ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ರೂ, ಪ್ರಯಾಣಿಕರಿಗೆ ಸಿಗುತ್ತಿಲ್ಲ ಸೇವೆ.. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆ ಎಂದ ಸಚಿವ ಲಕ್ಷ್ಮಣ ಸವದಿ

| Updated By: ಆಯೇಷಾ ಬಾನು

Updated on: Jun 21, 2021 | 11:30 AM

ಇಂದು ಬೆಳಗ್ಗೆಯಿಂದಲೇ ಬಸ್ ಸಂಚಾರ ಶುರುವಾಗಬೇಕಿತ್ತು. ಆದ್ರೆ ಮೆಜೆಸ್ಟಿಕ್‌ ಸೇರಿದಂತೆ ರಾಜ್ಯದ ಅನೇಕ ಕಡೆ ಬಸ್ ಸಂಚಾರ ವಿರಳವಾಗಿದೆ. ಆದರೆ BMTC ಬಸ್ ನಿಲ್ದಾಣಗಳ್ಲಲಿ ಜನಜಾತ್ರೆ ಕಂಡುಬಂದಿದೆ. ನಿರೀಕ್ಷೆಗೂ ಮೀರಿ ನಿಲ್ದಾಣದತ್ತ ಪ್ರಯಾಣಿಕರು ಆಗಮಿಸಿದ್ದಾರೆ. ಆದರೆ BMTC ಬಸ್‌ಗಳು ಮಾತ್ರ ನಿಗದಿಯಂತೆ ಬರ್ತಿಲ್ಲ.

ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ರೂ, ಪ್ರಯಾಣಿಕರಿಗೆ ಸಿಗುತ್ತಿಲ್ಲ ಸೇವೆ.. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆ ಎಂದ ಸಚಿವ ಲಕ್ಷ್ಮಣ ಸವದಿ
ಸಾರಿಗೆ ಸಚಿವ ಲಕ್ಷ್ಮಣ ಸವದಿ
Follow us on

ಬೆಂಗಳೂರಿಗರ ಮನೆವಾಸಕ್ಕೆ ಬಹುತೇಕ ಮುಕ್ತಿ ಸಿಕ್ಕಿದೆ. ಲಾಕ್‌ ಆಗಿದ್ದ ಬೆಂಗಳೂರು ಇಂದಿನಿಂದ ನಾರ್ಮಲ್ ಆಗಿದೆ. ಎರಡು ತಿಂಗಳಿಂದ ನಿಂತ ಕಡೆಯಲ್ಲೇ ನಿಂತಿದ್ದ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳು ಇಂದು ರಸ್ತೆಗೆ ಇಳಿದಿದ್ದು ಜನರು ಫುಲ್ ಖುಷ್ ಆಗಿ ಸಂಚಾರ ನಡೆಸಬೇಕಿತ್ತು. ಆದರೆ ಮೊದಲ ದಿನವೇ ಸಾರಿಗೆ ಇಲಾಖೆ ಪ್ರಯಾಣಿಕರಿಗೆ ನಿರಾಶೆ ಮಾಡಿದೆ. ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ರೂ, ಪ್ರಯಾಣಿಕರಿಗೆ ಬಸ್ ಸೇವೆ ಸಿಗುತ್ತಿಲ್ಲ.

ಇಂದು ಬೆಳಗ್ಗೆಯಿಂದಲೇ ಬಸ್ ಸಂಚಾರ ಶುರುವಾಗಬೇಕಿತ್ತು. ಆದ್ರೆ ಮೆಜೆಸ್ಟಿಕ್‌ ಸೇರಿದಂತೆ ರಾಜ್ಯದ ಅನೇಕ ಕಡೆ ಬಸ್ ಸಂಚಾರ ವಿರಳವಾಗಿದೆ. ಆದರೆ BMTC ಬಸ್ ನಿಲ್ದಾಣಗಳ್ಲಲಿ ಜನಜಾತ್ರೆ ಕಂಡುಬಂದಿದೆ. ನಿರೀಕ್ಷೆಗೂ ಮೀರಿ ನಿಲ್ದಾಣದತ್ತ ಪ್ರಯಾಣಿಕರು ಆಗಮಿಸಿದ್ದಾರೆ. ಆದರೆ BMTC ಬಸ್‌ಗಳು ಮಾತ್ರ ನಿಗದಿಯಂತೆ ಬರ್ತಿಲ್ಲ. ಬೆರಳೆಣಿಕೆಯಷ್ಟು ಬಸ್‌ಗಳು ಮಾತ್ರ ಆಗಮಿಸುತ್ತಿವೆ. ಹೀಗಾಗಿ ಬಸ್ ಬರುತ್ತಿದ್ದಂತೆ ಜನರು ಮುಗಿಬೀಳುತ್ತಿದ್ದಾರೆ. ಬಸ್‌ಗಾಗಿ ಎರಡೂವರೆ ಗಂಟೆ ಕಾದಿದ್ದ ಪ್ರಯಾಣಿಕರು ವಿಧಿಯಿಲ್ಲದೆ ಆಟೋಗಳಲ್ಲಿ ತೆರಳುತ್ತಿದ್ದಾರೆ.

ಇನ್ನು ಬಸ್ ಸಂಚಾರ ಮಿಸ್ ಮಾಡಿಕೊಂಡವರು, ಕೆಲಸಕ್ಕೆ ಹೋಗುವವರು ಬೆಳಗ್ಗೆಯಿಂದಲೇ ಬಸ್ಗಾಗಿ ಕಾದು ಕಾದು ಹೈರಾಣಾಗಿದ್ದಾರೆ. ಬೆಳಗ್ಗೆಯಿಂದ ಬಿಎಂಟಿಸಿ ಬಸ್ ಇಲ್ಲದೆ ಜನ ಪರದಾಡುತ್ತಿದ್ದಾರೆ. ಪರಿಸ್ಥಿತಿ ನಿಭಾಯಿಸುವಲ್ಲಿ ಬಿಎಂಟಿಸಿ ಸಂಪೂರ್ಣ ವಿಫಲವಾಗಿದೆ. ಮತ್ತೊಂದೆಡೆ KSRTC ಬಸ್ಗಳಿದ್ದರೂ ಪ್ರಯಾಣಿಕರಿಲ್ಲ. KSRTC ಬಸ್ಗಳು ಅಂತರ್ ಜಿಲ್ಲಾ ಸಂಚಾರ ಆರಂಭಿಸಿವೆ. ಆದರೆ ಬೆಳಗ್ಗೆಯಿಂದ ಖಾಲಿ ಖಾಲಿಯಾಗಿ ಸಂಚರಿಸುತ್ತಿವೆ.

ಸಿಬ್ಬಂದಿ ಕೊರತೆಯಿಂದ ಬಿಎಂಟಿಸಿ ಸಂಚಾರದಲ್ಲಿ ವ್ಯತ್ಯಯ
ಇನ್ನು ಬಸ್ ಸಂಚಾರಕ್ಕೆ ಸರ್ಕಾರ ಕೆಲವು ಕಂಡಿಷನ್ಗಳನ್ನ ಹಾಕಿದೆ. ಮೊದಲ ಹಂತದಲ್ಲಿ ಒಂದೂವರೆ ಸಾವಿರದಿಂದ 2 ಸಾವಿರ ಬಸ್‌ಗಳನ್ನ ಓಡಿಸಲಾಗುತ್ತಿದೆ ಎಂದು ಹೇಳಲಾಗಿತ್ತು ಆದರೆ ಬೆರಳೆಣಿಕೆಯಷ್ಟು ಬಸ್‌ಗಳು ಮಾತ್ರ ಸಂಚಾರ ಮಾಡುತ್ತಿದೆ. ಬಿಎಂಟಿಸಿ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ವ್ಯಾಕ್ಸಿನ್ ಕಡ್ಡಾಯ ಮಾಡಿದ್ದು, ಎರಡು ಡೋಸ್ ವ್ಯಾಕ್ಸಿನ್ ಪಡೆದವರಿಗೆ ಮಾತ್ರ ಡ್ಯೂಟಿಗೆ ಅವಕಾಶ ನೀಡಲಾಗಿದೆ. ಇನ್ನೂ ಬಿಎಂಟಿಸಿ ಎಸಿ ವೋಲ್ವೋ ಬಸ್‌ ಸ್ಟಾರ್ಟ್ ಮಾಡದಿರಲು ನಿರ್ಧರಿಸಿರುವ ಬಿಎಂಟಿಸಿ, ಕೊರೊನಾ ಹರಡದಂತೆ ತಡೆಯಲು ಗೂಗಲ್‌ ಪೇ, ಫೋನ್ ಪೇ ಮೂಲಕ ಟಿಕೆಟ್ ನೀಡೋ ವ್ಯವಸ್ಥೆ ಮಾಡ್ತಿದೆ.

ವ್ಯಾಕ್ಸಿನ್ ಹಾಕಿಸಿಕೊಳ್ಳದವರು ಕೆಲಸಕ್ಕೆ ಹಾಜರಾಗಲು ಆಗುತ್ತಿಲ್ಲ. ಕೆಲವು ಸಿಬ್ಬಂದಿ ಒಂದು ವಾರ ಹಾಗೂ 15 ದಿನಗಳ ಹಿಂದೆಯೇ ಟೆಸ್ಟ್ ಮಾಡಿಸಿ ರಿಪೋರ್ಟ್ ತರುತ್ತಿದ್ದಾರೆ. ಹಾಗಾಗಿ ಮತ್ತೆ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿ ರಿಪೋರ್ಟ್ ತರುವಂತೆ ಡಿಪೋ ಮ್ಯಾನೇಜರ್ ಸೂಚನೆ ನೀಡಿ ಮನೆಗೆ ಕಳಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಮಧ್ಯಾಹ್ನದ ಬಳಿಕ ಎಲ್ಲ ಕಡೆ ಬಸ್ ಸಂಚಾರ ಸರಿಯಾಗುತ್ತೆ
ಬೆಂಗಳೂರಿನಲ್ಲಿ ಬೆರಳೆಣಿಕೆಯಷ್ಟು BMTC ಬಸ್ಗಳು ಸಂಚರಿಸುತ್ತಿವೆ. ಹೀಗಾಗಿ ನಗರದ ಹಲವೆಡೆ ಪ್ರಯಾಣಿಕರ ಪರದಾಡುತ್ತಿದ್ದಾರೆ. ಪ್ರಯಾಣಿಕರ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಮೊದಲ ದಿನ ಬಸ್ ಸಂಚಾರಕ್ಕೆ ಸ್ವಲ್ಪ ತೊಂದರೆಯಾಗುತ್ತೆ. ಆದರೆ ಮಧ್ಯಾಹ್ನದ ಬಳಿಕ ಎಲ್ಲ ಕಡೆ ಬಸ್ ಸಂಚಾರ ಸರಿಯಾಗುತ್ತೆ ಎಂದು ಟಿವಿ9ಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ. ನಾಳೆಯಿಂದ ಯಾವುದೇ ರೀತಿಯಾಗಿ ಸಮಸ್ಯೆ ಇರುವುದಿಲ್ಲ. ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ. ಸಾರಿಗೆ ಸಿಬ್ಬಂದಿಗೆ ಶೇಕಡಾ 90ರಷ್ಟು ಲಸಿಕೆ ನೀಡಲಾಗಿದೆ. ಲಸಿಕೆ ನೀಡುವುದಕ್ಕೆ ನೋಡಲ್ ಅಧಿಕಾರಿ ನೇಮಿಸಲಾಗಿದೆ ಎಂದರು.

ಪ್ರಯಾಣಿಕರಿಗೆ ಅನುಗುಣವಾಗಿ ಬಸ್ ಆಪರೇಟ್ ಮಾಡ್ತೇವೆ
ಅಂತಾರಾಜ್ಯ, ಬೇರೆ ಜಿಲ್ಲೆಗಳಿಂದ ಪ್ರಯಾಣಿಕರು ಬರುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಬಿಎಂಟಿಸಿಗೆ ಇಷ್ಟೊಂದು ಸಮಸ್ಯೆ ಆಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಮಾಹಿತಿ ನೀಡಿದ್ದಾರೆ. ಪ್ರಯಾಣಿಕರಿಗೆ ಅನುಗುಣವಾಗಿ ಬಸ್ ಆಪರೇಟ್ ಮಾಡ್ತೇವೆ. ಬಿಎಂಟಿಸಿ ನಿರೀಕ್ಷೆಗೂ ಮೀರಿ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಮೆಜೆಸ್ಟಿಕ್ ಸೇರಿದಂತೆ ಬಸ್ ನಿಲ್ದಾಣಗಳಲ್ಲಿ ಹೆಚ್ಚಾಗಿದ್ದಾರೆ. ಹೀಗಾಗಿ ಹಂತಹಂತವಾಗಿ ಬಸ್ಗಳ ಸಂಖ್ಯೆ ಹೆಚ್ಚಿಸುತ್ತೇವೆ. ಮೊದಲ ಪಾಳಿಗೆ 1,000 ಬಸ್ ಕಾರ್ಯಾಚರಣೆಗೆ ಪ್ಲ್ಯಾನ್ ಮಾಡಲಾಗಿದೆ. ಪ್ರಯಾಣಿಕರ ದಟ್ಟಣೆ ಹಿನ್ನೆಲೆ 1500 ಬಸ್ಗಳ ಆಪರೇಟ್ ಮಾಡಲಾಗುತ್ತೆ. ಈಗಾಗಲೇ ಬಿಎಂಟಿಸಿಯ 30 ಸಾವಿರ ಸಿಬ್ಬಂದಿಯ ಪೈಕಿ 28 ಸಾವಿರ ಸಿಬ್ಬಂದಿಗೆ 2 ಡೋಸ್ ವ್ಯಾಕ್ಸಿನ್ ಹಾಕಲಾಗಿದೆ. ಸರ್ಕಾರದ ಕಡೆಯಿಂದ ವ್ಯಾಕ್ಸಿನ್ ವ್ಯವಸ್ಥೆ ಮಾಡಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಂಟಿಸಿ ಸಂಚಾರ ವಿಭಾಗದ ಮುಖ್ಯಸ್ಥ ರಾಜೇಶ್, ನಾವು ಒಂದು ಸಾವಿರ ಬಸ್ ಆಪರೇಟ್ ಮಾಡ್ಬೇಕು ಅಂದ್ಕೊಂಡಿದ್ವಿ. ಆದರೆ ಪ್ರಯಾಣಿಕರು ಹೆಚ್ಚಿರೋ ಕಾರಣ 1500 ಬಸ್ ಬಿಟ್ಟಿದ್ದೀವಿ. ಇಂದು ಮುಂಜಾನೆ ಸಿಬ್ಬಂದಿ ರಿಪೋರ್ಟ್ ಮಾಡಿಕೊಳ್ಬೇಕು. ಅವ್ರ ಆರೋಗ್ಯ ತಪಾಸಣೆ, ಕೊರೊನಾ ಟೆಸ್ಟ್, ವ್ಯಾಕ್ಸಿನೇಷನ್‌ ಚೆಕಪ್ ಎಲ್ಲಾ ಮಾಡಿ ಕೆಲಸಕ್ಕೆ ಕರೆಸಿಕೊಳ್ಳಲಾಗುತ್ತೆ. ಹೀಗಾಗಿ ಸ್ವಲ್ಪ ವಿಳಂಬವಾಗಿದೆ. ಒಂದು ಡೋಸ್ ಲಸಿಕೆ ಆದವರಿಗೆ ನಾವು ಚಾಲನೆಗೆ ಅವಕಾಶ ಕೊಡ್ತಿಲ್ಲ. ಸಿಬ್ಬಂದಿ ಹಾಗೂ ಪ್ರಯಾಣಿಕರ ಸುರಕ್ಷತೆ ಮುಖ್ಯ. ಈಗ ಹೆಚ್ಚುವರಿ ಬಸ್ ಆಪರೇಟ್ ಮಾಡಲು ಸೂಚನೆ ಕೊಡಲಾಗಿದೆ. ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಬಸ್ ಬಿಡಲಾಗ್ತಿದೆ.

ಟ್ರೈನ್ ನಿಂದ ಬಂದ ಪ್ರಯಾಣಿಕರು ಒಮ್ಮೆಗೆ ಬಂದಿದ್ದಾರೆ. ಹೀಗಾಗಿ ಸ್ವಲ್ಪ ರಷ್ ಕ್ರಿಯೇಟ್ ಆಗಿದೆ. ನಾಳೆ ಹೀಗಾಗೋದಿಲ್ಲ, ನೈಟ್ ಹಾಲ್ಟ್ 1000 ಬಸ್ಗಳು ಇರುತ್ತವೆ. ಇವು ಬೆಳಗಿನಜಾವವೇ ಕಾರ್ಯಾಚರಣೆ ಆರಂಭಿಸುತ್ತವೆ. ಹೀಗಾಗಿ ನಾಳೆ ಯಾವುದೇ ಸಮಸ್ಯೆ ಆಗೋದಿಲ್ಲ. ಇಂದಿನ ಪರಿಸ್ಥಿತಿ ಕೆಲವೇ ಗಂಟೆಗಳಲ್ಲಿ ಸರಿಹೋಗಲಿದೆ ಎಂದರು.

ಇದನ್ನೂ ಓದಿ:Karnataka Unlock​: ಸ್ಮಾರ್ಟ್​ಕಾರ್ಡ್​ ಇದ್ದವರಿಗೆ ಮೆಟ್ರೋದಲ್ಲಿ ಅವಕಾಶ, ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ ಸಂಚಾರ ವಿರಳ