ಬರಡು ಭೂಮಿಯಲ್ಲಿ ಮಿಶ್ರ ಬೆಳೆ ಬೆಳೆದ ಸಾಹಸಿ ರೈತ; ಮಳೆ ನೀರನ್ನೇ ಆಧಾರವಾಗಿಸಿ ವರ್ಷಕ್ಕೆ 10 ಲಕ್ಷ ರೂ. ಆದಾಯ
ಸುದಾನಂದ ತಮಗಿರುವ 3 ಎಕರೆ ಜಮೀನಿನಲ್ಲಿ ಸಿಗುವ ಮಳೆ ನೀರಿನಲ್ಲಿ ವಾರ್ಷಿಕ ಮೂರು ಬೆಳೆಗಳನ್ನು ಬೆಳೆಯುತ್ತಾರೆ. ಸೇವಂತಿ, ಬಿನ್ಸ್, ದನಿಯಾ ಮತ್ತು ಮೂಲಂಗಿ, ಕ್ಯಾರೆಟ್ ಹೀಗೆ ಹಲವು ಬಗೆಯ ಬೆಳೆಗಳನ್ನು ಬೆಳೆದು ವಾರ್ಷಿಕ ಸರಾಸರಿ ಹತ್ತು ಲಕ್ಷ ರೂಪಾಯಿ ಅದಾಯ ಗಳಿಸುತ್ತಿದ್ದಾರೆ.
ಕೋಲಾರ: ಬರದ ನಾಡಿನಲ್ಲಿ ನೀರಿಲ್ಲದೆ ಕೃಷಿಯನ್ನೇ ಬಿಡಬೇಕು ಎಂದುಕೊಂಡಿರುವ ರೈತರು ಹಲವರು. ಇಲ್ಲಿ ಬೀಳುವ ಮಳೆಗೆ ಒಣಬೇಸಾಯ ಮಾಡುವುದೇ ಕಷ್ಟ. ಹೀಗಿರುವಾಗ ಮಳೆ ನೀರಲ್ಲಿ ವಾಣಿಜ್ಯ ಬೆಳೆ ಬೆಳೆಯುವುದು ಕನಸಿನ ಮಾತು. ಇಂಥ ರೈತರ ನಡುವೆ ಮಳೆ ಹನಿಯನ್ನೇ ನಂಬಿಕೊಂಡು, ಹನಿ ನೀರನ್ನು ಬಂಗಾರವನ್ನಾಗಿಸಿಕೊಂಡು ಕೃಷಿ ಮಾಡಿ ರೈತರೊಬ್ಬರು ಯಶಸ್ವಿಯಾಗಿದ್ದಾರೆ.
ಕೃಷಿಹೊಂಡದಲ್ಲಿ ಸಮೃದ್ಧವಾಗಿ ತುಂಬಿಕೊಂಡಿರುವ ಮಳೆ ನೀರು, ಮನೆ ಹಾಗೂ ಜಮೀನಿನ ಸುತ್ತಲೂ ಮಳೆ ನೀರು ಹಿಡಿದಿಡಲು ಮಾಡಿರುವ ಮಳೆ ಕೊಯ್ಲು ವಿಧಾನ, ಮತ್ತೊಂದೆಡೆ ತಮ್ಮ ಭೂಮಿಯಲ್ಲಿ ಬೆಳೆದಿರುವ ಬಂಗಾರದಂತ ಬೆಳೆಗಳು ಇದೆಲ್ಲಾ ಕಂಡು ಬಂದಿದ್ದು, ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹೆಡಗಿನಬೆಲೆ ಗ್ರಾಮದಲ್ಲಿ. ಹೌದು, ಇದೆ ಗ್ರಾಮದ ಸುದಾನಂದಾ ಎಂಬ ಯುವ ರೈತ ಕಳೆದ ಹತ್ತು ವರ್ಷಗಳಿಂದ ವ್ಯವಸಾಯವನ್ನೇ ನಂಬಿಕೊಂಡು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ.
ಈ ರೈತನ ಮೂಲ ಮಳೆ. ಬರದ ನಾಡಲ್ಲಿ ಮಳೆ ನಂಬಿ ಬದುಕುವುದು ಅಂದರೆ, ನಿಜಕ್ಕೂ ನಂಬಲು ಕಷ್ಟ. ಏಕೆಂದರೆ ಕೋಲಾರ ಜಿಲ್ಲೆಯಲ್ಲಿ ಜನರಿಗೆ ಕುಡಿಯುವುದಕ್ಕೆ ನೀರು ಸಿಗುವುದು ಕಷ್ಟ. ಇಂಥ ಪರಿಸ್ಥಿತಿಯಲ್ಲಿ ವ್ಯವಸಾಯ ಮಾಡುವುದು ಹೇಗೆ? ಎನ್ನುವ ಪ್ರಶ್ನೆ ಮೂಡದೆ ಇರದು. ಹೀಗಿರುವಾಗ ರೈತ ಸುದಾನಂದ ತಮಗಿರುವ ಭೂಮಿಯಲ್ಲಿ ಮಳೆಯನ್ನೇ ನಂಬಿಕೊಂಡು ಮಿಶ್ರ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ.
ಮಳೆಯ ನೀರನ್ನೇ ಸಂಗ್ರಹಿಸಲು, ತಮಗಿರುವ ಜಮೀನಿನಲ್ಲಿ ಕೃಷಿ ಹೊಂಡವನ್ನು ಮಾಡಿಕೊಂಡು, ಇದರಲ್ಲಿ ಹನಿ ಹನಿ ನೀರನ್ನು ಹಿಡಿದಿಟ್ಟುಕೊಂಡು ಹಲವು ಬಗೆಯ ಬೆಳೆಗಳನ್ನು ಬೆಳೆದು ತೋರಿಸಿದ್ದಾರೆ. ಸುದಾನಂದಾ ತಮ್ಮ ಮನೆಯ ಸುತ್ತಲೂ ಹಾಗೂ ಜಮೀನಿನ ಪ್ರಮುಖ ಸ್ಥಳಗಳಲ್ಲಿ ಮಳೆ ಕೊಯ್ಲು ವಿಧಾನವನ್ನು ಅಳವಡಿಸಿಕೊಂಡು ಹನಿ ಹನಿ ನೀರನ್ನು ಸಂಗ್ರಹಿಸಿ, ಅದರಲ್ಲಿ ತಮ್ಮ ಮೂರು ಎಕರೆ ಭೂಮಿಯಲ್ಲಿ ಸಮೃದ್ಧ ಬೆಳೆ ಬೆಳೆಯುತ್ತಿದ್ದಾರೆ.
ಸುದಾನಂದ ತಮಗಿರುವ 3 ಎಕರೆ ಜಮೀನಿನಲ್ಲಿ ಸಿಗುವ ಮಳೆ ನೀರಿನಲ್ಲಿ ವಾರ್ಷಿಕ ಮೂರು ಬೆಳೆಗಳನ್ನು ಬೆಳೆಯುತ್ತಾರೆ. ಸೇವಂತಿ, ಬಿನ್ಸ್, ದನಿಯಾ ಮತ್ತು ಮೂಲಂಗಿ, ಕ್ಯಾರೆಟ್, ಬೀಟ್ರೋಟ್ ಹೀಗೆ ಹಲವು ಬಗೆಯ ಬೆಳೆಗಳನ್ನು ಬೆಳೆದು ವಾರ್ಷಿಕ ಸರಾಸರಿ ಹತ್ತು ಲಕ್ಷ ರೂಪಾಯಿ ಅದಾಯ ಗಳಿಸುತ್ತಿದ್ದಾರೆ. ಇವರ ಲೆಕ್ಕಾಚಾರದ ಪ್ರಕಾರ ಸುದಾನಂದ ಒಂದು ಬೆಳೆಯಲ್ಲಿ ಮೂರು ಲಕ್ಷದಷ್ಟು ಆದಾಯ ಗಳಿಸುತ್ತಿದ್ದಾರೆ. ಅಂದರೆ ಮೂರು ಬೆಳೆಗೆ ಒಟ್ಟು ಸಾರಾಸರಿ ಹತ್ತು ಲಕ್ಷ ರೂ. ಗಳಿಸುವ ಮೂಲಕ ನೆಮ್ಮದಿಯ ಆರ್ಥಿಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಇವರ ಕೃಷಿ ಬದುಕು ಅಕ್ಕಪಕ್ಕದ ನೂರಾರು ರೈತರಿಗೆ ಮಾದರಿಯಾಗಿದೆ.
ಒಟ್ಟಾರೆ ರೈತ ಪ್ರಕೃತಿಯಲ್ಲಿ ಸಿಗುವ ಸೌಲಭ್ಯಗಳನ್ನೇ ಸಮರ್ಪಕವಾಗಿ ಬಳಸಿಕೊಳ್ಳುವ ವಿಧಾನವನ್ನು ಕಲಿತರೆ ಸಾಕು. ಭೂಮಿ ಎಂದಿಗೂ ನಮ್ಮನ್ನು ಕೈಬಿಡುವುದಿಲ್ಲ ಎನ್ನುವುದಕ್ಕೆ ಸುದಾನಂದರ ಆನಂದದ ಬದುಕೇ ಸಾಕ್ಷಿ.
ವರದಿ: ರಾಜೇಂದ್ರಸಿಂಹ
ಇದನ್ನೂ ಓದಿ: ತರಕಾರಿ ಬೆಳೆದು ನಷ್ಟ ಅನುಭವಿಸಿದ ರೈತರ ಕೈ ಹಿಡಿಯಿತು ಡ್ರ್ಯಾಗನ್ ಫ್ರೂಟ್; ಲಾಕ್ಡೌನ್ ಇದ್ದರೂ ಆದಾಯಕ್ಕೆ ಮೋಸವಿಲ್ಲ
ಬರದ ನಾಡಲ್ಲಿ ಶ್ರೀಗಂಧ ಬೆಳೆದ ಸಾಹಸಿ, ಮಿಶ್ರ ಪದ್ಧತಿ ಬೇಸಾಯದಿಂದ ಸುಧಾರಿಸಿತು ರೈತನ ಆದಾಯ
Published On - 9:46 am, Fri, 8 October 21