ಬೆಂಗಳೂರು: ಶಾಲಾ ಮಕ್ಕಳ ಶಿಕ್ಷಣ.. ಆನ್ಲೈನ್ ಕ್ಲಾಸ್.. ಸ್ಕೂಲ್ ಫೀಸ್.. ಈ ಎಲ್ಲಾ ಗೊಂದಲಗಳಿಗೆ ಬ್ರೇಕ್ ಬೀಳೋ ಟೈಂ ಇದೀಗ ಹತ್ತಿರ ಬಂದಿದೆ. ಟಿವಿ9 ವರದಿ ಬಳಿಕ ಸರ್ಕಾರ ಹೊಸ ಪ್ಲ್ಯಾನ್ ಮಾಡೋಕೆ ಸಜ್ಜಾಗಿದೆ.
ಆನ್ಲೈನ್ ಕ್ಲಾಸ್.. ಇದು ತಂದ ಆತಂಕ.. ಪೋಷಕರಿಗೆ ಶುರುವಾದ ತೊಳಲಾಟ.. ಮಕ್ಕಳ ಪರದಾಟ.. ಶಾಲಾ ಆಡಳಿತ ಮಂಡಳಿಗಳ ಹಗ್ಗಜಗ್ಗಾಟ.. ಒಂದಾ.. ಎರಡಾ ತಲೆಬಿಸಿ. ಸ್ಕೂಲ್ ಫೀಸ್ ಕಟ್ಟೋದೇ ದೊಡ್ಡ ವಿಷಯ.. ಅಂತದ್ರಲ್ಲಿ ಆನ್ಲೈನ್ ಕ್ಲಾಸ್ಗೆ ಹೊಸ ಲ್ಯಾಪ್ಟಾಪ್ ಬೇಕು.. ಇಂಟರ್ನೆಟ್ ಕನೆಕ್ಷನ್ ಬೇಕು.. ಮಕ್ಕಳನ್ನ ಒಪ್ಪಿಸಿ ಸಿಸ್ಟಂ ಮುಂದೆ ಕೂರಿಸಿ ಪಾಠ ಕೇಳುವಂತೆ ಮಾಡ್ಬೇಕು.
ಇದೆಲ್ಲದ್ರ ಜೊತೆಗೆ ಮಕ್ಕಳ ಮಾನಸಿಕ ಆರೋಗ್ಯದ ಚಿಂತೆ ಬೇರೆ. ಹೀಗೆ ಆನ್ಲೈನ್ ಕ್ಲಾಸ್ ಅನ್ನೋದೇ ಸಮಸ್ಯೆಗಳ ಸರಮಾಲೆಯಾಗಿತ್ತು. ಹೀಗಾಗಿ ಟಿವಿ9 ಈ ಬಗ್ಗೆ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇದ್ರ ಬೆನ್ನಲ್ಲೇ ಇದೀಗ ಸರ್ಕಾರ ಹೊಸ ನಿರ್ಧಾರ ತೆಗೆದುಕೊಳ್ಳೋಕೆ ಮುಂದಾಗಿದೆ.
ಮಕ್ಕಳ ಆನ್ಲೈನ್ ಕ್ಲಾಸ್ಗೆ ಬೀಳುತ್ತಾ ಬ್ರೇಕ್?
ಆನ್ಲೈನ್ ಕ್ಲಾಸ್ನ ಅವಾಂತರಗಳ ಬಗ್ಗೆ ಟಿವಿ9 ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. ಸರ್ಕಾರಕ್ಕೆ ಬಿಸಿ ಮುಟ್ಟಿಸುವಲ್ಲಿ ಸಕ್ಸಸ್ ಆಗಿತ್ತು. ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಟಿವಿ9 ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಇದೀಗ ಪರ್ಯಾಯ ವ್ಯವಸ್ಥೆ ಕುರಿತು ವರದಿ ಸಲ್ಲಿಸಲು ತಂಡವನ್ನ ರಚಿಸಲಾಗಿದೆ. ಆನ್ಲೈನ್ ಶಿಕ್ಷಣ ಬದಲಿಗೆ ಏನ್ ಮಾಡ್ಬಹುದು ಅನ್ನೋದ್ರ ಬಗ್ಗೆ ಸಮಿತಿಯಿಂದ ವಿಸ್ತೃತ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
10 ದಿನದೊಳಗೆ ರಿಪೋರ್ಟ್ ನೀಡಲು ಸೂಚನೆ!
ಇನ್ನು ಶಿಕ್ಷಣ ಇಲಾಖೆಯ ರಾಷ್ಟ್ರೀಯ ನೀತಿ ನಿರೂಪಣ ಸಮಿತಿಯ ಸದಸ್ಯ & ಕಾರ್ಯದರ್ಶಿ ಡಾ.ಎಂ ಕೆ ಶ್ರೀಧರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಇವ್ರ ಜೊತೆ ಶಿಕ್ಷಣ ತಜ್ಞರಾದ ಡಾ. ಗುರುರಾಜ ಕರ್ಜಗಿ, ಡಾ ವಿ.ಪಿ ನಿರಂಜನ ಆರಾಧ್ಯ, ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸದಸ್ಯ ಹೃಷಿಕೇಶ್, ನಿಮ್ಹಾನ್ಸ್ ಸಂಸ್ಥೆಯ ಮುಖ್ಯಸ್ಥ ಸೇರಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ತಂಡ ಸಮಿತಿಯಲ್ಲಿದೆ. ಈ ತಂಡ ಯಾವೆಲ್ಲಾ ಸೂಚನೆಗಳನ್ನ ನೀಡೋ ಸಾಧ್ಯತೆಯಿದೆ ಅನ್ನೋದನ್ನ ನೋಡೋದಾದ್ರೆ.
ಸಮಿತಿ ಮಾರ್ಗಸೂಚಿಯೇನು?
ವಯೋಮಾನಕ್ಕೆ ಅನುಗುಣವಾಗಿ ವೈಜ್ಞಾನಿಕವಾಗಿ ಅಳವಡಿಸಲು ಕ್ರಮ ಕೈಗೊಳ್ಳಬಹುದು. 6ನೇ ಕ್ಲಾಸ್ನಿಂದ 10ನೇ ತರಗತಿಯವರೆಗೆ ಆನ್ಲೈನ್ ಶಿಕ್ಷಣ ನೀಡಿದ್ರೆ, ಎಲ್ಕೆಜಿಯಿಂದ 5ನೇ ಕ್ಲಾಸ್ವರೆಗೆ ಆನ್ಲೈನ್ ಬದಲು ಪರ್ಯಾಯ ವ್ಯವಸ್ಥೆ ಮಾಡಲು ಸಲಹೆ ನೀಡಬಹುದು. ಈ ವೇಳೆ ಸಮೂಹ ಮಾಧ್ಯಮ, ತಂತ್ರಜ್ಞಾನಧಾರಿತ ಬೋಧನೆ ಅಳವಡಿಕೆ, ಸಾಂಪ್ರದಾಯಿಕ ತರಗತಿಗೆ ಪರ್ಯಾಯ ಭಾವನೆ ಮೂಡದಂತೆ ಕಲಿಕೆ, ವಯೋಮಾನಕ್ಕೆ ಅನುಗುಣವಾಗಿ ಏಕಾಗ್ರತೆ ಸಾಮರ್ಥ್ಯ ಹಾಗೂ ತಂತ್ರಜ್ಞಾನ ಬಳಕೆಯಿಂದ ಆರೋಗ್ಯದ ಮೇಲಿನ ಪರಿಣಾಮ ಬೀರದಂತೆ ಕ್ರಮಗಳನ್ನ ಕೈಗೊಳ್ಳಬೇಕೆಂದು ವರದಿ ನೀಡಲಿದ್ದಾರೆ.
ಒಟ್ನಲ್ಲಿ ಸದ್ಯಕ್ಕೆ ಸರ್ಕಾರ ಸಮಿತಿಗೆ ಬೇಕಿರೋ ಎಲ್ಲಾ ಸೌಲಭ್ಯಗಳನ್ನ ನೀಡಿದೆ. ಇಂದಿನಿಂದ 10 ದಿನದೊಳಗೆ ವರದಿ ನೀಡಲು ಸೂಚಿಸಲಾಗಿದೆ. ಆದ್ರೆ ಸಮಿತಿ ಏನ್ ವರದಿ ನೀಡುತ್ತೆ ಅನ್ನೋದೇ ಕುತೂಹಲ ಮೂಡಿಸಿದೆ.