ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ಕಡ್ಡಾಯ: ಹೈಕೋರ್ಟ್​​​​

|

Updated on: Dec 15, 2023 | 8:28 AM

ಅತ್ಯಾಚಾರ ಅಥವಾ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ ತಕ್ಷಣ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಸಂತ್ರಸ್ತೆ ಮತ್ತು ಆಕೆಯ ಕುಟುಂಬದವರಿಗೆ ಎಫ್​ಐಆರ್​ ದಾಖಲಿಸುವ ಸಂದರ್ಭದಲ್ಲೇ ವೈದ್ಯಕೀಯ ಗರ್ಭಪಾತದ ಸಾಧ್ಯಾಸಾಧ್ಯತೆಗಳ ಕುರಿತು ತಿಳಿಸಿದರೆ ಸಂತ್ರಸ್ತೆ ಮತ್ತು ಆಕೆಯ ಕುಟುಂಬಸ್ಥರಿಗೆ ಆಗುವ ಮಾನಸಿಕ ಯಾತನೆಯನ್ನು ತಪ್ಪಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ಕಡ್ಡಾಯ: ಹೈಕೋರ್ಟ್​​​​
ಹೈಕೋರ್ಟ್​
Follow us on

ಬೆಂಗಳೂರು, ಡಿಸೆಂಬರ್​​ 15: ಅತ್ಯಾಚಾರ ಅಥವಾ ಪೋಕ್ಸೋ (POCSO) ಕಾಯ್ದೆ ಅಡಿ ಪ್ರಕರಣ ದಾಖಲಿಸಿದ ತಕ್ಷಣ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಬೇಕು ಎಂದು ಹೈಕೋರ್ಟ್ (High Court)​ ನಿರ್ದೇಶಿಸಿದೆ. 17 ವರ್ಷದ ಬಾಲಕಿಯ 24 ವಾರಗಳ ಗರ್ಭಪಾತ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜ್​ ಅವರ ಪೀಠವು ಈ ನಿರ್ದೇಶನ ನೀಡಿದೆ.

ಹಾಲಿ ಪ್ರಕರಣದಲ್ಲಿ ಅತ್ಯಾಚಾರ ಸಂತ್ರಸ್ತೆಗೆ ಮುಂಚಿತವಾಗಿ ಗರ್ಭಪಾತ ಹಕ್ಕುಗಳ ಕುರಿತು ಮೊದಲೇ ತಿಳಿಸಿದ್ದರೆ ಆಕೆಯ ತಂದೆ ಹೈಕೋರ್ಟ್​ ಮೆಟ್ಟಿಲೇರುತ್ತಿರಲಿಲ್ಲ ಎಂದು ಹೈಕೋರ್ಟ್​​ ಚಾಟಿ ಬೀಸಿದೆ. ಇನ್ನು ಅತ್ಯಾಚಾರದಿಂದ ಗರ್ಭ ಧರಿಸಿದರೆ ಅವರಿಗೆ ಇರುವ ಹಕ್ಕುಗಳ ಕುರಿತು ಸಂತ್ರಸ್ತರಿಗೆ ತಿಳಿಸಬೇಕು. ಇದರಿಂದ ಸಂತ್ರಸ್ತೆ ಮತ್ತು ಆಕೆಯ ಕುಟುಂಬದವರು ತಡವಾದ ಮೇಲೆ ಗರ್ಭಪಾತಕ್ಕೆ ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋಗುವುದು ತಪ್ಪುತ್ತದೆ.

ತಡವಾಗಿ ಗರ್ಭಪಾತಕ್ಕೆ ಅನುಮತಿ ಕೋರುವಾಗ ಸಂತ್ರಸ್ತೆ ಮತ್ತು ಆಕೆಯ ಕುಟುಂಬಸ್ಥರು ಮಾನಸಿಕ ಯಾತನೆ ಅನುಭವಿಸಬೇಕಾಗುತ್ತದೆ. ಸಂತ್ರಸ್ತೆ ಮತ್ತು ಆಕೆಯ ಕುಟುಂಬದವರಿಗೆ ಎಫ್​ಐಆರ್​ ದಾಖಲಿಸುವ ಸಂದರ್ಭದಲ್ಲೇ ವೈದ್ಯಕೀಯ ಗರ್ಭಪಾತದ ಸಾಧ್ಯಾಸಾಧ್ಯತೆಗಳ ಕುರಿತು ತಿಳಿಸಿದರೆ ಸಂತ್ರಸ್ತೆ ಮತ್ತು ಆಕೆಯ ಕುಟುಂಬಸ್ಥರಿಗೆ ಆಗುವ ಮಾನಸಿಕ ಯಾತನೆಯನ್ನು ತಪ್ಪಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಪೋಕ್ಸೊ ಕಾಯಿದೆಯ ಸೆಕ್ಷನ್ 376 ಐಪಿಸಿ ಅಡಿಯಲ್ಲಿ ಲೈಂಗಿಕ ಅಪರಾಧವನ್ನು ನೋಂದಾಯಿಸಿದ ನಂತರ, ಸಂತ್ರಸ್ತೆ ಗರ್ಭಿಣಿಯಾಗಿದ್ದಾಳೆ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆಯನ್ನು ಮಾಡಲಾಗುತ್ತದೆ. ಹಾಗಿದ್ದಲ್ಲಿ, ಗರ್ಭಾವಸ್ಥೆಯ ಅವಧಿಯನ್ನು ಕಂಡುಹಿಡಿಯಬೇಕು. ಸಂತ್ರಸ್ತೆಯ ದೈಹಿಕ ಮತ್ತು ಮಾನಸಿಕ ಸ್ಥಿತಿ, ಗರ್ಭಧಾರಣೆ ಮಾಡಿಸಿಕೊಳ್ಳುವ ಶಕ್ತಿ, ಇದರಿಂದ ಸಂತ್ರಸ್ತೆಯ ಯೋಗಕ್ಷೇಮದ ಮೇಲೆ ಪರಿಣಾಮ ಬೀರುವ ಅಂಶಗಳು ಇತ್ಯಾದಿ ತಿಳಿಯಲಿದೆ.

ಇದನ್ನೂ ಓದಿ: ಪುತ್ರಿ ಮೇಲೆ ತಂದೆಯಿಂದಲೇ ಅತ್ಯಾಚಾರ ಆರೋಪ: ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲು

ಸಂತ್ರಸ್ತೆ ಗರ್ಭಿಣಿ ಎಂದು ಕಂಡುಬಂದಲ್ಲಿ, ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ತನಿಖಾ ಅಧಿಕಾರಿ ತಿಳಿಸಬೇಕು. ಅವರು ಸಂತ್ರಸ್ತರಿಗೆ ಗರ್ಭಾವಸ್ಥೆಯ ಮುಂದುವರಿಕೆ, ಪರಿಣಾಮಗಳು, ಗರ್ಭಾವಸ್ಥೆಯ ಮುಕ್ತಾಯ, ಪ್ರಕ್ರಿಯೆ, ಕಾರ್ಯವಿಧಾನ ಮತ್ತು ಪರಿಣಾಮಗಳು ಇತ್ಯಾದಿಗಳಂತಹ ಕಾನೂನುಗಳ ಬಗ್ಗೆ ತಿಳಿಸಿಕೊಡಬಹೇಕು.

ಗರ್ಭಾವಸ್ಥೆಯ ವೈದ್ಯಕೀಯ ಮುಕ್ತಾಯದ ವೇಳೆ ಭ್ರೂಣದ ಅಂಗಾಂಶದ ಮಾದರಿಗಳನ್ನು ಸಂರಕ್ಷಿಸುವಂತೆ ನ್ಯಾಯಾಲಯವು ನಿರ್ದೇಶನ ನೀಡಿದೆ. ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ ಮತ್ತು DNA ವಿಶ್ಲೇಷಣೆಗೆ ಕಳುಹಿಸಲು ಮತ್ತು ಅಗತ್ಯವಿದ್ದರೆ ಪರಿಶೀಲನೆಗಾಗಿ ಹೆಚ್ಚುವರಿ ಮಾದರಿಗಳನ್ನು ಸಂರಕ್ಷಿಸಬೇಕು.

ಇಂಥ ಸಂದರ್ಭದಲ್ಲಿ ಪೊಲೀಸ್‌ ಮಹಾನಿರ್ದೇಶಕರು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಸ್ತೃತ ಮಾರ್ಗಸೂಚಿ ರೂಪಿಸಬೇಕು. ತಜ್ಞರ ಸಮಿತಿಯ ಜೊತೆ ಸಮಾಲೋಚನೆ ನಡೆಸಿದ ಬಳಿಕ ಮಾರ್ಗಸೂಚಿ ರೂಪಿಸಬೇಕು. ಮಾರ್ಗಸೂಚಿಯನ್ನು ಎಲ್ಲಾ ತನಿಖಾಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು, ಸರ್ಕಾರಿ ಆಸ್ಪತ್ರೆಗಳು ಇತ್ಯಾದಿಗಳಿಗೆ ಕಳುಹಿಸಿಕೊಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:24 am, Fri, 15 December 23