ಮುಡಾ ಹಗರಣ ತನಿಖೆ ಸಿಬಿಐಗೆ ವಹಿಸಲು ಮನವಿ: ಹೈಕೋರ್ಟ್ನಲ್ಲಿ ನಡೆದ ಸುದೀರ್ಘ ವಾದ ಪ್ರತಿ ವಾದದ ವಿವರ ಇಲ್ಲಿದೆ
ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ಆರೋಪ ಪ್ರಕರಣ ಸಂಬಂಧ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಕರ್ನಾಟಕ ಹೈಕೋರ್ಟ್ನಲ್ಲಿ ನಡೆಯುತ್ತಿದೆ. ಲೋಕಾಯುಕ್ತ ಪೊಲೀಸರಿಂದ ಈವರೆಗಿನ ತನಿಖಾ ವರದಿಯನ್ನು ಕೋರ್ಟ್ಗೆ ಸಲ್ಲಿಕೆ ಮಾಡಲಾಯಿತು. ವಾದ ಪ್ರತಿವಾದಗಳ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು, ಜನವರಿ 27: ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ಕರ್ನಾಟಕ ಹೈಕೋರ್ಟ್ನಲ್ಲಿ ಸೋಮವಾರ ನಡೆದಿದ್ದು, ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಾದಮಂಡನೆ ಆಲಿಸುವ ಅಗತ್ಯವಿಲ್ಲ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲ ಮಣೀಂದರ್ ಸಿಂಗ್ ವಾದ ಮಂಡನೆ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಹಗರಣ ಸಂಬಂಧ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಿ ಸಿದ್ಧಪಡಿಸಿರುವ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆ ಮಾಡಲಾಯಿತು.
ಸ್ನೇಹಮಯಿ ಕೃಷ್ಣ ಪರ ವಕೀಲರ ವಾದವೇನು?
ಈ ಹಂತದಲ್ಲಿ ಸಿದ್ದರಾಮಯ್ಯ ವಾದಮಂಡನೆ ಪರಿಗಣಿಸುವ ಅಗತ್ಯವಿಲ್ಲ. ಶಂಕಿತ ಆರೋಪಿ ತನಿಖಾ ತಂಡವನ್ನು ಆಯ್ಕೆ ಮಾಡಬಾರದು. ಈ ಬಗ್ಗೆ ಸುಪ್ರೀಂಕೋರ್ಟ್ ತೀರ್ಪುಗಳಿವೆ. ಸ್ಥಳೀಯ ಪೊಲೀಸರಿಂದ ತನಿಖೆ ನಡೆದರೆ ನ್ಯಾಯ ದೊರೆಯುವುದು ಸಾಧ್ಯವಿಲ್ಲ. ಈ ಭಾವನೆ ಇದ್ದರೆ ತನಿಖೆಯನ್ನು ಸಿಬಿಐಗೆ ವಹಿಸಬಹುದು ಎಂದು ಮಣೀಂದರ್ ಸಿಂಗ್ ವಾದ ಮಂಡನೆ ಮಾಡಿದ್ದಾರೆ. ಜತೆಗೆ, ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ಹಲವು ತೀರ್ಪುಗಳನ್ನು ಉಲ್ಲೇಖಿಸಿ ವಾದಮಂಡಿಸಿದ್ದಾರೆ.
ಕೋರ್ಟ್ಗೆ ಸಮಾಧಾನಕರವೆನ್ನಿಸುವ ಸ್ವತಂತ್ರ ತನಿಖಾ ತಂಡಕ್ಕೆ ತನಿಖೆಯ ಹೊಣೆ ವಹಿಸಬಹುದು. ತನಿಖೆ ಯಾರು ನಡೆಸಬೇಕೆಂದು ಆರೋಪಿಯನ್ನು ಕೇಳುವ ಅಗತ್ಯವಿಲ್ಲ ಎಂದು ವಾದಿಸಿರುವ ಮಣೀಂದರ್ ಸಿಂಗ್ ಪಂಜಾಬ್, ಗುಜರಾತ್ ಸೇರಿ ಹಲವು ರಾಜ್ಯಗಳ ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ.
ಸ್ಥಳೀಯ ಪೊಲೀಸರಿಂದ ದಕ್ಷ ತನಿಖೆ ಸಾಧ್ಯವಿಲ್ಲ: ಮಣೀಂದರ್ ಸಿಂಗ್
ಸುಪ್ರೀಂ ಕೋರ್ಟ್ ಮಾರ್ಗಸೂಚಿಯನ್ವಯ ಸ್ವತಂತ್ರ ತನಿಖೆ ಅನಿವಾರ್ಯ. ಲೋಕಾಯುಕ್ತ ಪೊಲೀಸರು ರಾಜ್ಯ ಸರ್ಕಾರದ ಅಧೀನದಲ್ಲಿದ್ದಾರೆ. ಹಗರಣದಲ್ಲಿ ರಾಜಕೀಯ ಮುಖಂಡರ ಹೆಸರು ಇರುವುದರಿಂದ ಸ್ಥಳೀಯ ಪೊಲೀಸರಿಂದ ದಕ್ಷ ತನಿಖೆ ಸಾಧ್ಯವಿಲ್ಲ. ರಾಜಕೀಯ ಒತ್ತಡದಿಂದ ತನಿಖೆ ಹಳಿ ತಪ್ಪಬಹುದು ಎಂದು
3.26 ಲಕ್ಷ ರೂ. ಮೊತ್ತದ ಜಮೀನು ಸ್ವಾಧೀನಕ್ಕೆ ದುಬಾರಿ ನಿವೇಶನ ಹಂಚಿಕೆ ಮಾಡಲಾಗಿದೆ. ಎಲ್ಲ ಅಧಿಕಾರಿಗಳೂ ಸೇರಿ ಈ ಅನುಕೂಲ ಮಾಡಿಕೊಟ್ಟಿದ್ದಾರೆ. ಅಸ್ತಿತ್ವದಲ್ಲೇ ಇಲ್ಲದ ಜಮೀನು ಭೂಪರಿವರ್ತನೆ ಮಾಡಲಾಗಿದೆ. ಕ್ಯಾಬಿನೆಟ್ ಟಿಪ್ಪಣಿ, ಮುಖ್ಯ ಕಾರ್ಯದರ್ಶಿ ಟಿಪ್ಪಣಿಯಿದೆ. ಹೀಗಾಗಿ ಈ ಪ್ರಕರಣದಲ್ಲಿ ಸ್ವತಂತ್ರ ತನಿಖೆ ಅನಿವಾರ್ಯ ಎಂದು ಅವರು ವಾದಿಸಿದ್ದಾರೆ.
ನ್ಯಾಯ ಎತ್ತಿಹಿಡಿಯಲು ಸಿಬಿಐ ತನಿಖೆ ಅನಿವಾರ್ಯ, ಮುಡಾ ಪ್ರಕರಣದಲ್ಲಿ ನಡೆದಿರುವ ಘಟನೆಗಳು ತನಿಖೆಯ ಅಗತ್ಯ ಹೇಳುತ್ತಿವೆ. ಒಮ್ಮುಖದ, ತಾರತಮ್ಯದ ತನಿಖೆ ನಡೆಯಬಾರದು. ಸ್ವತಂತ್ರ ನ್ಯಾಯಸಮ್ಮತ ತನಿಖೆಯಬೇಕಿದೆ. ಲೋಕಾಯುಕ್ತ ಪೊಲೀಸರಿಂದ ನ್ಯಾಯಸಮ್ಮತ ತನಿಖೆ ಸಾಧ್ಯವಿಲ್ಲ. ಎಲ್ಲವನ್ನೂ ಕಾರ್ಪೆಟ್ ಕೆಳಗೆ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ವಾದಿಸಿದ್ದಾರೆ.
ಕಾಲಾವಕಾಶ ಕೇಳಿದ ಎಜಿ: ಒಪ್ಪದ ಹೈಕೋರ್ಟ್
ಈ ಮಧ್ಯೆ, ಸ್ವಲ್ಪ ಕಾಲಾವಕಾಶ ನೀಡಬೇಕೆಂದು ಎಜಿ ಶಶಿಕಿರಣ್ ಶೆಟ್ಟಿ ಮನವಿ ಮಾಡಿದರು. ಸರ್ಕಾರದ ಪರ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಲಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ವಿಚಾರಣೆ ನಡೆಸಿದಾಗ ದಿನಾಂಕ ನಿಗದಿಪಡಿಸಿ ಎಂದು ಅವರು ಮನವಿ ಮಾಡಿದರು. ಆದರೆ, ಹೈಕೋರ್ಟ್ ಅದನ್ನು ಒಪ್ಪಲಿಲ್ಲ. ಇಂದು ವಿಚಾರಣೆ ನಿಗದಿಯಾಗಿದೆ, ಮುಂದೂಡಿಕೆ ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿತು.
ಭೂಮಾಲೀಕ ದೇವರಾಜು ಪರ ವಕೀಲರ ವಾದವೇನು?
ಭೂಮಾಲೀಕ ದೇವರಾಜು ಪರ ದುಷ್ಯಂತ್ ದವೆ ವಾದ ಮಂಡನೆ ಮಾಡಿ, ದೇವರಾಜು ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣವಿಲ್ಲ. ಹೀಗಾಗಿ ಸಿಬಿಐ ತನಿಖೆ ನಡೆಸುವ ಅಗತ್ಯವಿಲ್ಲವೆಂದು ಹೇಳಿದರು. ಲೋಕಾಯುಕ್ತ ಪೊಲೀಸರು ತನಿಖೆ ನಡೆಸಬೇಕೆಂದು ಈ ಹಿಂದೆ ಕೋರಿದ್ದರು. ಈಗ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿರುವುದು ಸೂಕ್ತವಲ್ಲವೆಂದು ಅವರು ವಾದ ಮಂಡನೆ ಮಾಡಿದರು.
ದೇವರಾಜು ಹೆಸರಿಗೆ ಇತರೆ ಮಾಲೀಕರು ಹಕ್ಕು ಬಿಡುಗಡೆ ಮಾಡಿದ್ದಾರೆ. ಈ ಅಂಶವನ್ನು ಮುಚ್ಚಿಟ್ಟು ದೂರು ದಾಖಲಿಸಿದ್ದಾರೆ ಎಂದು ದುಷ್ಯಂತ್ ದವೆ ಹೈಕೋರ್ಟ್ಗೆ ತಿಳಿಸಿದರು.
ದೇವರಾಜುವಿನ ವ್ಯಕ್ತಿ ಸ್ವಾತಂತ್ರ್ಯವನ್ನು ಪಣಕ್ಕಿಡಲಾಗಿದೆ. ಹೈಕೋರ್ಟ್ ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕು. ದೇವರಾಜು ಅಮಾಯಕನೆಂದಾದರೆ ಈ ಕೇಸ್ನಲ್ಲಿ ಆರೋಪಿಯಾಗಬಾರದು. ಹೀಗಾಗಿ ದೇವರಾಜುವಿನ ವಾದವನ್ನು ಹೈಕೋರ್ಟ್ ಪರಿಗಣಿಸಬೇಕು ಎಂದು ದವೆ ಮನವಿ ಮಾಡಿದರು.
ಹೈಕೋರ್ಟ್ ಹೇಳಿದ್ದೇನು?
ದುಷ್ಯಂತ್ ದವೆ ವಾದಕ್ಕೆ ಹೈಕೋರ್ಟ್ ಪ್ರತಿಕ್ರಿಯೆ ನೀಡಿ, ಲೋಕಾಯುಕ್ತ ಪೊಲೀಸರು ಈವರೆಗಿನ ತನಿಖೆ ವರದಿ ಸಲ್ಲಿಸಿದ್ದಾರೆ. ಇದನ್ನು ಪರಿಶೀಲಿಸಿ ನಾನು ಸಿಬಿಐ ತನಿಖೆ ಬಗ್ಗೆ ತೀರ್ಮಾನಿಸುತ್ತೇನೆ. ಈಗಾಗಲೇ ವಿಚಾರಣೆಗೊಳಗಾದ ಅಂಶಗಳನ್ನು ಮತ್ತೆ ವಾದಿಸುವ ಅಗತ್ಯವಿಲ್ಲ ಎಂದಿತು.
ಲೋಕಾಯುಕ್ತ ಪೊಲೀಸರ ತನಿಖೆ ಕೋರಿ ದೂರು ಸಲ್ಲಿಸಿದ್ದೀರಿ. ಎಫ್‌ಐಆರ್ ದಾಖಲಾದ ದಿನವೇ ಸಿಬಿಐ ತನಿಖೆ ಕೋರಿದ್ದೇಕೆಂದು ಹೈಕೋರ್ಟ್ ಪ್ರಶ್ನೆ ಮಾಡಿತು. ಇದಕ್ಕುತ್ತರಿಸಿದ ಮಣೀಂದರ್ ಸಿಂಗ್, ರಿಟ್ ಅರ್ಜಿ ದಾಖಲಾದ ಬಳಿಕ ಎಫ್‌ಐಆರ್ ದಾಖಲಿಸಲಾಗಿದೆ. ಅಲ್ಲಿಯವರೆಗೂ ಪೊಲೀಸರು ಎಫ್‌ಐಆರ್ ದಾಖಲಿಸಿರಲಿಲ್ಲವೆಂದು ವಾದಿಸಿದರು.
ಸರ್ಕಾರದ ಪರ ಕಪಿಲ್ ಸಿಬಲ್ ವಾದವೇನು?
ಲೋಕಾಯುಕ್ತ ಸ್ವತಂತ್ರ ತನಿಖಾ ಸಂಸ್ಥೆಯಾಗಿದೆ. ಲೋಕಾಯುಕ್ತ ಪೊಲೀಸರು ರಾಜ್ಯ ಸರ್ಕಾರದ ಹಿಡಿತದಲ್ಲಿದೆ ಎಂದಿದ್ದಾರೆ. ಆದರೆ, ಸಿಬಿಐ ಕೂಡಾ ಕೇಂದ್ರ ಸರ್ಕಾರದ ಹಿಡಿತದಲ್ಲಿದೆ. ಹೀಗಾಗಿ ಸಿಬಿಐ ಸ್ವತಂತ್ರ ತನಿಖಾ ಸಂಸ್ಥೆ ಎನ್ನಲಾಗುವುದಿಲ್ಲ. ಲೋಕಾಯುಕ್ತ ಸಂಸ್ಥೆ ಕಳಂಕಿತ ಎನ್ನಲಾಗುವುದಿಲ್ಲ. ಲೋಕಾಯುಕ್ತ ಸಂಸ್ಥೆಯ ನಿಗಾ ಇರುವುದರಿಂದ ತನಿಖೆ ಸ್ವತಂತ್ರವಾಗಿರಲಿದೆ ಎಂದು ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಿಲ್ ವಾದ ಮಂಡಿಸಿದರು.
ಸಿಬಿಐ ಪಂಜರದೊಳಗಿನ ಗಿಣಿ: ಕಪಿಲ್ ಸಿಬಲ್
ಸಿಬಿಐ ಪಂಜರದೊಳಗಿನ ಗಿಣಿ ಎಂದೂ ಕೂಡ ‘ಸುಪ್ರೀಂ’ ಹೇಳಿದೆ. ಹೀಗಾಗಿ ಸಿಬಿಐ ಕೂಡ ಆ ಅಭಿಪ್ರಾಯವನ್ನು ಹೋಗಲಾಡಿಸಬೇಕಿದೆ. ಹೀಗಾಗಿ ಲೋಕಾಯುಕ್ತ ಪೊಲೀಸರನ್ನು ಸಂಶಯಿಸಬಾರದೆಂದು ಕಪಿಲ್ ಸಿಬಲ್ ವಾದ ಮಂಡಿಸಿದರು.
ಇದನ್ನೂ ಓದಿ: ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಇಡಿ ನೋಟಿಸ್
ಸರ್ಕಾರ ಸಿಬಿಐ ತನಿಖೆಗೆ ಸಾಮಾನ್ಯ ಅನುಮತಿ ಹಿಂಪಡೆದಿದೆ. ಸಿಬಿಐ ಸ್ವತಂತ್ರವಾಗಿಲ್ಲದಿರುವುದೇ ಸರ್ಕಾರದ ಕ್ರಮಕ್ಕೆ ಕಾರಣವಾಗಿದೆ ಎಂದು ಅವರು ವಾದಿಸಿದರು.
ಸಿದ್ದರಾಮಯ್ಯ ಪರ ಅಭಿಷೇಕ್ ಸಿಂಘ್ವಿ ವಾದ ಹೀಗಿತ್ತು…
ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದರು. ಸಿಬಿಐ ತನಿಖೆಗೆ ಅರ್ಹವಾಗಲು ಇದು ಅಪರೂಪದ ಪ್ರಕರಣವಲ್ಲ. ಲೋಕಾಯುಕ್ತ ತನಿಖೆಯಲ್ಲಿ ಮಧ್ಯಪ್ರವೇಶಿಸಿ ಸಿಬಿಐಗೆ ಹಸ್ತಾಂತರ ಸರಿಯಲ್ಲ. ದೂರುದಾರರಿಗೆ ರಾಜ್ಯಪಾಲರ ಅನುಮತಿ ಬೇಕಿತ್ತು ಪಡೆದರು. ಮೊದಲಿಗೆ ಲೋಕಾಯುಕ್ತ ಪೊಲೀಸರ ತನಿಖೆ ಕೋರಿದರು. ತನಿಖೆ ಆಗುವ ಮೊದಲೇ ಸಿಬಿಐ ತನಿಖೆ ಕೇಳುತ್ತಿದ್ದಾರೆ ಎಂದು ಅಭಿಷೇಕ್ ಸಿಂಘ್ವಿ ವಾದಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:21 pm, Mon, 27 January 25