ಗರ್ಭಿಣಿಯರ ಕಾಳಜಿಯಲ್ಲಿ ಮುಖ್ಯ ಪಾತ್ರ ವಹಿಸಿರುವ ಕೋಲಾರದ ದರ್ಗಾ ಮೊಹಲ್ಲಾದ ಸರ್ಕಾರಿ ಆಸ್ಪತ್ರೆ

ಮಗು ಕಳ್ಳತನ ಆಗಬಾರದು ಎಂದು ಆಸ್ಪತ್ರೆಯ ಮೂಲೆ ಮೂಲೆಗೂ ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಸಹ ಮಾಡಲಾಗಿದ್ದು, ಒಳ್ಳೆಯ ಭದ್ರತೆ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಹೀಗೆ ಇಷ್ಟೆಲ್ಲಾ ಅನುಕೂಲ ಇರುವ ಆಸ್ಪತ್ರೆ ಜಿಲ್ಲೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿದೆ.

  • ರಾಜೇಂದ್ರಸಿಂಹ
  • Published On - 21:04 PM, 26 Feb 2021
ಗರ್ಭಿಣಿಯರ ಕಾಳಜಿಯಲ್ಲಿ ಮುಖ್ಯ ಪಾತ್ರ ವಹಿಸಿರುವ ಕೋಲಾರದ ದರ್ಗಾ ಮೊಹಲ್ಲಾದ ಸರ್ಕಾರಿ ಆಸ್ಪತ್ರೆ
ಕೋಲಾರದ ಸರ್ಕಾರಿ ಆಸ್ಪತ್ರೆಯ ದೃಶ್ಯ

ಕೋಲಾರ: ಇತ್ತೀಚೆಗೆ ಹೆರಿಗೆ ಮಾಡಿಸುವುದು ಎಂದರೆ ದೊಡ್ಡ ಮಟ್ಟದಲ್ಲಿ ಹಣ ಮಾಡುವ ವ್ಯಾಪಾರವಾಗಿ ಬಿಟ್ಟಿದೆ. ಇದರ ಪರಿಣಾಮ ನಾರ್ಮಲ್​ ಡಿಲವರಿ ಎನ್ನುವುದು ಕನಸಾಗಿ ಹೋಗಿದೆ. ಅದು ಖಾಸಗಿ ಆಸ್ಪತ್ರೆ ಆಗಿರಲಿ, ಸರ್ಕಾರಿ ಆಸ್ಪತ್ರೆ ಆಗಿರಲಿ ಮಾನವೀಯತೆಯನ್ನು ಮರೆತು ಹಣ ಅಪೇಕ್ಷಿಸುವುದು ಸಾಮಾನ್ಯ ವಿದ್ಯಮಾನ ಎನಿಸಿದೆ. ಇಂತಹ ಆಸ್ಪತ್ರೆಗಳ ನಡುವೆ ಕೋಲಾರದಲ್ಲಿನ ನಾರ್ಮಲ್​ ಡಿಲವರಿ ಸೆಂಟರ್​ ನೂರಾರು ಜನರಿಗೆ ನೆರವಾಗಿದೆ.

ಕೋಲಾರದ ದರ್ಗಾ ಮೊಹಲ್ಲಾದ ಸರ್ಕಾರಿ ಆಸ್ಪತ್ರೆ ಇದಾಗಿದ್ದು, ಖಾಸಗಿ ಆಸ್ಪತ್ರೆಗಳನ್ನು ನಾಚಿಸುವಂತಹ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಗಿನ ಕಾಲದಲ್ಲಿ ಸೂಲಗಿತ್ತಿಯರು ಹೆರಿಗೆ ಮಾಡಿಸುವ ವಿಧಾನ ಇಂದಿನ ಕಾಲದ ಎಂಬಿಬಿಎಸ್ ಮಾಡಿಕೊಂಡು ಬಂದಿರುವ ಡಾಕ್ಟರ್​ಗಳಿಗೆ ಮರೆತು ಹೋಗಿದೆ ಎನ್ನುವಂತಾಗಿದೆ. ಏಕೆಂದರೆ ಯಾವ ಆಸ್ಪತ್ರೆಗೆ ಹೋದರೂ ಕೈಯಲ್ಲಿ ಕತ್ರಿ ಹಿಡಿದುಕೊಂಡು ಸಿಜರಿಯನ್ ಮಾಡುವುದಕ್ಕೆ ನಿಂತಿರುತ್ತಾರೆ.

ನೂರಕ್ಕೆ ಒಬ್ಬರಿಗೆ ನಾರ್ಮಲ್​ ಡಿಲವರಿ ಮಾಡಿದರೆ ಹೆಚ್ಚು, ಆದರೆ ಕೋಲಾರ ನಗರದಲ್ಲಿರುವ ದರ್ಗಾ ಮೊಹಲ್ಲಾದ ಹೆರಿಗೆ ಆಸ್ಪತ್ರೆಯಲ್ಲಿ ಮಾತ್ರ ಡಾಕ್ಟರ್​ಗಳು ಹಳೆ ಕಾಲದ ಪದ್ಧತಿಯಂತೆ ಯಾವುದೇ ಖರ್ಚಿಲ್ಲದೆ ನಾರ್ಮಲ್​ ಡಿಲವರಿ ಮಾಡಿಸುತ್ತಿದ್ದಾರೆ. ಇಲ್ಲಿರುವ ಇಬ್ಬರು ವೈದ್ಯರು ಹಾಗೂ ಸ್ಟಾಫ್ ನರ್ಸ್​ಗಳು ಬರುವ ಗರ್ಭಿಣಿಯರಿಗೆ ಆರೈಕೆ ಮಾಡಿ, ಆತ್ಮಸ್ಥೈರ್ಯ ತುಂಬಿ ನಾರ್ಮಲ್​ ಡಿಲವರಿ ಮಾಡಿಸುತ್ತಿರುವ ವಿಧಾನ ಜಿಲ್ಲೆಯ ಇತರ ಖಾಸಗಿ ಆಸ್ಪತ್ರೆಗಳನ್ನು ನಾಚಿಸುವಂತಿದೆ.

kolar hospital

ಗರ್ಭಿಣಿಯರನ್ನು ಕಾಳಜಿಯಿಂದ ನೋಡಿಕೊಳ್ಳುವ ಸಿಬ್ಬಂದಿ

ಪ್ರತಿ ತಿಂಗಳಿಗೆ 60 ಕ್ಕೂ ಹೆಚ್ಚು ನಾರ್ಮಲ್​ ಡಿಲವರಿ ಇಲ್ಲಿ ಮಾಡಿಸಲಾಗುತ್ತಿದ್ದು, ಹೀಗಾಗಿಯೇ ಈ ಆಸ್ಪತ್ರೆಗೆ ಕೇವಲ ಕೋಲಾರ ಮಾತ್ರವಲ್ಲದೆ ಅಕ್ಕಪಕ್ಕದ ತಾಲೂಕು ಸೇರಿದಂತೆ ಬೇರೆ ಬೇರೆ ಜಿಲ್ಲೆಯವರೂ ಕೂಡ ಹೆರಿಗೆ ಮಾಡಿಸಿಕೊಳ್ಳಲು ಆಗಮಿಸುತ್ತಿದ್ದಾರೆ.

kolar hospital

ನಾರ್ಮಲ್​ ಡಿಲವರಿಗೆ ಆದ್ಯತೆ

ಇನ್ನು ಆಸ್ಪತ್ರೆಯಲ್ಲಿ ಕೇವಲ ಹೆರಿಗೆ ಮಾತ್ರವಲ್ಲ ಇಲ್ಲಿನ ಸ್ವಚ್ಛತೆ ಬಗ್ಗೆ ಯಾರು ಬೆರಳು ತೋರಿಸಿ ಮಾತನಾಡುವಂತ್ತಿಲ್ಲ ಅಷ್ಟರಮಟ್ಟಿಗೆ ಇಲ್ಲಿ ಶುಚಿತ್ವ ಕಾಪಾಡಿಕೊಳ್ಳಲಾಗಿದೆ. ಪ್ರತಿ ಗಂಟೆಗೊಮ್ಮೆ ನೆಲ ಸ್ವಚ್ಚಮಾಡುವುದು, ಸಣ್ಣ ಕಾಗದದ ತುಂಡು ಕಂಡರೂ ಕಸದ ತೊಟ್ಟಿಗೆ ಹಾಕುವುದನ್ನು ಇಲ್ಲಿನ ಆಯಾಗಳು ಚಾಚು ತಪ್ಪದೆ ಪಾಲಿಸುತ್ತಿದ್ದಾರೆ. ಇದರಿಂದ ಹಣವಂತರು ಕೂಡ ಖಾಸಗಿ ಆಸ್ಪತ್ರೆಗೆ ದಾಖಲಾಗದೆ, ಇಲ್ಲೇ ಪ್ರಾರಂಭದಿಂದ ಚಿಕಿತ್ಸೆ ಪಡೆದುಕೊಂಡು ಹೆರಿಗೆ ಮಾಡಿಸಿಕೊಳ್ಳುತ್ತಿದ್ದಾರೆ.

kolar hospital

ಸ್ವಚ್ಛತೆಗೆ ಹೆಸರುವಾಸಿಯಾದ ಸರ್ಕಾರಿ ಆಸ್ಪತ್ರೆ

ಡಿಲವರಿ ಆದ ಮೇಲೆ ತಾಯಿ ಹಾಗೂ ಮಗುವಿನ ಲೇಬರ್ ವಾರ್ಡ್​ನಿಂದ, ನಾರ್ಮಲ್​ ವಾರ್ಡ್​ಗೆ ಶಿಫ್ಟ್ ಮಾಡುವವರೆಗೂ ಇಲ್ಲಿ ಕೆಲಸ ಮಾಡುವ ವೈದ್ಯರು ಹಾಗೂ ನರ್ಸ್​ಗಳು ಅಷ್ಟೇ ಸುರಕ್ಷಿತವಾಗಿ ಕಾಲಜಿ ಮಾಡುತ್ತಾರೆ. ಅಷ್ಟೇ ಅಲ್ಲದೆ ಒಂದು ವೇಳೆ ನಾರ್ಮಲ್​ ಡೆಲವರಿ ಆಗದೇ ಇರುವ ಗರ್ಭಿಣಿಯರಿಗೆ ಮುಂಚಿತವಾಗಿಯೇ ವೈದ್ಯರು ತಿಳಿಸಿ ನೀವು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಎಂದು ಸಲಹೆ ಕೊಡುತ್ತಿರುವುದರಿಂದ ಗರ್ಭಿಣಿಯರು ಮುಂಜಾಗ್ರತೆ ತೆಗೆದುಕೊಳ್ಳುವುದಕ್ಕೂ ಅನುಕೂಲವಾಗಿದೆ.

ಜೊತೆಗೆ ಮಗು ಕಳ್ಳತನ ಆಗಬಾರದು ಎಂದು ಆಸ್ಪತ್ರೆಯ ಮೂಲೆ ಮೂಲೆಗೂ ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಸಹ ಮಾಡಲಾಗಿದ್ದು, ಒಳ್ಳೆಯ ಭದ್ರತೆ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಹೀಗೆ ಇಷ್ಟೆಲ್ಲಾ ಅನುಕೂಲ ಇರುವ ಆಸ್ಪತ್ರೆ ಜಿಲ್ಲೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿದೆ. ಒಟ್ಟಾರೆ ಮಾನವೀಯತೆ ಮರೆತು ಸದ ಹಣ ಮಾಡಲು ನಿಂತಿರುವ ವೈದ್ಯರ ನಡುವೆ, ಯಾವುದೇ ನಿರೀಕ್ಷೆ ಇಲ್ಲದೆ ತಮ್ಮ ಕರ್ತವ್ಯವನ್ನು ನಿಷ್ಟೆಯಿಂದ ಮಾಡುತ್ತಿರುವ ಇಂತಹ ವೈದ್ಯರನ್ನು ನೋಡಿಯೇ ಇರಬೇಕು ವೈದ್ಯೋ ನಾರಾಯಣೋ ಹರಿಃ ಎನ್ನುವ ಮಾತು ಬಂದಿದ್ದು.

ಇದನ್ನೂ ಓದಿ: Corona Vaccine: ಕೊರೊನಾ ಲಸಿಕೆ ಪಡೆದಿದ್ದ ಚಿಕ್ಕಬಳ್ಳಾಪುರದ ಆಶಾ ಕಾರ್ಯಕರ್ತೆ ಅಸ್ವಸ್ಥ; ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲು