ಕರ್ನಾಟಕ ವಿಶ್ವವಿದ್ಯಾಲಯದ ಮೆರುಗನ್ನು ಹೆಚ್ಚಿಸಲಿದೆಯಾ 300 ಕೆಜಿ ತೂಕದ ತಿಮಿಂಗಿಲದ ಅಸ್ಥಿಪಂಜರ?
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿ 1970ರಲ್ಲಿ ಬೃಹತ್ ಗಾತ್ರದ ತಿಮಿಂಗಿಲು ಪತ್ತೆಯಾಗಿತ್ತು. 30 ಅಡಿ ಉದ್ದದ, ಸುಮಾರು 300 ಕೆಜಿ ತೂಕದ ಈ ಅಸ್ಥಿಪಂಜರವನ್ನು ಕಾರವಾರದ ಮತ್ಸಾಲಯದ ಗ್ಯಾಲರಿಯಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿತ್ತು. ಆದರೆ ಕಳೆದ ಹಲವು ತಿಂಗಳಿಂದ ಅದರ ನಿರ್ವಹಣೆ ಸರಿಯಾಗಿ ಆಗದೇ ಧೂಳು ಹಿಡಿಯುತ್ತಿದೆ.
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಆವರಣದ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತೊಂದು ಆಕರ್ಷಣೆಗೆ ಕಾರಣವಾಗುವ ಸಾಧ್ಯತೆ ಇದೆ. ಈ ಕೇಂದ್ರ ಅದಾಗಲೇ ವಿವಿಧ ವಿಸ್ಮಯಕಾರಿ ವಸ್ತುಗಳ ಪ್ರದರ್ಶನದ ಮೂಲಕ ಪ್ರಸಿದ್ಧಿಯಾಗಿದೆ. ಈಗ ಕೇಂದ್ರ ಮತ್ತೊಂದು ವಿಶಿಷ್ಟ ರೀತಿಯ ಅತಿಥಿಯನ್ನು ತರಲು ಮುಂದಾಗಿದ್ದು, ಅದಕ್ಕಾಗಿ ಉತ್ತರ ಕನ್ನಡ ಜಿಲ್ಲಾಡಳಿತದ ಅನುಮತಿಗಾಗಿ ಕಾಯುತ್ತಿದೆ.
ಕರ್ನಾಟಕ ವಿಶ್ವವಿದ್ಯಾಲಯದ ಪ್ರಾದೇಶಿಕ ವಿಜ್ಞಾನ ಕೇಂದ್ರ ತನ್ನಲ್ಲಿರುವ ಬಗೆ ಬಗೆಯ ವಿಜ್ಞಾನ ಕೇಂದ್ರ ವಸ್ತುಗಳ ಸಂಗ್ರಹಾಲಯದಿಂದ ಉತ್ತರ ಕರ್ನಾಟಕದಲ್ಲಿಯೇ ಹೆಸರು ಪಡೆದಿದೆ. ಇದೀಗ ಈ ಕೇಂದ್ರಕ್ಕೆ ಮತ್ತೊಂದು ವಸ್ತು ಆಗಮಿಸುವ ಸಾಧ್ಯತೆ ಇದೆ. ಅದೆ ತಿಮಿಂಗಲದ ಅಸ್ಥಿಪಂಜರ. ಈಗಾಗಲೇ ವಿಜ್ಞಾನ ಕೇಂದ್ರದಲ್ಲಿ ಯುದ್ಧದಲ್ಲಿ ಬಳಕೆಯಾದ ಏರ್ ಫೋರ್ಸ್ನ ಜೆಟ್ ಹಾಗೂ ಭೂಸೇನೆಯ ಟ್ಯಾಂಕರ್ಗಳನ್ನು ಪಡೆದು ಪ್ರದರ್ಶನಕ್ಕೆ ಇಡಲಾಗಿದೆ. ಇವು ಈಗ ವಿಜ್ಞಾನ ಕೇಂದ್ರದ ಬಹುದೊಡ್ಡ ಆಕರ್ಷಣೆಯಾಗಿವೆ. ಇವುಗಳ ಸಾಲಿಗೆ ಕಾರವಾರದಲ್ಲಿರುವ ತಿಮಿಂಗಲದ ಅಸ್ಥಿಪಂಜರ ಸೇರುವ ಸಾಧ್ಯತೆಯಿದೆ. ವಿಜ್ಞಾನ ಕೇಂದ್ರ ನಿರ್ದೇಶಕ ಡಾ.ವೀರಣ್ಣ ಬೋಳಿಶೆಟ್ಟಿ ಉತ್ತರ ಕನ್ನಡದ ಜಿಲ್ಲಾಧಿಕಾರಿಗೆ ಪತ್ರ ಬರೆದು ತಿಮಿಂಗಿಲದ ಅಸ್ಥಿಪಂಜರ ಹಸ್ತಾಂತರ ಮಾಡುವಂತೆ ಕೋರಿದ್ದಾರೆ.
300 ಕೆಜಿ ತೂಕದ ಅಸ್ಥಿಪಂಜರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿ 1970ರಲ್ಲಿ ಬೃಹತ್ ಗಾತ್ರದ ತಿಮಿಂಗಿಲು ಪತ್ತೆಯಾಗಿತ್ತು. 30 ಅಡಿ ಉದ್ದದ, ಸುಮಾರು 300 ಕೆಜಿ ತೂಕದ ಈ ಅಸ್ಥಿಪಂಜರವನ್ನು ಕಾರವಾರದ ಮತ್ಸಾಲಯದ ಗ್ಯಾಲರಿಯಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿತ್ತು. ಆದರೆ ಕಳೆದ ಹಲವು ತಿಂಗಳಿಂದ ಅದರ ನಿರ್ವಹಣೆ ಸರಿಯಾಗಿ ಆಗದೇ ಧೂಳು ಹಿಡಿಯುತ್ತಿದೆ. ಇತ್ತೀಚಿಗೆ ವಿಜ್ಞಾನ ಕೇಂದ್ರದ ಸಿಬ್ಬಂದಿ ಅಲ್ಲಿಗೆ ಹೋದಾಗ ಅದು ಕಣ್ಣಿಗೆ ಬಿದ್ದಿದೆ. ಗಮನಿಸಿದ ಅಧಿಕಾರಿಗಳು ಈ ವಿಜ್ಞಾನ ಕೇಂದ್ರಕ್ಕೆ ಅದನ್ನು ತರಲು ನಿರ್ಧರಿಸಿದ್ದಾರೆ. ಏಕೆಂದರೆ ಈ ವಿಜ್ಞಾನ ಕೇಂದ್ರ ಸುಮಾರು 22 ಎಕರೆ ಪ್ರದೇಶದಲ್ಲಿದ್ದು, ಕೇಂದ್ರ ಸರಕಾರದ ಸಂಸ್ಕೃತಿ ಮಂತ್ರಾಲಯ ಮತ್ತು ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ನಿರ್ಮಾಣವಾಗಿದೆ. ಈ ವಿಜ್ಞಾನ ಕೇಂದ್ರವು 18 ಜಿಲ್ಲೆಗಳ ಕಾರ್ಯ ವ್ಯಾಪ್ತಿಯನ್ನು ಹೊಂದಿರುತ್ತದೆ. ಇದರಿಂದ ಪ್ರತಿವರ್ಷ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು, ಸಾರ್ವಜನಿಕರು ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡುತ್ತಾರೆ. ಇಲ್ಲಿ ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ ಪರಂಪರೆ, ತ್ರೀ ಆಯಾಮದ ಚಿತ್ರಮಂದಿರ, ತಾರಾಮಂಡಲ, ಹವಾನಿಯಂತ್ರಿತ ಸಭಾಂಗಣ, ವಿಜ್ಞಾನ ಉದ್ಯಾನವನ, ಡೈನೋಸಾರ್ ಪಾರ್ಕ್, ಮೋಜಿನ ವಿಜ್ಞಾನ ಹೀಗೆ 350ಕ್ಕೂ ಹೆಚ್ಚು ಪ್ರದರ್ಶಿಕೆಗಳನ್ನು ಅಳವಡಿಸಲಾಗಿದೆ. ಆದ್ದರಿಂದ ಕಾರವಾರದಲ್ಲಿನ 50 ವರ್ಷದ ಹಿಂದನ ಬೃಹತ್ ಗಾತ್ರದ ತಿಮಿಂಗಿಲದ ಅಸ್ಥಿಪಂಜರವನ್ನು ಹಸ್ತಾಂತರ ಮಾಡಿದರೆ ವಿಜ್ಞಾನ ಕೇಂದ್ರಕ್ಕೆ ಮತ್ತಷ್ಟು ಮೆರುಗು ಬರಲಿದೆ ಎನ್ನುವುದು ಕೇಂದ್ರದ ಅಧಿಕಾರಿಗಳ ಅಭಿಪ್ರಾಯ.
ವಿದ್ಯಾರ್ಥಿಗಳಿಗೆ ಅನುಕೂಲ ಅಸ್ಥಿಪಂಜರವನ್ನು ಕರ್ನಾಟಕ ವಿಶ್ವವಿದ್ಯಾಲಯದ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ತಂದರೆ ಜಲಚರ ಪ್ರಾಣಿಗಳ ಅಧ್ಯಯನಕ್ಕೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇದರ ತಲೆ ಹಾಗೂ ದೇಹದ ಭಾಗಗಳ ಬಗ್ಗೆ ಅಧ್ಯಯನ ಮಾಡಲು ಮತ್ತು ಮಾರ್ಗದರ್ಶನ ನೀಡಲು ಶಿಕ್ಷಕರಿಗೆ ಸಹಾಯಕವಾಗಲಿದೆ. ಇದನ್ನು ಹಸ್ತಾಂತರ ಮಾಡಿದರೆ ಪ್ರಾದೇಶಿಕ ವಿಜ್ಞಾನ ಕೇಂದ್ರ ದೊಡ್ಡ ಹಾಲ್ನಲ್ಲಿ ನೇತು ಹಾಕಲು ನಿರ್ಧರಿಸಲಾಗಿದೆ. ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾರವಾರದ ಸಾಗರೋತ್ತರ ಅಧ್ಯಯನ ಪೀಠದಲ್ಲಿ ಈಗಾಗಲೇ ಒಂದು ತಿಮಿಂಗಿಲದ ಅಸ್ಥಿಪಂಜರವಿದೆ. ಹೀಗಾಗಿ ಕಾರವಾರ ಅಕ್ವೇರಿಯಂ ಗ್ಯಾಲರಿಯ ಅಸ್ತಿ ಪಂಜರವನ್ನು ಹಸ್ತಾಂತರ ಮಾಡಿದರೆ, ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡುವ ವಿದ್ಯಾರ್ಥಿಗಳ ವೀಕ್ಷಣೆಗೆ ಅನುಕೂಲವಾಗಲಿದೆ ಎನ್ನುವುದು ವಿಜ್ಞಾನ ಕೇಂದ್ರದವರ ಕೋರಿಕೆಯಾಗಿದೆ.
ಇದನ್ನೂ ಓದಿ
ಇದು ಅಪ್ಪ – ಮಕ್ಕಳ ಜಗಳದಂತೆ, ಅದನ್ನ ಮರೆಯಬೇಕು: ನಟ ಜಗ್ಗೇಶ್
ರಾಬರ್ಟ್ ಸಿನಿಮಾದ ಸಕ್ಸಸ್ ಮೀಟ್: ಹಿಂದೆ ಮುಂದೆ ನೋಡ್ದೆ ಒಪ್ಕೊಂಡಿದ್ದಕ್ಕೆ ಫಲ ಸಿಕ್ತು ಎಂದ ಶಿವರಾಜ್ ಕೆ ಆರ್ ಪೇಟೆ
Published On - 4:05 pm, Wed, 17 March 21