ಬಂಗಾರಪೇಟೆಯಲ್ಲಿ ಮಹಾಶಿವರಾತ್ರಿಗೆ ನಾನ್ ವೆಜ್ ಪೂಜೆ! ಮೇಕೆ, ಕೋಳಿಯ ಕತ್ತನ್ನು ಕಚ್ಚಿ ಬಿಸಿ ರಕ್ತ ಸೇವಿಸುವ ತಮಿಳು ಸಂಸ್ಕೃತಿ
ಹೆಚ್ಚಾಗಿ ತಮಿಳುನಾಡಿನಲ್ಲೇ ಪ್ರಚಲಿತವಿರುವ ಇಂಥಾದೊಂದು ಆಚರಣೆ ನಮ್ಮ ರಾಜ್ಯದ ಗಡಿಯಭಾಗವಾದ ಕೆಜಿಎಫ್ನಲ್ಲೂ ಹಲವಾರು ವರ್ಷಗಳಿಂದ ಆಚರಣೆಯಲ್ಲಿದೆ. ಈ ವಿಶೇಷವಾದ ದಿನದಂದು ಈ ನರಕಾಸುರ ಸಂಹಾರವನ್ನು ನೋಡಲು ದೂರದ ಊರುಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಬರ್ತಾರೆ. ತಮಿಳುನಾಡು, ಆಂಧ್ರ, ಬೆಂಗಳೂರುನಿಂದಲೂ ಜನ ಬರುತ್ತಾರೆ.
ಶಿವರಾತ್ರಿ ಅಂದ್ರೆ ಬಹುತೇಕರು ಕಟ್ಟುನಿಟ್ಟಾಗಿ ಉಪವಾಸವಿದ್ದು ಶಿವರಾತ್ರಿಯನ್ನು ಆಚರಣೆ ಮಾಡ್ತಾರೆ, ಅದೇ ರೀತಿ ಇಲ್ಲೊಂದಷ್ಟು ಜನ ಶಿವರಾತ್ರಿಯನ್ನು ಶಿವರಾತ್ರಿ ನಂತರ ಬರುವ ಅಮಾವಾಸ್ಯೆಯ ದಿನ ಸ್ಮಶಾನವಾಸಿಯಾದ ಶಿವನನ್ನು ವಿಭಿನ್ನವಾಗಿ ಪೂಜಿಸಿ, ಆರಾಧಿಸಿ, ಕಾಳಿ ಮಾತೆಯ ವೇಷಧಾರಿಯಾಗಿ ನರಕಾಸುರ ಸಂಹಾರವನ್ನು ಮಾಡಿ ಬಲಿಕೊಟ್ಟು ಪೂಜಿಸುತ್ತಾರೆ. ಹೇಗಿತ್ತು ಅಲ್ಲಿನ ಆಚರಣೆ ಇಲ್ಲಿದೆ ಡೀಟೇಲ್ಸ್.
ತಾಳಕ್ಕೆ ತಕ್ಕಂತೆ ನೃತ್ಯ ಮಾಡುತ್ತಿರುವ ಕಾಳಿಯ ವೇಷಧಾರಿ ಮಂಗಳಮುಖಿ, ಮತ್ತೊಂದೆಡೆ ಕುರಿ, ಮೇಕೆಯನ್ನು ಬಾಯಿಯಲ್ಲಿ ಕಚ್ಚಿ ರಕ್ತ ಕುಡಿಯುತ್ತಿರುವ ಭಯಾನಕ ದೃಶ್ಯ, ಮತ್ತೊಂದೆಡೆ ಸಮಾಧಿಯ ಮೇಲೆ ನಿಂತು ಬಿಯರ್ ಕುಡಿದು, ಬೀಡಿ ಸೇದಿ ಹೊಗೆ ಬಿಡುತ್ತಿರುವ ದೃಶ್ಯ, ಕುತೂಹಲದಿಂದ ವೀಕ್ಷಿಸುತ್ತಿರುವ ನೂರಾರು ಮಂದಿ ಭಕ್ತರು. ಇಂಥಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ಕುಂಬಾರಪಾಳ್ಯದಲ್ಲಿ, ಹೌದು ತಮಿಳು ಸಂಸ್ಕೃತಿಗೆ ಮಾರುಹೋಗಿರುವ ಬಂಗಾರಪೇಟೆ ಮತ್ತು ಕೆಜಿಎಫ್ ನಗರದಲ್ಲಿ ಇಂದಿಗೂ ಬಹುತೇಕ ತಮಿಳು ಸಂಸ್ಕೃತಿ ಆಚರಣೆಯಲ್ಲಿದೆ.
ಅದರಂತೆ ಮಹಾಶಿವರಾತ್ರಿಯ ನಂತರ ಬರುವ ಮೊದಲ ಅಮಾವಾಸ್ಯೆಯಂದು ಕಾಳಿ ಆರಾಧಕರು ದುಷ್ಟ ಶಕ್ತಿಗಳ ನಿವಾರಣೆಗೆ, ಕಾಳಿ ದೇವಿಯನ್ನು ಒಲಿಸಿಕೊಳ್ಳುವ ಸಲುವಾಗಿ ಮಾಡುವ ನರಕಾಸುರ ಸಂಹಾರ ಮತ್ತು ಸ್ಮಶಾನ ಉತ್ಸವ ಎಂಬ ವಿಶೇಷ ಆಚರಣೆ ಮಾಡುತ್ತಾರೆ. ಈ ದಿನದಂದು ಕಾಳಿ ಆರಾಧಕ ಕಮಲ್ ಎಂಬ ಪೂಜಾರಿ ಕಾಳಿವೇಷಧಾರಿಯಾಗಿ ತಲೆಯ ಮೇಲೆ ಕಿರೀಟವಿಟ್ಟುಕೊಂಡು, ಕುತ್ತಿಗೆಗೆ ತಲೆಬುರುಡೆಯ ಹಾರ ಹಾಕಿಕೊಂಡು ಕಾಳಿ ದೇವಾಲಯದಿಂದ ನೃತ್ಯ ಮಾಡುತ್ತಾ ಸ್ಮಶಾನಕ್ಕೆ ಬರ್ತಾರೆ.
Also Read: ತೋಟದ ಮನೆಯಲ್ಲಿ 25 ಮನುಷ್ಯರ ತಲೆಬುರುಡೆ ಪತ್ತೆ, ವಿಚಾರಣೆ ನಡೆಸುತ್ತಿರುವ ಬಿಡದಿ ಪೊಲೀಸ್
ಅಲ್ಲಿ ನಿರ್ಮಾಣ ಮಾಡಿರುವ ನರಕಾಸುರ ಮೂರ್ತಿಯ ಮುಂದೆ ನೃತ್ಯ ಮಾಡುತ್ತಾ, ಆ ಕಾಳಿ ಮಾತೆಯೇ ಆವಾಹನೆಯಾದಂತೆ ಕೊನೆಗೆ ತ್ರಿಶೂಲದಿಂದ ನರಕಾಸುರನ ಹೊಟ್ಟೆ ಬಗೆಯುವ ಮೂಲಕ ಈ ನರಕಾಸುರ ಸಂಹಾರ ಮಾಡುತ್ತಾನೆ. ಈ ವೇಳೆ ನಂತರ ಮೇಕೆ ಹಾಗೂ ಕೋಳಿಯನ್ನು ವಿಶಿಷ್ಟ ರೀತಿಯಲ್ಲಿ ಬಲಿ ಕೊಡುತ್ತಾರೆ. ಕುತ್ತಿಗೆ ಕತ್ತರಿಸಿದ ನಂತರ ಮೇಕೆಯ ಬಿಸಿ ರಕ್ತವನ್ನೇ ಸೇವಿಸುತ್ತಾನೆ, ಅಷ್ಟೇ ಅಲ್ಲ ಕೋಳಿಯ ಕತ್ತನ್ನು ಬಾಯಿಯಿಂದ ಕಚ್ಚಿ ಎಸೆದು ಕೋಳಿಯ ರಕ್ತ ಹೀರುತ್ತಾನೆ, ಈ ದೃಶ್ಯವಂತೂ ನೆರೆದಿದ್ದವರ ಮೈ ಝಂ ಎನಿಸುತ್ತದೆ. ಜೊತೆಗೆ ಶಿವರಾತ್ರಿಯಂದು ನಾಡಿನಲ್ಲಿ ಶಿವನ ಆಚರಣೆ ಮಾಡಿದ್ರೆ, ಮಂಗಳಮುಖಿಯರು ಸ್ಮಶಾನದಲ್ಲಿ ಅರ್ಧನಾರೀಶ್ವರನಂತೆ ಶಿವನನ್ನು ಪೂಜೆ ಮಾಡುತ್ತಾರೆ.
ಹೀಗೆ ಹೆಚ್ಚಾಗಿ ತಮಿಳುನಾಡಿನಲ್ಲೇ ಪ್ರಚಲಿತವಿರುವ ಇಂಥಾದೊಂದು ಆಚರಣೆ ನಮ್ಮ ರಾಜ್ಯದ ಗಡಿಯಭಾಗವಾದ ಕೆಜಿಎಫ್ನಲ್ಲೂ ಹಲವಾರು ವರ್ಷಗಳಿಂದ ಆಚರಣೆಯಲ್ಲಿದೆ. ಈ ವಿಶೇಷವಾದ ದಿನದಂದು ಈ ನರಕಾಸುರ ಸಂಹಾರವನ್ನು ನೋಡಲು ದೂರದ ಊರುಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಬರ್ತಾರೆ. ತಮಿಳುನಾಡು, ಆಂಧ್ರ, ಬೆಂಗಳೂರುನಿಂದಲೂ ಜನ ಬರುತ್ತಾರೆ.
ಈ ವಿಶೇಷ ದಿನದಂದು ಪೂಜೆಯಲ್ಲಿ ಭಾಗವಹಿಸಿದ್ರೆ ದುಷ್ಟಶಕ್ತಿಗಳು ಸಂಹಾರವಾಗುತ್ತವೆ ಅನ್ನೋದು ನಂಬಿಕೆ. ಹಾಗಾಗಿ ನರಕಾಸುರ ಸಂಹಾರದ ನಂತರ ಅಲ್ಲಿನ ಮಣ್ಣನ್ನು ಜನರು ತೆಗೆದುಕೊಂಡು ಹೋಗಿ ತಮ್ಮ ಮನೆಯಲ್ಲಿಟ್ಟರೆ ಮನೆಗೆ ದುಷ್ಟಶಕ್ತಿಗಳು ಪ್ರವೇಶವಿರಲ್ಲ. ಜೊತೆಗೆ ಕಾಳಿ ಆರಾಧಕ ಆ ಪೂಜಾರಿಯ ಶಕ್ತಿ ಸಹ ಹೆಚ್ಚಾಗುತ್ತದೆ ಅನ್ನೋದು ನಂಬಿಕೆ. ಹಾಗಾಗಿಯೇ ಇಲ್ಲಿಗೆ ಬರುವ ಭಕ್ತರು ತಮ್ಮ ಹಲವು ಬೇಡಿಕೆಗಳನ್ನು ಇಲ್ಲಿ ದೇವರ ಮುಂದಿಟ್ಟಿರುವ ಅದರಂತೆ ತಮ್ಮ ಹತ್ತಾರು ಬೇಡಿಕೆಗಳು ಈಡೇರಿರುವ ಉದಾಹರಣೆಗಳಿವೆ ಅನ್ನೋದು ಇಲ್ಲಿ ಬಂದಿದ್ದ ಜನರ ಮಾತು. ಅದರಂತೆ ಹರಕೆ ಈಡೇರಿದ ಮೇಲೆ ಪ್ರಾಣಿ ಬಲಿ ಕೊಟ್ಟು ತಮ್ಮ ಹರಕೆ ತೀರಿಸುತ್ತಾರೆ.
ಒಟ್ಟಾರೆ ದುಷ್ಟಶಕ್ತಿಗಳ ನಿವಾರಣೆಗೆ ಕರಾವಳಿ ಭಾಗರದಲ್ಲಿ ಭೂತಾರಾಧನೆ ಮಾಡಿದ್ರೆ, ಬಯಲು ಸೀಮೆ ಪ್ರದೇಶದಲ್ಲಿ ಕಾಳಿ ಆರಾಧಕರು ನರಕಾಸುರ ಸಂಹಾರ ಮಾಡೋ ಮೂಲಕ ಸಮಾಜದಲ್ಲಿ ಹಾಗೂ ಮನುಷ್ಯನಲ್ಲಿರುವ ದುಷ್ಟಶಕ್ತಿಗಳು ಸಂಹಾರವಾಗುತ್ತವೆ ಅನ್ನೋ ನಂಬಿಕೆ ಈಗಲು ಹಲವು ವರ್ಷಗಳಿಂದ ಜೀವಂತವಾಗಿರೋದಂತು ಸುಳ್ಳಲ್ಲ. ಕೆಲವರಿಗೆ ಇದು ಮೂಡನಂಭಿಕೆ ಅನಿಸಿದರೂ ಆಚರಣೆ ಸುಗಮವಾಗಿ ಮುಂದುವರಿದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ