ಕೊರೊನಾ ಸುಳಿವೇ ಇಲ್ಲಿಲ್ಲ.. ತೊಂಬತ್ತು ಮನೆ ಗ್ರಾಮಸ್ಥರಿಂದ ಸ್ವಯಂ ದಿಗ್ಬಂಧನ

ಆ ಜಿಲ್ಲೆಯಲ್ಲಿ ಸೋಂಕಿನ ಸ್ಫೋಟವಾಗುತ್ತಿದೆ. ಪ್ರತಿದಿನವೂ ಹೆಣಗಾಟ ಶುರುವಾಗಿದೆ. ಬೀದಿ ಬೀದಿಯಲ್ಲೂ ಜನ ಪರದಾಡುತ್ತಿದ್ದಾರೆ. ಇಂತಹ ಜಿಲ್ಲೆಯಲ್ಲೂ ಒಂದು ಕೊರೊನಾ ಮುಕ್ತ ಗ್ರಾಮವಿದೆ. ಗ್ರಾಮಸ್ಥರ ಕಟ್ಟುನಿಟ್ಟಿನ ಕ್ರಮದಿಂದ ಇಡೀ ಗ್ರಾಮ ಸೇಫ್ ಜೋನ್ನಲ್ಲಿದೆ.

ಕೊರೊನಾ ಸುಳಿವೇ ಇಲ್ಲಿಲ್ಲ.. ತೊಂಬತ್ತು ಮನೆ ಗ್ರಾಮಸ್ಥರಿಂದ ಸ್ವಯಂ ದಿಗ್ಬಂಧನ
ತೊಂಬತ್ತು ಮನೆ ಗ್ರಾಮ

ಕೊಡಗು: ಲಾಕ್ಡೌನ್ ಮಾಡಿದ್ರೂ ಜನ ಕೇರ್ ಮಾಡೋಲ್ಲ.. ಕೊರೊನಾ ಕೇಕೆ ಹಾಕಿ, ಜನರ ಜೀವಗಳನ್ನೇ ಹಿಂಡುತ್ತಿದ್ರೂ ಬುದ್ಧಿ ಜೀವಿಗಳು ಮಾತು ಕೇಳಲ್ಲ. ಮನೆಯಲ್ಲೇ ಸೇಫ್ ಆಗಿರಿ ಅಂತಾ ಹೇಳಿದ್ರೂ ಕೆಲವರು ಬೇಜವಾಬ್ದಾರಿಗಳಂತೆ ವರ್ತಿಸ್ತಿದ್ದಾರೆ. ಆದ್ರೆ, ಇಲ್ಲೊಂದು ಗ್ರಾಮದ ಜನ ತಮಗೆ ತಾವೇ ದಿಗ್ಬಂಧನ ಹಾಕಿಕೊಂಡಿದ್ದಾರೆ.

ಇದು ಮಡಿಕೇರಿ ತಾಲೂಕಿನ ಹಾಕತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಬತ್ತು ಮನೆ ಅನ್ನೋ ಗ್ರಾಮ. ಈ ಊರಿನಲ್ಲಿ ಸುಮಾರು 100ಕ್ಕೂ ಹೆಚ್ಚು ಮನೆಗಳಿವೆ. ಎಲ್ಲಾ ಮನೆಗಳು ಹತ್ತಿರ ಹತ್ತಿರವೇ ಇದೆ. ಬಹುತೇಕ ಮಂದಿ ಕೂಲಿ ಕೆಲಸ ಮಾಡುವವರೇ ಆಗಿದ್ದಾರೆ. ಇಂತಹ ಗ್ರಾಮದಲ್ಲಿ ಇದುವರೆಗೂ ಒಂದೇ ಒಂದು ಕೊರೊನಾ ಕೇಸ್ ಇಲ್ಲ. ಯಾಕಂದ್ರೆ, ಜನ ಕೊರೊನಾ ನಮ್ಮ ಊರಿಗೆ ಕಾಲು ಇಡಬಾರ್ದು ಅಂತಾ ಸ್ವಯಂ ಲಾಕ್ಡೌನ್ ಮಾಡಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ್ಲೇ ಗ್ರಾಮಕ್ಕೆ ಹೊರಗಿನವರು ಬರುವ ಹಾಗಿಲ್ಲ. ಈ ಗ್ರಾಮದವರೂ ಹೊರಗೆ ಹೋಗುವಂತಿಲ್ಲ ಅಂತಾ ಟಫ್ ರೂಲ್ಸ್ ಜಾರಿ ಮಾಡಿಕೊಂಡಿದ್ದಾರೆ.

ವಿಶೇಷ ಅಂದ್ರೆ ಈ ಗ್ರಾಮದ ಅಕ್ಕಪಕ್ಕದ ಗ್ರಾಮಗಳಲ್ಲಿ ಹಲವು ಕೊರೊನಾ ಕೇಸ್ಗಳು ವರದಿಯಾಗಿದೆ. ಆದ್ರೆ, ಇಲ್ಲಿ ಸೋಂಕಿತರೇ ಇಲ್ಲ.. ಹೀಗಾಗಿ ಗ್ರಾಮದ ಪಿಡಿಒ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಸ್ವಯಂ ಲಾಕ್ಡೌನ್ಗೆ ನೇತೃತ್ವ ವಹಿಸಿಕೊಂಡು, ನಿಯಮ ಪಾಲನೆ ಮಾಡ್ತಿದ್ದಾರೆ. ಇನ್ನು, ಬಹುತೇಕ ಮಂದಿ ಕೂಲಿ ಕಾರ್ಮಿಕರೇ ಆಗಿರೋದ್ರಿಂದ ಎಲ್ಲರಿಗೂ ಬಿಪಿಎಲ್ ಕಾರ್ಡ್ ಇದೆ. ಹಾಗಾಗಿ ಇವರಿಗೆ ದುಡಿಮೆ ಇಲ್ಲಾಂದ್ರೂ ಪಡಿತರ ಸಾಮಾಗ್ರಿ ದೊರೆಯುತ್ತಿದೆ.

ಒಟ್ನಲ್ಲಿ, ಸರ್ಕಾರ ಲಾಠಿ ರುಚಿ ತೋರಿಸಿ, ದಂಡಂದಶಗುಣಂ ಅಸ್ತ್ರ ಪ್ರಯೋಗಿಸಿದ್ರು ಏನೂ ಯೂಸ್ ಆಗುತ್ತಿಲ್ಲ. ಅಂತಹದ್ರಲ್ಲಿ ತೊಂಬತ್ತು ಮನೆ ಅನ್ನೋ ಗ್ರಾಮದ ಜನ ಸ್ವಯಂ ದಿಗ್ಬಂಧನ ಹಾಕಿಕೊಂಡು, ಕೊರೊನಾ ಎಂಟ್ರಿ ಕೊಡದಂತೆ ನೋಡಿಕೊಳ್ತಿದ್ದಾರೆ.

ಇದನ್ನೂ ಓದಿ: ಕೊರೊನಾ ಭೀತಿ ಮಧ್ಯೆ ಸ್ವಯಂ ಲಾಕ್‌ಡೌನ್‌ ಮಾಡಿಕೊಂಡ ಗ್ರಾಮಸ್ಥರು, ಎಲ್ಲಿ?