ರೈತರ ಹೊಲ ಗದ್ದೆ ಕಾಯಲೂ ಸೈ, ಕರಾವಳಿಯ ಬಂದರಿಗೂ ಜೈ; ಈ ಕತ್ತಾಳೆ ನಾರಿನ ಬಗ್ಗೆ ನಿಮಗೆಷ್ಟು ಗೊತ್ತು?

| Updated By: ಆಯೇಷಾ ಬಾನು

Updated on: Jul 11, 2021 | 8:47 AM

ತಮಿಳುನಾಡಿನಿಂದ ಬರುವ ಒಂದಷ್ಟು ಕುಟುಂಬಗಳು ರೈತರ ತೋಟದ ನೈಸರ್ಗಿಕ ಬೇಲಿಯನ್ನು ಉಚಿತವಾಗಿಯೇ ಸರಿಮಾಡಿಕೊಟ್ಟು, ತಮಗೆ ಬೇಕಾದ ಕತ್ತಾಳೆಯ ಪಟ್ಟೆಗಳನ್ನು ತೆಗೆದುಕೊಂಡು ಹೋಗುತ್ತಾರೆ ಇದೊಂದು ರೀತಿಯ ಕೊಟ್ಟು ತೆಗೆದುಕೊಳ್ಳುವ ವ್ಯಾಪಾರದಂತೆ.

ರೈತರ ಹೊಲ ಗದ್ದೆ ಕಾಯಲೂ ಸೈ, ಕರಾವಳಿಯ ಬಂದರಿಗೂ ಜೈ; ಈ ಕತ್ತಾಳೆ ನಾರಿನ ಬಗ್ಗೆ ನಿಮಗೆಷ್ಟು ಗೊತ್ತು?
ಕತ್ತಾಳೆ
Follow us on

ಕೋಲಾರ: ಅದು ಬಯಲುಸೀಮೆ ಜಿಲ್ಲೆಗಳಲ್ಲಿ ಬೆಳೆಯುವ ಕಳ್ಳಿ ಜಾತಿಯ ಮುಳ್ಳುಗಿಡ. ಆದರೆ ಅದೇ, ರೈತರ ಹೊಲ, ಗದ್ದೆ, ತೋಟವನ್ನು ಕಾಯುವ ನೈಸರ್ಗಿಕ ಬೇಲಿ. ಅದೇ ದೊಡ್ಡ ದೊಡ್ಡ ಬಂದರುಗಳಲ್ಲಿ ಹಡಗು ಲಂಗರು ಹಾಕಲು ಉಪಯೋಗಿಸುವ ದಪ್ಪ ಗಾತ್ರದ ಹಗ್ಗದ ತಯಾರಿಕೆಯ ಕಚ್ಚಾ ವಸ್ತು, ಬಯಲುಸೀಮೆಗೂ ಕರಾವಳಿಗೆ ನಂಟು ಬೆಸೆದ ಮುಳ್ಳುಗಿಡದ ಕುರಿತು ಟಿವಿ 9 ಕನ್ನಡ ಡಿಜಿಟಲ್​ನ ಕೋಲಾರದ ವರದಿಗಾರ ರಾಜೇಂದ್ರ ಸಿಂಹ ಅವರು ಬರೆದ ವಿಶೇಷ ವರದಿ ನಿಮ್ಮ ಓದಿಗಾಗಿ ಇಲ್ಲಿದೆ. 

ಬಯಲುಸೀಮೆ ಕೋಲಾರ ಜಿಲ್ಲೆಯಲ್ಲಿ ಯಥೇಚ್ಚವಾಗಿ ಬೆಳೆಯುವ ಕಳ್ಳಿ ಜಾತಿಯ ಕತ್ತಾಳೆ ಮುಳ್ಳುಗಿಡವನ್ನು ಇಲ್ಲಿ ಮಾವು, ಗೋಡಂಬಿ, ಸೇರಿದಂತೆ ಹಲವು ಬೆಳೆಗಳಿಗೆ ರೈತರು ತೋಟಗಳಿಗೆ ಬೇಲಿಯಾಗಿ ಬೆಳೆಸುತ್ತಾರೆ. ಈ ನೈಸರ್ಗಿಕ ಬೇಲಿಯನ್ನಾಗಿ ಬಳಸಲು ಈ ಕತ್ತಾಳೆಯನ್ನು ತಮಿಳುನಾಡಿನ ಜನರು, ಮುಂಗಾರು ಕಾಲದಲ್ಲಿ ತಮ್ಮ ಕುಟುಂಬ ಸಮೇತವಾಗಿ ಬಂದು ಕತ್ತಾಳೆಯನ್ನು ಕೊಯ್ದು ನಾರು ತೆಗೆಯುತ್ತಾರೆ. ಅವರು ಹೀಗೆ ಸುಮ್ಮನೆ ಕೆಲಸ ಮಾಡೋದಿಲ್ಲ ಕತ್ತಾಳೆಯನ್ನು ತಮ್ಮ ತೋಟಗಳಿಗೆ ಬೇಲಿಯಾಗಿ ಬೆಳೆಸಿರುವ ರೈತರ ತೋಟದ ಬೇಲಿಯನ್ನು ಶುಚಿಮಾಡಿಕೊಟ್ಟು ಅಲ್ಲಿ ಬೆಳೆದಿರುವ ಕತ್ತಾಳೆಯನ್ನು ಕತ್ತರಿಸಿಕೊಂಡು ಹೋಗಿ ನಾರಾಗಿ ಪರಿವರ್ತಿಸಿ ಅದನ್ನು ಮಾರಿಕೊಂಡು ಬದುಕು ಸಾಗಿಸುತ್ತಾರೆ.

ರೈತರ ತೋಟವೂ ಶುಚಿ, ಜನರ ಬದುಕಿಗೂ ದಾರಿ
ಕೋಲಾರ ಜಿಲ್ಲೆಯ ಹಲವೆಡೆ ರೈತರ ತಮ್ಮ ಮಾವಿನ ತೋಟಗಳನ್ನು ರಕ್ಷಣೆ ಮಾಡಲು ನೈಸರ್ಗಿಕ ಬೇಲಿಗೆ ಈ ಕತ್ತಾಳೆಯನ್ನು ಬಳಸಿರುತ್ತಾರೆ, ಅದು ವರ್ಷ ಕಳೆದಂತೆ ಬೆಳೆದು ಮುಳ್ಳು ಗಿಡಗಂಟೆಗಳು ತುಂಬಿರುತ್ತದೆ. ಇಂಥ ವೇಳೆಯಲ್ಲಿ ತಮಿಳುನಾಡಿನಿಂದ ಬರುವ ಒಂದಷ್ಟು ಕುಟುಂಬಗಳು ರೈತರ ತೋಟದ ನೈಸರ್ಗಿಕ ಬೇಲಿಯನ್ನು ಉಚಿತವಾಗಿಯೇ ಸರಿಮಾಡಿಕೊಟ್ಟು, ತಮಗೆ ಬೇಕಾದ ಕತ್ತಾಳೆಯ ಪಟ್ಟೆಗಳನ್ನು ತೆಗೆದುಕೊಂಡು ಹೋಗುತ್ತಾರೆ ಇದೊಂದು ರೀತಿಯ ಕೊಟ್ಟು ತೆಗೆದುಕೊಳ್ಳುವ ವ್ಯಾಪಾರದಂತೆ. ಹೀಗೆ ತೋಟಗಳ ಬೇಲಿಯಾದ ಕತ್ತಾಳೆ ಗಿಡ ಆಳೆತ್ತರಕ್ಕೆ ಬೆಳೆದ ಮೇಲೆ ಕತ್ತರಿಸಲು ರೈತರಿಗೆ ಸಾವಿರಾರು ರುಪಾಯಿ ಖರ್ಚಾಗುತ್ತೆ. ಆದರೆ, ಕತ್ತಾಳೆಯ ಕೆಲಸ ಮಾಡುವವರಿಗೆ ಕೊಟ್ಟರೆ ಆ ಖರ್ಚೂ ಉಳಿಯುತ್ತದೆ ಎಂಬುದು ಇಲ್ಲಿನವರ ಲೆಕ್ಕಾಚಾರ.

ನಾರಾಗಿ ಪರಿವರ್ತಿಸುತ್ತಿರುವುದು

ಬಯಲುಸೀಮೆಯ ಕತ್ತಾಳೆಯ ನಾರು ಕರಾವಳಿಗೆ ನಂಟು
ಬಯಲುಸೀಮೆಯ ರೈತರು ತಮ್ಮ ತೋಟಗಳ ರಕ್ಷಣೆಗಾಗಿ ಮಾಡಿಕೊಂಡಿರುವ ಕತ್ತಾಳೆ ಗಿಡಗಳ ನೈಸರ್ಗಿಕ ಬೇಲಿಯನ್ನು ಶುಚಿ ಮಾಡುವ ತಮಿಳುನಾಡಿನ ಜನಕ್ಕೆ ಕತ್ತಾಳೆಯನ್ನು ಉಚಿತವಾಗಿ ಕೊಡಲಾಗುತ್ತದೆ. ಹೀಗೆ ಉಚಿತವಾಗಿ ಪಡೆದುಕೊಂಡ ಕತ್ತಾಳೆಯನ್ನು ಅಲ್ಲೇ ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿರುವ ಯಂತ್ರಕ್ಕೆ ಕೊಟ್ಟು ನಾರು ತೆಗೆಯಲಾಗುತ್ತೆ. ಈ ನಾರನ್ನು ಖರೀದಿಸುವ ವರ್ತಕರು ಹಡಗು ಲಂಗರು ಹಾಕಲು ಬಳಸುವ ಗಟ್ಟಿಯಾದ ಹಗ್ಗ ಸೇರಿದಂತೆ ಹಲವಾರು ದಿನ ಬಳಕೆಯ ವಸ್ತುಗಳಾದ, ಕಾಲೊರೆಸುವ ಮ್ಯಾಟ್​, ಪಾತ್ರೆ ತೊಳೆಯುವ ನಾರು, ಸೈಕಲ್​ ಅಲಂಕಾರಿಕ ಹೂವು, ಮನೆಗಳಿಗೆ ಬಣ್ಣ ಬಳಿಯುವ ಬ್ರೆಶ್, ಹಲವು ವಸ್ತುಗಳ ತಯಾರಿಕೆಯಲ್ಲಿ ಪ್ರಮುಖ ಕಚ್ಚಾವಸ್ತುವಾಗಿ ದೊಡ್ಡ ದೊಡ್ಡ ಫ್ಯಾಕ್ಟರಿಗಳಲ್ಲಿ ಬಳಕೆಯಾಗುತ್ತದೆ.

ಕತ್ತಾಳೆ ಮುಳ್ಳಿನ ಗಿಡವಾಗಿದ್ದರೂ ಬಹಳಷ್ಟು ಮಂದಿಗೆ ತುತ್ತಿನ ಚೀಲವನ್ನೂ ತುಂಬಿಸುವ ಜೊತೆಗೆ ಬಯಲುಸೀಮೆಯಿಂದ ಕರಾವಳಿ ಜನರ ನಡುವೆ ಸಂಬಂದ ಬೆಸೆಯುವ ನಂಟಾಗಿದೆ ಎಂಬ ವಿಶೇಷಕ್ಕೆ ಎಣೆಯುಂಟೆ?

ವಿಶೇಷ ವರದಿ: ರಾಜೇಂದ್ರ ಸಿಂಹ

ಇದನ್ನೂ ಓದಿ: 

Field Report: ಆನಂದಯ್ಯನ ಕೊರೊನಾ ಔಷಧ ಪರಿಣಾಮ ಬೀರುವುದೇ? ಔಷಧ ಸೇವಿಸಿದ ಕೊಪ್ಪಳದ ಜನರು ಹೇಳುವುದೇನು?

MRPL: ‘ನಮ್ಮ ನೆಲದಲ್ಲಿ ಮೊದಲು ನಮಗೆ ಉದ್ಯೋಗ ಸಿಗಲಿ’; ಎಂಆರ್​ಪಿಎಲ್ ನೇಮಕಾತಿ ಹೋರಾಟದ ವಿಶೇಷ ವರದಿ ಇಲ್ಲಿದೆ