ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸಾರಿಗೆ ನೌಕರರು ಮತ್ತು ರಾಜ್ಯ ಸರ್ಕಾರದ ನಡುವಿನ ಮನಸ್ತಾಪದ ತಾಪ ಜನಸಾಮಾನ್ಯರ ಮೇಲೆ ಪರಿಣಾಮ ಬೀರುತ್ತಿದೆ. ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರಿ ಬಸ್ಗಳನ್ನೇ ನೆಚ್ಚಿಕೊಂಡು ಪ್ರತಿನಿತ್ಯ ಪ್ರಯಾಣಿಸುತ್ತಿದ್ದ ಲಕ್ಷಾಂತರ ಮಂದಿ ಸಾರಿಗೆ ಸೌಲಭ್ಯವಿಲ್ಲದೇ ಪರದಾಡುತ್ತಿದ್ದಾರೆ. ಮೂರನೇ ದಿನವಾದ ಇಂದು ಕೂಡಾ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದೇ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಆದರೆ, ಸರ್ಕಾರ ಹಾಗೂ ಸಾರಿಗೆ ನೌಕರರ ಕಿತ್ತಾಟದಲ್ಲಿ ಜನಸಾಮಾನ್ಯ ಏಟು ತಿನ್ನುವಂತಾಗಿದ್ದು, ಖಾಸಗಿ ವಾಹನಗಳಿಗೆ ಹೆಚ್ಚಿನ ಹಣ ಕೊಟ್ಟು ಹೋಗುವ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಂಗಳೂರು: ವೇತನ ಪರಿಷ್ಕರಣೆಗೆ ಒತ್ತಾಯಿಸಿ ಸಾರಿಗೆ ಸಿಬ್ಬಂದಿ ಮುಷ್ಕರ ಚುರುಕಾಗಿರುವ ಬೆನ್ನಲ್ಲೇ ವಿವಿಧ ಸಾರಿಗೆ ನಿಗಮಗಳ ನಿರ್ವಹಣೆಯ ಆದಾಯ-ವೆಚ್ಚದ ಮಾಹಿತಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಒಟ್ಟು ಆದಾಯ ₹ 6,205 ಕೋಟಿ. ನಿಗಮಗಳಿಗೆ ಇತರ ಮೂಲಗಳ ಆದಾಯ ₹ 513.78 ಕೋಟಿ. ಈ ಪೈಕಿ ಡೀಸೆಲ್ ವೆಚ್ಚ ₹ 4,821.65 ಕೋಟಿ, ವೇತನ ಬಾಬ್ತು ₹ 4,536.80 ಕೋಟಿ, ಚಾಲಕ, ನಿರ್ವಾಹಕರಿಗೆ ಪ್ರೋತ್ಸಾಹ ಬಾಬ್ತು ₹ 169.78 ಕೋಟಿ, ಹೆಚ್ಚುವರಿ ಕರ್ತವ್ಯಕ್ಕೆ ನೀಡುವ ಭತ್ಯೆ ₹ 274.74 ಕೋಟಿ, ಮಾಸಿಕ, ದಿನದ ಭತ್ಯೆ, ಇತರೆ ಭತ್ಯೆ ₹ 254.80 ಕೋಟಿ. ರಾಜ್ಯ ಸರ್ಕಾರ ನೀಡಿರುವ ಈ ಲೆಕ್ಕಾಚಾರದ ಪ್ರಕಾರ ಸಾರಿಗೆ ನಿಗಮಗಳ ಆದಾಯಕ್ಕೆ ಹೋಲಿಸಿದರೆ ಖರ್ಚೇ ಹೆಚ್ಚು. ಒಟ್ಟು ಆದಾಯ ₹6,718.78 ಕೋಟಿಯಿದ್ದರೆ, ಒಟ್ಟು ವೆಚ್ಚ ₹ 10,057.77 ಕೋಟಿ. ಆದಾಯ ಮತ್ತು ವೆಚ್ಚದ ನಡುವಣ ಅಂತರ ₹ 3338.99 ಕೋಟಿ ಇದೆ. ಈ ಅಂಕಿಅಂಶಗಳನ್ನು ಬಿಡುಗಡೆ ಮಾಡುವ ಮೂಲಕ ನಿಗಮಗಳು ನಷ್ಟದಲ್ಲಿರುವುದನ್ನು ಸರ್ಕಾರ ಎತ್ತಿತೋರಿಸಿದೆ.
ಬೆಂಗಳೂರು: ಮೆಜೆಸ್ಟಿಕ್ನಲ್ಲಿ ಪ್ರಯಾಣಿಕರಿಗೆ ಖಾಸಗಿ ಬಸ್ಗಳು ಕಾದು ನಿಂತಿದ್ದರೂ ಪ್ರಯಾಣಿಕರು ಅತ್ತ ಸುಳಿಯುತ್ತಿಲ್ಲ. ಸಾರಿಗೆ ಸಿಬ್ಬಂದಿ ಮುಷ್ಕರ ಹಿನ್ನೆಲೆಯಲ್ಲಿ ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಸಾಲುಸಾಲು ರಜೆ, ವೀಕೆಂಡ್ ಹಿನ್ನೆಲೆಯಲ್ಲಿ ಹೆಚ್ಚು ಜನರು ಸಂಚರಿಸಬಹುದು ಎಂದು ರಾಜ್ಯದ ನಾನಾ ಭಾಗಗಳಿಗೆ ಹೆಚ್ಚುವರಿ ಬಸ್ಗಳನ್ನು ಹಾಕಲಾಗಿತ್ತು. ಆದರೆ ಖಾಸಗಿ ಬಸ್ಗಳಲ್ಲಿ ಪ್ರಯಾಣ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ. ವೀಕೆಂಡ್ ಸಮಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ಗಳು ಕೆಲವೇ ನಿಮಿಷಗಳಲ್ಲಿ ಭರ್ತಿಯಾಗುತ್ತಿದ್ದವು. ಆದರೆ ಇಂದು ಗಂಟೆಗಟ್ಟಲೆ ಕಾದರೂ ಖಾಸಗಿ ಬಸ್ಗಳು ಭರ್ತಿಯಾಗುತ್ತಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಖಾಸಗಿ ಬಸ್ಗಳತ್ತ ಜನರು ನಿರಾಸಕ್ತಿ ತೋರಿಸುತ್ತಿದ್ದಾರೆ.
ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರದ ಮತ್ತಷ್ಟು ಕಗ್ಗಂಟಾಗಿದೆ. ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಸರ್ಕಾರ ಔದ್ಯೋಗಿಕ ನ್ಯಾಯಾಧಿಕರಣದ ಮೊರೆ ಹೋಗಿದೆ. ಹೀಗಾಗಿ ಈ ಸಂಘರ್ಷವೀಗ ಕೈಗಾರಿಕಾ ವಿವಾದದ ಸ್ವರೂಪ ಪಡೆದುಕೊಂಡಿದೆ. 6 ತಿಂಗಳೊಳಗಾಗಿ ತೀರ್ಪು ನೀಡಲು ನ್ಯಾಯಾಧಿಕರಣಕ್ಕೆ ಕಾರ್ಮಿಕ ಇಲಾಖೆ ಮನವಿ ಮಾಡಿದೆ. 6ನೇ ವೇತನ ಆಯೋಗದ ಸಂಬಳ ಬೇಡಿಕೆ ನ್ಯಾಯಸಮ್ಮತವೇ ಎಂದು ಸರ್ಕಾರ ಪ್ರಶ್ನಿಸಿದೆ.
ಮುಷ್ಕರದಲ್ಲಿ ಭಾಗಿಯಾಗುವಂತೆ ಪ್ರಚೋದಿಸಿದ ಹಿನ್ನೆಲೆಯಲ್ಲಿ 293 KSRTC ನೌಕರರನ್ನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಮುಷ್ಕರದ ಕರೆಗೆ ಓಗೊಡದೆ ಕೆಲಸಕ್ಕೆ ಹಾಜರಾದವರಿಗೆ ಬೆದರಿಕೆ ಹಾಕುವ ಜೊತೆಗೆ ಶ್ರದ್ಧಾಂಜಲಿ ಅರ್ಪಿಸಿದ್ದ ಆರೋಪ ಈ ನೌಕರರ ಮೇಲಿದೆ.
ಬೆಂಗಳೂರು: ಸಾರಿಗೆ ನಿಗಮಗಳ ನೌಕರರ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದ 120 ತರಬೇತಿ ನೌಕರರನ್ನು ವಜಾಗೊಳಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಸೇವೆಯಿಂದ ವಜಾಗೊಳಿಸಿ ಆದೇಶ ಮಾಡಿದೆ. ಒಟ್ಟು 1484 ತರಬೇತಿ ನೌಕರರಲ್ಲಿ ನಿನ್ನೆ 96 ತರಬೇತಿ ನೌಕರರನ್ನು ವಜಾ ಮಾಡಲಾಗಿತ್ತು. ಇಂದು ಮತ್ತೆ 60 ಜನ ತರಬೇತಿ ನೌಕರರು ಮತ್ತು 60 ಜನ ಪರಿವೀಕ್ಷಣಾ (probationary) ತರಬೇತಿ ನೌಕರರನ್ನು ವಜಾ ಮಾಡಲಾಗಿದೆ.
ಬೆಂಗಳೂರು: ಕೈಗಾರಿಕಾ ವಿವಾದ ಕಾಯ್ದೆ 1947 ಕಲಂ10(3)ರ ಅಡಿ ಆದೇಶ ಹೊರಡಿಸಿರುವ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಸಾರಿಗೆ ಸಿಬ್ಬಂದಿ ಮುಷ್ಕರ ನಿಷೇಧಿಸಿದೆ. ಸಾರಿಗೆ ಸೇವೆಯನ್ನು ಉಪಯುಕ್ತ ಸೇವೆ ಎಂದು ಘೋಷಿಸಿ ಸಿಬ್ಬಂದಿ ವಿರುದ್ಧ ಕಾನೂನು ಅಸ್ತ್ರ ಪ್ರಯೋಗಿಸಿದೆ. ಈ ಆದೇಶವನ್ನು ನಾಲ್ಕೂ ನಿಗಮಗಳಿಗೆ ಅನ್ವಯಿಸುವಂತೆ ಹೊರಡಿಸಲಾಗಿದೆ. ಕೈಗಾರಿಕಾ ವಿವಾದ ಕಾಯ್ದೆ 21(1) (d) ಅನ್ವಯ ಸಂಧಾನ ಪ್ರಕ್ರಿಯೆ ಬಾಕಿ ಇರುವಾಗ ಮುಷ್ಕರ ನಡೆಸುವಂತಿಲ್ಲ. ಇದೇ ಕಾನೂನು ಅಸ್ತ್ರ ಬಳಸಿ ಸರ್ಕಾರವು ಮುಷ್ಕರ ನಿಷೇಧಿಸಿದೆ. ವಿವಾದವನ್ನು ಸರ್ಕಾರ ನ್ಯಾಯ ನಿರ್ಣಯಕ್ಕಾಗಿ ಕಳುಹಿಸಿದೆ.
ಮುಷ್ಕರ ನಿರತ ಸಾರಿಗೆ ಇಲಾಖೆಯ ನೌಕರರಿಗೆ ಸರ್ಕಾರ ಸೆಡ್ಡು ಹೊಡೆದಿದೆ. ಚಾಲಕರು, ನಿರ್ವಾಹಕರನ್ನು ತಾತ್ಕಾಲಿಕವಾಗಿ ನಿಯೋಜನೆ ಮಾಡಲು ಸಾರಿಗೆ ಇಲಾಖೆ ಮುಂದಾಗಿದೆ. ಈಗಾಗಲೇ ಚಾಲಕ ಕಮ್ ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಹಾಕಿದ ಅಭ್ಯರ್ಥಿಗಳಿಗೆ ಅವಕಾಶ ನೀಡಲು ಸಾರಿಗೆ ಇಲಾಖೆ ನಿರ್ಧರಿಸಿದೆ. 40ಕ್ಕಿಂತ ಹೆಚ್ಚು ಅಂಕ ಪಡೆದು ಕೆಲಸ ಸಿಗದವರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದ್ದು, ಪ್ರತಿದಿನ ಚಾಲಕರಿಗೆ ₹ 600, ನಿರ್ವಾಹಕರಿಗೆ ₹ 500 ನಿಗದಿಪಡಿಸಲಾಗಿದೆ. ಆದರೆ ತಾತ್ಕಾಲಿಕವಾಗಿ ತೆಗೆದುಕೊಳ್ಳುವ ಸಿಬ್ಬಂದಿಗಲಿಗೆ ವಾರದ ರಜೆ ಹೊರತುಪಡಿಸಿ ಉಳಿದ ಸೌಲಭ್ಯವಿರುವುದಿಲ್ಲ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಈಕುರಿತು ರಾಜ್ಯದ ಎಲ್ಲ ಡಿಪೋಗಳ ಮೂಲಕ ಜಾಹಿರಾತು ನೀಡಲು ನಿರ್ಧರಿಸಲಾಗಿದೆ.
ರಾಜ್ಯದಲ್ಲಿ ಶುಕ್ರವಾರ ಸಂಜೆ 4ರವರೆಗೆ 673 ಸರ್ಕಾರಿ ಬಸ್ಗಳು ಸಂಚರಿಸಿವೆ. ಈ ಪೈಕಿ 286 ಕೆಎಸ್‌ಆರ್‌ಟಿಸಿ, 191 ಎನ್‌ಇಕೆಆರ್‌ಟಿಸಿ, 100 ಬಿಎಂಟಿಸಿ, 96 NWKRTC ಬಸ್ಗಳಿವೆ.
ಬೆಂಗಳೂರು: ಬೆಳಗಾವಿಯಲ್ಲಿ ನಾಳೆ (ಏಪ್ರಿಲ್ 10) ಸಾರಿಗೆ ನಿಗಮಗಳ ನೌಕರರ ಸಭೆ ನಡೆಯಲಿದೆ. ನಂತರದ ದಿನಗಳಲ್ಲಿ ಕಲಬುರ್ಗಿಯಲ್ಲಿಯೂ ಸಭೆ ನಡೆಯಲಿದೆ. ಸರ್ಕಾರದ ಧೋರಣೆ ಖಂಡಿಸಿ ನೌಕರರ ಕುಟುಂಗಳ ಸದಸ್ಯರೂ ಪ್ರತಿಬಟನೆಗೆ ಮುಂದಾಗಲಿದ್ದಾರೆ. ಏಪ್ರಿಲ್ 12ರಂದು ಬೆಳಿಗ್ಗೆ 11ರಂದು ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಸಾರಿಗೆ ನಿಗಮಗಳ ನೌಕರರ ಕುಟುಂಬಗಳ ಸದಸ್ಯರು ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ಗೆ ಮನವಿ ಸಲ್ಲಿಸಲಿದ್ದಾರೆ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
6ನೇ ವೇತನ ಆಯೋಗ ಜಾರಿ ಮಾಡುವುದಾಗಿ ಸರ್ಕಾರವೇ ಭರವಸೆ ಕೊಟ್ಟಿತ್ತು. ಆದರೆ ಈಗ ಮಾತು ತಪ್ಪಿದೆ. ಸರ್ಕಾರದಲ್ಲಿ ಇರುವ ದಲ್ಲಾಳಿಗಳು ಪರ್ಸೆಂಟೇಜ್ ಮಾತನಾಡುತ್ತಾರೆ. ನಮಗೆ ಪರ್ಸೆಂಟೇಜ್ ಲೆಕ್ಕದಲ್ಲಿ ಸಂಬಳ ಬೇಡ. 6ನೇ ವೇತನ ಆಯೋಗ ಜಾರಿಯಾಗಲೇಬೇಕು ಎಂದು ಅವರು ಒತ್ತಾಯಿಸಿದರು.
ಬೆಂಗಳೂರು: ನಾಳೆಯೂ ಸಾರಿಗೆ ಸಿಬ್ಬಂದಿ ಮುಷ್ಕರ ಮುಂದುವರಿಯುತ್ತದೆ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು. ಸರ್ಕಾರ 6ನೇ ವೇತನ ಆಯೋಗ ಜಾರಿ ಮಾಡಲು ಸಾದ್ಯವಿಲ್ಲ ಎಂದು ಹೇಳುತ್ತಿದೆ. ಈ ನಿರ್ಧಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವೈಜ್ಞಾನಿಕ ಕಾರಣ ಕೊಡಬೇಕು. ಯುಗಾದಿ ಹಬ್ಬಕ್ಕೆ ಸಾರಿಗೆ ಸಿಬ್ಬಂದಿಗೆ ಬೋನಸ್ ಇಲ್ಲ. ಮಾರ್ಚ್ ತಿಂಗಳ ಸಂಬಳವನ್ನೂ ಕೊಡದಿದ್ದರೆ ಹಬ್ಬ ಮಾಡೋದು ಹೇಗೆ ಎಂದು ಪ್ರಶ್ನಿಸಿದರು.
ಮಂಡ್ಯ: ಮದ್ದೂರು ತಾಲ್ಲೂಕು ಸೋಮನಹಳ್ಳಿ ಬಳಿ ಬೆಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ ತಡೆದ ರವಿ ಎಂಬಾತನಿಗೆ ಪ್ರಯಾಣಿಕರು ಗೂಸಾ ಕೊಟ್ಟಿದ್ದಾರೆ. ಮುಷ್ಕರ ನಡೆಸುತ್ತಿದ್ದರೂ ನೀನ್ಯಾಕೆ ಬಸ್ ಓಡಿಸುತ್ತಿದ್ದೀಯಾ? ಸಾಮಾನ್ಯ ಬಸ್ ರಸ್ತೆಗಿಳಿದಿಲ್ಲ ರಾಜಹಂಸ ಹೇಗೆ ಓಡಿಸ್ತೀಯಾ ಎಂದು ಚಾಲಕನ ಜೊತೆಗೆ ರವಿ ವಾಗ್ವಾದಕ್ಕಿಳಿದಿದ್ದ. ಈತ ಮೈಸೂರು ಜಿಲ್ಲೆ ಹುಣಸೂರು ಮೂಲದವ ಎಂದು ತಿಳಿದುಬಂದಿದೆ. ಪ್ರಸ್ತುತ ಪೊಲೀಸರು ರವಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಾಯಂಡಹಳ್ಳಿಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರಿನತ್ತ ಕೆಎಸ್‌ಆರ್‌ಟಿಸಿ ಬಸ್ ಹೊರಟಿದೆ. ಸಾಲುಸಾಲು ರಜೆ ಹಿನ್ನಲೆಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದೆ. ಬಸ್ ನಿಲ್ದಾಣದ ಸುತ್ತಲೂ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಸಾರಿಗೆ ನೌಕರರ ಮುಷ್ಕರದ ನಡುವೆಯೇ ಕೆಲ ಜಿಲ್ಲೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ಗಳು ಬೆರಳೆಣಿಕೆಯಲ್ಲಿ ಸಂಚಾರ ನಡೆಸಿವೆ. ಕೆಲವೆಡೆ ತರಬೇತಿನಿರತ ಚಾಲಕರ ಸಹಾಯದೊಂದಿಗೆ ಬಸ್ ಓಡಿಸಲಾಗಿದ್ದು, ಇನ್ನು ಕೆಲವೆಡೆ ನೌಕರರು ಹಾಜರಾಗಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ, ಇದಕ್ಕೆ ಸರ್ಕಾರಿ ನೌಕರರ ಜೊತೆ ಖಾಸಗಿಯವರೂ ತಮಗೆ ಅನ್ಯಾಯವಾಗುತ್ತಿದೆ ಎಂಬ ನೆಪವೊಡ್ಡಿ ಆಕ್ಷೇಪ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.
ಸಾರಿಗೆ ನೌಕರರ 8 ಬೇಡಿಕೆಗಳನ್ನು ಈಡೇರಿಸಲಾಗಿದೆ, 6ನೇ ವೇತನ ಆಯೋಗದಂತೆ ಸಂಬಳ ನೀಡಲು ಆಗಲ್ಲ. ಬೇಡಿಕೆ ಈಡೇರಿಕೆಗೆ ಹಠ ಮಾಡುವುದು ಸರಿಯಲ್ಲ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ನೌಕರರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಬಿಎಂಟಿಸಿ ನಿರ್ವಾಹಕರೊಬ್ಬರು ಕೋಡಿಹಳ್ಳಿ ವಿರುದ್ಧ ಕಿಡಿಕಾರಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಅವರ ಒಣಪ್ರತಿಷ್ಠೆಗಾಗಿ ನೌಕರರು ಬಲಿಪಶುಗಳಾಗ್ತಿದ್ದಾರೆ. ಯಾರದೋ ಮಾತೋ ಕೇಳಿ ಮುಷ್ಕರ ನಡೆಸುವುದು ತಪ್ಪು. ನಾನು 30 ವರ್ಷದಿಂದ ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇನ್ನೂ 8 ವರ್ಷಗಳ ಕಾಲ ಸರ್ವಿಸ್ ಇದೆ. ನಾನು ಅಧಿಕಾರಿಗಳ ಒತ್ತಡದಿಂದ ಕೆಲಸ ಮಾಡುತ್ತಿಲ್ಲ. ನಮಗೆ ಯಾವುದೇ ಅಧಿಕಾರಿಯಿಂದ ಒತ್ತಡ ಬಂದಿಲ್ಲ ಎಂದು ಹೇಳಿದ್ದಾರೆ.
ಕೆಲಸಕ್ಕೆ ಹಾಜರಾಗುವಂತೆ ನೌಕರರಿಗೆ ಒತ್ತಡ ಹೇರುತ್ತಿರುವ ಅಧಿಕಾರಿಗಳ ವಿರುದ್ಧ ನೌಕರರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಬಂದು ಕೆಲಸಕ್ಕೆ ಹಾಜರಾಗಲು ಒತ್ತಡ ಹಾಕುತ್ತಿದ್ದಾರೆ. ನನ್ನ ಪತಿ ನಿನ್ನೆ ಮುಂಜಾನೆ ಮನೆಯಿಂದ ಹೋದವರು ಮರಳಿ ಬಂದಿಲ್ಲ. ಹೀಗೆಲ್ಲಾ ಬೆದರಿಸಿ ದುಡಿಸಿಕೊಳ್ಳುವುದು ಸರಿಯಾ? ಸರ್ಕಾರ ನಮಗೆ ಅನ್ಯಾಯ ಮಾಡ್ತಿದೆ ಎಂದು ಸಾರಿಗೆ ನೌಕರರೊಬ್ಬರ ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸ್ ಮುಷ್ಕರ ಹಿನ್ನೆಲೆ ಕಳೆದ ಎರಡು ದಿನಗಳಿಂದ ಉತ್ತರ ಕರ್ನಾಟಕ ಭಾಗಕ್ಕೆ ಖಾಸಗಿ ಬಸ್‌ಗಳ ಓಡಾಟ ಕಂಡುಬಂದಿಲ್ಲ. ಹುಬ್ಬಳ್ಳಿ, ರಾಯಚೂರು, ಕಲಬುರ್ಗಿ, ಬೀದರ್, ಬಾಗಲಕೋಟೆ, ವಿಜಯಪುರ, ಬೆಳಗಾವಿ ಸೇರಿದಂತೆ ಇತರೆ ಭಾಗಕ್ಕೆ ಬಸ್ ಸಮಸ್ಯೆ ಇದ್ದು, ಹಬ್ಬದ ಕಾರಣ ಊರಿಗೆ ಹೋಗುವ ಜನರಿಗೆ ಸಮಸ್ಯೆ ಕಾಡಲಿದೆ. ಇಂದು ಸಂಜೆ ಹೊತ್ತಿಗೆ ಬಸ್ ನಿಲ್ದಾಣಕ್ಕೆ ಸಾವಿರಾರು ಜನ ಬರುವ ಸಾಧ್ಯತೆ ಇದ್ದು ಬಸ್ ಇಲ್ಲದೇ ಪರದಾಡಬೇಕಾದ ಸ್ಥಿತಿ ಉಂಟಾಗಬಹುದು.
ರಾಜ್ಯದ ವಿವಿಧ ನಿಗಮಗಳ ಅಧಿಕಾರಿಗಳು ಈಗಾಗಲೇ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗೆ ನೋಟಿಸ್ ನೀಡಿದ್ದು, ಅವಶ್ಯಕತೆ ಇದ್ದಾಗ ಕರ್ತವ್ಯ ನಿರ್ವಹಿಸಲಿಲ್ಲ ಎಂದಾದಲ್ಲಿ ನಿಮಗೆ ನೀಡಲಾದ ವಸತಿ ವ್ಯವಸ್ಥೆಯನ್ನೂ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಜೊತೆಗೆ ತರಬೇತಿ ನಿರತ ನೌಕರರಿಗೂ ಇಲಾಖೆಯ ವಿರುದ್ಧ ಹೋಗದಂತೆ ಕಠಿಣ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ 3ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ, ಚಿಕ್ಕಬಳ್ಳಾಪುರದ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಖಾಸಗಿ ಬಸ್‌ಗಳ ಓಡಾಟ.
ಬಸ್ ಓಡಿಸಲು ನಿವೃತ್ತ ನೌಕರರ ಮೊರೆ ಹೋಗಿರುವ ಕೆಎಸ್‌ಆರ್‌ಟಿಸಿ, 62 ವರ್ಷದ ಒಳಗಿನ ನಿವೃತ್ತ ನೌಕರರಿಗೆ ಕೆಲಸಕ್ಕೆ ಹಾಜರಾಗುವಂತೆ ಕರೆ ನೀಡಿದೆ. ನೌಕರರ ಬದಲಿಗೆ ನಿವೃತ್ತ ನೌಕರರಿಗೆ ಕರ್ತವ್ಯಕ್ಕೆ ಆಹ್ವಾನ ನೀಡಿರುವ ಸಾರಿಗೆ ಅಧಿಕಾರಿಗಳು ಚಾಲಕರಿಗೆ 800 ರೂಪಾಯಿ ಹಾಗೂ ನಿರ್ವಾಹಕರಿಗೆ 700 ರೂಪಾಯಿ ನಿಗದಿಪಡಿಸಿದ್ದಾರೆ. ಆ ಮೂಲಕ ನೌಕರರ ಮುಷ್ಕರಕ್ಕೆ ತಾರ್ಕಿಕ ಅಂತ್ಯ ನೀಡುವ ಬದಲು ಪರ್ಯಾಯ ವ್ಯವಸ್ಥೆ ಮಾಡುವತ್ತಲೇ ಹೆಚ್ಚಿನ ಗಮನ ನೀಡಿದಂತಿದೆ.
ನೌಕರರ ಮೇಲೆ ಒತ್ತಡ ತರುವ ಸಲುವಾಗಿ ತರಬೇತಿ ನಿರತ ಚಾಲಕ, ನಿರ್ವಾಹಕರಿಗೆ ಕೆಲಸ ಮಾಡುವಂತೆ ಸೂಚಿಸಲಾಗಿದೆ. 1484 ತರಬೇತಿ ನಿರತ ಸಿಬ್ಬಂದಿಗೆ ಇಂದು ಡೆಡ್ಲೈನ್ ನೀಡಿರುವ ಬಿಎಂಟಿಸಿ, ನಿನ್ನೆ ಮೊನ್ನೆ ಗೈರಾಗಿದ್ದಕ್ಕೆ ಸೂಕ್ತ ಕಾರಣ ನೀಡಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದೆ. ಒಂದು ವೇಳೆ ಇಂದು ಮತ್ತೆ ಗೈರಾದರೆ ತರಬೇತಿಯಿಂದ ಮುಲಾಜಿಲ್ಲದೇ ವಜಾಗೊಳಿಸಲಾಗುವುದು ಎಂಬ ಕಠಿಣ ಸಂದೇಶವನ್ನೂ ರವಾನಿಸಿದೆ.
ಒಂದೆಡೆ ಬಸ್ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಇನ್ನೊಂದೆಡೆ ಕೊರೊನಾ ಸೋಂಕಿನ ಎರಡನೇ ಅಲೆ ಭೀತಿ ಹೆಚ್ಚುತ್ತಲೇ ಇದೆ. ಹೀಗಾಗಿ ಜನಸಾಮಾನ್ಯರಲ್ಲಿ ಲಾಕ್ಡೌನ್ ಭೀತಿ ಹುಟ್ಟಿಕೊಂಡಿದ್ದು ಅನೇಕ ಕೂಲಿಕಾರ್ಮಿಕರು ಬೆಂಗಳೂರಿನಿಂದ ಊರಿನ ಕಡೆ ಮುಖ ಮಾಡುತ್ತಿದ್ದಾರೆ. ಆದರೆ, ಊರಿಗೆ ತೆರಳಲು ಸರಿಯಾದ ಬಸ್ ವ್ಯವಸ್ಥೆಯೇ ಇಲ್ಲದ ಕಾರಣ ಕಾರ್ಮಿಕರು ಗಂಟುಮೂಟೆ ಕಟ್ಟಿಕೊಂಡು, ಕ್ರೂಸರ್ ವಾಹನದ ಮೇಲೆ ಬೈಕ್ ಕಟ್ಟಿಕೊಂಡು ಊರಿಗೆ ತೆರಳುತ್ತಿದ್ದಾರೆ.
ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಖಾಸಗಿ ಬಸ್, ಕ್ರೂಸರ್‌ಗಳಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದ್ದು, ಕಲಬುರಗಿಯಿಂದ ಜೇವರ್ಗಿಗೆ ಟಿಕೆಟ್ ದರ 45 ರೂಪಾಯಿ ಇದ್ದರೂ ಖಾಸಗಿ ಬಸ್ ಸಿಬ್ಬಂದಿ 75 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಅಲ್ಲದೇ, ಖಾಸಗಿ ವಾಹನ ಸಿಬ್ಬಂದಿ 100 ರೂಪಾಯಿ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಸಾರಿಗೆ ನೌಕರರ ಮುಷ್ಕರ ಇಂದು ಸಹ ಮುಂದುವರೆದಿದ್ದು, ಇಂದು ಕೆಲ ತರಬೇತಿನಿರತ ನೌಕರರು ಕೆಲಸಕ್ಕೆ ಹಾಜರಾಗುವ ಸಾಧ್ಯತೆ ಇದೆ. ನಿನ್ನೆ ಬಿಎಂಟಿಸಿಯ 96, KSRTCಯ 32 ನೌಕರರ ವಜಾ ಮಾಡಿರುವ ಹಿನ್ನೆಲೆ ಕೆಲ ತರಬೇತಿನಿರತ ನೌಕರರು ಹಾಜರಾಗಬಹುದು ಎನ್ನಲಾಗಿದೆ. ಕೆಲವರಿಗೆ ಸಂಬಳ ಕಡಿತ ಮಾಡುವುದಾಗಿ ನೋಟಿಸ್ ನೀಡಿರುವುದರಿಂದ ಹಾಗೂ ವಸತಿ ಗೃಹಗಳನ್ನೂ ಖಾಲಿ ಮಾಡುವಂತೆ ನೋಟಿಸ್ ನೀಡಿರುವುದರಿಂದ ಆ ಭಯಕ್ಕಾದರೂ ನೌಕರರು ಕೆಲಸಕ್ಕೆ ಬರಬಹುದು ಎಂಬ ಅಂದಾಜು ಇದೆ.
ಸಾರಿಗೆ ನೌಕರರು ಮತ್ತು ರಾಜ್ಯ ಸರ್ಕಾರದ ನಡುವಿನ ತಿಕ್ಕಾಟ ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಗದಗದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ನೌಕರರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದೇ ಕಾರಣಕ್ಕಾಗಿ ನಿರ್ವಾಹಕ ವಸಂತ್ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಅವರಿಗೆ ಗದಗದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಆಕ್ರೋಶಗೊಂಡ ಸಾರಿಗೆ ಇಲಾಖೆ ನೌಕರರು ಆಸ್ಪತ್ರೆ ಬಳಿ ಜಮಾಯಿಸಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
Published On - 10:54 pm, Fri, 9 April 21