ಆಕ್ಸಿಜನ್ ನಿರ್ವಹಣೆಗಾಗಿ ಹೊಸ ಮಾರ್ಗಸೂಚಿ ಬಿಡುಗಡೆ; ಇಲ್ಲಿದೆ ನೋಡಿ ರಾಜ್ಯ ಸರ್ಕಾರ ಮಾಡಿದ ವ್ಯವಸ್ಥೆಯ ಪಟ್ಟಿ..
ರಾಜ್ಯದಲ್ಲಿ ಆಕ್ಸಿಜನ್ ಉತ್ಪಾದನೆ, ಸಾಗಣೆ, ವಿತರಣೆಯ ಉಸ್ತುವಾರಿ ಹೊರಲು ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಹಾಗೇ 24/7 ಕಾಲಾವಧಿ ಕಾರ್ಯನಿರ್ವಹಿಸುವ ಸಹಾಯವಾಣಿಯನ್ನೂ ತೆರೆಯಲಾಗಿದೆ.
ದೇಶಕ್ಕೆ ಕೊರೊನಾ ಕಾಲಿಟ್ಟು ಒಂದು ವರ್ಷದ ಮೇಲಾಗಿದೆ. ಸೋಂಕು ಕಳೆದ ವರ್ಷಕ್ಕಿಂತ ಈ ಬಾರಿ ಮತ್ತಷ್ಟು ಮಾರಣಾಂತಿಕವಾಗಿ ಪರಿಣಮಿಸಿದೆ. ಈ ಮಧ್ಯೆ ಆಕ್ಸಿಜನ್ ಅಭಾವದ ಸವಾಲು ಎದ್ದಿದೆ. ಇದಕ್ಕೆ ಕರ್ನಾಟಕವೂ ಹೊರತಲ್ಲ. ರಾಜ್ಯದಲ್ಲಿ ಹಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಕಾಣುತ್ತಿದೆ. ಈ ಸಮಸ್ಯೆ ಪರಿಹರಿಸಲು ರಾಜ್ಯಸರ್ಕಾರ ವೈದ್ಯಕೀಯ ಆಮ್ಲಜನಕ ನಿರ್ವಹಣಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಕರ್ನಾಟಕದಲ್ಲಿ ಪ್ರತಿದಿನ 1500 ಮೆಟ್ರಿಕ್ ಟನ್ಗಳಷ್ಟು ಆಮ್ಲಜನಕ ಬೇಕು. ಆದರೆ ಸದ್ಯ ದಿನಕ್ಕೆ 950 ಮೆಟ್ರಿಕ್ ಟನ್ ಆಮ್ಲಜನಕ ಕೇಂದ್ರ ಸರ್ಕಾರದಿಂದ ಪೂರೈಕೆಯಾಗುತ್ತಿದೆ. ಹೀಗಾಗಿ ಈ ಆಮ್ಲಜನಕವನ್ನು ಆಸ್ಪತ್ರೆಗಳಿಗೆ ಹಂಚಿಕೆ ಮಾಡುವಾಗ ಪಾರದರ್ಶಕತೆ, ದಕ್ಷತೆ ಇರಬೇಕು. ಆಯಾ ಆಸ್ಪತ್ರೆಗಳ ಅಗತ್ಯತೆ ನೋಡಿಕೊಂಡು ಆಕ್ಸಿಜನ್ ಪೂರೈಕೆ ಮಾಡಬೇಕು. ಈ ನಿರ್ವಹಣೆಗಾಗಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು ಅದರಲ್ಲಿ ಒಂದಷ್ಟು ನಿಯಮಗಳನ್ನು ಹೇಳಲಾಗಿದೆ.
ಇನ್ನು ರಾಜ್ಯದಲ್ಲಿ ಆಕ್ಸಿಜನ್ ಉತ್ಪಾದನೆ, ಸಾಗಣೆ, ವಿತರಣೆಯ ಉಸ್ತುವಾರಿ ಹೊರಲು ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಹಾಗೇ 24/7 ಕಾಲಾವಧಿ ಕಾರ್ಯನಿರ್ವಹಿಸುವ ಸಹಾಯವಾಣಿಯನ್ನೂ ತೆರೆಯಲಾಗಿದೆ. ಇನ್ನು ಜಿಲ್ಲೆಗಳಲ್ಲಿ ವೈದ್ಯಕೀಯ ಆಕ್ಸಿಜನ್ ಪೂರೈಕೆ ನಿರ್ವಹಣೆ ಹೇಗಿರಬೇಕು ಎಂದು ಈ ಗೈಡ್ಲೈನ್ನಲ್ಲಿ ತಿಳಿಸಲಾಗಿದ್ದು, ಅವು ಹೀಗಿವೆ.
1. ಎಲ್ಲ ಜಿಲ್ಲೆಗಳಲ್ಲಿ ಕೂಡಲೇ ವೈದ್ಯಕೀಯ ಆಕ್ಸಿಜನ್ ಸೆಲ್ ಸ್ಥಾಪಿತವಾಗಬೇಕು 2. ಈ ಆಮ್ಲಜನಕ ಘಟಕಗಳು 24×7 ಕಾಲ ಕಾರ್ಯನಿರ್ವಹಿಸಬೇಕು. 3. ಜಿಲ್ಲಾ ಆಮ್ಲಜನಕ ಸೆಲ್ನ ಮುಖ್ಯಸ್ಥನಾಗಿ ಹೆಚ್ಚುವರಿ ಜಿಲ್ಲಾಧಿಕಾರಿಯನ್ನು ನೇಮಕ ಮಾಡಲಾಗುವುದು. ಹಾಗೇ ಇದರಲ್ಲಿ ಜಿಲ್ಲಾ ನೋಡೆಲ್ ಅಧಿಕಾರಿ ಕೂಡ ಇರುತ್ತಾರೆ. ಇವರೊಂದಿಗೆ ಅಗತ್ಯ ಇರುವ ಅಧಿಕಾರಿಗಳು ಮತ್ತು ಕಂಪ್ಯೂಟರ್ ವ್ಯವಸ್ಥೆಯಿದ್ದು, ಕಂಪ್ಯೂಟರ್ ಆಪರೇಟ್ ಮಾಡಲು ನುರಿತ ವ್ಯಕ್ತಿಯನ್ನು ನೇಮಕ ಮಾಡಲಾಗುತ್ತದೆ. 4. ಇನ್ನು ಸಹಾಯವಾಣಿ, ಆಕ್ಸಿಜನ್ ಸೆಲ್ನ ಒಂದು ಅಂಗವಾಗಿ ಕಾರ್ಯನಿರ್ವಹಿಸಲಿದ್ದು, ಇಲ್ಲಿ ಅಗತ್ಯವಿರುವಷ್ಟು ಸಿಬ್ಬಂದಿ, ಕಂಪ್ಯೂಟರ್ ಆಪರೇಟರ್ ಇರಲಿದ್ದಾರೆ. ಆಮ್ಲಜನಕ ಸಹಾಯವಾಣಿ ಸಂಖ್ಯೆಗಳನ್ನು ಎಲ್ಲ ಪತ್ರಿಕೆಗಳು, ಮಾಧ್ಯಮ, ಸೋಷಿಯಲ್ ಮೀಡಿಯಾ, ಆಯಾ ಜಿಲ್ಲಾ ವೆಬ್ಸೈಟ್ಗಳ ಮೂಲಕ ಪ್ರಸಾರ ಮಾಡಲಾಗುವುದು. ಇದರಿಂದಾಗಿ ಯಾವುದೇ ಆಸ್ಪತ್ರೆಗಳು, ಎಷ್ಟೇ ಹೊತ್ತಿನಲ್ಲೂ ಕೂಡ ಈ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. 5. ಆಮ್ಲಜನಕ ಮರುಭರ್ತಿ ಮಾಡುವ ಕೇಂದ್ರಗಳಲ್ಲಿನ ಅಧಿಕಾರಿಗಳು, ಆಕ್ಸಿಜನ್ ನಿರ್ವಹಣೆಗಾಗಿ ಡ್ರಗ್ ಕಂಟ್ರೋಲ್ ಡಿಪಾರ್ಟ್ಮೆಂಟ್ನಲ್ಲಿರುವವರು ಈ ಆಕ್ಸಿಜನ್ ಸೆಲ್ಗೆ ವರದಿ ಸಲ್ಲಿಸಬೇಕು. ಹಾಗೇ, ಆಮ್ಲಜನಕ ಮರುಭರ್ತಿ ಕೇಂದ್ರಗಳೂ ಮಾರ್ಗಸೂಚಿ ಅನ್ವಯ ಕೆಲಸ ಮಾಡುತ್ತಿವೆಯೇ ಎಂಬುದನ್ನು ಆಕ್ಸಿಜನ್ ಸೆಲ್ಗಳು ಖಚಿತಪಡಿಸಿಕೊಳ್ಳಬೇಕು. 6. ಆಕ್ಸಿಜನ್ ಸೆಲ್ಗಳು ಕಾರ್ಯದ ಮೇಲೆ ಆಯಾ ಜಿಲ್ಲಾಧಿಕಾರಿಗಳು ನಿಗಾ ಇಡಬೇಕು. ಯಾವುದೇ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ಗಳು ಹೆಚ್ಚಾದಲ್ಲಿ ಅದರ ಬಗ್ಗೆ ಸೆಲ್ಗೆ ಕೂಡಲೇ ಮಾಹಿತಿ ಹೋಗುವುದು. ಸಂಪೂರ್ಣ ಸಮನ್ವಯತೆಯಿಂದ ಕೆಲಸಮಾಡಬೇಕು ಎಂದು ರಾಜ್ಯಸರ್ಕಾರ ತನ್ನ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ.
Covid 19: ಕೊರೊನಾಕ್ಕೆ ಬಲಿಯಾದ ಗರ್ಭಿಣಿ ವೈದ್ಯೆ; ಗಂಡ ಹಂಚಿಕೊಂಡ ಮನಕಲಕುವ ವಿಡಿಯೋ ಸಂದೇಶ ಇಲ್ಲಿದೆ
Published On - 5:18 pm, Wed, 12 May 21