ಬೆಂಗಳೂರು: ಕೊರೊನಾ ಸೋಂಕಿನಿಂದ ಸಾರಿಗೆ ನೌಕರರು ಮೃತಪಟ್ಟರೆ ರಾಜ್ಯ ಸರ್ಕಾರ 30 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಇನ್ನೂ ಸಾರಿಗೆ ನೌಕರರಿಗೆ ಪರಿಹಾರ ಸಿಕ್ಕಿಲ್ಲ. ಇದನ್ನು ಗಮನಿಸಿದಾಗ ರಾಜ್ಯ ಸರ್ಕಾರ ಕೊಟ್ಟ ಮಾತನ್ನು ತಪ್ಪಿದೆ ಎಂದು ತಿಳಿದುಬಂದಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಇಕೆಆರ್ಟಿಸಿ ಮತ್ತು ಎನ್ಡಬ್ಲ್ಯೂಕೆಆರ್ಟಿಸಿಯ 213 ನೌಕರರು ಈವರೆಗೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಆದರೆ ಈ ಪೈಕಿ ಕೇವಲ ಏಳು ಜನರಿಗೆ ಮಾತ್ರ ಪರಿಹಾರ ಬಿಡುಗಡೆ ಮಾಡಿದ್ದಾರೆ.
ಬಿಎಂಟಿಸಿ ಒಂದರಲ್ಲೇ ಮೊದಲ ಅಲೆಯಲ್ಲಿ 30 ನೌಕರರು, ಎರಡನೇ ಅಲೆಯಲ್ಲಿ 60 ನೌಕರರು ಸೇರಿ ಒಟ್ಟು 90 ನೌಕರರು ಕೊರನಾಕ್ಕೆ ಬಲಿಯಾಗಿದ್ದರು. ಕೆಎಸ್ಆರ್ಟಿಸಿಯಲ್ಲಿ ಎರಡು ಅಲೆಯಲ್ಲಿ 70 ಜನ ಸಾವನ್ನಪ್ಪಿದ್ದರು. ವಾಯುವ್ಯ ಮತ್ತು ಈಶಾನ್ಯ ಸಾರಿಗೆಯಲ್ಲಿ 60 ನೌಕರರು ಕೊನೆಯುಸಿರೆಳೆದಿದ್ದರು. ಆದರೆ ಏಳು ಜನರಿಗೆ ಮಾತ್ರ ಪರಿಹಾರ ಬಿಡುಗಡೆಯಾಗಿದೆ.
ಇತ್ತ ಮನೆಯ ಯಜಮಾನನು ಇಲ್ಲ. ಸಂಸ್ಥೆಯಿಂದ ಸಂಬಳವು ಬರುತ್ತಿಲ್ಲ. ಇತ್ತ ಪರಿಹಾರವು ಇಲ್ಲದೆ ಕುಟುಂಬ ನಡು ಬೀದಿಯಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಡಿಸೆಂಬರ್ನಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಿದ ಸಂದರ್ಭದಲ್ಲಿ ಕೊವಿಡ್ನಿಂದ ಮೃತಪಟ್ಟ ನೌಕರರಿಗೆ 30 ಲಕ್ಷ ರುಪಾಯಿ ಪರಿಹಾರ ನೀಡಬೇಕು ಅಂತ ಬೇಡಿಕೆ ಇಟ್ಟಿದ್ದರು. ಸರ್ಕಾರ ಕೂಡ ನೌಕರರಿಗೆ 30 ಲಕ್ಷ ರುಪಾಯಿ ಪರಿಹಾರ ನೀಡುವ ಭರವಸೆ ನೀಡಿತ್ತು.
ಸಾರಿಗೆ ನೌಕರರು ಪ್ರಾಣವನ್ನು ಲೆಕ್ಕಿಸದೆ ಕೆಲಸದಲ್ಲಿ ನಿರತರಾಗಿ ತಮ್ಮ ಪ್ರಾಣವನ್ನೇ ಬಿಟ್ಟಿದ್ದಾರೆ. ಆದರೆ ಈಗ ನಾಲ್ಕು ಸಾರಿಗೆ ನಿಗಮಗಳು ನಮ್ಮ ಬಳಿ ಕೊವಿಡ್ನಿಂದ ಮೃತಪಟ್ಟ ನೌಕರರ ಮಾಹಿತಿಯೇ ಇಲ್ಲ ಎನ್ನುತ್ತಿವೆ. ನೌಕರರು ಕೊರೊನಾದಿಂದ ಸಾವನ್ನಪ್ಪಿದ್ದಾರೆ ಅಂತ ನಮ್ಮ ಬಳಿ ಯಾವುದೇ ದಾಖಲೆಗಳಿಲ್ಲ. ಕೆಲವರು ರಜೆಯ ಮೇಲಿದ್ದರು. ಮತ್ತೆ ಕೆಲವರಿಗೆ ಮೊದಲೇ ಅರೋಗ್ಯ ಸಮಸ್ಯೆಗಳಿತ್ತು. ಆಸ್ಪತ್ರೆಯ ವೈದ್ಯರಿಂದ ಯಾವುದೇ ಸರ್ಟಿಫಿಕೇಟ್ ಬಂದಿಲ್ಲ. ಈ ಹಿನ್ನೆಲೆಯಲ್ಲಿ ನಾವು ಯಾವುದೇ ಪರಿಹಾರ ಕೊಡಲು ಸಾಧ್ಯವಿಲ್ಲ ಅಂತ ಜಾರಿಕೊಳ್ಳುತ್ತಿದ್ದಾರಂತೆ.
ಅಗತ್ಯ ಸೇವೆ ಹೆಸರಲ್ಲಿ ಕೊರೊನಾ ಸಂಕಷ್ಟ ಸಮಯದಲ್ಲೂ ಸರ್ಕಾರ ನಾಲ್ಕು ನಿಗಮದ ಬಸ್ಗಳನ್ನ ರೋಡಿಗಿಳಿಸಿತ್ತು. ನೌಕರರು ಬೇಡವೆಂದರೂ ಕೆಲಸಕ್ಕೆ ಬರುವಂತೆ ಒತ್ತಡ ಹೇರಿ ಹಾಜರಾಗುವಂತೆ ಮಾಡಿದ್ದರು. ಕಳೆದ ವರ್ಷ ಟಿವಿ9 ಈ ಬಗ್ಗೆ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿಯಿಂದ ಎಚ್ಚೆತ್ತ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಕೊವಿಡ್ನಿಂದ ಮೃತಪಟ್ಟಿದ್ದ ಏಳು ನೌಕರರ ಕುಟುಂಬಗಳಿಗೆ ತಲಾ ಮೂವತ್ತು ಲಕ್ಷ ರುಪಾಯಿ ಪರಿಹಾರ ನೀಡಿದ್ದರು.
ಇದನ್ನೂ ಓದಿ
ಸಾರಿಗೆ ಇಲಾಖೆಗೆ 4 ಸಾವಿರ ಕೋಟಿಗೂ ಹೆಚ್ಚು ನಷ್ಟ; ಸಚಿವ ಲಕ್ಷ್ಮಣ ಸವದಿ
(Karnataka Government has not yet given compensation to transport workers who died from corona)
Published On - 9:14 am, Sun, 27 June 21