ಚಿನ್ನ ಉತ್ಪಾದನೆ ಬಂದ್: ಹಟ್ಟಿ ಚಿನ್ನದ ಗಣಿಯ ಸಮುದಾಯ ಭವನ ಕೊವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ

Hatti Gold Mining: ಹಟ್ಟಿಯ ಕ್ಯಾಂಪಸ್​ನಲ್ಲಿರುವ ಒಟ್ಟು 120 ಹಾಸಿಗೆ ಸಾಮಾರ್ಥ್ಯದ ಆಸ್ಪತ್ರೆಯಲ್ಲಿ 40 ಹಾಸಿಗೆಗಳನ್ನು ಆಮ್ಲಜನಕ ಯುಕ್ತ ಹಾಸಿಗೆಗಳನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ.

ಚಿನ್ನ ಉತ್ಪಾದನೆ ಬಂದ್: ಹಟ್ಟಿ ಚಿನ್ನದ ಗಣಿಯ ಸಮುದಾಯ ಭವನ ಕೊವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ
ಸಚಿವ ಮುರುಗೇಶ್​ ನಿರಾಣಿ

ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಹಟ್ಟಿ ಚಿನ್ನದ ಗಣಿಯಲ್ಲಿ ಚಿನ್ನ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಅಲ್ಲದೇ, ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿರುವ ಸಮುದಾಯ ಭವನವನ್ನು ಕೊವಿಡ್ ಕೇರ್ ಸೆಂಟರ್​ ಆಗಿ ಬಳಸಲು ಚಿನ್ನದ ಗಣಿ ಆಡಳಿತ ಮಂಡಳಿ ನಿರ್ಧರಿಸಿದೆ. ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್.ಆರ್.ನಿರಾಣಿ ನೀಡಿದ ಸಲಹೆ ಮೇರೆಗೆ ಹಟ್ಟಿಯಲ್ಲಿರುವ ಸಮುದಾಯ ಭವನವನ್ನು ಕೋವಿಡ್ ಕೇರ್ ಸೆಂಟರ್​ ಆಗಿ ಬಳಕೆಮಾಡಿಕೊಳ್ಳಲು ಮುಂದಾಗಿದೆ.

ಹಟ್ಟಿಯ ಕ್ಯಾಂಪಸ್​ನಲ್ಲಿರುವ ಒಟ್ಟು 120 ಹಾಸಿಗೆ ಸಾಮಾರ್ಥ್ಯದ ಆಸ್ಪತ್ರೆಯಲ್ಲಿ 40 ಹಾಸಿಗೆಗಳನ್ನು ಆಮ್ಲಜನಕ ಯುಕ್ತ ಹಾಸಿಗೆಗಳನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಈಗಾಗಲೇ ಹಟ್ಟಿ ಚಿನ್ನದ ಗಣಿ ವ್ಯವಸ್ಥಾಪಕ ನಿದೇರ್ಶಕರು ಸೇರಿದಂತೆ ಮತ್ತಿತರರ ಜೊತೆ ಸಚಿವ ನಿರಾಣಿ ಮಾತುಕತೆ ನಡೆಸಿದ್ದಾರೆ. ಹಟ್ಟಿಯ ಚಿನ್ನದ ಗಣಿಯಲ್ಲಿ ಸಾವಿರಾರು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಗ್ರಾಮದಲ್ಲೂ ಸಾವಿರಾರು ಸಂಖ್ಯೆಯ ಜ‌ನರಿದ್ದು, ಯಾರಿಗಾದರೂ ಸೋಂಕು ಕಾಣಿಸಿಕೊಂಡರೆ ತಕ್ಷಣವೇ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಸಮುದಾಯ ಭವನ ಬಳಕೆಮಾಡಿಕೊಳ್ಳುವುದು ಸರಿಯಾದ ಮಾರ್ಗವೆಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಸಂಬಂಧಪಟ್ಟವರ ಜೊತೆ ಚಿನ್ನದ ಗಣಿ ಆಡಳಿತ ಮಂಡಳಿ ಮಾತುಕತೆ ನಡೆಸಿದೆ.

ಹಟ್ಟಿ ಚಿನ್ನದ ಗಣಿಯಲ್ಲಿ ಕೇಂದ್ರ ಸರಕಾರಿ ಒಡೆತನದ ಕೇಂದ್ರೀಯ ವಿದ್ಯಾಲಯವಿದ್ದು, ಇದನ್ನು ಸಹಾ ಕೊವಿಡ್ ಕೇರ್ ಸೆಂಟರ್ ಆಗಿ ಬಳಸಲು ಯೋಚಿಸಲಾಗಿದೆ. ಈ ಜಾಗವು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಒಡೆತನಕ್ಕೆ ಸೇರಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಚಿವ ಮುರುಗೇಶ್ ನಿರಾಣಿ ಅವರು ಮಾತುಕತೆಯ ನಡೆಸಿದ್ದು, ಇದು ಕೂಡ ಫಲಪ್ರದವಾಗಿದೆ ಸಂಭವವಿದೆ.

ರಾಜ್ಯದಲ್ಲಿ ಈಗ ಚಿನ್ನ ಉತ್ಪಾದಿಸುವ ಏಕೈಕ ಗಣಿ ಇರುವ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯು ಕೊರೊನಾ ಎರಡನೆಯ ಅಲೆಯ ಹಿನ್ನಲೆ ಈ ವರ್ಷವೂ ಬಂದ್ ಮಾಡಲಾಗಿದೆ. ಹಟ್ಟಿ ಚಿನ್ನದ ಗಣಿಯಲ್ಲಿ, ಮೇ 24 ರವರೆಗೂ ಗಣಿ ಚುಟುವಟಿಕೆ ಬಂದ್ ಮಾಡಿ ಹಟ್ಟಿ ಚಿನ್ನದ ಗಣಿ ಕಂಪನಿಯೂ ಆದೇಶ ಹೊರಡಿಸಿದೆ.

ಸಿಬ್ಬಂದಿ ಮನೆಯಲ್ಲಿ ಇರುವಂತೆ ಹಟ್ಟಿ ಕಂಪನಿ ಆಡಳಿತ ಮಂಡಳಿ ಆದೇಶ ಹೊರಡಿಸಿದ್ದು, ಹಟ್ಟಿ ಚಿನ್ನದ ಗಣಿ ಆಸ್ಪತ್ರೆ, ಸೇರಿದಂತೆ ಅವಶ್ಯಕ ವಿಭಾಗ ಎಂದಿನಂತೆ ಕಾರ್ಯನಿರ್ವಹಣೆ ಮಾಡಲಿದೆ. ಸಿಬ್ಬಂದಿ ಹಟ್ಟಿ ಕೇಂದ್ರ ಸ್ಥಾನ ಬಿಡುವಾಗ ಅನುಮತಿ ಪಡೆದು ಹೋಗಲು ಆದೇಶದಲ್ಲಿ ಸೂಚನೆ ನೀಡಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಚಿನ್ನದ ಗಣಿ ಬಂದ್ ಮಾಡಿ ಆದೇಶ ಮಾಡಲಾಗಿದೆ.

ರಾಯಚೂರು ಜಿಲ್ಲೆ ಹಟ್ಟಿ ಚಿನ್ನದ ಗಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿಧ೯ರಿಸಲಾಗಿದೆ. ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಿರುವ ಕಾರಣ ಕೆಲ ದಿನಗಳ ಮಟ್ಟಿಗೆ ಕಾಯಾ೯ಚಟುವಟಿಕೆ ಸ್ಥಗಿತಮಾಡಲಾಗಿದೆ.ನಮಗೆ ಲಾಭ ನಷ್ಟಕ್ಕಿಂತ ಕಾರ್ಮಿಕರ ಹಿತ ಮುಖ್ಯ ಎಂದು ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ಮುರುಗೇಶ್. ಆರ್.ನಿರಾಣಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಕೊವಿಡ್ ರೂಪಾಂತರಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ Indian ಪದ ಬಳಸಿಲ್ಲ

ಸಂಸದ ತೇಜಸ್ವಿ ಸೂರ್ಯ ಮತ್ತಿತರರ ವಿರುದ್ಧದ ಪಿಐಎಲ್ ರಾಜಕೀಯ ಪ್ರೇರಿತವಾದದ್ದು; ವಿಚಾರಣೆಗೆ ನಿರಾಕರಿಸಿದ ಹೈಕೋರ್ಟ್

(Gold Production stopped in Hutti Gold Mine Community House Converted into covid care centre)