ಹೆತ್ತ ತಾಯಿಯನ್ನು ದೇವಸ್ಥಾನದಲ್ಲಿ ಬಿಟ್ಟು ಪರಾರಿಯಾದ ಮಕ್ಕಳು: ಕೊಪ್ಪಳ ಜಿಲ್ಲೆಯಲ್ಲೊಂದು ಕರುಣಾಜನಕ ಕಥೆ

ಕಳೆದ ಒಂದು ತಿಂಗಳ ಹಿಂದೆ ಗ್ಯಾಂಗ್ರಿನ್​ನಿಂದ ದ್ರಾಕ್ಷಾಯಣಮ್ಮನ ಕಾಲು ತುಂಡಾಗಿತ್ತು. ಈ ಸಂದರ್ಭದಲ್ಲಿ ಆಸ್ಪತ್ರೆಗೂ ಕೂಡ ಮಕ್ಕಳು ಬಂದಿರಲಿಲ್ಲ. ಕೊನೆಗೆ ಆಸ್ಪತ್ರೆಯ ವೈದ್ಯರೇ ದ್ರಾಕ್ಷಾಯಣಮ್ಮನವರ ಮನೆಗೆ ಬಿಟ್ಟು ಹೋಗಿದ್ದರು.

  • TV9 Web Team
  • Published On - 14:37 PM, 17 Feb 2021
ಹೆತ್ತ ತಾಯಿಯನ್ನು ದೇವಸ್ಥಾನದಲ್ಲಿ ಬಿಟ್ಟು ಪರಾರಿಯಾದ ಮಕ್ಕಳು: ಕೊಪ್ಪಳ ಜಿಲ್ಲೆಯಲ್ಲೊಂದು ಕರುಣಾಜನಕ ಕಥೆ
ಚಂದ್ರಕಾಂತ್ ಮತ್ತು ವೀರೇಶ್

ಕೊಪ್ಪಳ: ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಎನ್ನುವ ಮಾತಿದೆ. ಇದರ ಅರ್ಥ ತಾಯಿ ಒಬ್ಬಳು ಮನೆಯಲ್ಲಿದ್ದರೆ ಬೇರೆ ಯಾವ ಸಂಬಂಧದ ಅಗತ್ಯವು ಎಲ್ಲ ಎನ್ನುವುದಾಗಿದೆ. ಆದರೆ ಕೊಪ್ಪಳದಲ್ಲಿ ಈ ಮಾತು ಸುಳ್ಳಾಗುವಂತಹ ಘಟನೆಯೊಂದು ನಡೆದಿದೆ. ಹೌದು ಮನೆಯಲ್ಲಿದ್ದ ಹೆತ್ತ ತಾಯಿಯನ್ನೇ ಮಕ್ಕಳು ದೇಗುಲದಲ್ಲಿ ಬಿಟ್ಟು ಹೋಗಿ ಅಮಾನವೀಯತೆಯನ್ನು ಮೆರೆದಿದ್ದಾರೆ.

ಕೊಪ್ಪಳದ ಬಂಡಿ ದುರ್ಗಾದೇವಿ ದೇವಸ್ಥಾನದಲ್ಲಿ ಗ್ಯಾಂಗ್ರಿನ್‌ನಿಂದ ಕಾಲು ಕಳೆದುಕೊಂಡು ನರಳುತ್ತಿರುವ ತಾಯಿಯನ್ನು ಅನಾಥವಾಗಿ ಮಕ್ಕಳು ಬಿಟ್ಟು ಹೋಗಿದ್ದಾರೆ. ವೀರೇಶ್ ಮತ್ತು ಚಂದ್ರಕಾಂತ್ ಎಂಬ ಇಬ್ಬರು ಪುತ್ರರು ತಾಯಿ ದ್ರಾಕ್ಷಾಯಣಮ್ಮರನ್ನು ದೇವಾಲಯದಲ್ಲಿ ಬಿಟ್ಟು ಹೋಗಿದ್ದು, ಸದ್ಯ ದ್ರಾಕ್ಷಾಯಣಮ್ಮ ಅಕ್ಕಪಕ್ಕದವರು ನೀಡುವ ಊಟ ತಿಂದು ಕಾಲಕಳೆಯುವ ಸ್ಥಿತಿ ನಿರ್ಮಾಣ ಮಾಡಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆ ಗ್ಯಾಂಗ್ರಿನ್​ನಿಂದ ದ್ರಾಕ್ಷಾಯಣಮ್ಮನ ಕಾಲು ತುಂಡಾಗಿತ್ತು. ಈ ಸಂದರ್ಭದಲ್ಲಿ ಆಸ್ಪತ್ರೆಗೂ ಕೂಡ ಮಕ್ಕಳು ಬಂದಿರಲಿಲ್ಲ. ಕೊನೆಗೆ ಆಸ್ಪತ್ರೆಯ ವೈದ್ಯರೇ ದ್ರಾಕ್ಷಾಯಣಮ್ಮನವರ ಮನೆಗೆ ಬಿಟ್ಟು ಹೋಗಿದ್ದರು. ಆದರೆ ತಾಯಿಯನ್ನು ನೋಡಿಕೊಳ್ಳಲಾಗದ ಮಕ್ಕಳು ಮತ್ತೆ ಪುನಃ ಒಂದು ವಾರದ ಹಿಂದೆಯಷ್ಟೇ  ದೇವಸ್ಥಾನದಲ್ಲಿ ತಾಯಿಯನ್ನ ಬಿಟ್ಟು ಪರಾರಿಯಾಗಿದ್ದಾರೆ.

ಒಟ್ಟಾರೆ  ತಾಯಿ ಮಗುವನ್ನು ಬಿಟ್ಟು ಹೋಗುವುದು, ಮಕ್ಕಳು ಹೆತ್ತವರನ್ನು ಮನೆಯಿಂದ ಹೋರಹಾಕುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು, ಸಂಬಂಧಗಳಿಗೆ ಬೆಲೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎನ್ನುವುದು ವಿಪರ್ಯಾಸ.

ಇದನ್ನೂ ಓದಿ: ಕರುಳಿನ ಕುಡಿಯನ್ನು ಬಟ್ಟೆಯಲ್ಲಿ ಸುತ್ತಿ.. ಗದಗ ಬಸ್​ ನಿಲ್ದಾಣದಲ್ಲಿ ಬಿಟ್ಟು ಹೋದ.. ಹೆತ್ತ ತಾಯಿ!