ಬಡ ವಿದ್ಯಾರ್ಥಿಗಳಿಗೆ ಮಿಡಿದ ವಿದ್ಯಾರ್ಥಿ ಜೀವ: 106 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ

ಲಾಕ್​ಡೌನ್​ ಸಮಯದಲ್ಲಿ ಮನೆಗೆ ತೆರಳಿದ್ದ ವಿದ್ಯಾರ್ಥಿಯೋರ್ವನು ಸುಮಾರು 106 ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾನೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ..

  • ಸುರೇಶ್ ಬಿ 
  • Published On - 16:08 PM, 15 Jan 2021
ಬಡ ವಿದ್ಯಾರ್ಥಿಗಳಿಗೆ ಮಿಡಿದ ವಿದ್ಯಾರ್ಥಿ ಜೀವ: 106 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ
ವಿದ್ಯಾರ್ಥಿ ನೀಲ್​ ಎಂ.ಪ್ರಕಾಶ್

ವಿರಾಜಪೇಟೆ: ಈ  ವಿದ್ಯಾರ್ಥಿ ತಾನಾಯ್ತು ತನ್ನ ಶಿಕ್ಷಣವಾಯ್ತು ಅಂತಷ್ಟೇ ಅಂದುಕೊಂಡಿದ್ದರೆ, ಇವತ್ತು ಇಷ್ಟು ಹೆಸರು ಮಾಡುತ್ತಿರಲಿಲ್ಲ. ಬರೀ ತನ್ನ ಶಿಕ್ಷಣವಷ್ಟೇ ಅಲ್ಲದೆ, ನೂರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡಿದ್ದಾನೆ. ಮನಸಿದ್ದರೆ ಮಾರ್ಗ ಎನ್ನುವ ನಾಣ್ಣುಡಿಯನ್ನು ಜೀವನದಲ್ಲಿ ಅಳವಡಿಸಿಕೊಂಡು, ಮುನ್ನಡೆಯುತ್ತಿದ್ದಾನೆ.

ವಿದ್ಯಾರ್ಥಿಯ ಹೆಸರು ನೀಲ್ ಎಂ. ಪ್ರಕಾಶ್. ಈತ ಮೂಲತಃ ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದ ಕಾಫಿ ಬೆಳೆಗಾರ ಸಿ.ಪಿ ಪ್ರಕಾಶ್​ರ ಮೊಮ್ಮಗ. ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ನೀಲ್ ಎಂ.ಪ್ರಕಾಶ್ ಕೊವಿಡ್ ಸಂದರ್ಭದಲ್ಲಿ ಊರಿಗೆ ಬಂದಿದ್ದ. ಈ ವೇಳೆ, ಬಡ, ಕೂಲಿ ಕಾರ್ಮಿಕರ ಮಕ್ಕಳಿಗೆ ಏನಾದರೂ ಸಹಾಯ ಮಾಡಬೇಕು ಅಂತಾ ಮನಸ್ಸು ಮಾಡಿದ್ದ. ಹಾಗಾಗಿ, ವಿರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 106 ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಹಾಯ ಮಾಡಬೇಕು ಎಂಬುದಾಗಿ ನಿರ್ಧರಿಸಿ ₹ 3.5 ಲಕ್ಷ ರೂಪಾಯಿ ವೆಚ್ಚ ಭರಿಸಿ ಮಾನವೀಯತೆ ಮೆರೆದಿದ್ದಾನೆ.

ಕುಟುಂಬಸ್ಥರು ಮತ್ತು ಸ್ನೇಹಿತರಿಂದ ಸಹಾಯ
ಕೂಲಿ ಕಾರ್ಮಿಕ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಲ್ ಪ್ರಕಾಶ್ ಅಭಿಯಾನವನ್ನೇ ಆರಂಭಿಸಿದ್ದನು. ತನ್ನ ಕುಟುಂಬದ ಬಳಿ‌ ಬಡವರು ಮತ್ತು ಕೂಲಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚರ್ಚೆ ಮಾಡಿದ್ದನು. ಕುಟುಂಬದಿಂದ ಒಂದಷ್ಟು ಹಣ ಪಡೆದು ಮತ್ತೆ ಅಭಿಯಾನದ ಮೂಲಕ ಸ್ನೇಹಿತರಿಂದಲೂ ಹಣ ಸಂಗ್ರಹಿಸಿ ವಿರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆ ವ್ಯವಸ್ಥಾಪಕ ಮುದಲೈ ಮುತ್ತು ಅವರಿಗೆ ₹ 3.5 ಲಕ್ಷ ಹಣವನ್ನು ಹಸ್ತಾಂತರಿಸಿದ್ದಾನೆ.

ಬಡ ವಿದ್ಯಾರ್ಥಿಗಳಿಗೆ ಮಿಡಿದ ಮನ
ಕೋವಿಡ್ ಸಂದರ್ಭದಲ್ಲಿ ಬಡ ಕೂಲಿ ಕಾರ್ಮಿಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದನ್ನು ನಾನು ಊರಿಗೆ ಬಂದ ವೇಳೆ ಗಮನಿಸಿದ್ದೆ. ಕೋವಿಡ್ ಕಾರಣದಿಂದಾಗಿ ಶಾಲಾ ಶುಲ್ಕವನ್ನು ಪಾವತಿಸಲು ಬಡ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕೋವಿಡ್ ಪರಿಣಾಮ ಎಲ್ಲರಿಗೂ ತಟ್ಟಿದೆ. ಬಡವರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತಹ ಮಕ್ಕಳ ಶಿಕ್ಷಣಕ್ಕೆ ತೊಡಕಾಗಬಾರದು ಅನ್ನೋದು  ನನ್ನ ಭಾವನೆಯಾಗಿತ್ತು. ಕೋವಿಡ್ ಕಾರಣಕ್ಕಾಗಿ ಬಡ ಮತ್ತು ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ತಿಳಿದು ಶಿಕ್ಷಣದ ವೆಚ್ಚ ಭರಿಸಲು ಮುಂದಾದೆ ಎಂದು Tv9ಡಿಜಿಟಲ್​ಗೆ ವಿದ್ಯಾರ್ಥಿ ನೀಲ್ ತಿಳಿಸಿದ್ದಾನೆ.

SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ 1 ಸಾವಿರ ಮಾಸ್ಕ್ ನೀಡಲು ಮುಂದಾದ ವಿದ್ಯಾರ್ಥಿನಿ