ಕೊರೊನಾ ಮೂರನೇ ಅಲೆ; ಮುಂಜಾಗೃತಾ ಕ್ರಮವಾಗಿ ಮಕ್ಕಳ ಸಮೀಕ್ಷೆಗೆ ಮುಂದಾದ ಕೊಪ್ಪಳ ಜಿಲ್ಲಾಡಳಿತ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು ಪಂಚಾಯತಿ ಇಒಡಿ ಮೋಹನ ಕುಮಾರ್ ಅವರು ಮೂರನೇ ಅಲೆಯ ಮಕ್ಕಳ ಸಮೀಕ್ಷೆ ಬಗ್ಗೆ ಇಂದು ಮೊದಲ ಬಾರಿಗೆ ವೆಬಿನಾರ್ ಮಾಡಿದರು. ಸಿಇಒ ನಿರ್ದೇಶನದಂತೆ ಕನಕಗಿರಿ, ಕಾರಟಗಿ ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಸಭೆಯನ್ನು ವೆಬಿನಾರ್ ಮೂಲಕ ನಡೆಸಿದ್ದು, ಮಕ್ಕಳ ಸರ್ವೆ ಬಗ್ಗೆ ಸಲಹೆ ಸೂಚನೆ ನೀಡಿದರು.

ಕೊರೊನಾ ಮೂರನೇ ಅಲೆ; ಮುಂಜಾಗೃತಾ ಕ್ರಮವಾಗಿ ಮಕ್ಕಳ ಸಮೀಕ್ಷೆಗೆ ಮುಂದಾದ ಕೊಪ್ಪಳ ಜಿಲ್ಲಾಡಳಿತ
ಮಕ್ಕಳ ಸಮೀಕ್ಷೆಗೆ ಮುಂದಾದ ಕೊಪ್ಪಳ ಜಿಲ್ಲಾಡಳಿತ

ಕೊಪ್ಪಳ : ಕೊರೊನಾ ಸೋಂಕಿನ ಮೂರನೇ ಅಲೆ ಮಕ್ಕಳ ಮೇಲೆ ಅತಿ ಹೆಚ್ಚಿನ ಪರಿಣಾಮ ಬೀರಲಿದೆ ಎಂಬ ತಜ್ಞರ ಅಭಿಪ್ರಾಯ ಇದೀಗ ರಾಜ್ಯದ ಜನರಿಗೆ ತಲ್ಲಣ ಮೂಡಿಸಿದೆ. ಆದರೆ ಕೊರೊನಾ ಎರಡನೇ ಅಲೆಯ ಭಯಾನಕತೆಯನ್ನು ಅರ್ಥ ಮಾಡಿಕೊಂಡಿರುವ ರಾಜ್ಯ ಸರ್ಕಾರ ಮೂರನೇ ಅಲೆಯ ಕುರಿತಾಗಿ ಎಚ್ಚೆತ್ತುಕೊಂಡಿದ್ದು, ರಾಜ್ಯದಾದ್ಯಂತ ಮಕ್ಕಳ ಸಮೀಕ್ಷೆ ನೆಡಸಲು ಮುಂದಾಗಿದೆ. ಆ ಮೂಲಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಸಮೀಕ್ಷೆ ನಡೆಸಲು ಕೊಪ್ಪಳ ಜಿಲ್ಲಾಡಳಿತ ಇದೀಗ ಸಿದ್ಧತೆ ನೆಡಸಿದೆ.

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿದ ಸಭೆಯಲ್ಲಿ ಮಕ್ಕಳ ಸಮೀಕ್ಷೆ ನೆಡಸಲು ನಿರ್ಧರಿಸಲಾಗಿತ್ತು. ಜಿಲ್ಲಾದ್ಯಂತ ಶಿಕ್ಷಕರು, ಪ್ರತಿಯೊಂದು ಮನೆಗೆ ಭೇಟಿ ನೀಡಿ ಮಕ್ಕಳ ಸುರಕ್ಷತೆ ಕುರಿತು ಪಾಲಕರಿಗೆ ತಿಳಿವಳಿಕೆ ನೀಡಬೇಕು ಮತ್ತು ಮಕ್ಕಳನ್ನು ಹೊರಗಡೆ ಬಿಡಬಾರದು. ಮನೆಯಲ್ಲಿಯೇ ಇರುವಂತೆ ನೋಡಿಕೊಳ್ಳುಬೇಕು ಎಂದು ಶಿಕ್ಷಕರು ಜಾಗೃತಿ ಮೂಡಿಸುವುದರ ಜೊತೆಗೆ ಸಮೀಕ್ಷೆ ನೆಡಸುವಂತೆ ಸೂಚಿಸಲಾಗಿದೆ.

80 ರಿಂದ 100 ಕುಟುಂಬಗಳ ಸಮೀಕ್ಷೆ ಗುರಿಯನ್ನು ಶಿಕ್ಷಕರಿಗೆ ನೀಡಲಾಗಿದೆ. ಸರಕಾರಿ, ಅನುದಾನಿತ ಪ್ರೌಢಶಾಲೆಗಳ ಮುಖ್ಯ ಗುರು ಹಾಗೂ ಶಿಕ್ಷಕರು, ಪ್ರೌಢಶಾಲೆ ವ್ಯಾಪ್ತಿಯ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಬರುವ ಮನೆ, ಮನೆಗೆ ತೆರಳಿ ಕುಟುಂಬದಲ್ಲಿನ ಮಕ್ಕಳ ಸಮೀಕ್ಷೆಯನ್ನು ಜೂನ್ 2 ರಿಂದ ಆರಂಭಿಸಲಿದ್ದಾರೆ. ಪ್ರತಿಯೊಬ್ಬ ಶಿಕ್ಷಕರು 8 ರಿಂದ 100 ಕುಟುಂಬಗಳ ಮಕ್ಕಳ ಸಮೀಕ್ಷೆ ನಿರ್ವಹಿಸಲು ಗುರಿ ನಿಗದಿಪಡಿಸಿದೆ. ಮುಖ್ಯ ಶಿಕ್ಷಕರ ವಿವರ ಹಾಗೂ ಕರ ಪಟ್ಟಿಯನ್ನು ಆಯಾ ತಾ.ಪಂ ಇಒಡಿಗಳಿಗೆ ಸಲ್ಲಿಸಲಾಗುತ್ತದೆ. ಸಮೀಕ್ಷೆಗೆ ತೆರಳುವ ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ಸಮೀಕ್ಷೆಯ ನಮೂನೆಗಳನ್ನು ಒದಗಿಸಲಾಗುತ್ತದೆ. ಶಿಕ್ಷಕರ ಜತೆಗೆ ಅಂಗನವಾಡಿ ಕಾರ್ಯಕರ್ತೆಯರ ತಂಡ ರಚಿಸಲಾಗುತ್ತಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತಿ ಸಿಇಒ ರಘುನಂದನ್ ಮೂರ್ತಿ ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು ಪಂಚಾಯತಿ ಇಒಡಿ ಮೋಹನ ಕುಮಾರ್ ಅವರು ಮೂರನೇ ಅಲೆಯ ಮಕ್ಕಳ ಸಮೀಕ್ಷೆ ಬಗ್ಗೆ ಇಂದು ಮೊದಲ ಬಾರಿಗೆ ವೆಬಿನಾರ್ ಮಾಡಿದರು. ಸಿಇಒ ನಿರ್ದೇಶನದಂತೆ ಕನಕಗಿರಿ, ಕಾರಟಗಿ ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಸಭೆಯನ್ನು ವೆಬಿನಾರ್ ಮೂಲಕ ನಡೆಸಿದ್ದು, ಮಕ್ಕಳ ಸರ್ವೆ ಬಗ್ಗೆ ಸಲಹೆ ಸೂಚನೆ ನೀಡಿದರು.

ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ಮೂರು ತಾಲೂಕಿನ ಎಲ್ಲಾ ಪ್ರೌಢಶಾಲೆಯ ಮುಖ್ಯ ಗುರುಗಳು ವೆಬಿನಾರ್​ನಲ್ಲಿ ಹಾಜರಿದ್ದರು. ಇವರು ಜಿಲ್ಲಾಡಳಿತದ ಮಾರ್ಗ ಸೂಚಿಗಳನ್ನು ಆಲಿಸಿದರು‌. ಜತೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆಲವು ಮಕ್ಕಳಿಗೆ ಅಪೌಷ್ಟಿಕತೆ ಕಾಡುತ್ತಿದೆ. ಅಂತಹ ಮಕ್ಕಳಿಗೆ ಮೂರನೇ ಅಲೆಯಲ್ಲಿ KKRDB ಅಲ್ಲಿ ವಿಶೇಷ ಯೋಜನೆ ರೂಪಿಸಲಾಗಿದೆ. ಮೂರನೇ ಅಲೆ ಬಗ್ಗೆ ಜಿಲ್ಲೆಯ ಶಾಸಕರು ಸಂಸದರು ಎಚ್ಚೆತ್ತುಕೊಂಡು ವೆಂಟಿಲೇಟರ್​ ಮತ್ತು ಬೆಡ್​ಗೆ ಈಗಾಗಲೇ KKRDB ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಅವರಿಗೆ ಬೇಡಿಕೆ ಇಟ್ಟಿದ್ದಾರೆ

ಒಟ್ಟಾರೆ ಕೊರೊನಾ ಮೂರನೇ ಅಲೆಯ ಸೊಂಕು ಮಕ್ಕಳಿಗೆ ತಗಲುವ ಮುನ್ನೆವೇ ತಡೆಗಟ್ಟಲು ಕೊಪ್ಪಳ ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಅದರಲ್ಲಿಯೂ ಇದು ರಾಜ್ಯದಲ್ಲೇ ಮೊದಲ ಪ್ರಯತ್ನ ಆಗಿರುವುದರಿಂದ ಎಲ್ಲರ ಚಿತ್ತ ಕೊಪ್ಪಳದತ್ತ ಎನ್ನುವಂತಾಗಿದೆ. ಈ ಸಮೀಕ್ಷೆ ಮುಖಾಂತರ ಮೂರನೇ ಅಲೆಯಿಂದ ಮಕ್ಕಳನ್ನು ಪಾರು ಮಾಡುವ ಕೊಪ್ಪಳ ಜಿಲ್ಲಾಡಳಿತದ ಪ್ರಯತ್ನ ಯಶಸ್ವಿಯಾಗಲಿ ಎನ್ನುವುದು ನಮ್ಮೇಲ್ಲರ ಆಶಯ.

ಇದನ್ನೂ ಓದಿ:

ಕೊರೊನಾ ಎರಡನೇ ಅಲೆಯಲ್ಲಿ 2062 ಮಕ್ಕಳಿಗೆ ಸೋಂಕು ಪತ್ತೆ; ಮೂರನೇ ಅಲೆ ಮುನ್ನವೇ ಬಾಗಲಕೋಟೆ ಜಿಲ್ಲಾಡಳಿತದಿಂದ ಸಿದ್ಧತೆ

ಕೊರೊನಾ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ: ಡಾ.ರಣದೀಪ್​ ಗುಲೇರಿಯಾ