Karnataka Rain: ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ನದಿಗಳು, ಮನೆ-ಬೀದಿ ಮುಳುಗಿ ಅನೇಕ ಕಡೆ ಜನಜೀವನ ಅಸ್ತವ್ಯಸ್ತ

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಶಿರ್ಲೆಗೆ ಹುಬ್ಬಳ್ಳಿಯಿಂದ 6 ಮಂದಿ ಯುವಕರು ಮೂರು ಡಿಯೋ ಬೈಕ್ಗಳಲ್ಲಿ ಆಗಮಿಸಿದ್ರು. ಅರಣ್ಯ ಇಲಾಖೆ ಸಿಬ್ಬಂದಿ ಫಾಲ್ಸ್‌ ಬಳಿ ಬಿಡೋದಿಲ್ಲ ಅಂದ್ರೂ ಯುವಕರು ಗಲಾಟೆ ಮಾಡಿ ಫಾಲ್ಸ್ ಬಳಿ ಹೋಗಿದ್ರು.

Karnataka Rain: ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ನದಿಗಳು, ಮನೆ-ಬೀದಿ ಮುಳುಗಿ ಅನೇಕ ಕಡೆ ಜನಜೀವನ ಅಸ್ತವ್ಯಸ್ತ
ಮನೆ-ಬೀದಿ ಮುಳುಗಿ ಅನೇಕ ಕಡೆ ಜನಜೀವನ ಅಸ್ತವ್ಯಸ್ತ

ಬೆಂಗಳೂರು: ಕರ್ನಾಟಕದಲ್ಲಿ ವರುಣನ ಅಬ್ಬರ ಜೋರಾಗಿದೆ. ರಸ್ತೆಗಳು ಕಾಣಿಸುತ್ತಿಲ್ಲ.. ಸೇತುವೆಗಳು ನೀರಿನಲ್ಲಿ ಮುಳುಗಡೆಯಾಗ್ತಿವೆ. ರೈತರ ನೂರಾರು ಎಕರೆ ಜಮೀನು ಕೆರೆಯಂತೆ ಬದ್ಲಾಗಿ ಹೋಗಿವೆ. ಮಹಾ ಮಳೆಗೆ ನದಿಗಳು ಉಗ್ರರೂಪ ತಾಳುತ್ತಿವೆ. ಪ್ರಚಂಡ ಮಳೆಗೆ ರಾಜ್ಯದ ಮೂಲೆ ಮೂಲೆಯಲ್ಲೂ ಅವಾಂತರಗಳೇ ಸೃಷ್ಟಿಯಾಗುತ್ತಿದೆ. ಅದೆಷ್ಟೋ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.

ಕೃಷ್ಣಾ ನದಿ ಹರಿವು ಹೆಚ್ಚಳ
ಮಹಾರಾಷ್ಟ್ರ, ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ದೂದಗಂಗಾ, ವೇದಗಂಗಾ, ಹಿರಣ್ಯಕೇಶಿ ನದಿ ಹರಿವು ಹೆಚ್ಚಳವಾಗಿದೆ. ಭಾರಿ ಮಳೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ನೆರೆ ಭೀತಿ ಶುರುವಾಗಿದೆ. ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗುವ ಆತಂಕ ಹೆಚ್ಚಾಗಿದೆ. ಜನರು ನದಿ ತೀರದತ್ತ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ವೇದಗಂಗಾ ನದಿ
ಇನ್ನು ಭಾರಿ ಮಳೆಯಿಂದಾಗಿ ವೇದಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ರಾಷ್ಟ್ರೀಯ ಹೆದ್ದಾರಿ 4ರ ಮೇಲೆ ನದಿ ನೀರು ಹರಿಯುತ್ತಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯಮಗರಣಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4 ಜಲಾವೃತಗೊಂಡಿದೆ. ಬೆಂಗಳೂರು-ಮುಂಬೈ ಮಧ್ಯೆ ರಾ.ಹೆ.4ರಲ್ಲಿ ಸಂಚಾರ ಸ್ಥಗಿತವಾಗಿದೆ. ಜಲಾವೃತ ಪ್ರದೇಶದಿಂದ 2 ಕಿ.ಮೀ. ಮೊದಲೇ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದೆ. ಮಹಾರಾಷ್ಟ್ರದ ಕೊಗನೊಳ್ಳಿ ಚೆಕ್‌ಪೋಸ್ಟ್ ಬಳಿ ರಸ್ತೆ ಬಂದ್ ಆಗಿದ್ದು ಭಾರಿ ಮಳೆ, ರಸ್ತೆ ಜಲಾವೃತದಿಂದ ವಾಹನ ಸವಾರರು ಪರದಾಡುವಂತಾಗಿದೆ.

ಜಲಾವೃತ ಸ್ಥಳಕ್ಕೆ SP ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಬ್ಯಾರಿಕೇಡ್ ಹಾಕಿ ರಾ.ಹೆ.4 ಬಂದ್ ಮಾಡಿದ್ದೇವೆ. ನೀರಿನಲ್ಲಿ ಸಿಲುಕಿದ್ದ 11 ಜನರನ್ನು ರಕ್ಷಣೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 13 ಸೇತುವೆಗಳು ಮುಳುಗಡೆಯಾಗಿವೆ. ಸೇತುವೆಗಳ ಬಳಿ ಬ್ಯಾರಿಕೇಡ್ ಹಾಕಿ‌ ಪೊಲೀಸರ ನಿಯೋಜನೆ ಮಾಡಲಾಗಿದೆ. ಎಲ್ಲಾ ಕಡೆ ಪೊಲೀಸರಿದ್ದು ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಯಮಗರಣಿ ಗ್ರಾಮದ ಬಳಿ SP ಲಕ್ಷ್ಮಣ ನಿಂಬರಗಿ ಹೇಳಿದ್ರು.

ಬೆಳಗಾವಿ ನಗರದಲ್ಲಿ ಮಳೆಯ ಆರ್ಭಟದಿಂದ ಶಿವಾಜಿ ನಗರದಲ್ಲಿ 20ಕ್ಕೂ ಹೆಚ್ಚು ಮನೆಗೆ ನೀರು ನುಗ್ಗಿದೆ. ಮಧ್ಯರಾತ್ರಿಯೇ ಮನೆ ಖಾಲಿ ಮಾಡಿ ಕೆಲವರು ತೆರಳಿದ್ದಾರೆ. ಪ್ರತಿ ವರ್ಷ ಮಳೆ ಬಂದಾಗ ಮನೆಗಳಿಗೆ ನೀರು ನುಗ್ಗುತ್ತೆ. ಎಷ್ಟು ಬಾರಿ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ ಎಂದು ಬೆಳಗಾವಿ ಜಿಲ್ಲಾಡಳಿತದ ವಿರುದ್ಧ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಬೆಳೆ ನೀರು ಪಾಲು.. ರೈತ ಫುಲ್ ಕಂಗಾಲು
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ರೈತರ ಜಮೀನು ಕೆರೆಯಂತೆ ಆಗಿದೆ. ಇಷ್ಟೇ ಅಲ್ಲ, ಚಿಂಚೋಳಿ, ಕಾಳಗಿ, ಸೇಡಂ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಇಂಥದ್ಧೇ ಸ್ಥಿತಿ ಇದೆ ನಿರ್ಮಾಣವಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಪ್ರವಾಸಕ್ಕೆ ಬಂದಿದ್ದ ಆರು ಮಂದಿ ಯುವಕರು ನಾಪತ್ತೆ..!
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಶಿರ್ಲೆಗೆ ಹುಬ್ಬಳ್ಳಿಯಿಂದ 6 ಮಂದಿ ಯುವಕರು ಮೂರು ಡಿಯೋ ಬೈಕ್ಗಳಲ್ಲಿ ಆಗಮಿಸಿದ್ರು. ಅರಣ್ಯ ಇಲಾಖೆ ಸಿಬ್ಬಂದಿ ಫಾಲ್ಸ್‌ ಬಳಿ ಬಿಡೋದಿಲ್ಲ ಅಂದ್ರೂ ಯುವಕರು ಗಲಾಟೆ ಮಾಡಿ ಫಾಲ್ಸ್ ಬಳಿ ಹೋಗಿದ್ರು. ಆದ್ರೀಗ, ಬೈಕ್ಗಳು ಮಾತ್ರ ಫಾಲ್ಸ್ ದಾರಿಯಲ್ಲಿ ಸಿಕ್ಕಿದ್ರೆ, ಪ್ರವಾಸಿಗರು ನಾಪತ್ತೆ ಆಗಿದ್ದಾರೆ. ಯುವಕರು ಫಾಲ್ಸ್ ಬಳಿ ಸಿಲುಕಿರುವ ಸಾಧ್ಯತೆ ಇದೆ.

ಮತ್ತೊಂದ್ಕಡೆ, ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗುತ್ತಲೇ ಇದೆ. ಇದ್ರಿಂದ ಕಾಳಿ ನದಿಗೆ ನಿರ್ಮಿಸಲಾಗಿದ್ದ ಕದ್ರಾ ಮತ್ತು ಕೊಡಸಳ್ಳಿ ಜಲಾಶಗಳು ಭರ್ತಿಯಾಗುವ ಹಂತಕ್ಕೆ ತಲುಪಿದೆ. ಹೀಗಾಗಿ ಕೊಡಸಳ್ಳಿ ಜಲಾಶಯದ 4 ಗೇಟ್‌ಗಳ ಮೂಲಕ 22,393 ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ಮತ್ತೊಂದ್ಕಡೆ, ಕದ್ರಾ ಜಲಾಶಯದಿಂದ ಒಟ್ಟು 8 ಗೇಟ್ಗಳ ಮೂಲಕ 42,175 ಕ್ಯೂಸೆಕ್ ನೀರನ್ನು ಕಾಳಿ ನದಿಗೆ ಬಿಡಲಾಗಿದೆ. ಪರಿಣಾಮ ಕಾಳಿ ನದಿ ತೀರದ ಮಲ್ಲಾಪುರ ಚರ್ಚ್ ವಾಡ, ಕದ್ರಾ, ಮಹಮ್ಮಾಯಿ ದೇವಸ್ಥಾನ ವ್ಯಾಪ್ತಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ವರುಣನ ಅಬ್ಬರ.. ಸೇತುವೆ ಜಲಾವೃತ
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ವರುಣ ಅಬ್ಬರಿಸಿದ್ದು, ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಇಷ್ಟೇ ಅಲ್ಲ, ಸೇತುವೆ ಜಲಾವೃತಗೊಂಡಿದ್ರಿಂದ ಕಳಸ ಹಾಗೂ ಹೊರನಾಡು ಗ್ರಾಮದ ಸಂಪರ್ಕ ಕಡಿತಗೊಂಡಿದೆ.

ಇತ್ತ, ಹಳ್ಳದ ನೀರಿನ ರಭಸಕ್ಕೆ ಚಿಕ್ಕಮಗಳೂರಿನ ಅಬ್ಬುಗೂಡಿಗೆ ಹಾಗೂ ಕಲ್ಲುಗೋಡು ಗ್ರಾಮಗಳ ನಡುವೆ ಇದ್ದ ಕಿರು ಸೇತುವೆ ಕೊಚ್ಚಿ ಹೋಗಿದೆ. ಮುಳ್ಳಯ್ಯನಗಿರಿ, ಕೆಮ್ಮಣ್ಣಗುಂಡಿ ಭಾಗದಲ್ಲಿ ವರುಣನ ಆರ್ಭಟಿಸುತ್ತಲೇ ಇದ್ದು, ಕಲ್ಲತ್ತಗಿರಿ ಫಾಲ್ಸ್ ಧಮ್ಮಿಕ್ಕುತ್ತಿದೆ

ಕೊಡಗಿನಲ್ಲಿ 4ದಿನ ಭಾರಿ ಮಳೆ ಸಾಧ್ಯತೆ
ವರುಣನ ಪ್ರತಾಕ್ಕೆ ಕೊಡಗು ನಡುಗಿ ಹೋಗಿದೆ. ಪ್ರತಿದಿನವೂ ಮಳೆಯಿಂದ ಅವಾಂತರ ಸಂಭವಿಸ್ತಿದೆ. ಸುಂಟಿಕೊಪ್ಪ ಸೇರಿದಂತೆ 50 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಮರಗಳು ಉರುಳಿ ವಿದ್ಯುತ್ ಕಂಬಗಳು ಹಾನಿಗೊಂಡಿವೆ. ಇಷ್ಟೇ ಅಲ್ಲ, ನಾಲ್ಕು ದಿನ ಕೊಡಗಿನಲ್ಲಿ ಭಾರಿ ಮಳೆ ಸಾಧ್ಯತೆ ಇದ್ದು, ಶನಿವಾರ ಮತ್ತು ಭಾನುವಾರ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಕೊಡಗಿನಲ್ಲಿ 24 ಗಂಟೆಗಳಲ್ಲಿ 175 ಮಿ.ಮೀ.ಗೂ ಹೆಚ್ಚು ಮಳೆ ದಾಖಲಾಗಿದ್ದು ಅಪಾಯಕಾರಿ ಉದಯಗಿರಿಯಲ್ಲಿ 7 ಕುಟುಂಬಗಳು ವಾಸಿಸುತ್ತಿವೆ. 2018ರಲ್ಲಿ ಭೂಕುಸಿತಕ್ಕೆ ತತ್ತರಿಸಿದ್ದ ಉದಯಗಿರಿ ಗ್ರಾಮ. ಗ್ರಾಮದ ಪ್ರಪಾತದಲ್ಲೇ ಇನ್ನೂ ನೆಲೆಸಿರುವ 7 ಕುಟುಂಬಗಳು. ಭೂಕುಸಿತವಾಗಿದ್ದ ಸ್ಥಳದಲ್ಲಿ 3 ದಿನಗಳ ಹಿಂದೆ 15 ಅಡಿ ಆಳದ ಕೆರೆ ಇದ್ದಕ್ಕಿದ್ದಂತೆ ಸೃಷ್ಟಿಯಾಗಿತ್ತು. ಕೆರೆಯಿಂದ ಕೆಲವೇ ಮೀಟರ್ ದೂರದಲ್ಲಿ ಮನೆಗಳಿವೆ. ಅಪಾಯವಿದ್ದರೂ ಮನೆ ಖಾಲಿ ಮಾಡಿ ಕುಟುಂಬಗಳು ತೆರಳುತ್ತಿಲ್ಲವೆ. ಗ್ರಾಮಸ್ಥರ ಸ್ಥಳಾಂತರಕ್ಕೆ ಜಿಲ್ಲಾಡಳಿತ ಇನ್ನೂ ಕ್ರಮಕೈಗೊಂಡಿಲ್ಲ.

ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಅದರಲ್ಲೂ ಧಾರವಾಡ ಜಿಲ್ಲೆಯಲ್ಲಿ ನಿನ್ನೆ ನಿರಂತರವಾಗಿ ಮಳೆ ಸುರಿದಿದ್ದು, ಜನರ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಇಷ್ಟೇ ಅಲ್ಲ, ಇನ್ನೂ ಎರಡು ದಿನ ವರುಣ ಆರ್ಭಟಿಸಲ್ಲಿದ್ದಾನೆ ಅಂತಾ ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ. ವರುಣನ ಪ್ರತಾಪಕ್ಕೆ ರಾಜ್ಯದ ಮೂಲೆ ಮೂಲೆಯಲ್ಲೂ ಅವಾಂತರ ಸೃಷ್ಟಿಯಾಗುತ್ತಿದೆ. ಜನ ಜೀವನ ಅಸ್ತವ್ಯಸ್ತವಾಗುತ್ತಿದೆ. ರೈತರಂತೂ ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ.

ಇದನ್ನೂ ಓದಿ: Karnataka Rain: ಉತ್ತರ ಕನ್ನಡದಲ್ಲಿ ಕುಂಭದ್ರೋಣ ಮಳೆ: ಗಂಗಾವಳಿ ನದಿ ತಟದಲ್ಲಿ ಪ್ರವಾಹ ಭೀತಿ; ಅಲ್ಲಲ್ಲಿ ಭೂಕುಸಿತ