ಗಡಿ ಭಾಗದ ಸಿರಿಧಾನ್ಯ: ಕೋಲಾರ ಜಿಲ್ಲೆಯ ರೈತರ ಕೈ ಹಿಡಿದ ಕಾಮಕಸ್ತೂರಿ ಬೆಳೆ

ಕಾಮಕಸ್ತೂರಿ ಸಿರಿಧಾನ್ಯ ಉತ್ತಮ ಆದಾಯ ತರುವುದಷ್ಟೇ ಅಲ್ಲ ಅದರ ಸೇವನೆ ಮಾಡುವುದರ ಉಪಯೋಗಗಳು ಹಲವಾರಿದೆ, ಇದರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ. ಜೊತೆಗೆ ಇದನ್ನು ಸೌಂದರ್ಯ ವರ್ಧಕವಾಗಿಯೂ ಬಳಕೆ ಮಾಡಲಾಗುತ್ತದೆ.

  • Publish Date - 5:11 pm, Tue, 16 February 21 Edited By: sadhu srinath
ಗಡಿ ಭಾಗದ ಸಿರಿಧಾನ್ಯ: ಕೋಲಾರ ಜಿಲ್ಲೆಯ ರೈತರ ಕೈ ಹಿಡಿದ ಕಾಮಕಸ್ತೂರಿ ಬೆಳೆ
ಕಾಮಕಸ್ತೂರಿ ಸಿರಿಧಾನ್ಯ

ಕೋಲಾರ : ಅದು ಕಾಡಂಚಿನ ಗ್ರಾಮಗಳ ರೈತರಿಗೆ ವರದಾನವಾಗಿರುವ ಸಿರಿಧಾನ್ಯ, ಕಾಡು ಪ್ರಾಣಿಗಳ ಉಪಟಳದಿಂದ ಬೇಸತ್ತಿರುವ ರೈತರಿಗೆ ಹೆಚ್ಚು ಆಯಾಸವಿಲ್ಲದೆ ಸಿರಿ ತಂದು ಕೊಡುವ ಧಾನ್ಯವದು. ಅಷ್ಟೇ ಏಕೆ!? ಆದನ್ನು ತಿನ್ನುವ ಜನರಿಗೂ ಕೂಡಾ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಾಣುವುದರಲ್ಲಿ ಅನುಮಾನವಿಲ್ಲ, ಅಂತಹದೊಂದು ಸಿರಿಧಾನ್ಯ ಯಾವುದು ಅಂತೀರಾ ಇಲ್ಲಿದೆ ನೋಡಿ.

ಕಾಡು ಪ್ರಾಣಿಗಳು ತಿನ್ನದ, ಭರ್ಜರಿ ಆದಾಯ ತರುವ ಬೆಳೆ:
ಕೋಲಾರ ಜಿಲ್ಲೆ ಬಂಗಾರಪೇಟೆ ಹಾಗೂ ಮಾಲೂರು ತಾಲ್ಲೂಕಿನ ಗಡಿ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಉಪಟಳಕ್ಕೆ ಜನರು ಬೇಸತ್ತು ಹೋಗಿದ್ದಾರೆ. ಬಯಲು ಸೀಮೆ ಜಿಲ್ಲೆಯಲ್ಲಿ ನೀರಿಲ್ಲದ ಪರಿಸ್ಥಿತಿಯಲ್ಲಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಆನೆ, ಜಿಂಕೆ, ಕಾಡುಹಂದಿಗಳು ತಿಂದು ತೇಗುತ್ತಿವೆ. ಪರಿಣಾಮ ರೈತರು ಬೆಳೆದ ಬೆಳೆ ಕೈಗೆ ಬಾರದೆ, ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎನ್ನುವಂತಾಗಿದೆ ಗಡಿ ಗ್ರಾಮಗಳ ರೈತರ ಪರಿಸ್ಥಿತಿ. ಅದಕ್ಕಾಗಿಯೇ ಇತ್ತೀಚೆಗೆ ಬಂಗಾರಪೇಟೆ ತಾಲ್ಲೂಕು ಲಕ್ಕನಹಳ್ಳಿ, ಕೇತಗಾನಹಳ್ಳಿ, ತಾವರೆಕೆರೆ ಸೇರಿದಂತೆ ಹಲವು ರೈತರು ಕಾಡುಪ್ರಾಣಿಗಳು ಮುಟ್ಟದಂತ ಚಿಯಾ ಎನ್ನುವ ಸಿರಿಧಾನ್ಯದ ಬೆಳೆಯಲು ಶುರುಮಾಡಿದ್ದಾರೆ.

ಇದನ್ನೂ ಓದಿ: ಆರೋಗ್ಯ ವೃದ್ಧಿಗಾಗಿ ಸೇವಿಸಿ ಸಬ್ಜಾ ಬೀಜಗಳು!

ನೀರಿಲ್ಲದ ಬಯಲು ಸೀಮೆ ಜಿಲ್ಲೆಗಳಿಗೆ ಸೂಕ್ತ ಬೆಳೆ:
ಈ ಚಿಯಾ ಬೆಳೆಯನ್ನು ಕಾಡು ಪ್ರಾಣಿಗಳು ತಿನ್ನುವುದಿಲ್ಲ ಜೊತೆಗೆ ನೀರಿಲ್ಲದ ಬಯಲು ಸೀಮೆ ಜಿಲ್ಲೆಗಳಲ್ಲಿ ಬೆಳೆಯಲು ಉತ್ತಮ ಬೆಳೆಯಾಗಿದ್ದು, ಅಧಿಕ ಆದಾಯ ಕೊಡುವ ಬೆಳೆ ಎನ್ನುವುದು ಸದ್ಯ ರೈತರ ಮಾತು. ನೀರಿಲ್ಲದೆ ಹೆಚ್ಚಿನ ಖರ್ಚಿಲ್ಲದೆ ಈ ಬೆಳೆಯನ್ನು ಬೆಳೆಯಬಹುದಾಗಿದ್ದು, ಪ್ರಾಣಿಗಳ ಹಾವಳಿ ಇಲ್ಲದ ಕಾರಣ ಇದನ್ನ ಕಾವಲು ಕಾಯುವ ಅವಶ್ಯಕತೆಯೂ ಕೂಡ ಇಲ್ಲ. ಕೇವಲ ಉತ್ತಮ ನಿರ್ವಹಣೆ ಮಾಡಿದರೆ ಸಾಕು ಒಳ್ಳೆಯ ಬೆಳೆ ತೆಗೆಯಬಹುದು.

besil seeds

ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ಕಾಮಕಸ್ತೂರಿ

ಮೆಕ್ಸಿಕೋ ಮೂಲದ ಬೆಳೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​!
ಚಿಯಾ ಎನ್ನುವ ಈ ಸಿರಿಧಾನ್ಯವನ್ನು ಕನ್ನಡದಲ್ಲಿ ಕಾಮಕಸ್ತೂರಿ ಧಾನ್ಯ ಎಂದು ಕರೆಯಲಾಗುತ್ತದೆ. ಮೆಕ್ಸಿಕೋ ಮೂಲದ ಈ ಸಿರಿಧಾನ್ಯಕ್ಕೆ ವಿಶ್ವದಾದ್ಯಂತ ಹೆಚ್ಚಿನ ಬೇಡಿಕೆ ಇದ್ದು, ಮಾರುಕಟ್ಟೆಯಲ್ಲಿ ಕೆ.ಜಿ. ಕಾಮಕಸ್ತೂರಿ ಬೀಜಕ್ಕೆ 800-1000 ರೂಪಾಯಿ ಇದೆ. ಅದೇ ರೀತಿ ಒಂದು ಕ್ವಿಂಟಾಲ್​ಗೆ ಸುಮಾರು 70,000 ರಿಂದ 80,000 ರೂಪಾಯಿವರೆಗೆ ಬೆಲೆ ಇದೆ. ಇನ್ನು ಈ ಬೆಳೆಯನ್ನು ಬೆಳೆಯಲು ಹೆಚ್ಚಾಗಿ ಖರ್ಚು ಸಹ ಆಗುವುದಿಲ್ಲ. ಹೀಗಾಗಿಯೇ ಗಡಿ ಗ್ರಾಮಗಳ ರೈತರಿಗೆ ಇದು ಉತ್ತಮ ಬೆಳೆ ಎನ್ನುತ್ತಿದ್ದಾರೆ. ಸದ್ಯ ಲಕ್ಕನಹಳ್ಳಿ ಗ್ರಾಮದ ಹಂಸಗಿರಿ ಮತ್ತು ಸುಬ್ಬಮ್ಮ ಎಂಬ ರೈತರು ಈ ಬೆಳೆ ಬೆಳೆದಿದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.

besil seeds

ಗಡಿ ಭಾಗದ ಸಿರಿಧಾನ್ಯ

ಕಾಮಕಸ್ತೂರಿ ಸಿರಿಧಾನ್ಯದಿಂದ ಉಪಯೋಗಗಳು ಹತ್ತಾರು!
ಈ ಕಾಮಕಸ್ತೂರಿ ಸಿರಿಧಾನ್ಯ ಉತ್ತಮ ಆದಾಯ ತರುವುದಷ್ಟೇ ಅಲ್ಲ ಅದರ ಸೇವನೆ ಮಾಡುವುದರ ಉಪಯೋಗಗಳು ಹಲವಾರಿವೆ. ಇದರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ. ಜೊತೆಗೆ ಇದನ್ನು ಸೌಂದರ್ಯ ವರ್ಧಕವಾಗಿಯೂ ಬಳಕೆ ಮಾಡಲಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳಲು ಈ ಕಾಮಕಸ್ತೂರಿ ಬೀಜವನ್ನು ಬಳಸಲಾಗುತ್ತದೆ. ಹೀಗಾಗಿಯೇ ಮಾರುಕಟ್ಟೆಯಲ್ಲಿ ಕಾಮಕಸ್ತೂರಿ ಸಿರಿಧಾನ್ಯಕ್ಕೆ ಉತ್ತಮ ಬೇಡಿಕೆ ಇದೆ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ರೂಪಾದೇವಿ ತಿಳಿಸಿದ್ದಾರೆ.

basil seeds

ಮೆಕ್ಸಿಕೋ ಮೂಲದ ಬೆಳೆ ಕಾಮಕಸ್ತೂರಿ

ಒಟ್ಟಿನಲ್ಲಿ ಕಾಮಕಸ್ತೂರಿ ಎನ್ನುವ ಸಿರಿಧಾನ್ಯ ಸದ್ಯದ ಪರಿಸ್ಥಿತಿಯಲ್ಲಿ ಕಾಡಂಚಿನ ಗ್ರಾಮದ ರೈತರಿಗೆ ಅದರಲ್ಲೂ ಬಯಲು ಸೀಮೆ ಪ್ರದೇಶಕ್ಕೆ ಹೇಳಿ ಮಾಡಿಸಿದ ಬೆಳೆಯಾಗಿದ್ದು, ಕಾಡುಪ್ರಾಣಿಗಳ ಉಪಟಳದಿಂದ ಬೇಸತ್ತು ಹೋಗಿರುವ ರೈತರ ಬದುಕಲ್ಲಿ ಸಿರಿ ಸಂಪತ್ತು ತರುವಲ್ಲಿ ಸಹಾಯಕವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿಎಳೆ ಜೋಳ ತಿಂದು ರೈತರ ಜೊತೆ ಜೂಟಾಟ ಆಡುತ್ತಿರುವ ಗಿಳಿಗಳು! ತೆನೆ ರಕ್ಷಣೆಗೆ ಹಾವೇರಿ ಅನ್ನದಾತನ ಹರಸಾಹಸ