೋಗ್ಯ , ಮಹಿಳೆಯರಿಗೆ ವಿಶೇಷ ಸ್ಥಾನಮಾನ. 60 ಸಾವಿರ ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ಕೃಷಿ ಕಾಯ್ದೆ ಜಾರಿಗೆ ಬರುವ ಮುನ್ನ ಎಪಿಎಂಸಿ ಗಟ್ಟಿ ಮಾಡಲು ಪ್ರಯತ್ನಿಸಿದ್ದಾರೆ. ಯಾವುದೇ ತೆರಿಗೆ ಹೆಚ್ಚಿಸಿಲ್ಲ. ಕೈಗಾರಿಕೆಗೆ ಉತ್ತೇಜನ ಕೊಡುವುದಕ್ಕೆ ಪೂರಕವಾಗಿ ಬಜೆಟ್ ಮಂಡಿಸಲಾಗಿದೆ ಎಂದರು.
ಬಜೆಟ್ನಲ್ಲಿ ಮಹಿಳೆಯರಿಗೆ ನೀಡಿರುವ ಆದ್ಯತೆ ಕುರಿತು ಪ್ರತಿಕ್ರಿಯಿಸಿದ ದೀಪಿಕಾ, ಮಹಿಳೆಯರಿಗೆ ಆದ್ಯತೆ ಕೊಟ್ಟಿದ್ದು ಖುಷಿ ಕೊಟ್ಟಿತು. ಸಾಲ ತೆಗೆದುಕೊಳ್ಳುವುದು ಸುಲಭವಲ್ಲ . ಅದು ಗ್ರಾಹಕ ಸ್ನೇಹಿ ಅಲ್ಲ. ಎಲ್ಲರಿಗೂ ಸುಲಭವಾಗಿ ಸಿಗುವಂತೆ ಮಾಡಬೇಕು. ಎಂಎಸ್ಎಂಇ ಸಾಲ ತೆಗೆದುಕೊಳ್ಳಲು ಪ್ರಾಜೆಕ್ಟ್ ರಿಪೋರ್ಟ್ ತನ್ನಿ ಅಂತಾರೆ. ಟ್ರೈನಿಂಗ್ ತಗೊಳ್ಳುವುದು, ಆಮೇಲೆ ಸರ್ಟಿಫಿಕೇಟ್ ತೆಗೆದುಕೊಳ್ಳುವುದು ಇವೆಲ್ಲ ಪ್ರಕ್ರಿಯೆ ಇರುತ್ತದೆ. ಬಜೆಟ್ನಲ್ಲಿ ಘೋಷಿಸಿದ ಯೋಜನೆಗಳು ಬಹುತೇಕ ಜಾರಿಗೆ ಬರುವುದಿಲ್ಲ. ಈ ಯೋಜನೆಗಳ ಲಾಭ ಪಡೆಯಬೇಕು ಎಂದಾದರೆ ಬ್ಯಾಂಕ್ ಟು ಬ್ಯಾಂಕ್ ಒಡಾಡಿಸ್ತಾರೆ. ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಮ್ಯಾನೇಜರ್ ಮಟ್ಟಕ್ಕೆ ಇದು ತಲುಪಲ್ಲ. ಕಲಿತವರಿಗೆ ಹೀಗೆ ಆದರೇ ಬಾಕಿ ಉಳಿದವರು ಏನು ಮಾಡ್ತಾರೆ . ಹೀಗಿರುವಾಗ ಮಹಿಳಾ ಉದ್ಯಮಿಗಳು ಹೇಗೆ ಮುಂದುವರಿಯುವುದು? ಈ ಬಜೆಟ್ ಬಗ್ಗೆ ಸಮಾಧಾನ ಇದೆ. ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎಂಬುದು ಗೊತ್ತಿಲ್ಲ ಎಂದರು.
ಮಹಿಳೆಯರಿಗೆ ಸಾಲ ನೀಡುವ ಯೋಜನೆಗಳ ಬಗ್ಗೆ ಮಾತನಾಡಿದ ಬಂಗೇರಾ, ಮಹಿಳೆಯರ ದುಡ್ಡು ಬ್ಯಾಂಕ್ಗೆ ಬರುವುದಿಲ್ಲ ಇದು ಕೆಎಸ್ಎಫ್ಸಿಗೆ ಬರುತ್ತದೆ . ಕೆಎಸ್ಎಫ್ಸಿಯಲ್ಲಿ ದುಡ್ಡು ಇಟ್ಟು ಅಲ್ಲಿಂದ ಮಹಿಳೆಯರಿಗೆ ಕೊಡಬೇಕಿದೆ. ಅದರಲ್ಲಿ ಶೇ 30 ಬೀಜಧನ ತೆರಬೇಕಾಗುತ್ತದೆ. ಉಳಿದ ಶೇ 70 ಅವರು ಕೊಡುತ್ತಾರೆ. ಎಂಎಸ್ಎಂಇ ಯೋಜನೆ ಮೊದಲೂ ಇತ್ತು . ಶೇ 30ರಷ್ಟು ಬೀಜಧನ ತರುವುದು ಕಷ್ಟ. ಎಲ್ಲ ಎಂಎಸ್ಎಂಇಗಳಿಗೆ ಆಗಲ್ಲ. ಹಾಗಾಗಿ ಅದನ್ನು ಶೇ 10ಕ್ಕೆ ತರಬೇಕು ಎಂಬುದು ನನ್ನ ಒತ್ತಾಯ. ಇದರಿಂದ ಸಾಕಷ್ಟು ಮಹಿಳೆಯರು ಸಣ್ಣ ಉದ್ಯಮ ಮಾಡುವುದಕ್ಕೆ ಅವಕಾಶ ಆಗುತ್ತದೆ. ಗಾರ್ಮೆಂಟ್ಸ್, ಕಟ್ಟಡ ಕಾರ್ಮಿಕರಿಗೆ ವಿಶೇಷವಾಗಿ ಬಸ್ಪಾಸ್ ನೀಡುವುದಾಗಿ ಹೇಳಲಾಗಿದೆ. ಪಾಸ್ನಲ್ಲಿ ರಿಯಾಯಿತಿ ಕೊಡುವುದಾಗಿ ಹೇಳಿದ್ದಾರೆ. ಸರ್ಕಾರ ಯಾವುದೇ ಯೋಜನೆಗಳನ್ನು ಘೋಷಿಸಿದ್ದರೆ ಅದನ್ನು ಅವಲೋಕನ ಮಾಡಬೇಕು. ಮೂರು ತಿಂಗಳಿಗೊಮ್ಮೆಯಾದರೂ ಈ ಘೋಷಣೆಗಳನ್ನು ಅವಲೋಕನ ಮಾಡಬೇಕು. ಮಾಧ್ಯಮಗಳು ಈ ರೀತಿ ಅವಲೋಕನ ಮಾಡಿ ಅದನ್ನು ಅಧಿಕಾರದಲ್ಲಿರುವವರೆಗೆ ಮುಟ್ಟಿಸಬೇಕು. ರಾಜಕಾರಣಿಗಳ ಕಿವಿಗೆ ಇದು ತಲುಪಬೇಕು. ನಾವು ಯೋಜನೆಗಳನ್ನು ಜಾರಿಗೆ ತರಲು ಒತ್ತಾಯಿಸಬೇಕು. ತೆರಿಗೆ ಜಾಸ್ತಿ ಬರಬೇಕು ಎಂದಾದರೆ ಉತ್ಪಾದನೆಗಳು ಜಾಸ್ತಿ ಆಗಬೇಕು. ಉತ್ಪಾದನೆ ಜಾಸ್ತಿ ಆಗಬೇಕು ಎಂದರೆ ಅದಕ್ಕೆ ಬೇಕಾದ ಪೂರಕ ಕೆಲಸ ಕಾರ್ಯಗಳು ಆಗಬೇಕು. ಮೂಲ ಸೌಕರ್ಯ ಅಭಿವೃದ್ಧಿ ಕೇಂದ್ರ ಸರ್ಕಾರದಲ್ಲಿ ಸಾಕಷ್ಟು ಆಗಿದೆ
ಮಹಿಳೆಯರಿಗೆ ಶೇ 4 ಬಡ್ಡಿದರದಲ್ಲಿ ಸಾಲ ನೀಡುವ ಬಜೆಟ್ ಘೋಷಣೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಅಶ್ವಿನಿ ಅವರು ಉದ್ಯಮ ವಲಯದಲ್ಲಿ ಮಹಿಳೆಯರಿಗೆ ಆದ್ಯತೆ ಕೊಟ್ಟಿದ್ದು 4 ಬಡ್ಡಿದರದಲ್ಲಿ ಸಾಲ ಕೊಡುತ್ತೇನೆ ಅಂದಿದ್ದು ಖುಷಿಯಾಗಿದೆ. ಹುಬ್ಬಳ್ಳಿಯಲ್ಲಿಯೂ ಮಹಿಳಾ ನೌಕರರು ಇದ್ದಾರೆ. ಆದರೆ ಬಿಎಂಟಿಸಿ ಪಾಸ್ ಅನುಕೂಲ ಮಾಡಿಕೊಟ್ಟಿದ್ದು ಬೆಂಗಳೂರಿನವರಿಗೆ. ನಮ್ಮ ಕಡೆಗೆ ಅದನ್ನು ಕೊಟ್ಟಿಲ್ಲ ಎಂದು ಬೇಜಾರಾಗಿದೆ. ಬಜೆಟ್ ಎಂದು ಹೇಳುವಾಗ ರಾಜ್ಯದ ಹಿತ ದೃಷ್ಟಿಯಿಂದ ನೋಡಬೇಕು. ಬೆಂಗಳೂರನ್ನು ಮಾತ್ರ ಕೇಂದ್ರೀಕೃತವಾಗಿ ನೋಡುವುದು ಸರಿಯಲ್ಲ. ಉತ್ತರ ಕರ್ನಾಟಕದಲ್ಲಿ ಅಂಥ ಸೌಲಭ್ಯಗಳನ್ನು ಕೊಟ್ಟಿಲ್ಲ. ಮಹಿಳಾ ಉದ್ಯಮಿಗಳಿಗೆ 2 ಕೋಟಿಯಷ್ಟು ಸಾಲ ಕೊಡುತ್ತೇವೆ ಎಂದು ಅವರು ಹೇಳಿದ್ದಾರೆ. ಅದು ಹೇಗೆ ಬರುತ್ತೆ? ಎಷ್ಟು ಜನರಿಗೆ ಸಿಗುತ್ತೆ ಎನ್ನುವ ಸ್ಪಷ್ಟತೆ ನಮಗೆ ಸಿಕ್ಕಿಲ್ಲ ಎಂದರು.
ನಿರ್ಭಯಾ ಯೋಜನೆ ತುಂಬಾ ಖುಷಿ ಅನಿಸಿತು. ಮಹಿಳೆಯರು ಹೊರಗೆ ಕೆಲಸಕ್ಕೆ ಹೋಗುತ್ತಾರೆ. ನಿರ್ಭಯಾ ಯೋಜನೆಯಡಿ ಎಲ್ಲ ಕಡೆ ಸಿಸಿಟಿವಿ ಸೌಲಭ್ಯ ಕೊಡ್ತೀನಿ ಅಂದಿದ್ದು ಖುಷಿ ಕೊಟ್ಟಿದೆ. 60 ಸಾವಿರ ಮಹಿಳೆಯರಿಗೆ ಉದ್ಯೋಗ ಕೊಡುತ್ತೇವೆ ಅಂದಿದ್ದಾರೆ. ಎಷ್ಟು ಜನರಿಗೆ ಇದು ಸಿಗುತ್ತದೆ ಎಂಬುದು ಗೊತ್ತಿಲ್ಲ. ಇಷ್ಟೊಂದು ಉದ್ಯೋಗಾವಕಾಶಗಳು ಇವೆ ಎಂಬುದರ ಬಗ್ಗೆ ಎಲ್ಲರಿಗೂ ಗೊತ್ತಿರಬೇಕು. ಹಳ್ಳಿಹಳ್ಳಿಗಳಿಗೆ ಈ ಮಾಹಿತಿ, ಸೌಲಭ್ಯ ತಲುಪಬೇಕು ಎಂದರು.