ಕೊಡಗಿನಲ್ಲಿ ಅರಣ್ಯ ವಾಸಿಗಳ ಕೊರೊನಾ ಕಾಳಜಿ; ಮರದ ಎಲೆಯೇ ಮಾಸ್ಕ್, ತೊಗಟೆ ರಸವೇ ಸ್ಯಾನಿಟೈಜರ್
ರೋಗನಿರೋಧಕ ಶಕ್ತಿ ಹೆಚ್ಚಿಕೊಳ್ಳಲು ಕಾಡು ಶುಂಠಿ, ಕಾಡು ಅರಶಿಣ, ಕಾಳು ಮೆಣಸು, ಗಾಂಧಾರಿ ಮೆಣಸು, ಕೆಂಜುಲ ಬಳ್ಳಿಯ ಸುಳಿ, ಚಿಟ್ಟಿಕಾಯಿ ಗೋಲಿಯ ಸುಳಿ ಹೀಗೆ ಹಲವು ಗಿಡಮೂಲಿಕೆಗಳಿಂದ ರಸ ತೆಗೆದು ಕಷಾಯ ಕುಡಿಯುತ್ತಾರೆ. ಜೊತೆಗೆ ಕಾಡಿನಲ್ಲಿ ತಾವೇ ತೆಗೆದ ಜೇನನ್ನು ಯಥೇಚ್ಛವಾಗಿ ಸೇವಿಸುತ್ತೇವೆ ಎಂದು ಹಾಡಿ ವಾಸಿ ಜೆಕೆ ತಿಮ್ಮ ಹೇಳಿದ್ದಾರೆ.

ಮಡಿಕೇರಿ: ಕಾಡಿನೊಳಗೆ ವಾಸಿಸುತ್ತಿರುವ ಆದಿವಾಸಿ ಮತ್ತು ಬುಡಕಟ್ಟು ಜನರು ತಮ್ಮದೇ ಆದ ನೈಸರ್ಗಿಕ ಜೀವನ ಶೈಲಿಯನ್ನು ಹೊಂದಿರುತ್ತಾರೆ. ಎಷ್ಟೇ ಆಧುನಿಕತೆ ಬಂದರೂ ಇವರು ಮಾತ್ರ ಅರಣ್ಯದ ನಂಟಿನಿಂದ ಹೊರಬಂದಿಲ್ಲ. ಇದೀಗ ಕೊರೊನಾ ತೀವ್ರತೆಯ ಸಮಯ. ಲಸಿಕೆ, ಮಾಸ್ಕ್, ಸ್ಯಾನಿಟೈಜರ್ ಬಳಸಲೇ ಬೇಕು. ಆದರೆ ಕೊವಿಡ್ನಿಂದ ರಕ್ಷಣೆ ಪಡೆದುಕೊಳ್ಳಲು ಇಲ್ಲಿನ ಜನ ನೈಸರ್ಗಿಕ ಔಷಧಿಗಳ ಮೊರೆಹೋಗಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ನಾಗರಹೊಳೆ ವ್ಯಾಪ್ತಿಯ ಹಾಡಿಗಳ ಜನರು ಇಂತಹ ಒಂದು ನೈಸರ್ಗಿಕ ರಕ್ಷಣಾ ವಿಧಾನವನ್ನು ಕಂಡುಕೊಂಡಿದ್ದಾರೆ. ನಾಗರಹೊಳೆಯ ತುಂಡು ಮುಂಡಗಿ ಕೊಲ್ಲಿ, ಗದ್ದೆಹಾಡಿ, ಬಾಳೆಕೋವು ಹಾಡಿ, ನಾಣಚ್ಚಿಗದ್ದೆ ಹಾಡಿ, ಕೊಳಂಗೇರಿ ಹಾಡಿ, ಕರಡಿಕಲ್ಲು ಹಾಡಿಗಳಲ್ಲಿ ಆದಿವಾಸಿಗಳು ತಾವೇ ಸ್ವತಃ ಎಲೆಗಳಿಂದ ಮಾಸ್ಕ್, ಗಿಡಮೂಲಿಕೆಗಳಿಂದ ಸ್ಯಾನಿಟೈಜರ್ ಮತ್ತು ಗಿಡಮೂಲಿಕೆಗಳಿಂದಲೇ ಕಷಾಯ ತಯಾರಿಸಿ ಕುಡಿಯುತ್ತಿದ್ದಾರೆ.
ತಮ್ಮ ದಿನಚರಿಯ ಎಲ್ಲಾ ಅಗತ್ಯತೆಗಳಿಗೆ ಅರಣ್ಯ ಉತ್ಪನ್ನಗಳನ್ನೇ ನೆಚ್ಚಿಕೊಂಡಿರುವ ಈ ಮಂದಿ ಇದೀಗ ಮಾಸ್ಕ್ ಅನ್ನು ಕೂಡ ಮರದ ಎಲೆಯಿಂದಲೇ ತಯಾರಿಸುತ್ತಾರೆ. ಮುತ್ತುಗದ ಮರದ ಎಲೆ ಅಗಲವಾಗಿ ಗಟ್ಟಿಮುಟ್ಟಾಗಿರುತ್ತದೆ. ಇದನ್ನ ಕೊಯ್ದು ಬಳ್ಳಿ ಬಳಸಿ ಮಾಸ್ಕ್ ತಯಾರಿಸಿದ್ದಾರೆ. ಸಾಮಾನ್ಯವಾಗಿ ಈ ಎಲೆಗಳನ್ನ ಕಡ್ಡಿಗಳಲ್ಲಿ ಪೋಣಿಸಿ ಊಟದ ತಟ್ಟೆಯಾಗಿಯೂ ಬಳಸ್ತಾರೆ. ಹಾಗಾಗಿ ಇದೇ ಎಲೆ ಇದೀಗ ಮಾಸ್ಕ್ ಆಗಿಯೂ ಬಳಕೆಯಾಗುತ್ತಿದೆ. ಇನ್ನು ಸ್ಯಾನಿಟೈಜರ್ ಅನ್ನು ಕೂಡ ಮರದ ತೊಗಟೆ ರಸದಿಂದಲೇ ತಯಾರಿಸುತ್ತಿದ್ದಾರೆ. ಕಕ್ಕೆ ಮರದ ತೊಗಟೆ, ಹೊಂಗೆ ಮರದ ತೊಗಟೆ ಹಾಗೂ ಇನ್ನಿತರ ಗಿಡಮೂಲಿಕೆಗಳ ರಸ ತೆಗೆದು ಸ್ಯಾನಿಟೈಜರ್ ತಯಾರಿಸಿದ್ದಾರೆ. ಅಲ್ಲಿ ಇಲ್ಲಿ ಹೋಗಿ ಬಂದ ಬಳಿಕ ಅದನ್ನ ಕೈಗೆ ಲೇಪಿಸಿಕೊಳ್ಳುವ ಮೂಲಕ ಆರೋಗ್ಯದ ಕಾಳಜಿ ವಹಿಸುತ್ತಿದ್ದಾರೆ.
ಗಿಡಮೂಲಿಕೆಗಳಿಂದ ಕಷಾಯ ತಯಾರಿಕೆ ಕಾಡಿನ ಮಕ್ಕಳು ತಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಕೊಳ್ಳಲು ಯಾವುದೇ ಆಧುನಿಕ ಮಾತ್ರೆಗಳನ್ನು ಅವಲಂಬಿಸಿಲ್ಲ. ವಿಟಮಿನ್ ಸಿ, ವಿಟಮಿನ್ ಬಿ, ಅಂತೆಲ್ಲಾ ನಗರದ ಜನರು ಸೇವಿಸುವ ಮಾತ್ರೆಗಳೆಲ್ಲ ಇಲ್ಲಿ ಇಲ್ಲ. ಆದರೆ ಈ ಕಾಡಿನ ಮಕ್ಕಳು ಮಾತ್ರ ವಿಟಮಿನ್ ಹೆಚ್ಚಿಸಿಕೊಳ್ಳಲು ಮಾತ್ರೆಗಳನ್ನು ಮುಟ್ಟದೆ ನೈಸರ್ಗಿಕ ವಿಧಾನವನ್ನೇ ಬಳಸ್ತಾರೆ. ವಿಟಮಿನ್ ಸಿ ಹೆಚ್ಚಿಸಿಕೊಳ್ಳಲು, ನಿಂಬೆ, ಕಿತ್ತಳೆ, ಚಕ್ಕೋತ ಮತ್ತು ಹುಳಿಭರಿತ ಕಾಡು ಹಣ್ಣುಗಳನ್ನು ಸೇವಿಸುತ್ತಿದ್ದಾರೆ.
ರೋಗನಿರೋಧಕ ಶಕ್ತಿ ಹೆಚ್ಚಿಕೊಳ್ಳಲು ಕಾಡು ಶುಂಠಿ, ಕಾಡು ಅರಶಿಣ, ಕಾಳು ಮೆಣಸು, ಗಾಂಧಾರಿ ಮೆಣಸು, ಕೆಂಜುಲ ಬಳ್ಳಿಯ ಸುಳಿ, ಚಿಟ್ಟಿಕಾಯಿ ಗೋಲಿಯ ಸುಳಿ ಹೀಗೆ ಹಲವು ಗಿಡಮೂಲಿಕೆಗಳಿಂದ ರಸ ತೆಗೆದು ಕಷಾಯ ಕುಡಿಯುತ್ತಾರೆ. ಜೊತೆಗೆ ಕಾಡಿನಲ್ಲಿ ತಾವೇ ತೆಗೆದ ಜೇನನ್ನು ಯಥೇಚ್ಛವಾಗಿ ಸೇವಿಸುತ್ತೇವೆ ಎಂದು ಹಾಡಿ ವಾಸಿ ಜೆಕೆ ತಿಮ್ಮ ಹೇಳಿದ್ದಾರೆ.
ಹಾಡಿಗಳತ್ತ ಸುಳಿದಿಲ್ಲ ಕೊರೊನಾ ಕಾಡಿನ ಮಕ್ಕಳು ತಾವೇ ನೈಸರ್ಗಿಕ ವಿಧಾನ ಅನುಕರಣೆ ಮಾಡುತ್ತಾ ಇರುವುದರಿಂದಲೋ ಏನೋ, ಇವರ ಹಾಡಿಗಳತ್ತ ಕೊರೊನಾ ಸುಳಿದಿಲ್ಲ ಎಂದು ಹಾಡಿನ ಮುಖಂಡರಾದ ಜೆಕೆ ಶಿವು ತಿಳಿಸಿದ್ದಾರೆ. ಇವರಂತೆ ಕಾಡಿನಲ್ಲೇ ಇರುವ ಅರಣ್ಯ ಇಲಾಖೆಯ ಹಲವು ಸಿಬ್ಬಂದಿಗೆ ಕೊರೊನಾ ಬಾಧಿಸಿದೆ. ಆದರೆ ಆದಿವಾಸಿಗಳು ಇನ್ನೂ ಕೊರೊನಾ ಬಾಧೆಯಿಂದ ದೂರವೇ ಉಳಿದಿದ್ದಾರೆ. ತಮ್ಮ ಹಾಡಿಗಳಿಗೆ ಹೊರ ಜನರು ಬಾರದಂತೆಯೂ ಇವರು ನಿರ್ಬಂಧ ವಿಧಿಸಿದ್ದಾರೆ. ಹೀಗೆ ಕಾಡಿನ ಜನರು ಕೊರೊನಾ ವಿರುದ್ಧದ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ರೀತಿ ನಿಜಕ್ಕೂ ಶ್ಲಾಘನೀಯ.
ಇದನ್ನೂ ಓದಿ:
ವಿಜ್ಞಾನಿಗಳ ಕೈಯಲ್ಲಿ ಆಗದ್ದನ್ನ ಸಾಧಿಸಿ ತೋರಿಸಿದ ಚಾಮರಾಜನಗರ ಬುಡಕಟ್ಟು ಜನರು
ಕೋಟೆನಾಡಿನಲ್ಲಿ ಬುಡಕಟ್ಟು ಸಂಸ್ಕೃತಿ ಅನಾವರಣ, ಮುಳ್ಳು ಗಿಡದಿಂದಲೇ ದೇಗುಲ ನಿರ್ಮಾಣ
Published On - 9:38 am, Sun, 6 June 21