ಅತ್ಯಾಚಾರ ಕೇಸ್​​ನಲ್ಲಿ ಸಿಲುಕಿರುವ 62ವರ್ಷದ ವ್ಯಕ್ತಿಗೆ ಅಧೀನ ನ್ಯಾಯಾಲಯ ನೀಡಿದ್ದ ಮರಣದಂಡನೆಯನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್​

ಪ್ರಕರಣದ ಆರೋಪಿ ವೆಂಕಟಪ್ಪ ಕೋಲಾರದವನು. ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ ಆರೋಪದಡಿ ವೆಮ್ಗಲ್​ ಪೊಲೀಸರು ಆತನನ್ನು ಬಂಧಿಸಿ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.

ಅತ್ಯಾಚಾರ ಕೇಸ್​​ನಲ್ಲಿ ಸಿಲುಕಿರುವ 62ವರ್ಷದ ವ್ಯಕ್ತಿಗೆ ಅಧೀನ ನ್ಯಾಯಾಲಯ ನೀಡಿದ್ದ ಮರಣದಂಡನೆಯನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್​
ಕರ್ನಾಟಕ ಹೈಕೋರ್ಟ್​

ಮೂರುವರ್ಷಗಳ ಹಿಂದೆ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ್ದ 62 ವರ್ಷದ ವ್ಯಕ್ತಿಗೆ ವಿಚಾರಣಾ ನ್ಯಾಯಾಲಯ ಪೋಕ್ಸೋ ಕಾಯ್ದೆ (POCSO Act)ಯಡಿ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ (Karnataka Highcourt)​ ಇತ್ತೀಚೆಗೆ ರದ್ದುಗೊಳಿಸಿದೆ.  ಟ್ರಯಲ್​ ಕೋರ್ಟ್​ ನೀಡಿದ್ದ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಆರೋಪಿ ವೆಂಕಟೇಶಪ್ಪ ಹೈಕೋರ್ಟ್​​ಗೆ ಕ್ರಿಮಿನಲ್​ ಅಪೀಲ್​ ಅರ್ಜಿ ಸಲ್ಲಿಸಿದ್ದರು. ಅದನ್ನು ವಿಚಾರಣೆ ನಡೆಸಿದ ಹೈಕೋರ್ಟ್​ ನ್ಯಾಯಮೂರ್ತಿ ಜಿ.ನರೇಂದರ್​ ನೇತೃತ್ವದ ಪೀಠ, ಮರಣದಂಡನೆ ರದ್ದುಗೊಳಿಸಿ, ಪ್ರಕರಣವನ್ನು ಹೊಸದಾಗಿ ತನಿಖೆ ಮಾಡಬೇಕು. ಆರು ತಿಂಗಳ ಒಳಗೆ ತನಿಖೆ ಮುಗಿಯಬೇಕು ಎಂದು ಆದೇಶ ನೀಡಿದೆ.  

ಪ್ರಕರಣದ ತನಿಖೆ ನಡೆಸಿದ್ದ ತನಿಖಾಧಿಕಾರಿಗಳು ಆರೋಪಿ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಿದ್ದರು. ಈ ಚಾರ್ಜ್​ಶೀಟ್​ ಜತೆಗೆ ಡಿಎನ್​ಎ ಪರೀಕ್ಷೆ ವರದಿಯನ್ನೂ ಟ್ರಯಲ್​ ಕೋರ್ಟ್​ಗೆ ಸಲ್ಲಿಸಿದ್ದರು. ಅದನ್ನೇ ಈಗ ಹೈಕೋರ್ಟ್​ ಮರುಪರಿಶೀಲನೆ ಮಾಡಿದೆ. ಈ ಡಿಎನ್​ಎ ಪರೀಕ್ಷೆ ವರದಿಯ ಅಷ್ಟೊಂದು ನಂಬಿಕಾರ್ಹವಲ್ಲ ಎಂದು ಹೈಕೋರ್ಟ್​ ಹೇಳಿದೆ. ಅಲ್ಲದೆ, ರಕ್ತ ಮತ್ತು ವೀರ್ಯದ ಪರೀಕ್ಷೆಯನ್ನು ಹೊಸದಾಗಿ ಮಾಡಬೇಕು ಎಂದು ಆರೋಪಿ ಟ್ರಯಲ್​ ಕೋರ್ಟ್​ಗೆ ಸಲ್ಲಿಸಿದ್ದ ಮನವಿಯನ್ನೂ ಆ ನ್ಯಾಯಾಲಯ ವಜಾಗೊಳಿಸಿದ್ದರ ಬಗ್ಗೆ ಹೈಕೋರ್ಟ್​ ಆಕ್ಷೇಪ ವ್ಯಕ್ತಪಡಿಸಿದೆ.

ಡಿಎನ್​ಎ ವರದಿ ನೀಡಿದ ತಜ್ಞರನ್ನು ನ್ಯಾಯಾಲಯಕ್ಕೆ ಕರೆಸುವ ಅಗತ್ಯವಿಲ್ಲ ಎಂದು ವಿಚಾರಣಾ ನ್ಯಾಯಾಲಯ ತನ್ನ ವಿಚಾರಣೆ ಸಂದರ್ಭದಲ್ಲಿ ಹೇಳಿದೆ. ಆದರೆ ಇದು ಕೋರ್ಟ್​ಗೆ ನ್ಯಾಯಸಮ್ಮತವಲ್ಲ. ಡಿಎನ್​ಎ ತಜ್ಞರ ಹೇಳಿಕೆಯನ್ನು ದಾಖಲಿಸದೆ, ಸಾಕ್ಷ್ಯದ ಬಗ್ಗೆ ಮೊದಲೇ ನಿರ್ಧಾರ ಮಾಡುವುದು ಸರಿಯಾದ ಕ್ರಮವಲ್ಲ. ಇನ್ನು ಆರೋಪಿ ತನ್ನ ಡಿಎನ್​ಎ ಪರೀಕ್ಷೆಯ ವರದಿಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಲು ಅವಕಾಶ ಕೊಡುವಂತೆಯೂ ಕೇಳಿದ್ದರು. ಅದಕ್ಕೂ ಟ್ರಯಲ್​ ಕೋರ್ಟ್ ಒಪ್ಪಲಿಲ್ಲ. ಡಿಎನ್​ಎ ವರದಿ ನೀಡಿದ ತಜ್ಞರನ್ನು ವಿಚಾರಣೆಗೆ ಒಳಪಡಿಸದೆ ನೀಡಿರುವ ತೀರ್ಪು ನ್ಯಾಯಯುತವಾದ ತೀರ್ಪು ಅಲ್ಲವೇ ಅಲ್ಲ. ಇನ್ನು ಮರಣದಂಡನೆ ವಿಧಿಸುವಾಗ ಕೂಡ ತನ್ನ ಆದೇಶವನ್ನು ಕೆಳ ನ್ಯಾಯಾಲಯ ಸಮರ್ಥಿಸಿಲ್ಲ ಎಂದು ಹೈಕೋರ್ಟ್​ ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಇನ್ನು 62ವರ್ಷದ ಆರೋಪಿ ವಿರುದ್ಧ ಕೆಳನ್ಯಾಯಾಲಯ ನೀಡಿದ ತೀರ್ಪು ನಮ್ಮ ನ್ಯಾಯಾಂಗ ಮನಸ್ಥಿತಿಗೇ ದಿಗಿಲು ಉಂಟುಮಾಡಿದೆ. ನ್ಯಾಯಾಂಗ ಮನೋಧರ್ಮದ ಕೊರತೆ ಎದ್ದುಕಾಣುತ್ತದೆ ಎಂದು ಹೇಳಿರುವ ಕರ್ನಾಟಕ ಹೈಕೋರ್ಟ್​, ಪ್ರಕರಣವನ್ನು ಸಂಪೂರ್ಣವಾಗಿ ಹೊಸದಾಗಿಯೇ ತನಿಖೆ ಮಾಡಬೇಕು ಎಂದು ಆದೇಶಿಸಿದೆ.

ಏನಿದು ಪ್ರಕರಣ?
ಪ್ರಕರಣದ ಆರೋಪಿ ವೆಂಕಟಪ್ಪ ಕೋಲಾರದವನು. ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ ಆರೋಪದಡಿ ವೆಮ್ಗಲ್​ ಪೊಲೀಸರು ಆತನನ್ನು ಬಂಧಿಸಿ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಇದಾಗಿದ್ದು 2018ರ ಮೇ 5ರಲ್ಲಿ. ಈ ಕೇಸ್​ನ್ನು ಕೋಲಾರ ಜಿಲ್ಲಾ ನ್ಯಾಯಾಲಯ ವಿಚಾರಣೆ ಮಾಡಿತ್ತು. ಪೊಲೀಸರು ಆರೋಪಿಯ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಿದ್ದರು. 2020ರ ಜನವರಿ 17ರಂದು ಕೋಲಾರ ಜಿಲ್ಲಾ ನ್ಯಾಯಾಲಯ ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.

ಇದನ್ನೂ ಓದಿ: ಸಿಎಂ ಭರವಸೆ: ಪಂಚಮಸಾಲಿ ಮೀಸಲಾತಿ ಹೋರಾಟ ಮುಂದೂಡಲು ಜಯಮೃತ್ಯುಂಜಯ ಸ್ವಾಮೀಜಿ ನಿರ್ಧಾರ 

ಪ್ರಚಂಡ ಪ್ರತಿಭೆಯ ವಿಜಯ್ ಸೇತುಪತಿ ಸಿನಿಮಾರಂಗಕ್ಕೆ ಕಾಲಿಡುವ ಮೊದಲು ಚಿಕ್ಕಪುಟ್ಟ ಕೆಲಸ ಮಾಡಿಕೊಂಡು ಬದುಕು ನಡೆಸುತ್ತಿದ್ದರು

 

Read Full Article

Click on your DTH Provider to Add TV9 Kannada