ಬಿಸಿಲಿಗೆ ಬಾಡಿದ ಮಾವು; 88 ಕೋಟಿ ರೂ. ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಮನವಿ
ಹವಾಮಾನ ವೈಪರೀತ್ಯ, ಉಷ್ಣಾಂಶ ಹಾಗೂ ಬಾರಿ ಬರಗಾಲಕ್ಕೆ ತುತ್ತಾದ ಕಾರಣ ಅದೃಷ್ಟದ ಬೆಳೆಯಾಗಬೇಕಿದ್ದ ಮಾವು ನಷ್ಟಕ್ಕೀಡಾಗಿದೆ. ಬಿರು ಬಿಸಿಲಿಗೆ ಸಿಲುಕಿ ಕೋಲಾರ ಜಿಲ್ಲೆಯಲ್ಲಿ 39 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಇಳುವರಿ ಕುಂಠಿತವಾಗಿದ್ದು, ಶೇ 70ರಷ್ಟು ಬೆಳೆ ಹಾನಿಯಾಗಿದೆ. ಪರಿಣಾಮ 88 ಕೋಟಿ ರೂ. ಪರಿಹಾರಕ್ಕೆ ರಾಜ್ಯ ಸರ್ಕಾರಕ್ಕೆ ರೈತರು ಮನವಿ ಮಾಡಿದ್ದಾರೆ.
ಕೋಲಾರ, ಮೇ.31: ಜಿಲ್ಲೆಯ ಶ್ರೀನಿವಾಸಪುರ(Srinivaspur)ದ ಮಾವು ವಿಶ್ವ ಪ್ರಸಿದ್ದಿ ಪಡೆದಿದೆ. ಆದ್ರೆ, ಈ ಬಾರಿ ಬರಗಾಲಕ್ಕೆ ತುತ್ತಾದ ಹಿನ್ನೆಲೆ ಹಣ್ಣುಗಳ ರಾಜನ ದರ್ಬಾರ್ ಇಲ್ಲದಂತಾಗಿದೆ. ರೈತರಿಗೆ ಅದೃಷ್ಟದ ಬೆಳೆಯಾಗಬೇಕಿದ್ದ ಮಾವು (Mango) ಗ್ರಾಹಕರಿಗೆ ಹೊರೆಯಾಗಿದ್ರೆ, ಫಸಲಿಲ್ಲದೆ ರೈತರಿಗೆ ನಷ್ಟ ಉಂಟಾಗಿದೆ. ಕೋಲಾರ ಜಿಲ್ಲೆ ಮಾವಿನ ನಗರಿಯೆಂದು ಪ್ರಸಿದ್ದಿ ಪಡೆದಿದ್ದು, ಶ್ರೀನಿವಾಸಪುರದಲ್ಲಿ ಏಷ್ಯಾದಲ್ಲಿಯೇ ಅತೀ ದೊಡ್ಡ ಮಾವಿನ ಮಾರುಕಟ್ಟೆ ಇದೆ. ಪ್ರತಿದಿನ ಸಾವಿರಾರು ಟನ್‌ನಷ್ಟು ಮಾವಿನ ವಹಿವಾಟು ನಡೆಯುತ್ತಿದೆಯಾದ್ರು, ಈ ಬಾರಿ ಬರ ಎದುರಾದ ಹಿನ್ನೆಲೆ ಮರಗಳಲ್ಲಿ ಮಾವಿನ ಹಣ್ಣುಗಳೇ ಇಲ್ಲದಂತಾಗಿದೆ.
ಸುಮಾರು 88 ಕೋಟಿ ರೂ. ಪರಿಹಾರಕ್ಕೆ ಸರ್ಕಾರಕ್ಕೆ ಮನವಿ-ತೋಟಗಾರಿಕೆ ಇಲಾಖೆ ಉಪನಿರ್ದೇಶಕ
ಶೇಕಡ.20 ರಿಂದ 25 ರಷ್ಟು ಮಾವು ಮಾತ್ರ ಈ ಬಾರಿ ರೈತರಿಗೆ ಸಿಕ್ಕಿದೆ. ಪರಿಣಾಮ ಮಾವು ಈ ಬಾರಿ ದುಬಾರಿಯಾಗಿದೆ. ಸಧ್ಯ ಮಾರುಕಟ್ಟೆಗೆ ಮಾವು ಬರಲಾರಂಭಿಸಿದ್ದು, ಟನ್ ಒಂದಕ್ಕೆ 80 ಸಾವಿರದಿಂದ 90 ಸಾವಿರದವರೆಗೆ ಬೆಲೆ ಇದೆ. ತಾಪಮಾನ ಹೆಚ್ಚಿದ್ದರಿಂದ 2023-24ನೇ ಸಾಲಿನಲ್ಲಿ ಮಾವಿನ ಕಾಯಿಗಳ ಗಾತ್ರ ಕಡಿಮೆಯಾಗಿ ಗುಣಮಟ್ಟ ಕಳೆದುಕೊಂಡಿದ್ದು, ರೈತರು ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರ ಅಧಿಕಾರಿಗಳ ತಂಡ ಜಿಲ್ಲೆಯಲ್ಲಿ ಮಾವು ಬೆಳೆ ನಷ್ಟ ಸಮೀಕ್ಷೆಗೆ ತಂಡ ನಿಯೋಜನೆ ಮಾಡಿದೆ. ಸಧ್ಯ ತಂಡ ನೀಡಿದ ವರದಿ ಪ್ರಕಾರ ಜಿಲ್ಲೆಯಲ್ಲಿ ಸುಮಾರು 70 ರಷ್ಟು ಬೆಳೆ ನಾಶವಾಗಿದ್ದು, ಸುಮಾರು 88 ಕೋಟಿ ರೂ. ಪರಿಹಾರಕ್ಕೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಇನ್ನು ಕೋಲಾರ ಜಿಲ್ಲೆಯೊಂದರಲ್ಲಿಯೇ ಅಧಿಕೃತವಾಗಿ 54 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಹಾಗಾಗಿ ವಿವಿಧ ರಾಜ್ಯಗಳು, ದೇಶ-ವಿದೇಶಗಳಿಗೂ ಮಾವಿನ ಹಣ್ಣು ರಫ್ತು ಮಾಡಲಾಗುತ್ತದೆ. ಇದರಲ್ಲಿ ನಾನಾ ಬಗೆಯ ಅಂದ್ರೆ 10 ಕ್ಕೂ ಹೆಚ್ಚು ತೋತಾಪುರಿ, ರಸಪುರಿ, ಬೇನಿಶಾ, ಅಲ್ಫಾನ್ಸೋ, ಮಲ್ಲಿಕಾ, ಸಕ್ಕರೆಗುಟ್ಲಿ, ಬಾದಾಮಿ, ಸೇಂದುರಾ, ನೀಲಂ ನಂತಹ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬರುವುದು ವಿಶೇಷ. ಆದ್ರೆ, ಈ ಬಾರಿ ಬರದಿಂದ ಮಾವು ಉತ್ಪಾದನೆ ಕುಂಠಿತವಾದ ಕಾರಣ ಆಂಧ್ರದ ಚಿತ್ತೂರು ಮಾವು ಕೂಡ ಬರುತ್ತಿಲ್ಲ.
ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿ
ಎರಡು ತಿಂಗಳಷ್ಟೆ ನಡೆಯುವ ಈ ಮಾರುಕಟ್ಟೆಯಲ್ಲಿ ಅಂದಾಜು ಎರಡು ಸಾವಿರ ಕೋಟಿಯಷ್ಟು ವ್ಯಾಪಾರ ವಹಿವಾಟು ನಡೆಯುತ್ತದೆ. ಸಾವಿರಾರು ಮಂದಿಗೆ ಈ ಎರಡು ತಿಂಗಳು ಸುಗ್ಗಿಯ ಕಾಲವಾದರೂ ಈ ಬಾರಿ ಫಸಲು ಕಡಿಮೆ, ಕಳೆದೆರೆಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮಾವಿಗೆ ಒಳ್ಳೆಯ ಬೆಲೆ ಸಿಕ್ಕಿದೆ. ಸಧ್ಯದ ಪರಿಸ್ಥಿತಿಯಲ್ಲಿ ಈ ಬಾರಿ ಮಾವು ಬೆಳೆಗಾರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಮಾವು ಬೆಳೆಗಾರರ ಸಂಘ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿ ಮಾಡಿದೆ. ಕೂಡಲೇ ಸರ್ಕಾರ ಮಾವು ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಒಟ್ಟಾರೆ ಕಳೆದ 2 ವರ್ಷಗಳಿಗೆ ಹೋಲಿಕೆ ಮಾಡಿದ್ರೆ ಈ ಬಾರಿ ಬರ ಹಾಗೂ ಮಿತಿ ಮೀರಿದ ತಾಪಮಾನದಿಂದ ಮಾವಿನ ಫಸಲು ಕಡಿಮೆಯಾಗಿದ್ದು, ಹಣ್ಣುಗಳ ರಾಜನಿಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ. 54 ಸಾವಿರ ಹೆಕ್ಟೇರು ಪ್ರದೇಶದ ಫೈಕಿ 39 ಸಾವಿರ ಹೆಕ್ಟೇರು ಪ್ರದೇಶದಲ್ಲಿ ಮಾವು ಕುಂಠಿತವಾಗಿ ರೈತರಿಗೆ ಈ ಬಾರಿ ಮಾವು ಸಿಕ್ಕಾಪಟ್ಟೆ ಹುಳಿಯಾಗಿದ್ದಂತು ಸುಳ್ಳಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ