ಆದಾಯದ ಮೂಲವಾಗಿ ಮಾವು; ಬೆಳೆಗಾರರಲ್ಲದಿದ್ದರೂ ಮಾವಿನ ಹಣ್ಣಿನಿಂದ ಸಾವಿರಾರು ರೂಪಾಯಿ ಲಾಭ
ಶೂನ್ಯ ಬಂಡವಾಳದಲ್ಲಿ ವರ್ಷ ಪೂರ್ತಿ ಒಳ್ಳೆಯ ಲಾಭ ಮಾಡುವ ಒಂದು ರೀತಿಯ ಗೃಹೋದ್ಯಮವಾಗಿ ಮಾವು ಬೆಳೆಯನ್ನು ಮಾಡಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ಇಡೀ ಕುಟುಂಬ ಬಿಸಾಡಿದ ಮಾವಿನ ಕಾಯಿಯನ್ನು ತರುವುದು ಅದನ್ನು ಕತ್ತರಿಸಿ ಅದನ್ನು ಲವಣಯುಕ್ತ ಮಾವನ್ನಾಗಿ ಮಾಡಿ ಒಣಗಿಸಿಡುವ ಕೆಲಸದಲ್ಲಿ ತೊಡಗುತ್ತಾರೆ.
ಕೋಲಾರ: ಮಾವು ಬೆಳೆಗಾರರಿಗೆ ಈ ಬಾರಿ ಕೊರೊನಾ ಎರಡನೇ ಅಲೆಯ ಲಾಕ್ಡೌನ್ನಿಂದಾಗಿ ಬಾರಿ ನಷ್ಟವಾಗಿದೆ. ಅದರಲ್ಲೂ ಕೋಲಾರ ಭಾಗದ ಮಾವು ಬೆಳೆಗಾರರು ಭರಪೂರ ಫಸಲು ಬಂದ ಮಾವು ಮಾರಾಟವಾಗದೆ ಕಂಗಾಲಾಗಿದ್ದಾರೆ. ಆದರೆ ಕೋಲಾರ ಜಿಲ್ಲೆಯ ಕೆಲವು ಶ್ರಮ ಜೀವಿಗಳು ಮಾವು ಬೆಳೆಗಾರರಲ್ಲದಿದ್ದರೂ, ಮಾವಿನ ಕಾರ್ಖಾನೆಯ ಮಾಲೀಕರಲ್ಲದಿದ್ದರೂ ಕೂಡಾ ವರ್ಷಪೂರ್ತಿ ಜನರಿಗೆ ಮಾವಿನ ಸ್ವಾದ ನೀಡುತ್ತಿದ್ದಾರೆ ಮತ್ತು ಒಂದು ರೂಪಾಯಿ ಬಂಡವಾಳವಿಲ್ಲದೆ ಕಸದಿಂದ ರಸ ಎಂಬ ಧ್ಯೇಯದೊಂದಿಗೆ ಮಾವಿನಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ.
ರಾಜ್ಯದ ಮಾವಿನ ತವರು ಎಂದೇ ಖ್ಯಾತಿ ಪಡೆದಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಈಗ ಮಾವಿನ ಸುಗ್ಗಿ ಹಬ್ಬ ನಡೆಯುತ್ತಿದೆ. ಇಂಥಹ ಪ್ರದೇಶದಲ್ಲಿ ಎಲ್ಲರೂ ಮಾವು ಬೆಳೆಗಾರರಲ್ಲ, ಮಾವು ಬೆಳೆಯದ ಜನರೂ ಕೂಡಾ ಮಾವಿನ ಸುಗ್ಗಿ ಕಾಲದಲ್ಲಿ ಒಂದಷ್ಟು ಹಣ ಸಂಪಾದನೆ ಮಾಡುತ್ತಾರೆ ಎನ್ನುವುದು ಇಲ್ಲಿನ ವಿಶೇಷ. ಮೇ, ಜೂನ್, ಜುಲೈ ತಿಂಗಳಲ್ಲಿ ಎಲ್ಲೆಡೆ ಮಾವು ತುಂಬಿ ತುಳುಕುತ್ತಿರುತ್ತದೆ, ಈ ವೇಳೆ ಮಾವಿಗೆ ಸುಗ್ಗಿ ಹಬ್ಬ, ಆಗ ಮಳೆ ಗಾಳಿಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಟನ್ಗಟ್ಟಲೆ ಮಾವಿನ ಕಾಯಿಗಳು ಉದುರಿ ಹೋಗಿರುತ್ತವೆ. ಅಷ್ಟೇ ಅಲ್ಲಾ ಮಾರುಕಟ್ಟೆ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಸಣ್ಣಪುಟ್ಟ ತೊಂದರೆಯಾಗಿರುವ ಮಾವಿನ ಕಾಯಿಗಳನ್ನು ಬಿಸಾಡಿರುತ್ತಾರೆ.
ಇಂತಹ ಕಾಯಿಗಳನ್ನು ಆರಿಸಿಕೊಂಡು ಬಂದು ಶ್ರೀನಿವಾಸಪುರದ ಕೆಲವು ಬಡಾವಣೆ ನಿವಾಸಿಗಳು ಅದನ್ನೇ ಬಂಡವಾಳವಾಗಿಸಿಕೊಂಡಿದ್ದಾರೆ. ಅದರಿಂದ ಮಾವಿನ ಉಪ್ಪಿನ ಕಾಯಿ ಹಾಗೂ ಆಮ್ ಚೂರ್ ನಂತಹ ಬಾಯಲ್ಲಿ ನೀರೂರಿಸುವ ಉತ್ಪನ್ನಗಳನ್ನು ತಯಾರಿಸುತ್ತಾರೆ. ಅಲ್ಲದೆ ಬೆಂಗಳೂರು ಸೇರಿದಂತೆ ಇತರೆಡೆಗಳಲ್ಲಿ ಇದನ್ನು ಒಳ್ಳೆಯ ಬೆಲೆಗೆ ವರ್ಷ ಪೂರ್ತಿ ಮಾರಾಟ ಮಾಡುತ್ತಾರೆ.
ಶೂನ್ಯ ಬಂಡವಾಳ ವರ್ಷ ಪೂರ್ತಿ ಆದಾಯ ಹೀಗೆ ಶೂನ್ಯ ಬಂಡವಾಳದಲ್ಲಿ ವರ್ಷ ಪೂರ್ತಿ ಒಳ್ಳೆಯ ಲಾಭ ಮಾಡುವ ಒಂದು ರೀತಿಯ ಗೃಹೋದ್ಯಮವಾಗಿ ಮಾವು ಬೆಳೆಯನ್ನು ಮಾಡಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ಇಡೀ ಕುಟುಂಬ ಬಿಸಾಡಿದ ಮಾವಿನ ಕಾಯಿಯನ್ನು ತರುವುದು ಅದನ್ನು ಕತ್ತರಿಸಿ ಅದನ್ನು ಲವಣಯುಕ್ತ ಮಾವನ್ನಾಗಿ ಮಾಡಿ ಒಣಗಿಸಿಡುವ ಕೆಲಸದಲ್ಲಿ ತೊಡಗುತ್ತಾರೆ. ಒಂದು ವೇಳೆ ಮಾವಿನ ಮಾರುಕಟ್ಟೆಯಲ್ಲಿ ಮಾವು ಬೆಳೆದ ರೈತನಿಗೆ ನಷ್ಟವಾಗಬಹುದು. ಆದರೆ ಇವರಿಗೆ ಮಾತ್ರ ನಷ್ಟವಾಗುವುದಿಲ್ಲ.
ಗಾಳಿ ಮಳೆಗೆ ಉದುರಿದ ಕಾಯಿಗಳೇ ಇವರ ಬಂಡವಾಳ ಗಾಳಿ ಮಳೆಗೆ ಮಾವಿನ ಕಾಯಿಗಳಿಗೆ ಸಾಕಷ್ಟು ಹಾನಿಯಾಗುತ್ತದೆ. ಮಳೆಯಿಂದ ಮಾವಿನ ಕಾಯಿಗೆ ಗಾಯವಾಗಿ, ಮಾರುಕಟ್ಟೆಗೆ ಬರುವ ಮಾವಿನ ಕಾಯಿಯನ್ನು ಇತ್ತ ರಪ್ತು ಮಾಡಲಾಗದೆ, ಉಳಿಸಿಕೊಂಡು ಹಣ್ಣು ಮಾಡಲಾಗದೇ ಅವುಗಳನ್ನು ಬೀದಿಗೆ ಬಿಸಾಡುವ ಪರಿಸ್ಥಿತಿ ಬರುತ್ತದೆ. ಆದರೆ ಮಾರುಕಟ್ಟೆ ಆಸು ಪಾಸಿನಲ್ಲಿರುವ ಗುಡಿಸಲು ವಾಸಿಗಳಿಗೆ ಮಾತ್ರ ಇಂಥಹ ಮಾವು ವರದಾನವಾಗುತ್ತದೆ.
ಬೆಲೆ ಸಿಗದೆ ಇರುವ ಮಾವನ್ನು ತಂದು, ಮನೆಯ ಮಂದಿಯೆಲ್ಲ ಕತ್ತರಿಸುವುದು, ಮನೆಯ ಮುಂದೆ ಬಿಸಿಲಲ್ಲಿ ಒಣಗಿಸೋದು ನಂತರ ಅದಕ್ಕೆ ಉಪ್ಪು, ಖಾರ ಬೆರಸಿ ಆಮ್ ಚೂರ್ ಮಾಡಿ, ಮಾವಿನ ಉತ್ಪನ್ನಗಳನ್ನು ತಯಾರು ಮಾಡಿ ಮಾರಾಟ ಮಾಡಿದರೆ ಇದರಿಂದ ಕೆಜಿ ಗೆ 25 ರಿಂದ 30 ರೂಪಾಯಿ ಮಾರಾಟವಾಗುತ್ತದೆ. ಬಂಡವಾಳವೇ ಇಲ್ಲದೆ ಸ್ವಲ್ಪ ಶ್ರಮ ಹಾಕಿದರೆ ಒಳ್ಳೆಯ ಲಾಭ ಸಿಗುತ್ತದೆ ಎಂದು ಮಾವಿನ ಉತ್ಪನ್ನಗಳನ್ನು ತಯಾರು ಮಾಡುವ ಜಬೀನಾ ತಾಜ್ ತಿಳಿಸಿದ್ದಾರೆ.
ಒಟ್ಟಾರೆ ಮಾವು ಬೆಳೆಗಾರರ ಜೊತೆಗೆ ಬಂಡವಾಳವೆ ಇಲ್ಲದೆ ತಾಜಾ ಹಾಗೂ ರುಚಿಕರ ಮಾವಿನ ಉತ್ಪನ್ನಗಳನ್ನು ನೀಡುವಲ್ಲಿ ಶ್ರೀನಿವಾಸಪುರ ಜನರು ಮುಂದಾಗಿದ್ದಾರೆ. ಬರೀ ಮಾವು ಬೆಳೆಗಾರರಲ್ಲ ಮಾವಿನ ನೆರಳಲ್ಲೂ ಕೂಡಾ ಅದೆಷ್ಟೋ ಬಡವರ ಜೀವನ ಹಸನಾಗುತ್ತದೆ ಎನ್ನುವುದಕ್ಕೆ ಇವರೇ ಸಾಕ್ಷಿ.
ಇದನ್ನೂ ಓದಿ:
ಲಾಕ್ಡೌನ್ನಿಂದಾಗಿ ಭೂಮಿ ಪಾಲಾದ ನೇರಳೆ ಹಾಗೂ ಮಾವು ಫಸಲು; ಬೀದರ್ ಜಿಲ್ಲೆಯ ರೈತರಲ್ಲಿ ಹೆಚ್ಚಿದ ಆತಂಕ
3 ಎಕರೆಯಲ್ಲಿ ವಿವಿಧ ತಳಿಯ ಮಾವು ಬೆಳೆದು ಕೃಷಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ ಯಾದಗಿರಿ ರೈತ