ಮದುವೆಗೆ ಅಡ್ಡಿಯಾದ ಕೊರೊನಾ ರೂಲ್ಸ್: ವಧು ಮಡಿಕೇರಿಯಲ್ಲಿ.. ವರ ಕೇರಳದಲ್ಲಿ ಲಾಕ್!

ಕೇರಳದಲ್ಲಿ ಕೊರೊನಾ ಹೆಚ್ಚಳದ ಹಿನ್ನಲೆಯಲ್ಲಿ ಕೇರಳದಿಂದ ಕರ್ನಾಟಕ ಮುಕ್ತ ಪ್ರವೇಶಕ್ಕೆ ನಿರ್ಬಂಧ ಹಾಕಿದ್ದು, 72 ಗಂಟೆಗಳ ಮುಂಚಿನ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ಭಾನುವಾರ ಸರ್ಕಾರಿ ಪ್ರಯೋಗಾಲಯ ಬಂದ್ ಆಗಿದ್ದು, ಕೊರೊನಾ ವರದಿ ಸಿಗದೆ ವರನ ಕಡೆಯವರು ಪರದಾಟ ನಡೆಸುವಂತಾಗಿದೆ.

  • TV9 Web Team
  • Published On - 16:48 PM, 27 Feb 2021
ಮದುವೆಗೆ ಅಡ್ಡಿಯಾದ ಕೊರೊನಾ ರೂಲ್ಸ್: ವಧು ಮಡಿಕೇರಿಯಲ್ಲಿ.. ವರ ಕೇರಳದಲ್ಲಿ ಲಾಕ್!
ಮಡಿಕೇರಿಯಲ್ಲಿ ವಧು ಮತ್ತು ಕೇರಳದಲ್ಲಿ ವರ

ಕೊಡಗು: ಜಿಲ್ಲೆಯ ಮಡಿಕೇರಿಯಲ್ಲಿ ಸೋಮವಾರ ನಡೆಯಬೇಕಿರುವ ಮದುವೆಗೆ ಕೊರೊನಾ ರೂಲ್ಸ್ ಅಡ್ಡಿಯಾಗಿದ್ದು, ಸದ್ಯ ವಿವಾಹ ನಡೆಯುತ್ತದೆಯೋ ಅಥವಾ ಇಲ್ಲವೋ ಎನ್ನುವ ಆತಂಕ ಕುಟುಂಬಸ್ಥರಲ್ಲಿ ಸೃಷ್ಟಿಯಾಗಿದೆ.ಕೊರೊನಾ ಆರಂಭವಾದ ದಿನದಿಂದಲೂ ಸಾಕಷ್ಟು ಮದುವೆಗಳು ಮುಂದಕ್ಕೆ ಹೋಗಿವೆ. ಹಾಗಂತ ವಿವಾಹ ಇನ್ನಿತರ ಸಮಾರಂಭದ ಸಂಖ್ಯೆ ಏನೂ ಕಡಿಮೆಯಾಗಿಲ್ಲ. ಆದರೆ ಈಗ ಮಡಿಕೇರಿಯಲ್ಲಿ ನಡೆಯುವ ಮದುವೆಗೆ ಕೊರೊನಾ ಅಡ್ಡಿಯಾಗಿದೆ. ಇದಕ್ಕೆ ಕಾರಣ ಮಡಿಕೇರಿ ವಧುವಿಗೆ ಕೇರಳದ ವರನ ಜೊತೆ ಮದುವೆ ನಿಶ್ಚಯವಾಗಿರುವುದೇ ಆಗಿದೆ.

ಕೇರಳದಲ್ಲಿ ಕೊರೊನಾ ಹೆಚ್ಚಳದ ಹಿನ್ನೆಲೆಯಲ್ಲಿ ಕೇರಳದಿಂದ ಕರ್ನಾಟಕ ಮುಕ್ತ ಪ್ರವೇಶಕ್ಕೆ ನಿರ್ಬಂಧ ಹಾಕಿದ್ದು, 72 ಗಂಟೆಗಳ ಮುಂಚಿನ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ಭಾನುವಾರ ಸರ್ಕಾರಿ ಪ್ರಯೋಗಾಲಯ ಬಂದ್ ಆಗಿದ್ದು, ಕೊರೊನಾ ವರದಿ ಸಿಗದೆ ವರನ ಕಡೆಯವರು ಪರದಾಟ ನಡೆಸುವಂತಾಗಿದೆ.

madikeri marriage

ವಧುವಿನ ಕುಟುಂಬದವರಲ್ಲಿ ಆತಂಕ

ಭಾನುವಾರ ಸರ್ಕಾರಿ ಪ್ರಯೋಗಾಲಯ ಮುಚ್ಚಿದ್ದು, ಖಾಸಗಿ ಪ್ರಯೋಗಾಲಯದಲ್ಲಿ 2,500 ರೂಪಾಯಿ ಶುಲ್ಕ ತೆಗೆದುಕೊಳ್ಳುತ್ತಾರೆ. ಇನ್ನು ಮಡಿಕೇರಿಗೆ ವಿವಾಹಕ್ಕೆ ಬರಲು 15 ಮಂದಿ ಹೊರಟಿದ್ದು, ಖಾಸಗಿ ಪ್ರಯೋಗಾಲಯದಲ್ಲಿ 15 ಮಂದಿಗೆ 35,000 ರೂಪಾಯಿ ಶುಲ್ಕವಾಗುತ್ತದೆ. ಹೀಗಾಗಿ ಅಷ್ಟೊಂದು ಹಣವಿಲ್ಲದೆ ವರನ ಕಡೆಯವರು ಪರದಾಡುತ್ತಿದ್ದು, ಮದುವೆ ನಡೆಯುತ್ತದೆಯೋ ಇಲ್ಲವೋ ಎಂಬ ಆತಂಕ ಮೂಡಿದೆ.

ವರದಿ ಇಲ್ಲದೆ ಪ್ರವೇಶ ನೀಡುವಂತೆ ವಧು ಕಡೆಯವರು ಸದ್ಯ ಜಿಲ್ಲಾಡಳಿತದ ಮೊರೆ ಹೋಗಿದ್ದು, ಮದುವೆಗೆ ವರನ ಕಡೆಯವರು ಮಡಿಕೇರಿಗೆ ಬರಲು ಮುಕ್ತ ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಒಟ್ಟಾರೆ ಕೊರೊನಾ ದೇಶವನ್ನು ವ್ಯಾಪಿಸಿ ಒಂದು ವರ್ಷಕ್ಕಿಂತ ಹೆಚ್ಚು ಅವಧಿ ಕಳೆದರೂ ಇನ್ನೂ ಕೂಡ ವಿವಾಹದಂತಹ ಸಮಾರಂಭಗಳನ್ನು ನಡೆಸಲು ಜನರು ಆತಂಕ ಪಡುವಂತಾಗಿದೆ.

ಇದನ್ನೂ ಓದಿ: Aishwarya Amartya Hegde Marriage | ಪುತ್ರಿ ವಿವಾಹಕ್ಕೆ ಕ್ಷೇತ್ರದ ಮತದಾರರಿಗೆ ಗಿಫ್ಟ್ ನೀಡಿ ಆಶೀರ್ವಾದ ಕೋರಿದ ಡಿ.ಕೆ.ಶಿವಕುಮಾರ್