ಕನ್ನಡ ಮಾಧ್ಯಮಕ್ಕೆ ಧಕ್ಕೆ ಆಗದಂತೆ ಕರ್ನಾಟಕ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಭಾಷಾ ಮಾಧ್ಯಮ ಅಳವಡಿಕೆ: ಡಿಡಿಪಿಐಗಳಿಗೆ ಅಧಿಕಾರ

| Updated By: ಸಾಧು ಶ್ರೀನಾಥ್​

Updated on: Aug 04, 2021 | 9:52 AM

2021-22ನೇ ಸಾಲಿನಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚುವರಿಯಾಗಿ ಆಂಗ್ಲ ಮಾಧ್ಯಮ ಬೋಧನೆಗೆ ಅವಕಾಶ ನೀಡುವಂತೆ ವಿವಿಧ ಜಿಲ್ಲಾ ಉಪನಿರ್ದೇಶಕರುಗಳಿಂದ ಪ್ರಸ್ತಾವನೆ ಬಂದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಇದನ್ನು ಅನುಮೋದಿಸಿ, ಆಯಾ ಡಿಡಿಪಿಐಗಳಿಗೇ ಅಧಿಕಾರ ಕಲ್ಪಿಸಿದೆ.

ಕನ್ನಡ ಮಾಧ್ಯಮಕ್ಕೆ ಧಕ್ಕೆ ಆಗದಂತೆ ಕರ್ನಾಟಕ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಭಾಷಾ ಮಾಧ್ಯಮ ಅಳವಡಿಕೆ: ಡಿಡಿಪಿಐಗಳಿಗೆ ಅಧಿಕಾರ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಭಾಷಾ ಮಾಧ್ಯಮ ಅಳವಡಿಸಿಕೊಳ್ಳುವುದಕ್ಕೆ ಕೊನೆಗೂ ನಿರ್ದಿಷ್ಟ ರೂಪುರೇಷೆಯೊಂದಿಗೆ ಅನುಮತಿ ನೀಡಲಾಗಿದೆ. ಮುಖ್ಯವಾಗಿ ರಾಜ್ಯ ಭಾಷೆ ಕನ್ನಡಕ್ಕೆ ಆಗದಂತೆ ಜೊತೆಗೆ ರಾಜ್ಯ ಸರ್ಕಾರಕ್ಕೆ ಹೆಚ್ಚು‘ವರಿ’ಯಾಗಿ ಆರ್ಥಿಕ ಹೊರೆಯೂ ಆಗದಂತೆ ಆಯಾ ಜಿಲ್ಲೆಗಳ ಶಾಲೆಗಳಲ್ಲಿ ಆಂಗ್ಲ ಭಾಷಾ ಮಾಧ್ಯಮ ಅಳವಡಿಸಿಕೊಳ್ಳುವುದಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ (ಡಿಡಿಪಿಐ) ಅಧಿಕಾರ ನೀಡಲಾಗಿದೆ.

ಒಟ್ಟು 13 ಷರತ್ತುಗಳನ್ನು ವಿಧಿಸಿ, ಕರ್ನಾಟಕ ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಈಗಿರುವ ಕನ್ನಡ ಮಾಧ್ಯಮ ವಿಭಾಗದ ಜೊತೆಗೆ ಆಂಗ್ಲ ಮಾಧ್ಯಮ ವಿಭಾಗವನ್ನೂ ಆರಂಭಿಸುವ ಅಧಿಕಾರವನ್ನು ಆಯಾ ಜಿಲ್ಲೆಯ ಜಿಲ್ಲಾ ಉಪನಿರ್ದೇಶಕರಿಗೆ (ಡಿಡಿಪಿಐ) ನೀಡಲಾಗಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ (2021-22ನೇ ಸಾಲು) ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚುವರಿಯಾಗಿ ಆಂಗ್ಲ ಮಾಧ್ಯಮ ಬೋಧನೆಗೆ ಅವಕಾಶ ನೀಡುವಂತೆ ವಿವಿಧ ಜಿಲ್ಲಾ ಉಪನಿರ್ದೇಶಕರುಗಳಿಂದ ಪ್ರಸ್ತಾವನೆ ಬಂದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಇದನ್ನು ಅನುಮೋದಿಸಿ, ಆಯಾ ಡಿಡಿಪಿಐಗಳಿಗೇ ಅಧಿಕಾರ ಕಲ್ಪಿಸಿದೆ.

ಹೆಚ್ಚುವರಿಯಾಗಿ ಆಂಗ್ಲ ಮಾಧ್ಯಮ ಆರಂಭಿಸಲು ಒಂದಷ್ಟು ಪ್ರಮುಖ ಷರತ್ತುಗಳು:
ಸರ್ಕಾರಿ ಶಾಲೆಯಲ್ಲಿ 1ರಿಂದ 7 ಅಥವಾ 8ನೇ ತರಗತಿವರೆಗೆ ಶಾಲೆಗಳು ನಡೆಯುತ್ತಿರಬೇಕು. ಶಾಲೆಯಲ್ಲಿ ಆಸಕ್ತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರಬೇಕು. ಶಾಲೆಯಲ್ಲಿ ಹಾಲಿ ಇರುವ ತರಗತಿ ಕೊಠಡಿ, ಕಟ್ಟಡ ಮತ್ತು ಮೂಲಸೌಕರ್ಯದಲ್ಲೇ ಆಂಗ್ಲ ಮಾಧ್ಯಮದ ಹೆಚ್ಚುವರಿ ವಿಭಾಗ ನಡೆಸಬೇಕು. ಆಯಾ ಶಾಲೆಯಲ್ಲಿ ಈಗಿರುವ ಶಿಕ್ಷಕರನ್ನೇ ಹೊಂದಾಣಿಕೆ ಮಾಡಿಕೊಂಡು ಆಂಗ್ಲ ವಿಭಾಗ ನಡೆಸಬೇಕು. ಇದಕ್ಕೆ ಶಿಕ್ಷಕರು, ಪೋಷಕರು, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸದಸ್ಯರ ಸಹಮತ ಇರಬೇಕು ಎಂಬುದು ಸೇರಿ 13 ಷರತ್ತುಗಳನ್ನು ವಿಧಿಸಲಾಗಿದೆ.

ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಸರ್ಕಾರಿ ಶಾಲೆಗಳು: ದಾಖಲಾತಿ ಪ್ರಮಾಣದಲ್ಲಿ ಹೆಚ್ಚಳ

(karnataka ddpi authorised to run english medium schools in government schools all districts)