ಮಡಿಕೇರಿ: ಕೊಡಗು ಜಿಲ್ಲೆಯಲ್ಲೀಗ ಆನೆ ಕಾರಿಡಾರ್ ವಿವಾದ, ರೈತರನ್ನು ಕಾಡುತ್ತಿದೆ ಹಲವು ಆತಂಕ
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಗ್ರಾಮಮಟ್ಟದಲ್ಲಿ ಹಲವು ಬಾರಿ ರೈತರ ಸಭೆಗಳನ್ನು ನಡೆಸಿದ್ದಾರೆ. ಈ ಸಭೆಗಳಲ್ಲಿ ಆನೆ-ಮಾನವ ಸಂಘರ್ಷ, ಹುಲಿ ಹಾವಳಿ, ಇತರ ಕಾಡುಪ್ರಾಣಿ, ಪಕ್ಷಿಗಳ ಹಾವಳಿ ಬಗ್ಗೆ ಅಹವಾಲು ಆಲಿಸುತ್ತಿದ್ದಾರೆ.
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾಡು-ನಾಡು ಸಂಘರ್ಷ ತಾರಕಕ್ಕೇರಿದೆ. ಒಂದೆಡೆ ಕಾಡಾನೆಗಳು ಕೊಡಗಿನ ರೈತಾಪಿ ವರ್ಗದ ನೆಮ್ಮದಿ ಕೆಡಿಸಿದ್ದರೆ ಮತ್ತೊಂದೆಡೆ ಹುಲಿಗಳು ಅರಣ್ಯದಂಚಿನ ಗ್ರಾಮಗಳ ನಿದ್ದೆಗೆಡಿಸಿವೆ. ಹೀಗಿರುವಾಗಲೇ ಅರಣ್ಯ ಇಲಾಖೆಯು ಕೊಡಗಿನ ಅರಣ್ಯ ಮತ್ತು ರೈತರ ಜಮೀನುಗಳ ಮೇಲೆ ಆನೆ ಕಾರಿಡಾರ್ ರೂಪಿಸಲು ಹೊರಟಿದ್ದು, ಈ ಬೆಳವಣಿಗೆಯು ಇಲ್ಲಿನ ಜನರ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಕೊಡಗಿನ ರೈತರೊಂದಿಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಗ್ರಾಮಮಟ್ಟದಲ್ಲಿ ಹಲವು ಬಾರಿ ರೈತರ ಸಭೆಗಳನ್ನು ನಡೆಸಿದ್ದಾರೆ. ಈ ಸಭೆಗಳಲ್ಲಿ ಆನೆ-ಮಾನವ ಸಂಘರ್ಷ, ಹುಲಿ ಹಾವಳಿ, ಇತರ ಕಾಡುಪ್ರಾಣಿ, ಪಕ್ಷಿಗಳ ಹಾವಳಿ ಬಗ್ಗೆ ಅಹವಾಲು ಆಲಿಸುತ್ತಿದ್ದಾರೆ. ಆನೆ, ಹುಲಿ, ಮಂಗಗಳು, ಪಕ್ಷಿಗಳಿಂದ ತಮ್ಮ ಬೆಳೆ ಹಾಗೂ ಜಾನುವಾರುಗಳನ್ನು ರಕ್ಷಿಸಿಕೊಳ್ಳುವುದೇ ರೈತರಿಗೆ ದೊಡ್ಡ ಸವಾಲಾಗಿದೆ. ಅದರ ಜೊತೆಗೆ ಆನೆ ದಾಳಿಯಿಂದಾಗಿ ನಿರಂತರವಾಗಿ ಜೀವಹಾನಿಯೂ ಅಗುತ್ತಿರುವ ಸಂಗತಿಯನ್ನು ರೈತರು ಅಧಿಕಾರಿಗಳ ಗಮನಕ್ಕೆ ತರುತ್ತಿದ್ದಾರೆ.
ಸಾಕುಪ್ರಾಣಿಗಳ ಉಪಟಳದಿಂದ ಕಾಫಿ, ಬಾಳೆ, ಅಡಿಕೆ ಮೆಣಸು ಬೆಳೆಗಳು ನಾಶವಾಗುತ್ತಿವೆ. ಹೀಗಾಗಿ ಕೊಡಗಿನ ರೈತರ ಗೋಳಿಗೆ ಕೊನೆಯೇ ಇಲ್ಲದಂತಾಗಿದೆ. ಪರಿಸ್ಥಿತಿ ಹೀಗಿರುವಾಗಲೇ ಅರಣ್ಯ ಇಲಾಖೆಯು ಮತ್ತೊಂದು ಬಾಂಬ್ ಸಿಡಿಸಿದೆ. ಪಶ್ಚಿಮಘಟ್ಟದಲ್ಲಿ ಹೊಸ ಆನೆ ಕಾರಿಡಾರ್ ರೂಪಿಸುವ ಯೋಜನೆಯನ್ನು ಅರಣ್ಯ ಇಲಾಖೆ ಪ್ರಕಟಿಸಿದೆ. ಇದಕ್ಕಾಗಿ ರಹಸ್ಯವಾಗಿ ಸರ್ವೆಯನ್ನೂ ಮಾಡುತ್ತಿದೆ. ಸೋಮವಾರಪೇಟೆ ತಾಲ್ಲೂಕಿನ ರಸೂಲ್ಪುರ ಗ್ರಾಮದ ವ್ಯಾಪ್ತಿಯಲ್ಲಿ ಈಗಾಗಲೇ ಸರ್ವೆ ನಡೆಸಲಾಗುತ್ತಿದೆ ಎಂದು ರೈತರು ಮಾಹಿತಿ ನೀಡಿದ್ದಾರೆ.
‘ಸುಮಾರು 250 ಮೀಟರ್ ಅಗತ, 1 ಕಿಮೀ ಅಗಲದ ಕಾರಿಡಾರ್ ರೂಪಿಸಲು ಅರಣ್ಯ ಇಲಾಖೆ ಮುಂದಾಗಿದೆ. ಆನೆಕಾಡು ಮತ್ತು ಮೈಸೂರು ಕಾಡಿಗೆ ಸಂಪರ್ಕಿಸುವ ಉದ್ದೇಶದಿಂದ ರೂಪಿಸಲಾಗುತ್ತಿದೆ. ಮೈಸೂರಿನಿಂದ ಬರುವ ಆನೆಗಳು ಕೊಡರಿನ ತೋಟಗಳನ್ನು ಹಾಳು ಮಾಡಿ ಮತ್ತೆ ಮೈಸೂರಿಗೆ ಹಿಂದಿರುಗಲು ಈ ಕಾರಿಡಾರ್ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಕಸ್ತೂರಿರಂಗನ್ ವರದಿ ಜಾರಿಯಾದರೆ ಬಫರ್ ಜೋನ್ ನಿಯಮಗಳು ಬಿಗಿಯಾಗುತ್ತವೆ. ನಾವು ರೈತರು ನಾಡಿನಿಂದ ಕಾಡಿಗೆ ಹೋಗಬೇಕಾದ ಪರಿಸ್ಥಿತಿ ಬರುತ್ತದೆ. ಇನ್ನಾದರೂ ಕೊಡಗಿನ ಜನರು ಎಚ್ಚೆತ್ತುಕೊಳ್ಳಬೇಕಿದೆ’ ಎಂದು ಕೊಡಗಿನ ರೈತರಾದ ರವಿ ಪ್ರತಿಕ್ರಿಯಿಸಿದರು.
ರೈತರೊಂದಿಗೆ ನಡೆಯುತ್ತಿರುವ ಸಭೆಗಳ ಕುರಿತು ಪ್ರತಿಕ್ರಿಯಿಸಿರುವ ಮುಖ್ಯ ಅರಣ್ಯ ಸಂರಕ್ಷಕ (ಪಿಸಿಸಿಎಫ್) ಆರ್.ಕೆ.ಸಿಂಗ್, ಮಾನವ-ವನ್ಯಜೀವಿ ಸಂಘರ್ಷ ಕಡಿಮೆ ಮಾಡಲು ಸರ್ಕಾರ ಸಮಿತಿ ರಚಿಸಿದೆ. ಅದರಂತೆ ನಾವು ಜನರೊಂದಿಗೆ ಮಾತನಾಡುತ್ತಿದ್ದೇವೆ. ಜನರ ಅಹವಾಲು ಆಲಿಸುತ್ತಿದ್ದೇವೆ. ಆನೆಗಳನ್ನು ತಡೆಯಲು ಕಂದಕ ತೋಡುವುದು ಮತ್ತು ರೈಲ್ವೆ ಹಳಿ ಅಳವಡಿಸುವ ಪ್ರಯತ್ನಗಳು ನಡೆಯುತ್ತಿವೆ. ಆನೆಗಳು ಹೊರಗೆ ಬಂದು ಬೆಳೆ ಹಾನಿ ಮಾಡುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಹಲವು ಜೀವಹಾನಿ ಪ್ರಕರಣಗಳು ವರದಿಯಾಗಿವೆ. ಆನೆ ಕಾರಿಡಾರ್ಗೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ಆಗಿಲ್ಲ. ಆನೆಗಳ ಮಾರ್ಗ ಪೂರ್ವನಿಗದಿಯಾಗಿದೆ. ಈ ಹಿಂದೆ ಆನೆಗಳ ದಾರಿಗಳಿದ್ದ ಕಡೆ ಈಗ ಒತ್ತುವರಿಯಾಗಿ, ಮನುಷ್ಯರು ಬಳಸುತ್ತಿದ್ದೇವೆ. ಹೀಗಾಗಿ ಮಾನವ-ವನ್ಯಜೀವಿ ಸಂಘರ್ಷ ನಡೆಯುತ್ತಿದೆ. ಇದನ್ನು ಕಡಿಮೆ ಮಾಡಲು ಯತ್ನಿಸುತ್ತಿದ್ದೇವೆ’ ಎಂದು ಹೇಳಿದರು.
ಆನೆ ಕಾಟದಿಂದ ಬೇಸೆತ್ತಿರುವ ಜನರು ಇದೀಗ ಆನೆ ಕಾರಿಡಾರ್ ನಿರ್ಮಾಣವಾದರೆ ತಮ್ಮ ಜಮೀನಿನ ಗತಿ ಏನು ಎಂದು ಚಿಂತಿತರಾಗಿದ್ದಾರೆ. ಆನೆ ಕಾರಿಡಾರ್ ಬಗ್ಗೆ ಹಲವು ಸಂಶಯಗಳು ಜನರನ್ನು ಕಾಡುತ್ತಿವೆ. ಆ ವ್ಯಾಪ್ತಿಯಲ್ಲಿ ಇನ್ನು ಮುಂದೆ ಕಾಫಿ, ಬಾಳೆ ಸೇರಿದಂತೆ ಯಾವುದೇ ಬೆಳೆ ಬೆಳೆಯುವಂತಿಲ್ಲ. ಮಾತ್ರವಲ್ಲ ಜನರೂ ವಾಸಿಸುವಂತಿಲ್ಲ. ಹಾಗಾಗಿ ಬಹಳಷ್ಟು ರೈತರು ಮುಂದಿನ ದಿನಗಳಲ್ಲಿ ಅತಂತ್ರರಾಗುವ ಅಪಾಯ ಎದುರಾಗಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಕಾರಿಡಾರ್ ಬಗ್ಗೆ ಸರ್ಕಾರವು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದಷ್ಟೇ ಹೇಳುತ್ತಿದ್ದಾರೆ.
200 ಮೀಟರ್ ಅಗಲದ ಆನೆ ಕಾರಿಡಾರ್ ಅರಣ್ಯ ಮತ್ತು ಜಮೀನಿನ ಮೂಲಕ ಹಾದುಹೋಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇಲಾಖೆ ಸ್ಪಷ್ಟವಾಗಿ ಯಾವುದೇ ಮಾಹಿತಿ ಒದಗಿಸುತ್ತಿಲ್ಲ. ಸರ್ವೆ ಕಾರ್ಯ ನಡೆಯುತ್ತಿದೆ. ಜನರನ್ನು ಕಾಡುತ್ತಿರುವ ಗೊಂದಲ ಪರಿಹರಿಸಲು ಅರಣ್ಯ ಇಲಾಖೆ ಮುಂದಾಗಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವರದಿ: ಗೋಪಾಲ್ ಸೋಮಯ್ಯ ಟಿವಿ9 ಕೊಡಗು
Published On - 12:04 pm, Mon, 14 November 22