ಕೆಲವರ ಕಿರುಕುಳದಿಂದ ಕಣ್ಣೀರು ಹಾಕುತ್ತಲೇ ದೂರು ನೀಡಿದ್ದ ವೃದ್ಧೆ ಮನೆಗೆ ಕೋಲಾರ ಎಸ್ಪಿ, ಖಾಕಿಯೊಳಗಿನ ಮಾನವೀಯತೆಯ ಕಣ್ಣು ನಾರಾಯಣ್
ಪೊಲೀಸರು ಅಂದ್ರೆ ಯಾವಾಗಲೂ ಕ್ರಿಮಿನಲ್ಗಳ ಪಳಗಿಸುತ್ತಾ ಅವರ ಮನಸ್ಸು ಕಲ್ಲಾಗಿರುತ್ತದೆ ಎಂದೇ ಭಾವಿಸಿರುತ್ತಾರೆ. ಆದರೆ ಪೊಲೀಸರ ಖಾಕಿ ಮರೆಯಲ್ಲೂ ಯಾರೂ ಗುರುತಿಸಲಾರದ ಒಂದು ಮಾನವೀಯತೆಯ ಕಣ್ಣು ಇರುತ್ತದೆ ಅನ್ನೋದಕ್ಕೆ ಎಸ್ಪಿ ನಾರಾಯಣ್ ಅವರು ವೃದ್ದೆಯ ಸಂಕಷ್ಟಕ್ಕೆ ಸ್ಪಂದಿಸಿದ ರೀತಿಯೇ ಸಾಕ್ಷಿ.
ಕೋಲಾರ: ಸಾಮಾನ್ಯವಾಗಿ ಪೊಲೀಸ್ ಅಧಿಕಾರಿಗಳಿಗೆ ದೂರು ಕೊಟ್ಟರೆ ಅವರ ಸಿಬ್ಬಂದಿಯನ್ನು ಕಳಿಸಿಕೊಟ್ಟು ಸಮಸ್ಯೆ ಏನು ಅನ್ನೋದನ್ನ ಪರಿಶೀಲನೆ ನಡೆಸುವುದು ಸರ್ವೇ ಸಾಮಾನ್ಯ, ಅದರಲ್ಲೂ ಉನ್ನತ ಅಧಿಕಾರಿಗಳಂತೂ ಕೊಟ್ಟ ದೂರಿನ ಪ್ರತಿ ಮೇಲೆ ಫಾರ್ವರ್ಡ್ ಟು, ಎಂದು ಬರೆದು ಸೂಕ್ತ ಕ್ರಮ ಕೈಗೊಳ್ಳಿ ಎಂದು ಬರೆದು ಕೈತೊಳೆದುಕೊಳ್ಳುತ್ತಾರೆ. ಇನ್ನು ಕೆಲವು ಅಧಿಕಾರಿಗಳು ದೂರುದಾರರ ಎದುರಲ್ಲೇ ಸಂಬಂಧಪಟ್ಟ ಪೊಲೀಸ್ ಠಾಣೆಯ ಅಧಿಕಾರಿಗೆ ಫೋನ್ ಮಾಡಿ ಪ್ರಕರಣದ ವಿವರ ತಿಳಿದುಕೊಂಡು ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡುತ್ತಾರೆ. ಆದರೆ ಕೋಲಾರ ಎಸ್ಪಿ ನಾರಾಯಣ್ ದೂರು ಕೊಟ್ಟ ವೃದ್ದೆಯ ಕಣ್ಣೀರಿನ ಕಥೆ ಕೇಳಿ ನೇರವಾಗಿ ಆಕೆಯ ಮನೆಗೆ ಭೇಟಿ ನೀಡಿ ಕಷ್ಟವನ್ನು ಆಲಿಸಿದ್ದಾರೆ. ಅಲ್ಲದೇ ದೈರ್ಯ ಹೇಳಿರುವ ಅಪರೂಪದ ಹಾಗೂ ಮಾನವೀಯ ಸನ್ನಿವೇಶವೊಂದು ಸಾಕ್ಷಿಯಾಗಿದೆ.
ವೃದ್ದೆ ವೆಂಕಟಲಕ್ಷ್ಮಮ್ಮ ಕಥೆ ಏನು..?
ಎಪ್ಪತೈದು ವರ್ಷದ ಮಾಸ್ತಿ ಹೋಬಳಿ ತುರುಣಿಸಿ ಗ್ರಾಮದ ವೆಂಕಟಲಕ್ಷ್ಮಮ್ಮ ಅವರಿಗೆ ನಾಲ್ವರು ಗಂಡು ಹಾಗೂ ಒಬ್ಬ ಹೆಣ್ಣುಮಗಳು ಸೇರಿ ಒಟ್ಟು ಐದು ಜನ ಮಕ್ಕಳು ಹಾಗೂ ಮೊಮ್ಮಕ್ಕಳು ಕೂಡಾ ಇದ್ದಾರೆ. ಆದರೂ ಯಾರೊಬ್ಬರು ಈಕೆಯನ್ನು ನೋಡಿಕೊಳ್ಳದ ಪರಿಣಾಮ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ತನ್ನ ಮಾವನವರ ಕಾಲದಲ್ಲಿ ತುರುಣಿಸಿ ಗ್ರಾಮದಲ್ಲಿ ಸರ್ವೆ ನಂಬರ್ 34 ರಲ್ಲಿ ನೀಡಿರುವ 27 ಗುಂಟೆ ಇನಾಮತಿ ಜಮೀನಿನಲ್ಲಿ ವೆಂಕಟಲಕ್ಷ್ಮಮ್ಮ ಅವರು ರಾಗಿ ಬೆಳೆದುಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಆ ಜಮೀನಿನ ಮೇಲೂ ಕಣ್ಣಾಕಿರುವ ಅದೇ ಗ್ರಾಮದ ಮುನಿರಾಜಪ್ಪ, ಅಶೋಕ, ಸೀತಮ್ಮ ಮತ್ತು ಪ್ರೇಮ ಎಂಬುವರು ವೆಂಕಟಲಕ್ಷ್ಮಮ್ಮ ಜಮೀನಿಗೆ ಹೋಗಲು ದಾರಿ ಬಿಡದೆ ಪದೇ ಪದೆ ಕಿರುಕುಳ ನೀಡುತ್ತಿದ್ದರು. ಆದರೆ ಈ ಕುರಿತು ಮಾಸ್ತಿ ಪೊಲೀಸ್ ಠಾಣೆಗೆ ಜನವರಿ ತಿಂಗಳಲ್ಲಿ ದೂರು ನೀಡಿದ್ದರಾದರೂ ಅದನ್ನು ಮಾಸ್ತಿ ಪೊಲೀಸ್ ಠಾಣೆಯಲ್ಲಿ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರಿಂದ ವೃದ್ಧೆ ವೆಂಕಟಲಕ್ಷ್ಮಮ್ಮ ಬೇರೆ ದಾರಿ ಕಾಣದೆ ಕೋಲಾರದ ಎಸ್ಪಿ ಕಚೇರಿಗೆ ಭೇಟಿ ನೀಡಿ ನೇರವಾಗಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಅವರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದರು.
ವೃದ್ದೆಯ ಮನೆಗೆ ಭೇಟಿ ನೀಡಿ ದೈರ್ಯ ಹೇಳಿದ ಎಸ್ಪಿ
ಇನ್ನು ವೃದ್ದೆಯ ಕಣ್ಣೀರಿನ ಕಥೆ ಕೇಳಿದ ಎಸ್ಪಿ ನಾರಾಯಣ್ ಮಾರನೇ ದಿನವೇ ವೃದ್ದೆ ವೆಂಕಟಲಕ್ಷ್ಮಮ್ಮ ಅವರ ಗ್ರಾಮಕ್ಕೆ ಭೇಟಿ ನೀಡಿದ್ದಾರೆ, ಅಷ್ಟೇ ಅಲ್ಲದೆ ವೃದ್ದೆಯ ಮನೆಗೆ ಭೇಟಿ ನೀಡಿ, ಹಣ್ಣು ಹಂಪಲು ಕೊಟ್ಟು, ಆಕೆಗೆ ದೈರ್ಯ ಹೇಳಿದ್ದಾರೆ, ಗ್ರಾಮದಲ್ಲಿ ಕಿರುಕುಳ ಕೊಡುತ್ತಿದ್ದವರನ್ನು ಕರೆಸಿ ಅವರಿಗೆ ಬುದ್ಧಿ ಹೇಳಿದ್ದಾರೆ. ಅಲ್ಲದೇ ಕಿರುಕುಳ ನೀಡಿದ್ದರ ಕುರಿತು ಪ್ರಕರಣ ದಾಖಲು ಮಾಡಿಸಿದ್ದಾರೆ. ಮತ್ತೊಮ್ಮೆ ವೃದ್ದೆಯ ತಂಟೆಗೆ ಹೋಗದಂತೆ ಖಡಕ್ ವಾರ್ನಿಂಗ್ ಕೊಟ್ಟಿದ್ದು, ಇನ್ನೊಮ್ಮೆ ಅವರು ನಿಮ್ಮ ತಂಟೆಗೆ ಬಂದರೆ ನಮಗೆ ತಿಳಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ದೈರ್ಯ ಹೇಳಿರುವ ಎಸ್ಪಿ ನಾರಾಯಣ್ ತಮ್ಮ ಖಾಕಿಯೊಳಗಿನ ಮಾನವೀಯತೆಯನ್ನು ಎತ್ತಿ ಹಿಡಿದಿದ್ದಾರೆ.
ಮಾಸ್ತಿ ಪೊಲೀಸ್ ಠಾಣೆಗೂ ಭೇಟಿ ನೀಡಿ ಪರಿಶೀಲಿಸಿದ ಎಸ್ಪಿ..!
ವೃದ್ಧೆಯ ದೂರಿನ ಮೇರೆಗೆ ಕೇವಲ ಹಳ್ಳಿಗೆ ಭೇಟಿ ನೀಡಿ ವೃದ್ದೆಯ ಸಮಸ್ಯೆ ಬಗೆಹರಿಸಿ ಸುಮ್ಮನೆ ವಾಪಸ್ ಬರಲಿಲ್ಲ. ಬದಲಾಗಿ, ಪೊಲೀಸ್ ಠಾಣೆಯ ಮಟ್ಟದಲ್ಲೇ ಬಗೆಹರಿಯಬೇಕಿದ್ದ ಸಮಸ್ಯೆ ಯಾಕೆ ಬಗೆಹರಿಯಲಿಲ್ಲ. ಪೊಲೀಸ್ ಠಾಣೆಯ ಪರಿಸ್ಥಿತಿ ಹೇಗಿದೆ ಅನ್ನೋದನ್ನು ಕೂಡಾ ಪರಿಶೀಲನೆ ನಡೆಸಿದರು. ಈ ವೇಳೆ ನೊಂದವರ ಪರವಾಗಿ ಕಾರ್ಯ ನಿರ್ವಹಿಸಬೇಕು ಅನ್ನೋದರ ಕುರಿತು ಸಿಬ್ಬಂದಿಗೆ ಕಿವಿಮಾತು ಸಲಹೆ ಸೂಚನೆಗಳನ್ನು ನೀಡಿದರು.
ಇನ್ನು ಎಸ್ಪಿ ನಾರಾಯಣ್ ಅವರ ಈ ಕಾರ್ಯಕ್ಕೆ ಜಿಲ್ಲೆಯಾಧ್ಯಂತ ಬಾರೀ ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ. ಅದರ ಜೊತೆಗೆ ಹಳ್ಳಿಗಳಲ್ಲಿ ಬಡವರ ಮೇಲೆ ದರ್ಪ ತೋರುವವರಿಗೂ ಎಸ್ಪಿ ನಾರಾಯಣ್ ಅವರ ಈ ನಡೆ ಎಚ್ಚರಿಕೆ ಕರೆಗಂಟೆಯಾಗಿದೆ ಎಂದರೂ ತಪ್ಪಾಗಲ್ಲ.
ಒಟ್ಟಾರೆ ಪೊಲೀಸರು ಅಂದ್ರೆ ಯಾವಾಗಲೂ ಕ್ರಿಮಿನಲ್ಗಳ ಪಳಗಿಸುತ್ತಾ ಅವರ ಮನಸ್ಸು ಕಲ್ಲಾಗಿರುತ್ತದೆ ಎಂದೇ ಭಾವಿಸಿರುತ್ತಾರೆ. ಆದರೆ ಪೊಲೀಸರ ಖಾಕಿ ಮರೆಯಲ್ಲೂ ಯಾರೂ ಗುರುತಿಸಲಾರದ ಒಂದು ಮಾನವೀಯತೆಯ ಕಣ್ಣು ಇರುತ್ತದೆ ಅನ್ನೋದಕ್ಕೆ ಎಸ್ಪಿ ನಾರಾಯಣ್ ಅವರು ವೃದ್ದೆಯ ಸಂಕಷ್ಟಕ್ಕೆ ಸ್ಪಂದಿಸಿದ ರೀತಿಯೇ ಸಾಕ್ಷಿ.
ವರದಿ: ರಾಜೇಂದ್ರಸಿಂಹ ಟಿವಿ9 ಕೋಲಾರ