ಕೊರೊನಾ ಲಸಿಕೆ ವಿತರಣೆಯಲ್ಲಿ ಸ್ಲಂ ನಿವಾಸಿಗಳಿಗೆ ಆದ್ಯತೆ ಸಿಗಲಿ: ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಕೊರೊನಾ ಲಸಿಕೆ ಸ್ಲಂಗಳಿಗೆ ತಲುಪುವ ಕುರಿತು ಖಾತ್ರಿಪಡಿಸಿ. ಅಲ್ಲಿ ವಾಸಿಸುವ ಜನರಿಗೆ ಕೊರೊನಾ ಲಸಿಕೆಯ ವಿತರಣೆಯಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ, ಲಸಿಕೆಯನ್ನು ಕೊಟ್ಟೇ ಕೊಡುತ್ತೇವೆ ಎಂದು ಖಾತ್ರಿಪಡಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಬೆಂಗಳೂರು: ಕೊರೊನಾ ಲಸಿಕೆ ವಿತರಣೆಯಲ್ಲಿ ಸ್ಲಂಗಳಿಗೆ ಆದ್ಯತೆ ನೀಡಬೇಕು. ಸ್ಲಂಗಳಲ್ಲಿ ವಾಸಿಸುವ ನಾಗರಿಕರು ಕೊರೊನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಅವರಿಗೆ ಕೊರೊನಾ ಲಸಿಕೆಯ ಅಗತ್ಯ ಮಿಕ್ಕೆಲ್ಲರಿಗಿಂತ ಹೆಚ್ಚು ಅಗತ್ಯವಿದೆ. ಹೀಗಾಗಿ, ಸರ್ಕಾರಗಳು ಸ್ಲಂ ನಿವಾಸಿಗಳಿಗೆ ಕೊರೊನಾ ಲಸಿಕೆಯನ್ನು ಶೀಘ್ರ ತಲುಪಿಸಲೇಬೇಕು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಗುರುವಾರ ಹೇಳಿದೆ. ಒಂದುವೇಳೆ ಕೊರೊನಾ ಲಸಿಕೆಯ ಕೊರತೆ ಉಂಟಾದಲ್ಲಿ ಆದ್ಯತೆ ಮೇರೆಗೆ ಯಾರಿಗೆ ನೀಡಲಾಗುವುದು ಎಂಬುದು ನಿರ್ಧಾರ ಆಗಿರಬೇಕು. ಕೊರೊನಾ ಲಸಿಕೆಯನ್ನು ಕೇವಲ ನೋಂದಣಿ ಮಾಡಿಸಿಕೊಂಡವರಿಗಷ್ಟೇ ನೀಡುವುದು ಸರಿಯಾದ ಕ್ರಮವಲ್ಲ, ಹಾಗೆ ಮಾಡಲೂಬಾರದು ಎಂದು ಹೈಕೋರ್ಟ್ನ ನ್ಯಾಯಾಧೀಶರಾದ ಅಭಯ್ ಶ್ರೀನಿವಾಸ್ ಓಕಾ, ಅರವಿಂದ್ ಕುಮಾರ್ ಅವರಿದ್ದ ನ್ಯಾಯಪೀಠ ಸರ್ಕಾರಕ್ಕೆ ಸೂಚನೆ ನೀಡಿತು.
ರಾಜ್ಯದಲ್ಲಿ ಹಲವಾರು ಸ್ಲಂ ಅಥವಾ ಕೊಳಚೆ ಪ್ರದೇಶಗಳಿವೆ. ಅಲ್ಲಿ ಇತರ ಜನವಸತಿ ಪ್ರದೇಶಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಾಸಿಸುತ್ತಾರೆ. ಸ್ಲಂಗಳಲ್ಲಿನ ಜನದಟ್ಟಣೆ ಕೊರೊನಾ ಸೋಂಕಿನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೀಗಾಗಿ ಕೊರೊನಾ ಲಸಿಕೆಯನ್ನು ಇಂತಹ ಕೊಳಚೆ ಅಥವಾ ಸ್ಲಂ ಪ್ರದೇಶಗಳಲ್ಲಿ ವಾಸಿಸುವ ನಾಗರಿಕರಿಗೆ ಆದ್ಯತೆಯ ಮೇರೆಗೆ ಒದಗಿಸಬೇಕು ಎಂದು ಕೋರ್ಟ್ ತಿಳಿಸಿದೆ.
ಕೊರೊನಾ ಲಸಿಕೆ ಸ್ಲಂಗಳಿಗೆ ತಲುಪುವ ಕುರಿತು ಖಾತ್ರಿಪಡಿಸಿ. ಅಲ್ಲಿ ವಾಸಿಸುವ ಜನರಿಗೆ ಕೊರೊನಾ ಲಸಿಕೆಯ ವಿತರಣೆಯಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ, ಲಸಿಕೆಯನ್ನು ಕೊಟ್ಟೇ ಕೊಡುತ್ತೇವೆ ಎಂದು ಖಾತ್ರಿಪಡಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ರಾಜ್ಯದಲ್ಲಿನ ಕೊವಿಡ್ 19 ರ ಸ್ಥಿತಿಗತಿಗಳ ಕುರಿತು ಎರಡು ಅರ್ಜಿಗಳು ಸಲ್ಲಿಕೆಯಾದ ನಂತರ ಹೈಕೋರ್ಟ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು.
45 ವರ್ಷ ಮೇಲ್ಪಟ್ಟವರಿಗೂ ದೊರಕಲಿದೆ ಲಸಿಕೆ ಕೇಂದ್ರ ಸರ್ಕಾರ ಇತ್ತೀಚಿಗೆ ಕೈಗೊಂಡ ನಿರ್ಣಯದ ಪ್ರಕಾರ, ಏಪ್ರಿಲ್ 1ರಿಂದ 45 ವರ್ಷ ಮತ್ತು ಮೇಲ್ಪಟ್ಟ ಸಾರ್ವಜನಿಕರಿಗೆ ಕರೊನಾ ಲಸಿಕೆ ನೀಡಲಾಗುತ್ತದೆ. ಈ ಕುರಿತು ಇನ್ನೂ ಹೆಚ್ಚಿನ ವಿವರ ತಿಳಿದುಬರಬೇಕಿದ್ದು, ಕೇಂದ್ರ ಸರ್ಕಾರ ಮಾರ್ಚ್ 23ರಂದು ಈ ಘೋಷಣೆ ಮಾಡಿದೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದ್ದು, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಈ ವಿಷಯ ತಿಳಿಸಿದ್ದರು. ದೇಶದಲ್ಲಿ ಕೊರೊನಾ ಲಸಿಕೆಯ ಕೊರತೆ ಇಲ್ಲ. ಕಳೆದ 24 ಗಂಟೆಯಲ್ಲಿ 32 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಈವರೆಗೆ ದೇಶದಲ್ಲಿ ಒಟ್ಟು 4.8 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ದೇಶದ ಎಲ್ಲ ಅರ್ಹರು ಹೆಸರು ನೋಂದಾಯಿಸಿಕೊಂಡು ಲಸಿಕೆ ಪಡೆಯಲು ಎಂದು ಸಚಿವ ಪ್ರಕಾಶ್ ಜಾವಡೇಕರ್ ಮನವಿ ಮಾಡಿದ್ದರು.
ಕರ್ನಾಟಕದಲ್ಲಿ ಕೊರೊನಾ ಲಸಿಕೆ ಲಭ್ಯತೆ ಹೇಗಿದೆ? ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಇದೆ ಎಂಬುದು ಸ್ಪಷ್ಟ. ಸಾರ್ವಜನಿಕರು ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಬೇಕು. ಮಾಸ್ಕ್ ಧರಿಸದೇ ಓಡಾಡಿದರೆ 250 ರೂಪಾಯಿ ದಂಡ ವಿಧಿಸಲಾಗುವುದು. ಕೇಂದ್ರ ಆರೋಗ್ಯ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ರಾಜ್ಯಕ್ಕೆ 12 ಲಕ್ಷದ 5 ಸಾವಿರ ಡೋಸ್ ಲಸಿಕೆ ಕೊಡಲಿದ್ದಾರೆ. ನಾಳೆ 4 ಲಕ್ಷ ಡೋಸ್ ಲಸಿಕೆ ವಿಮಾನದ ಮೂಲಕ ಬರಲಿದೆ ಹಾಗಾಗಿ ಕರ್ನಾಟಕದಲ್ಲಿ ಕೊರೊನಾ ವ್ಯಾಕ್ಸಿನ್ ಕೊರತೆ ಇಲ್ಲ ಎಂದು ಸಚಿವ ಕೆ.ಸುಧಾಕರ್ ಇತ್ತೀಚಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಸುಧಾಕರ್ ಚಿಕ್ಕಬಳ್ಳಾಪುರ ತಾಲೂಕಿನ ಅವಲನಾಗೇನಹಳ್ಳಿಯಲ್ಲಿ ತಿಳಿಸಿದ್ದರು.
2021 ರ ಜನವರಿ 16 ರಿಂದ ದೇಶದ ಜನರಿಗೆ ಕೊರೊನಾ ಲಸಿಕೆ ವಿತರಣೆ ಆರಂಭವಾಗಿತ್ತು. ಆರಂಭದಲ್ಲಿ ಕೇಂದ್ರ ಸರ್ಕಾರ ಒಟ್ಟು 30 ಕೋಟಿ ಭಾರತೀಯರಿಗೆ ಕೊರೊನಾ ಲಸಿಕೆ ನೀಡಲು ನಿರ್ಧರಿಸಿತ್ತು ಮೊದಲು 3 ಕೋಟಿ ಕೊರೊನಾ ವಾರಿಯರ್ಸ್ಗೆ ಮಾತ್ರ ಲಸಿಕೆ ನೀಡಿ ಉಳಿದ 27 ಕೋಟಿ ಜನರಿಗೆ ಆದ್ಯತೆ ಮೇರೆಗೆ ಹಂಚಿಕೆ ಮಾಡೋ ಪ್ಲ್ಯಾನ್ ಮಾಡಿತ್ತು. ಮೊದಲ ಮೂರು ಕೋಟಿ ವ್ಯಾಕ್ಸಿನ್ ಕೊರೊನಾ ವಾರಿಯರ್ಸ್ಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಅಧಿಕಾರಿಗಳು, ದಾದಿಯರು, ಮೇಲ್ವಿಚಾರಕರು, ಅರೆವೈದ್ಯಕೀಯ ಹಾಗೂ ಸಹಾಯಕ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿ ಒಟ್ಟು 1 ಕೋಟಿ ಮಂದಿ ಸೇರಿದ್ದರು. ಉಳಿದ 2 ಕೋಟಿ ವ್ಯಾಕ್ಸಿನ್ ಫ್ರಂಟ್ ಲೈನ್ ವಾರಿಯರ್ಸ್ಗೆ ಲಭ್ಯವಾಗಲಿದೆ. ಈ ಫ್ರಂಟ್ ಲೈನ್ ವಾರಿಯರ್ಸ್ಗಳಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ, ಸಶಸ್ತ್ರ ಪಡೆ, ಗೃಹರಕ್ಷಕ, ವಿಪತ್ತು ನಿರ್ವಹಣೆ, ನಾಗರಿಕ ರಕ್ಷಣಾ ಸಂಸ್ಥೆ, ಜೈಲು ಸಿಬ್ಬಂದಿ, ಪುರಸಭೆ ಕಾರ್ಮಿಕರು, ಕಂಟೇನ್ಮೆಂಟ್ ವಲಯದ ಕಣ್ಗಾವಲು ಸಿಬ್ಬಂದಿ ಮೊದಲು ಕೊರೊನಾ ವ್ಯಾಕ್ಸಿನ್ ಪಡೆದಿದ್ದರು.
ಇದನ್ನೂ ಓದಿ: ಕೊರೊನಾ 2ನೇ ಅಲೆ: ಯುಗಾದಿ, ಹೋಳಿ, ಶಬ್ ಎ ಬರತ್, ಗುಡ್ ಫ್ರೈಡೇ ಹಬ್ಬಗಳ ಆಚರಣೆಗೆ ಮಾರ್ಗಸೂಚಿ ಪ್ರಕಟ
ಮಹಾರಾಷ್ಟ್ರದಲ್ಲಿ ಹೆಚ್ಚಿದ ಕೊರೊನಾ ಹಾವಳಿ; ಒಂದೇ ದಿನ 35 ಸಾವಿರ ಕೇಸ್ ಪತ್ತೆ