ನೂರಾರು ತಳಿಯ ಬಿತ್ತನೆ ಬೀಜಗಳ ಸಂಗ್ರಹಣೆ; ಕೋಲಾರದ ಮಹಿಳೆ ಮನೆಯಲ್ಲಿ ಇದೆ ಪುರಾತನ ಕಾಲದ ಬಿತ್ತನೆ ಬೀಜಗಳು

ಕಳೆದ 25 ವರ್ಷಗಳಿಂದ ನಿರಂತರ ಪರಿಶ್ರಮದ ಫಲವಾಗಿ ಇವತ್ತಿಗೆ ಪಾಪಮ್ಮರ ಬಳಿ ಸುಮಾರು ಧಾನ್ಯಗಳು, ತರಕಾರಿಗಳು, ರಾಗಿ, ಭತ್ತ, ಸೇರಿದಂತೆ ಸಾಂಪ್ರದಾಯಿಕವಾದ ಹಾಗೂ ಅಪರೂಪದ ಸುಮಾರು 500 ಕ್ಕೂ ಬಗೆಯ ವಿವಿಧ ತಳಿಯ ಬಿತ್ತನೆ ಬೀಜಗಳ ಸಂಗ್ರಹವಿದೆ.

  • ರಾಜೇಂದ್ರ ಸಿಂಹ
  • Published On - 13:17 PM, 6 Apr 2021
ನೂರಾರು ತಳಿಯ ಬಿತ್ತನೆ ಬೀಜಗಳ ಸಂಗ್ರಹಣೆ; ಕೋಲಾರದ ಮಹಿಳೆ ಮನೆಯಲ್ಲಿ ಇದೆ ಪುರಾತನ ಕಾಲದ ಬಿತ್ತನೆ ಬೀಜಗಳು
ಪಾಪಮ್ಮ ಮತ್ತು ಪಾಪಣ್ಣ ದಂಪತಿ ಬಿತ್ತನೆ ಬೀಜಗಳನ್ನು ಮನೆಯಲ್ಲಿ ಸಂಗ್ರಹಿಸಿದ್ದಾರೆ.

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಡಿ.ಕುರುಬರಹಳ್ಳಿ ರೈತ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿ ನೂರಾರು ಬಗೆಯ ಪುರಾತನ, ಸಾವಯವ ಹಾಗೂ ಅಪರೂಪದ ಬಿತ್ತನೆ ಬೀಜಗಳನ್ನು ಸಂಗ್ರಹ ಮಾಡಿದ್ದಾರೆ​. ಕುರುಬರಹಳ್ಳಿ ಗ್ರಾಮದ ಪಾಪಮ್ಮ ಕಳೆದ 25 ವರ್ಷಗಳಿಂದ ತಮಗಿರುವ ಮೂರೂವರೆ ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡುವ ಮೂಲಕ ನಾನಾ ಬಗೆಯ ಅಪರೂಪದ ತರಕಾರಿ ಹಾಗೂ ಧಾನ್ಯದ ಬೀಜಗಳನ್ನ ಸಂಗ್ರಹ ಮಾಡಿದ್ದಾರೆ. ಇದೆಲ್ಲವೂ ರಾಸಾಯನಿಕಗಳನ್ನು ಬಳಸದೆ ಸಂಪ್ರದಾಯಿಕ ಬೇಸಾಯ ಪದ್ಧತಿ ಮೂಲಕ ಬೆಳೆದಿರುವ ಸಾವಯವ ಬೀಜ ಎನ್ನುವುದು ವಿಶೇಷ. ಪಾಪಮ್ಮ, ಪಾಪಣ್ಣ ದಂಪತಿ ಕಳೆದ ಹಲವು ವರ್ಷಗಳಿಂದ ಸಾಂಪ್ರದಾಯಿಕ ಬೇಸಾಯ ಪದ್ಧತಿ ಮೂಲಕ ಸಾವಿರಾರು ಬಗೆಯ ಬೀಜಗಳನ್ನ ತಮ್ಮ ಮನೆಯಲ್ಲಿ ಸಂಗ್ರಹ ಮಾಡಿದ್ದಾರೆ. ಈಗಿನ ಹಲವು ಹೈಬ್ರೀಡ್​ ತಳಿಗಳು ಬಂದಿವೆ ಹೀಗಿದ್ದರೂ ಪಾಪಮ್ಮ ಬಳಿ ನಿಮಗೆ ನೂರಾರು ವರ್ಷಗಳಷ್ಟು ಹಳೆಯ ಅಪರೂಪದ ತಳಿಯ ಬಿತ್ತನೆ ಬೀಜಗಳು ಸಿಗುತ್ತವೆ ಇದು ಬಿತ್ತನೆ ಬೀಜಗಳ ರಿಸರ್ವ್ ಬ್ಯಾಂಕ್​ ಎಂದರೆ ತಪ್ಪಾಗಲಿಕ್ಕಿಲ್ಲ.

ಪಾಪಮ್ಮ ತಮಗಿರುವ ಮೂರೂವರೆ ಎಕರೆ ಜಮೀನಿನಲ್ಲೇ ಸಾವಯವ ಹಾಗೂ ಸಾಂಪ್ರದಾಯಿಕ ಕೃಷಿ ಮಾಡಿ ಅದರಲ್ಲಿ ಬೀಜ ಉತ್ಪಾದನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅವರ ಮನೆ ಮೇಲೂ ತೊಗರಿ, ಮರ ಬದನೆ, ಹಾಗಲಕಾಯಿ, ಅವರೆ, ಪಡವಲಕಾಯಿಯಂತಹ ಬಳ್ಳಿ ಗಿಡಗಳನ್ನು ಬೆಳೆಸಿ ಅದರಲ್ಲೂ ಕೂಡ ಬೀಜ ಉತ್ಪಾದನೆ ಮಾಡುತ್ತಿದ್ದಾರೆ. ಆ ಮೂಲಕ ಮನೆಯಲ್ಲೆ ಬೀಜ ಬ್ಯಾಂಕ್ ಮಾಡಿಕೊಂಡು ಬೇಸಾಯ ಮಾಡಬಹುದು ಎಂಬುದನ್ನ ರಾಜ್ಯಕ್ಕೆ ಮಾಡಿ ತೋರಿಸುತ್ತಿದ್ದಾರೆ.

ಪಾಪಮ್ಮ ಅವರ ಬ್ಯಾಂಕ್​ನಲ್ಲಿದೆ 500 ಕ್ಕೂ ಹೆಚ್ಚು ತಳಿಯ ಬಿತ್ತನೆ ಬೀಜಗಳು
ಕಳೆದ 25 ವರ್ಷಗಳಿಂದ ನಿರಂತರ ಪರಿಶ್ರಮದ ಫಲವಾಗಿ ಇವತ್ತಿಗೆ ಪಾಪಮ್ಮರ ಬಳಿ ಸುಮಾರು ಧಾನ್ಯಗಳು, ತರಕಾರಿಗಳು, ರಾಗಿ, ಭತ್ತ, ಸೇರಿದಂತೆ ಸಾಂಪ್ರದಾಯಿಕವಾದ ಹಾಗೂ ಅಪರೂಪದ ಸುಮಾರು 500 ಕ್ಕೂ ಬಗೆಯ ವಿವಿಧ ತಳಿಯ ಬಿತ್ತನೆ ಬೀಜಗಳ ಸಂಗ್ರಹವಿದೆ. ರಸಗೊಬ್ಬರಗಳೇ ಇಲ್ಲದೆ ಬೇಸಾಯ ಮಾಡುವುದು ಅಸಾಧ್ಯ ಎನ್ನುವ ಕಾಲದಲ್ಲಿ ಪಾಪಮ್ಮ, ಹಸುವಿನ ಗಂಜಲ ಹಾಗೂ ಬೇವಿನ ರಸ ಬಳಕೆ ಮಾಡಿಕೊಂಡು ಅದೆಷ್ಟೋ ಬಗೆಯ ಗುಣಮಟ್ಟದ ಬೀಜಗಳನ್ನ ಸಂಗ್ರಹ ಮಾಡಿ ರೈತರಿಗೆ ವಿತರಿಸುತ್ತಿದ್ದಾರೆ. ಅದನ್ನು ಬಿತ್ತನೆ ಕಾರ್ಯಕ್ಕೆ ರೈತರಿಗೆ ಒಂದು ಕೆ.ಜಿಯಂತೆ ನೀಡಿ ನಂತರ ಬೆಳೆ ಬಂದ ಮೇಲೆ ಎರಡು ಕೆ.ಜಿಯಂತೆ ವಾಪಸ್ಸು ಪಡೆಯುವುದು ಇವರ ಹವ್ಯಾಸ.

seeds bank

500 ಕ್ಕೂ ಹೆಚ್ಚು ತಳಿಯ ಬಿತ್ತನೆ ಬೀಜಗಳನ್ನು ಪಾಪಮ್ಮ ಸಂಗ್ರಹಿಸಿದ್ದಾರೆ

ನಾನು ಮೊದಲು ಹಳ್ಳಿ ಹಳ್ಳಿಗೆ ಹೋಗಿ ವಿವಿಧ ತಳಿಯ ಬೀಜಗಳನ್ನು ಸಂಗ್ರಹಿಸುತ್ತಿದ್ದೆ, ಯಾವುದೋ ಹೈಬ್ರೀಡ್​ ತಳಿಗಳಿಗೆ ಮಾರು ಹೋಗಿರುವ ನಮ್ಮ ರೈತರಿಗೆ ಪುರಾತನ ಹಾಗೂ ದೇಸಿ ತಳಿಗಳ ಮಹತ್ವ ತಿಳಿಸುವುದು ಜೊತೆಗೆ ಅದನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವುದು ನನ್ನ ಉದ್ದೇಶ ಎಂದು ಪಾಪಮ್ಮ ಹೇಳಿದ್ದಾರೆ.

ಪಾಪಮ್ಮರ ಈ ಕೆಲಸಕ್ಕೆ ರಾಜ್ಯ ಪ್ರಶಸ್ತಿಗಳು ಸೇರಿ ಹಲವು ಗೌರವ ಸಿಕ್ಕಿದೆ!
ಹತ್ತಾರು ಬಗೆಯ ರಾಗಿ, ಹಲವು ಬಗೆಯ ಭತ್ತ, ವಿವಿಧ ಬದನೆ ಬೀಜಗಳು, ತರಕಾರಿ ಬೀಜಗಳು ಸೇರಿದಂತೆ ನಾನಾ ಬಗೆಯ ಬೀಜಗಳನ್ನ ಸಂಗ್ರಹ ಮಾಡಿರುವ ಪಾಪಮ್ಮನಿಗೆ ಸರ್ಕಾರ ಹಾಗೂ ಹಲವು ಸಂಘ ಸಂಸ್ಥೆಗಳು ಪುರಸ್ಕರಿಸಿವೆ. ರಾಜ್ಯ ಪ್ರಶಸ್ತಿ, ರೈತ ಮಹಿಳೆ ಪ್ರಶಸ್ತಿ, ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನ ರೈತ ಮಹಿಳೆ ಪಾಪಮ್ಮನಿಗೆ ಲಭಿಸಿವೆ. ಇವರ ಬಳಿ ಇರುವ ಬಿತ್ತನೆ ಬೀಜಗಳನ್ನು ಬೇರೆ ದೇಶದವರು ಬಂದು ವೀಕ್ಷಣೆ ಮಾಡಿಕೊಂಡು ಹೋಗಿದ್ದಾರೆ. ಇವರ ಬಳಿ ಇರುವ ಬಿತ್ತನೆ ಬೀಜಗಳನ್ನ ರಾಜ್ಯವಷ್ಟೇ ಅಲ್ಲದೆ ಇತರೆ ರಾಜ್ಯಗಳಲ್ಲಿ ನಡೆಯುವ ಕೃಷಿ ಮೇಳ, ವಸ್ತು ಪ್ರದರ್ಶನದಲ್ಲಿ ಪರಿಚಯಿಸಲಾಗಿದೆ. ಆ ಮೂಲಕ ಪುರಾತನ ಬೀಜ ಸಂಗ್ರಹದ ಕೇಂದ್ರ ಎಂದು ಇವರ ಮನೆಯನ್ನು ಗುರುತಿಸಲಾಗುತ್ತದೆ.

seeds bank

ಪಾಪಮ್ಮ ಅವರಿಗೆ ರಾಜ್ಯ ಪ್ರಶಸ್ತಿಗಳು ಸೇರಿ ಹಲವು ಗೌರವ ಸಿಕ್ಕಿದೆ

ಪುರಾತನ ಹಾಗೂ ಗುಣಮಟ್ಟದ ಬೀಜ ತಳಿಗಳನ್ನು ಉಳಿಸಬೇಕೆನ್ನುವ ಉದ್ದೇಶದಿಂದ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ, ಬೀಜಗಳನ್ನು ಸಂಗ್ರಹ ಮಾಡಿ, ತಮ್ಮ ಮನೆಯನ್ನೇ ಬೀಜ ಸಂಗ್ರಹಾಲಯ ಕೇಂದ್ರ ಮಾಡಿಕೊಂಡು ಮುಂದಿನ ಪೀಳಿಗೆಗೂ ದೇಸಿ ತಳಿಗಳನ್ನು ಉಳಿಸಿ ಬೆಳೆಸುತ್ತಿರುವ ಈ ಮಹಿಳೆಯ ಕಾರ್ಯಕ್ಕೆ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ನಾಗರಾಜ್​, ಮಾಜಿ ಶಾಸಕ ಕೊತ್ತೂರು ಮಂಜುನಾಥ್​, ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ನೀಲಕಂಠೇಗೌಡ ಸೇರಿ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

(ವರದಿ: ರಾಜೇಂದ್ರ ಸಿಂಹ-9980914108)

ಇದನ್ನೂ ಓದಿ: ಕೋಲಾರದಿಂದ ವಿದೇಶಕ್ಕೆ ಸುವಾಸೆನೆಯ ದ್ರವ್ಯ ರಫ್ತು; ಧವನ ಬೆಳೆದು ಲಾಭ ಗಳಿಸುತ್ತಿರುವ ರೈತರು

(Variety of organic and ancient sowing seeds are stored in the house of a woman in Kolar)