ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ವಿಧೇಯಕ ತಿರಸ್ಕೃತ: ಜೈ ಶ್ರೀರಾಮ್ ಘೋಷಣೆ ಕೂಗಿ ಸಂಭ್ರಮಿಸಿದ ಬಿಜೆಪಿ
ಹುಂಡಿ ಹಣಕ್ಕೆ ಸರ್ಕಾರ ಕೈ ಹಾಕಿದೆ ಎಂಬ ವಿವಾದಕ್ಕೆ ಕಾರಣವಾಗಿದ್ದ ಹಿಂದೂ ಧಾರ್ಮಿಕ ದೇವಸ್ಥಾನಗಳ ತಿದ್ದುಪಡಿ ಬಿಲ್ ಗೆ ಭಾರಿ ಹಿನ್ನಡೆಯಾಗಿದೆ. ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದ್ದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಮಸೂದೆ ತಿರಸ್ಕೃತವಾಗಿದೆ. ಇನ್ನು ವಿಧೇಯಕ ತಿರಸ್ಕೃತವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಸದನದಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಇನ್ನು ವಿಧೇಯಕ ತಿರಸ್ಕೃತವಾಗುವ ಮೊದಲು ಏನೆಲ್ಲಾ ಬೆಳವಣಿಗಳು ನಡೆದವು ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಫೆಬ್ರುವರಿ 23): ತೀವ್ರ ಕುತೂಹಲ ಮೂಡಿಸಿದ್ದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ತಿದ್ದುಪಡಿ ಮಸೂದೆಗೆ (hindu religious institutions and charitable endowments amendment bill 2024) ಹಿನ್ನಡೆಯಾಗಿದೆ. ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಹಿಂದೂ ಧಾರ್ಮಿಕ ವಿಧೇಯಕ ಪರಿಷತ್ನಲ್ಲಿ ತಿರಸ್ಕೃತಗೊಂಡಿದೆ. ಮುಜರಾಯಿ ಇಲಾಖೆ ಸಚಿವ ರಾಮಲಿಂಗರೆಡ್ಡಿ ಅವರು ಮೊದಲು ಪರಿಷತ್ನಲ್ಲಿ ವಿಧೇಯಕ ಮಂಡಿಸಿದರು. ಈ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಪರ-ವಿರೋಧದ ಚರ್ಚೆ ಆಗಿದ್ದು, ಅಂತಿಮವಾಗಿ ಉಪ ಸಭಾಪತಿ ಪ್ರಾಣೇಶ್ ಅವರು ವಿಧೇಯಕವನ್ನು ಧ್ವನಿ ಮತಕ್ಕೆ ಹಾಕಿದರು. ಆದ್ರೆ, ಸದನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ವಿಧೇಯಕವನ್ನು ಧ್ವನಿ ಮತಕ್ಕೆ ಹಾಕಿದ್ದು, ವಿಧೇಯಕ ಪರ 7 ಮತ, ವಿಧೇಯಕದ ವಿರುದ್ಧ 18 ಮತ ಚಲಾವಣೆಯಾಗಿವೆ. ಈ ಹಿನ್ನೆಲೆಯಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ವಿಧೇಯಕ ತಿರಸ್ಕೃತವಾಯ್ತು.ಇದರ ಬೆನ್ನಲ್ಲೇ ಬಿಜೆಪಿ ಸದಸ್ಯರು ಜೈ ಶ್ರೀರಾಂ ಘೋಷಣೆ ಕೂಗಿದರು. ಇನ್ನು ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಭಾರತ್ ಮಾತಾಕಿ ಜೈ, ಜೈ ಭೀಮ್ ಎಂದು ಘೋಷಣೆ ಕೂಗಿದರು.
ಟಿ20 ಮ್ಯಾಚ್ನಂತೆ ಕುತೂಹಲ ಮೂಡಿಸಿದ್ದ ಬಿಲ್
ಹುಂಡಿ ಹಣಕ್ಕೆ ಸರ್ಕಾರ ಕೈ ಹಾಕಿದೆ ಎಂಬ ವಿವಾದಕ್ಕೆ ಕಾರಣವಾಗಿದ್ದ ಹಿಂದೂ ಧಾರ್ಮಿಕ ದೇವಸ್ಥಾನಗಳ ತಿದ್ದುಪಡಿ ಬಿಲ್ ತೀವ್ರ ಕುತೂಹಲ ಮೂಡಿಸಿತು. ಬಿಲ್ ತಿರಸ್ಕೃತ ಆಗುವ ಮೊದಲು ದೊಡ್ಡ ಹೈಡ್ರಾಮಾವೇ ನಡೆದಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ತಿದ್ದುಪಡಿ ವಿಧೇಯಕವನ್ನು ಇಂದು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಮಂಡನೆ ಮಾಡಿದರು. ವಿಧೇಯಕದಲ್ಲಿ ಇದ್ದ ತಿದ್ದುಪಡಿ ಅಂಶಗಳಿಗೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ತೀವ್ರವಾದ ಆಕ್ಷೇಪ ಮತ್ತು ವಿರೋಧವನ್ನು ವ್ಯಕ್ತಪಡಿಸಿದರು. ಒಂದು ಕೋಟಿಗಿಂತಲೂ ಹೆಚ್ಚು ಆದಾಯ ಇರುವ ದೇವಸ್ಥಾನಗಳ ಒಟ್ಟು ಆದಾಯದಿಂದ ಶೇಕಡ 10% ರಷ್ಟು ನಿಧಿ ಸಂಗ್ರಹಣೆ ಮಾಡುವ ನಿರ್ಧಾರವನ್ನು ಕೈಬಿಡಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಈ ಅಂಶವನ್ನು ಕೈಬಿಟ್ಟರೆ ಮಾತ್ರ ವಿಧೇಯಕ್ಕೆ ಬೆಂಬಲಿಸುತ್ತವೆ ಇಲ್ಲದೇ ಹೋದರೆ ವಿದೇಯಕಕ್ಕೆ ವಿರೋಧಿಸುತ್ತವೆ ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಒಂದು ಹಂತದಲ್ಲಿ ಬಿಜೆಪಿ ಸದಸ್ಯರ ಆಗ್ರಹಕ್ಕೆ ಮಣಿಯಲು ಮುಂದಾದ ಸಚಿವ ರಾಮಲಿಂಗರೆಡ್ಡಿ ಸೋಮವಾರ ಬಿಲ್ಲನ್ನ ಮತ್ತೆ ಮಂಡಿಸುತ್ತೇನೆ ಎಂದು ಪ್ರಸ್ತಾಪಿಸಿದರು. ಇದಕ್ಕೆ ನಿಯಮಗಳಲ್ಲಿ ಅವಕಾಶ ಇಲ್ಲ ಎಂದು ಆಕ್ಷೇಪಿಸಿದ ಉಪ ಸಭಾಪತಿ ಪ್ರಾಣೇಶ್ ಒಮ್ಮೆ ಪರ್ಯಾಲೋಚನೆಗೆ ತೆಗೆದುಕೊಂಡ ಬಿಲ್ಲನ್ನು ಮತಕ್ಕೆ ಹಾಕಬೇಕಾಗುತ್ತದೆ ಎಂದು ಸೂಚಿಸಿದರು.
ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುವುದಕ್ಕೆ ಕಾಲಾವಕಾಶ ಕೇಳಿದ ರಾಮಲಿಂಗ ರೆಡ್ಡಿ ಅವರಿಗೆ ಹತ್ತು ನಿಮಿಷಗಳ ಕಾಲ ಕಲಾಪವನ್ನು ಮುಂದೂಡಲಾಯಿತು. ಈ ಸಮಯದಲ್ಲಿ ಭಾರಿ ಕುತೂಹಲ ಮೂಡಿಸಿದ ಹಿಂದೂ ಧಾರ್ಮಿಕ ಬಿಲ್ ಭವಿಷ್ಯ ಏನಾಗಬಹುದು ಎನ್ನುವ ಕುತೂಹಲ 20 20 ಮ್ಯಾಚ್ ರೀತಿಯಲ್ಲಿ ಕಂಡು ಬಂತು. ಆಡಳಿತ ಪಕ್ಷದ ಸದಸ್ಯರು ಸಚಿವ ರಾಮಲಿಂಗ ರೆಡ್ಡಿ ಜೊತೆ ಸುಧೀರ್ಘ ಚರ್ಚೆ ನಡೆಸಿದ ಬಳಿಕ ಯಾವುದೇ ಫಲಪ್ರದವಾಗಲಿಲ್ಲ. ಕೊನೆಗೆ ಸಭಾಪತಿ ಸ್ಥಾನದಲ್ಲಿದ್ದ ಎಂಕೆಪ್ರಾಣೇಶ್ ವಿಧೇಯಕವನ್ನ ದ್ವನಿ ಮತಕ್ಕೆ ಹಾಕಿದರು. ಆದ್ರೆ, ಬಿಜೆಪಿಯ ಒಟ್ಟು 18 ಸದಸ್ಯರು ಹಾಜರಿದ್ದರೆ ಕಾಂಗ್ರೆಸ್ ಪರವಾಗಿ ಕೇವಲ7 ಸದಸ್ಯರು ಮಾತ್ರ ಹಾಜರಿದ್ದರು. ಹೀಗಾಗಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ವಿಧೇಯಕ ಧ್ವನಿ ಮತದ ಮೂಲಕ ತಿಸ್ಕೃತವಾಗಿದೆ.
ಸಾಕಷ್ಟು ಚರ್ಚೆಗೆ ಗ್ರಾಸವಾದ ವಿಧೇಯಕ
ಕರ್ನಾಟಕದಲ್ಲಿ 12 ವರ್ಷಗಳ ನಂತರ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮಾದಾಯ ದತ್ತಿಗಳ ವಿಧೇಯಕದಲ್ಲಿ ತಿದ್ದುಪಡಿ ತರಲು ಮುಂದಾಗಿದೆ. ಈಗಾಗಲೇ ವಿಧಾನಸಭೆಯಲ್ಲಿ ಅಂಗೀಕರಿಸಲಾದ ಈ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕದ ವಿಚಾರದಲ್ಲಿ ವಿವಾದ ಏರ್ಪಟ್ಟಿದೆ. ಅನುದಾನ ಬಳಕೆ, ದೇಗುಲಗಳ ಆದಾಯದ ಬಳಕೆ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ರಾಜಕೀಯವಾಗಿ ನಡೆದಿವೆ. ಹಿಂದೂ ದೇಗುಲಗಳ ಆದಾಯವನ್ನು ಇತರೆ ಧರ್ಮಗಳಿಗೆ ಬಳಸುವ ಹುನ್ನಾರ ಅಡಗಿದೆ ಎನ್ನುವುದು ಪ್ರತಿಪಕ್ಷಗಳ ಟೀಕೆಯಾದರೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಾಗೂ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರೂ ಸಮರ್ಥಿಸಿಕೊಂಡಿದ್ದಾರೆ.
ದೇವಸ್ಥಾನಗಳ ಹುಂಡಿಗಳಲ್ಲಿ ಸಂಗ್ರಹವಾಗುವ ಹಣವನ್ನು ಹಿಂದೂ ಧರ್ಮದ ಧಾರ್ಮಿಕ ಆಚರಣೆಗಳಿಗೆ ಸಂಬಂಧಪಟ್ಟಂತೆ ಮಾತ್ರವೇ ಬಳಸಲಾಗುತ್ತದೆ. ಬೇರೆ ಯಾವುದೇ ಧರ್ಮದ ಜನರ ಅನುಕೂಲಕ್ಕಾಗಿ ಈ ಹಣವನ್ನು ಬಳಸಲಾಗುವುದಿಲ್ಲ. ದೇವಸ್ಥಾನಗಳ ಹಣವನ್ನು ಕೇವಲ ಹಿಂದೂ ಸಮುದಾಯದ ಏಳಿಗೆ ಮತ್ತು ಕಲ್ಯಾಣಕ್ಕೆ ಮಾತ್ರವೇ ಬಳಸಬೇಕೆನ್ನುವ ಬಾಧ್ಯತೆಯನ್ನು ಈ ನಿಧಿಯ ನಿಬಂಧನೆಗಳಲ್ಲಿ ಒತ್ತಿ ಹೇಳಲಾಗಿದೆ ಎನ್ನುವುದು ಸರ್ಕಾರ ವಾದವಾಗಿದೆ.
ಇದನ್ನೂ ಓದಿ: ದೇವಸ್ಥಾನಗಳ ಹುಂಡಿ ಹಣ ಹಿಂದೂ ಧಾರ್ಮಿಕ ಆಚರಣೆಗೆ ಮಾತ್ರ ಬಳಕೆ: ಸಿದ್ದರಾಮಯ್ಯ ಸ್ಪಷ್ಟನೆ
ಇನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕವನ್ನು ಮೊದಲು ಕಾಯಿದೆ ರೂಪ ನೀಡಿದ್ದು 1997ರಲ್ಲಿ. ಆನಂತರ 2003ರಲ್ಲಿ ತಿದ್ದುಪಡಿಯೊಂದಿಗೆ ಬಳಸಲಾಯಿತು. ಇದಾದ ನಂತರ 2012ರಲ್ಲಿ ಮತ್ತೊಮ್ಮೆ ತಿದ್ದುಪಡಿ ಮಾಡಲಾಗಿತ್ತು. ಇದಾದ ಬಳಿಕ ಕಾಯಿದೆಗೆ ನಾಲ್ಕನೇ ಬಾರಿಗೆ ತಿದ್ದುಪಡಿಯಾಗಿದೆ.
ತಿದ್ದುಪಡಿಯಲ್ಲಿ ಏನಿದೆ?
1997ರಲ್ಲಿ ಕಾಯಿದೆಯನ್ನು ಜಾರಿಗೊಳಿಸಿದಾಗಿನಿಂದಲೂ ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಸೃಜಿಸಬೇಕು ಎನ್ನುವ ನಿಬಂಧನೆ ಕಾಯಿದೆಯಲ್ಲಿಯೇ ಅಡಕವಾಗಿದೆ. ಆದರೆ ಅದು ಜಾರಿಯಾಗರಲಿಲ್ಲ. ಆನಂತರ 2003ರಲ್ಲಿ ಕಾಯಿದೆಯು ಜಾರಿಗೆ ಬಂದಾಗಿನಿಂದ ಧಾರ್ಮಿಕ ಕಾರ್ಯಗಳಿಗೆ ಮಾತ್ರವೇ ಬಳಕೆಯಾಗುತ್ತಿದೆ. ಅಲ್ಲಿಂದ ಈವರೆಗೂ ಎ ದರ್ಜೆ ದೇವಸ್ಥಾನಗಳ ಆದಾಯದಲ್ಲಿ ಸಾಮಾನ್ಯ ಸಂಗ್ರಹಣಾ ನಿಧಿಯಾಗಿ ಶೇ. 5ರಷ್ಟನ್ನು ಬಳಕೆ ಮಾಡಲಾಗುತ್ತಿತ್ತು. ಹೊಸ ತಿದ್ದುಪಡಿ ಪ್ರಕಾರ ಈ ಪ್ರಮಾಣ ಶೇ.10 ಕ್ಕೆ ಏರಿಕೆಯಾಗಲಿದೆ. ಉದಾಹರಣೆಗೆ ಒಂದು ಕೋಟಿ ರೂ. ವಾರ್ಷಿಕ ಆದಾಯ ಬಂದರೆ ಅದರಲ್ಲಿ 10 ಲಕ್ಷ ರೂ. ಸಾಮಾನ್ಯ ಸಂಗ್ರಹಣಾ ನಿಧಿಗೆ ಹೋಗಲಿದೆ. ನೂತನ ತಿದ್ದುಪಡಿಯನ್ನು ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಹೆಚ್ಚಿಸುವ ಏಕೈಕ ಉದ್ದೇಶದಿಂದ ಮಾಡಲಾಗಿದೆ ಎಂದು ಅಧಿಕೃತ ಕರ್ನಾಟಕ ರಾಜ್ಯ ಪತ್ರದಲ್ಲಿ ತಿಳಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ