ಕಾರ್ಖಾನೆಗಳಿಗೂ ತಟ್ಟಿದ ಬರದ ಬಿಸಿ; ನೀರಿನ ಅಭಾವದಿಂದ ಪ್ಯಾಕ್ಟರಿಗಳು ಬಂದ್ ಆಗೋ ಆತಂಕ
ಕೊಪ್ಪಳ ತಾಲೂಕಿನ ಗಿಣಿಗೇರಾ ಬಳಿಯಿರೋ ಕಲ್ಯಾಣಿ ಮತ್ತು ಮಕುಂದ ಸ್ಟೀಲ್ ಕಂಪನಿಗೆ ನೀರಿನ ಅಭಾವ ಆರಂಭವಾಗಿದೆ. ಪ್ರತಿ ಬೇಸಿಗೆಯಲ್ಲಿ ಈ ಪ್ಯಾಕ್ಟರಿಗೆ ತುಂಗಭದ್ರಾ ಜಲಾಶಯದ ನೀರು ಬಿಡಲಾಗುತ್ತಿತ್ತು. ಆದ್ರೆ ರಾಜ್ಯದಲ್ಲಿ ಭೀಕರ ಬರ ಇರೋದರಿಂದ ತುಂಗಭದ್ರಾ ಜಲಾಶಯವೇ ಬೇಸಿಗೆ ಮುನ್ನವೇ ಬತ್ತೋ ಹಂತಕ್ಕೆ ತಲುಪಿದೆ.
ಕೊಪ್ಪಳ, ಡಿ.29: ಕೃಷಿ ಮತ್ತು ಕೈಗಾರಿಕೆಗಳು ಎರಡು ಸುಸ್ಥಿರವಾಗಿದ್ದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಆದರೆ ಭೀಕರ ಬರ (Drought) ಕೇವಲ ಕೃಷಿಗೆ ಮಾತ್ರ ಪೆಟ್ಟು ನೀಡಿಲ್ಲ, ನೀರನ್ನು ನಂಬಿಕೊಂಡಿ ಕೈಗಾರಿಕೆಗಳ ಮೇಲೆ ಕೂಡಾ ದೊಡ್ಡ ಪೆಟ್ಟು ನೀಡಿದೆ (Water Crisis). ಭೀಕರ ಬರದಿಂದ ಅನೇಕ ಪ್ಯಾಕ್ಟರಿಗಳು ಬಂದ್ ಆಗುವ ಸ್ಥಿತಿಗೆ ಬಂದಿವೆ. ಪ್ಯಾಕ್ಟರಿ ಕೆಲಸವನ್ನೇ ನಂಬಿರೋ ಸಾವಿರಾರು ಕಾರ್ಮಿಕರ ಬದುಕು ಬೀದಿಗೆ ಬೀಳೋ ಆತಂಕ ಎದುರಾಗಿದೆ. ಸ್ಟೀಲ್ ಪ್ಯಾಕ್ಟರಿಗಳು ಬಂದಾಗೋ ಹಂತಕ್ಕೆ ಬಂದಿವೆ.
ಕೊಪ್ಪಳ ಜಿಲ್ಲೆಯಲ್ಲಿ ತುಂಗಭದ್ರಾ ಜಲಾಶಯದ ನೀರನ್ನೇ ನಂಬಿ ಹತ್ತಾರು ಪ್ಯಾಕ್ಟರಿಗಳು ಆರಂಭವಾಗಿವೆ. ಸರ್ಕಾರ ಕೂಡಾ ನೀರು ಕೊಡ್ತೇವೆ, ನೀವು ಉದ್ಯೋಗ ನೀಡಬೇಕು ಅಂತ ಅನೇಕ ಪ್ರಾಕ್ಟರಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದರಿಂದ ಕಲ್ಯಾಣಿ ಸ್ಟೀಲ್, ಮುಕುಂದ್ ಸ್ಟೀಲ್ ಸೇರಿದಂತೆ ಅನೇಕ ಪ್ಯಾಕ್ಟರಿಗಳು ದಶಕದ ಹಿಂದೆಯೇ ಆರಂಭವಾಗಿವೆ. ಸಾವಿರಾರು ಸ್ಥಳೀಯ ಕಾರ್ಮಿಕರು ಈ ಪ್ಯಾಕ್ಟರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಬರಗಾಲದಿಂದ ಇದೀಗ ಕಲ್ಯಾಣಿ, ಮುಕುಂದ್ ಸ್ಟೀಲ್ ಬಂದ್ ಆಗೋ ಹಂತಕ್ಕೆ ಬಂದಿದೆ.
ಪ್ಯಾಕ್ಟರಿಗಳಿಗೆ ನೀರಿನ ಕೊರತೆ
ಕೊಪ್ಪಳ ತಾಲೂಕಿನ ಗಿಣಿಗೇರಾ ಬಳಿಯಿರೋ ಕಲ್ಯಾಣಿ ಮತ್ತು ಮಕುಂದ ಸ್ಟೀಲ್ ಕಂಪನಿಗೆ ನೀರಿನ ಅಭಾವ ಆರಂಭವಾಗಿದೆ. ಪ್ರತಿ ಬೇಸಿಗೆಯಲ್ಲಿ ಈ ಪ್ಯಾಕ್ಟರಿಗೆ ತುಂಗಭದ್ರಾ ಜಲಾಶಯದ ನೀರು ಬಿಡಲಾಗುತ್ತಿತ್ತು. ಆದ್ರೆ ರಾಜ್ಯದಲ್ಲಿ ಭೀಕರ ಬರ ಇರೋದರಿಂದ ತುಂಗಭದ್ರಾ ಜಲಾಶಯವೇ ಬೇಸಿಗೆ ಮುನ್ನವೇ ಬತ್ತೋ ಹಂತಕ್ಕೆ ತಲುಪಿದೆ. 105 ಟಿಎಂಸಿ ಸಾಮಾರ್ಥ್ಯದ ಡ್ಯಾಂನಲ್ಲಿ ಸದ್ಯ ಇರೋದು ಕೇವಲ ಹತ್ತು ಟಿಎಂಸಿ ನೀರು ಮಾತ್ರ. ಹೀಗಾಗಿ ಕಳೆದ ಅಕ್ಟೋಬರ್ ತಿಂಗಳಿಂದ ಪ್ಯಾಕ್ಟರಿಗಳಿಗೆ ಬಿಡ್ತಿದ್ದ ನೀರನ್ನು ಜಲಾಶಯದ ಅಧಿಕಾರಿಗಳು ಬಂದ್ ಮಾಡಿದ್ದಾರೆ. ಇಷ್ಟು ದಿನ ತಮ್ಮ ಪ್ಯಾಕ್ಟರಿಯಲ್ಲಿ ಸ್ಟಾಕ್ ಮಾಡಿಕೊಂಡ ನೀರನ್ನೇ ಬಳಸಿ ಪ್ಯಾಕ್ಟರಿ ರನ್ ಮಾಡಿದ್ದ ಸಿಬ್ಬಂದಿಗೆ ಇದೀಗ ಸ್ಟಾಕ್ ಮಾಡಿದ್ದ ನೀರು ಖಾಲಿಯಾಗಿರೋದರಿಂದ ಮುಂದೇನು ಅನ್ನೋ ದೊಡ್ಡ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ: ಬರಿದಾಗುತ್ತಿರುವ ಕೆಆರ್ಎಸ್: ನಾಲೆಗಳಿಗೆ ನೀರು ಹರಿಸದಿರಲು ಸರ್ಕಾರ ತೀರ್ಮಾನ, ಬೆಳೆ ಬೆಳೆಯದಂತೆ ಕೃಷಿ ಸಚಿವರ ಸೂಚನೆ
ಕಲ್ಯಾಣಿ ಸ್ಟೀಲ್ ಪ್ಯಾಕ್ಟರಿ ಒಂದಕ್ಕೆ ಪ್ರತಿ ದಿನ ನಾಲ್ಕು ಕ್ಯೂಸೆಕ್ ನೀರಿನ ಅವಶ್ಯಕತೆ ಇದೆ. ಆದ್ರೆ ಇದೀಗ ಜಲಾಶಯದಿಂದ ನೀರು ಸಿಗದೇ ಇರೋದರಿಂದ ಪ್ಯಾಕ್ಟರಿಯಲ್ಲೇ ಹತ್ತಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಆದ್ರೆ ಕೊಳೆವೆ ಬಾವಿಯ ನೀರು ಕೂಡಾ ಕಡಿಮೆಯಾಗಿದೆ. ಅನೇಕ ಕೊಳವೆ ಬಾವಿಗಳು ಬತ್ತಿವೆ. ಹೀಗಾಗಿ ನಮಗೆ ಪ್ರತಿದಿನ ನಾಲ್ಕು ಕ್ಯೂಸೆಕ್ ನೀರನ್ನು ಜಲಾಶಯದಿಂದ ಬಿಡಬೇಕು ಎಂದು ಕಲ್ಯಾಣಿ ಸ್ಟೀಲ್ ಕಂಪನಿಯ ಅಡ್ಮಿನಿಸ್ಟ್ರೇಶನ್ ವಿಭಾಗದ ಮ್ಯಾನೇಜರ್ ದುಗ್ಗಪ್ಪ ಮನವಿ ಮಾಡಿದ್ದಾರೆ. ಸರ್ಕಾರ ನಮಗೆ ಪ್ರತಿದಿನ 4.93 ಕ್ಯೂಸೆಕ್ ನೀರು ಕೊಡ್ತೇವೆ ಅಂತ ಹೇಳಿತ್ತು. ಇದೀಗ ನಾಲ್ಕು ಕ್ಯೂಸೆಕ್ ನೀರನ್ನಾದ್ರು ಬಿಟ್ಟರೆ ಪ್ಯಾಕ್ಟರಿ ನಡೆಯುತ್ತೆ. ಇಲ್ಲದಿದ್ದರೆ ಫೆಬ್ರವರಿಗೆ ಪ್ಯಾಕ್ಟರಿ ಬಂದ್ ಆಗೋ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಆತಂಕದಲ್ಲಿ ಸಾವಿರಾರು ಕಾರ್ಮಿಕರು
ಇನ್ನು ಕೊಪ್ಪಳ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯ ಸಾವಿರಾರು ಕಾರ್ಮಿಕರು ವಿವಿಧ ಪ್ಯಾಕ್ಟರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕಲ್ಯಾಣಿ ಸ್ಟೀಲ್ ನಲ್ಲಿಯೇ ಎರಡೂವರೆ ಸಾವಿರ ಕಾರ್ಮಿಕರು ಇದ್ದಾರೆ. ಅನೇಕರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರೋದರಿಂದ ಪ್ಯಾಕ್ಟರಿ ಬಂದ್ ಆದರೆ ನಮ್ಮ ಬದುಕು ಬೀದಿಗೆ ಬರುತ್ತದೆ ಅನ್ನೋ ಆತಂಕ ಕಾರ್ಮಿಕರನ್ನು ಕಾಡುತ್ತಿದೆ. ಹೀಗಾಗಿ ಪ್ಯಾಕ್ಟರಿ ಬಂದ್ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು ಅನ್ನೋದು ಕಾರ್ಮಿಕ ವಿರೇಶಪ್ಪನ ಆಗ್ರಹವಾಗಿದೆ.
ಇನ್ನು ತುಂಗಭದ್ರಾ ಜಲಾಶಯದಲ್ಲಿ ಸದ್ಯ ಕುಡಿಯುವ ನೀರು ಮತ್ತು ಇನ್ನಿತರ ಬಳಕೆಗೆ ನೀರನ್ನು ಇಟ್ಟುಕೊಂಡು ಹೆಚ್ಚುವರಿಯಾಗಿ ನೀರು ಲಭ್ಯವಾದ್ರೆ ಪ್ಯಾಕ್ಟರಿಗಳಿಗೆ ನೀಡೋ ಬಗ್ಗೆ ಕ್ರಮ ಕೈಗೊಳ್ಳೋದಾಗಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ದೇಶದ ಅಭಿವೃದ್ಧಿಗೆ ಕೈಗಾರಿಕೆಗಳು ಕೂಡಾ ಅವಶ್ಯಕ. ಹೀಗಾಗಿ ಕುಡಿಯುವ ನೀರು, ಮತ್ತು ಕೃಷಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದರ ಜೊತೆಗೆ ಕೈಗಾರಿಕಗಳಿಗೂ ಕೂಡ ಒಂದಿಷ್ಟು ನೀರು ಬಿಡುವ ಕೆಲಸವಾಗಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ