ಕಳೆದ ವಾರ ರಾಜ್ಯದ ಎರಡು ಕಡೆ ಕಿಸಾನ್ ಮಹಾ ಪಂಚಾಯತ್ ಮಾಡಿ ಕೈ ಸುಟ್ಟುಕೊಂಡಿರುವ ರಾಕೇಶ್ ಟಿಕಾಯತ್ ಅವರು ಬೆಳಗಾವಿಯಲ್ಲಿ ಮಾಡಲು ಹೊರಟಿರುವ ಮೂರನೇ ರ‍್ಯಾಲಿಗೆ ಜಿಲ್ಲಾಡಳಿತ ಒಪ್ಪಿಗೆ ನೀಡುವ ಸಾಧ್ಯತೆ ತುಂಬಾ ಕಡಿಮೆ. ಟಿಕಾಯತ್ ಮತ್ತು ಕೋಡಿಹಳ್ಳಿ ಜುಗಲ್ಬಂದಿ, ಬುಧವಾರ ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಿರುವ ಮೂರನೇ ಮಹಾ ಪಂಚಾಯತ್ಗೆ ಅನುಮತಿ ನೀಡಬೇಕೆಂದು ಕೇಳಿದ್ದರು. ರಾಜ್ಯ ಸರಕಾರದ ಉನ್ನತ ಮೂಲಗಳ ಪ್ರಕಾರ ಇಲ್ಲೀವರೆಗೂ ರಾಕೇಶ್ ಟಿಕಾಯತ್ ಅವರ ಕೋರಿಕೆಗೆ ಮನ್ನಣೆ ಸಿಕ್ಕಿಲ್ಲ. ಮೂಲಗಳ ಪ್ರಕಾರ, ರಾಜ್ಯದಲ್ಲಿ ಕೊರೊನಾ ಕೇಸುಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣಕ್ಕಾಗಿ ಒಪ್ಪಿಗೆ ಕೊಡುವ ಸಾಧ್ಯತೆ ಕಡಿಮೆ ಎಂದು ತಿಳಿಸಿದ್ದಾರೆ.
ಟಿಕಾಯತ್ ಕರ್ನಾಟಕವನ್ನು ನೆಚ್ಚಿಕೊಂಡಿದ್ದು ಏಕೆ?
ಎರಡು ತಿಂಗಳುಗಳ ಹಿಂದೆ, ರಾಕೇಶ್ ಟಿಕಾಯತ್ ಇಡೀ ದೇಶದಲ್ಲಿನ ರೈತರಿಗೆ ಕರೋ ಯಾ ಮರೋ ಅನ್ನುವ ಥರದ ಕರೆ ಕೊಟ್ಟಾಗ ಬೇರೆ ರಾಜ್ಯದ ರೈತ ಸಂಘಟನೆಗಳು ತೀವ್ರವಾಗಿ ಪ್ರತಿಕ್ರಿಯಿಸಲಿಲ್ಲ. ಆದರೆ, ಕರ್ನಾಟಕದ ರೈತ ಸಂಘಟನೆಗಳು ಧನಾತ್ಮಕವಾಗಿ ಪ್ರತಿಕ್ರಿಯಿಸಿ ದೆಹಲಿಗೆ ಒಂದು ನಿಯೋಗ ಕಳಿಸಿಕೊಡಲು ಒಪ್ಪಿಕೊಂಡರು. ಕೆಲವು ನೂರರ ಸಂಖ್ಯೆಯಲ್ಲಿದ್ದ ಕರ್ನಾಟಕದ ತಂಡ ದೆಹಲಿ ತಲುಪಿದಾಗ ಕೆಂಪು ಕಾರ್ಪೆಟ್ಟಿನ ಸ್ವಾಗತ ಕೋರಲಾಯಿತು. ದೆಹಲಿ ಗಡಿಯಲ್ಲಿ ಧರಣಿ ನಡೆಸುತ್ತಿರುವ ರೈತರನ್ನು ಉದ್ದೇಶಿಸಿ ಮಾತನಾಡಲು ಚಂದ್ರಶೇಖರ್ ಅವರಿಗೆ ಅವಕಾಶ ನೀಡಲಾಯಿತು. ಅವರ ಕನ್ನಡ ಭಾಷಣಕ್ಕೆ ಬಂದ ತಪ್ಪಾಳೆ ನೋಡಿ, ಟಿಕಾಯತ್ ಕರ್ನಾಟಕದಲ್ಲಿ ಕಿಸಾನ್ ಪಂಚಾಯತ್ ನಡೆಸಲು ಉದ್ದೇಶಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂದೇಶವೊಂದನ್ನು ಕಳಿಸಲು, ಅವರು ಶಿವಮೊಗ್ಗ ಮತ್ತು ಹಾವೇರಿಯಲ್ಲಿ ಕಿಸಾನ್ ಪಂಚಾಯತ್ ನಡೆಸಲು ನಿರ್ದಧರಿಸಿದರು. ಅದೇ ಪ್ರಕಾರ ಎರಡು ಪಂಚಾಯತ್ ನಡೆಸಿಯೇ ಬಿಟ್ಟರು. ಆದರೆ, ಈ ಎರಡು ರ‍್ಯಾಲಿಗೆ ಬಂದ ಸ್ಥಳೀಯರ ಸಂಖ್ಯೆ, ಈ ರ‍್ಯಾಲಿಯ ಮೂಲಕ ಸುತ್ತಲಿನ ಊರುಗಳ ರೈತರ ಮೇಲೆ ಆದ ಪ್ರಭಾವದ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಿದಾಗ ಕಿಸಾನ್ ಮಹಾಪಂಚಾಯತ್ ತನ್ನ ಉದ್ದೇಶ ಈಡೇರಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದರೆ ತಪ್ಪಾಗಲಾರದು.
ರ‍್ಯಾಲಿಗೆ ಬಂದವರ ಸಂಖ್ಯೆ ಮೂರು ಸಾವಿರದ ಆಸುಪಾಸಿನಲ್ಲಿತ್ತು ಮತ್ತು ಈ ಪಂಚಾಯತ್ ಸ್ಥಳೀಯ ಪತ್ರಿಕೆಗಳಲ್ಲಿ ಯಾವ ಚರ್ಚೆಯನ್ನು ಹುಟ್ಟುಹಾಕಿಲ್ಲ ಎಂಬ ವಿಚಾರವನ್ನು ಗಮನಿಸಿದರೆ ಇದು ಎಲ್ಲೋ ತನ್ನ ಗುರಿ ತಲುಪುವಲ್ಲಿ ವಿಫಲವಾಗಿತ್ತು. ಅಷ್ಟೇ ಅಲ್ಲ, ರಾಜ್ಯ ಸರಕಾರದ ಮೂಲಗಳ ಪ್ರಕಾರ, ಸ್ಥಳೀಯ ಜನ ಯಾರೂ ಈ ಕುರಿತು ಮಾತನಾಡುತ್ತಿಲ್ಲ (recall value) ಎನ್ನುವ ಮಾನದಂಡವನ್ನು ತೆಗೆದುಕೊಂಡರೆ ಟಿಕಾಯತ್ ಅವರ ಹೋರಾಟವನ್ನು ಇಡೀ ದೇಶಾದ್ಯಂತ ವ್ಯಾಪಿಸಿದ ಹೋರಾಟ ಎಂದು ಕರೆಯಬೇಕೆ ಅಥವಾ ಬರೀ ಹರ್ಯಾಣಾ-ಪಂಜಾಬ್ ರೈತರ ಹೋರಾಟ ಎಂದು ಕರೆಯಬೇಕೆ ಎಂಬ ವಿಚಾರ ಕೂಡ ಉದ್ಭವಿಸದೇ ಇರದು. ಎಮ್ಎಸ್ಪಿಯಂಥ ವಿಚಾರ ಕರ್ನಾಟಕದ ಜನರಲ್ಲಿ ಒಂದು ಚಳುವಳಿಯ ವಿಚಾರವಾಗಿ ಇಲ್ಲ. ಆದ್ದರಿಂದಲೇ ಜನ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ.
ಬೆಳಗಾವಿಯಲ್ಲಿಯೇ ಏಕೆ?
ಜನವರಿ 26ಕ್ಕಿಂತ ಮೊದಲು ಟಿಕಾಯತ್ ಮತ್ತು ಅವರ ತಂಡ ದೆಹಲಿಯಲ್ಲಿ ನಡೆಸಿದ ಹೋರಾಟದ ಸ್ವರೂಪ ಮತ್ತು ಗಣರಾಜ್ಯೋತ್ಸವದ ದಿನ ನಡೆದ ಹಿಂಸಾಚಾರದ ನಂತರ, ಪ್ರಾಯಶಃ ಇಡೀ ದೇಶವೇ ತಮ್ಮ ಮಾತನ್ನು ಕೇಳುತ್ತೆ ಎಂದು ನಂಬಿದ್ದರು ಟಿಕಾಯತ್. ಅದೇ ಪ್ರಕಾರ ಅವರು ಇತ್ತೀಚೆಗೆ ವಿಧಾನಸಬಾ ಚುನಾವಣೆ ನಡೆಯುತ್ತಿರುವ ಪಶ್ಚಿಮ ಬಂಗಾಲಕ್ಕೆ ಹೋಗಿ ಬಿಜೆಪಿ ವಿರುದ್ಧ ಕರೆ ಕೊಟ್ಟರು. ಆದರೆ, ರೈತ ಚಳುವಳಿ ವಿಧಾನಸಭಾ ಚುನಾವಣೆ ಮೇಲೆ ಯಾವ ಪ್ರಭಾವ ಬೀರುವ ಯಾವ ಲಕ್ಷಣಗಳು ಇಲ್ಲೀವರೆಗೆ ಕಾಣುತ್ತಿಲ್ಲ.
ಅದೇ ರೀತಿ, ಬೆಳಗಾವಿಯಲ್ಲಿ ಈಗ ಲೋಕಸಭಾ ಉಪಚುನಾವಣೆ ನಡೆಯುತ್ತಿದೆ. ಈಗ ಒಂದು ರ‍್ಯಾಲಿ ನಡೆಸಿದರೆ ವಿರೋಧ ಪಕ್ಷ ಕಾಂಗ್ರೆಸ್ ಕೂಡ ಬೆಂಬಲ ಸೂಚಿಸಬಹುದು. ಇದರಿಂದ ಟಿಕಾಯತ್ ಅವರ ಗುಂಪಿಗೂ ಮತ್ತು ಕಾಂಗ್ರೆಸ್ಗೂ ಅನುಕೂಲವಾಗಬಹುದು ಎಂಬ ಲೆಕ್ಕಾಚಾರದಿಂದ ಬೆಳಗಾವಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಆದರೆ, ಇನ್ನೂ ಒಪ್ಪಿಗೆ ಸಿಕ್ಕದಿರುವ ಹಿನ್ನೆಲೆಯಲ್ಲಿ ಅಲ್ಲಿ ರ‍್ಯಾಲಿ ನಡೆಯುವುದೇ ಅನುಮಾನವಾಗಿದೆ.
ಟಿಕಾಯತ್ ಅವರನ್ನು ತಮ್ಮೂರಲ್ಲಿ ಬೆಂಬಲಿಸದ ವಿರೋಧ ಪಕ್ಷಗಳು
ಟಿಕಾಯತ್ ಅವರ ಚಳುವಳಿಯ ವರದಿ ಮಾಡುವ ಮತ್ತು ಅದರ ಪ್ರಭಾವದ ಬಗ್ಗೆ ಬರೆಯುತ್ತಿರುವ ಅನೇಕ ಬುದ್ಧಿಜೀವಿಗಳು ಒಂದು ತಪ್ಪನ್ನು ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ದೆಹಲಿಯಲ್ಲಿ ನಡೆಯುತ್ತಿರುವ ಚಳುವಳಿಗೆ ಬೆಂಬಲ ಸೂಚಿಸಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಗ್ಗಾಮುಗ್ಗಾ ಬೈದ ವಿರೋಧ ಪಕ್ಷಗಳ ನಾಯಕರುಗಳು, ತಮ್ಮ ಊರಿಗೆ ಟಿಕಾಯತ್ ಬಂದಾಗ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಮೋದಿಯವರ ವಿರುದ್ಧ ಸೇಡು ತೀರಿಸಿಕೊಳ್ಳಬಹುದಿತ್ತಲ್ಲ. ಇದನ್ನು ಯಾಕೆ ಮಾಡುತ್ತಿಲ್ಲ?
ರಾಜಕೀಯ ನಾಯಕರಿಗೆ ಗೊತ್ತು, ಒಂದು ರ‍್ಯಾಲಿ ನಡೆಸುವುದು ಎಂದರೆ, ಒಂದು ಸಣ್ಣ ಕೈಗಾರಿಕೆ ಹುಟ್ಟುಹಾಕಿದಂತೆ ಎಂದು. ತನು-ಮನ-ಧನ ಎಲ್ಲ ಬೇಕು ಅಲ್ಲಿ. ಟಿಕಾಯತ್ ಅವರ ಮೇಲೆ ಸ್ಥಳೀಯ ನಾಯಕರು ಈ ರೀತಿಯ ಖರ್ಚು ಮಾಡಲು ತಯಾರಿಲ್ಲ. ಇದು ಮೊದಲನೆಯ ವಿಚಾರ. ಇನ್ನೊಂದು ಮುಖ್ಯ ವಿಚಾರವಿದೆ. ಯಾವ ಪಕ್ಷದ ನಾಯಕರೂ ತಮ್ಮ ಬೆಂಬಲಿಗರನ್ನು ಬೇರೆಯವರ ಉಡಿಗೆ ಹಾಕಲು ತಯಾರಿರುವುದಿಲ್ಲ. ಒಂದು ರ‍್ಯಾಲಿಯಿಂದ ಜನರ ನಿಷ್ಠೆಯೇನು ಬದಲಾಗದು. ಅದು ಯಾರಿಗೆ ಗೊತ್ತಿಲ್ಲ. ಆದರೆ, ಅವರ ಮನದಲ್ಲಿ ತಮ್ಮ ಸ್ಥಳೀಯ ನಾಯಕರ (poster boy) ಬಗ್ಗೆ ಅನುಮಾನ ಕಾಡುವಷ್ಟು ಟಿಕಾಯತ್ ರ‍್ಯಾಲಿ ಏನಾದರೂ ಪ್ರಭಾವ ಬೀರಿದರೆ ಸಾಕಲ್ಲ. ಅಂಥ ಅಪಾಯವನ್ನು ತಮ್ಮ ಮೈಮೇಲೆ ಎಳೆದುಕೊಳ್ಳಲು ಯಾವ ವಿರೋಧ ಪಕ್ಷದ ನಾಯಕರು ತಯಾರಿಲ್ಲ ಅಂತ ಕಾಣುತ್ತೆ. ಈ ಕಾರಣದಿಂದಲೇ ದೆಹಲಿಯ ರ‍್ಯಾಲಿಗೆ ಬಾಯಿ ಮಾತಲ್ಲಿ ಸಹಕಾರ ಕೊಟ್ಟವರು ಕರ್ನಾಟಕಕ್ಕೆ ಬಂದಾಗ ಯಾವ ತ್ಯಾಗವನ್ನೂ ಮಾಡಲಿಲ್ಲ ಎಂಬುದನ್ನು ಗಮನಿಸಬೇಕಾಗಿದೆ.
ಕೋಡಿಹಳ್ಳಿ ಯೋಜನೆ ಏನು?
ಇನ್ನೊಂದು ಅಂಶವನ್ನು ಗಮನಿಸಲೇಬೇಕು: ರಾಜ್ಯದಲ್ಲಿ ಕೋಡಿಹಳ್ಳಿ ಅವರ ರೈತ ಗುಂಪನ್ನು ಬಿಟ್ಟೂ, ಮೂರು ಪ್ರಮುಖ ರೈತ ಸಂಘಟನೆಗಳಿವೆ. ಸಿಪಿಎಮ್ ಬೆಂಬಲಿತ, ಕರ್ನಾಟಕ ಪ್ರಾಂತ್ಯ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ (ಪುಟ್ಟಣ್ಣಯ್ಯ ಗುಂಪು) ಮತ್ತು ರಾಜ್ಯ ಕಬ್ಬು ಬೆಳೆಗಾರರ ಮಹಾಸಂಘ. ಇಲ್ಲೀವರೆಗೆ ದಕ್ಷಣ ಕರ್ನಾಟಕದಲ್ಲೀ ಮಾತ್ರ ತನ್ನ ಪ್ರಭಾವವಿಟ್ಟುಕೊಂಡಿರುವ ಕೋಡಿಹಳ್ಳಿ ಅವರು, ಟಿಕಾಯತ್ ಅವರ ರ‍್ಯಾಲಿಗಳ ಮೂಲಕ ಇಡೀ ರಾಜ್ಯಕ್ಕೆ ತಮ್ಮ ಪ್ರಭಾವ ವಿಸ್ತರಿಸುವ ಹವಣಿಕೆಯಲ್ಲಿದ್ದಂತೆ ಕಾಣುತ್ತಿದೆ. ಆದರೆ, ಅವರು ಲೆಕ್ಕಾಚಾರ ಹಾಕಿದಷ್ಟು ಫಸಲು ಬರುವ ಲಕ್ಷಣ ಸದ್ಯಕ್ಕಂತೂ ಕಾಣುತ್ತಿಲ್ಲ ಎಂಬುದನ್ನು ಖಂಡಿತವಾಗಿ ಇಲ್ಲಿ ಹೇಳಬಹುದಾಗಿದೆ.
ಇದನ್ನೂ ಓದಿ: ರೈತ ಹೋರಾಟ ಡಿಸೆಂಬರ್ವರೆಗೂ ಮುಂದುವರಿಯಬಹುದು: ರೈತ ಮುಖಂಡ ರಾಕೇಶ್ ಟಿಕಾಯತ್
Published On - 6:57 pm, Mon, 29 March 21