IAS ಬಾಯ್ಟಿಟ್ಟ ಸತ್ಯದಿಂದ KPSC ಮಾಜಿ ಅಧ್ಯಕ್ಷನಿಗೆ ಇಡಿ ಶಾಕ್, ಹಲವು ರಾಜಕಾರಣಿಗೂ ಢವಢವ
ಕೆಪಿಎಸ್ಸಿಯಿಂದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿ ಮೇಜರ್ ಡೆವಲೆಪ್ಮೆಂಟ್ ಆಗಿದೆ. KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ರನ್ನ ಇಡಿ ಖೆಡ್ಡಾಗೆ ಕೆಡವಿದೆ. ಕೆಪಿಎಸ್ಸಿ ಹಗರಣದ ಕುರಿತು ಟಿವಿ9 ಬಯಲು ಮಾಡಿದ ಬಳಿಕ ಇಡಿ ಅಧಿಕಾರಿಗಳು ಅತಿದೊಡ್ಡ ಬೇಟೆಯಾಡಿದ್ದಾರೆ. ಶಿವಶಂಕರಪ್ಪ ಬೇಟೆಯಿಂದಾಗಿ ಪ್ರಭಾವಿ ರಾಜಕೀಯ ನಾಯಕರಿಗೂ ಟೆನ್ಷನ್ ಶುರುವಾಗಿದೆ.

ಬೆಂಗಳೂರು, (ಅಕ್ಟೊಬರ್ 06): ಕೆಪಿಎಸ್ಸಿಯಲ್ಲಿ 2 ತಂಡಗಳಿಂದ ಸರ್ಕಾರಿ ಹುದ್ದೆ ಮಾರಾಟ ಆಗಿರೋ ಸ್ಫೋಟಕ ಮಾಹಿತಿ ಬಯಲಾಗಿದೆ. ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್, ಆರೋಪಿ ಬಸವರಾಜ್ ಕನ್ನಾಳೆಯಂಥಾ ಮಧ್ಯವರ್ತಿಗಳ ಒಂದು ಟೀಂ, ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯರ ಮತ್ತೊಂದು ಟೀಂ ಅಭ್ಯರ್ಥಿಗಳನ್ನ ಹುಡುಕಾಟ ನಡೆಸಿ, ಹಣ ಕೊಡುವ ಅಭ್ಯರ್ಥಿಗಳನ್ನ ಪತ್ತೆ ಹಚ್ಚಿ ಡೀಲ್ ಮಾಡಿದ್ದಾರೆ. ಈ ಸಂಬಂಧ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್, ಇಡಿ ಅಧಿಕಾರಿಗಳ ಮುಂದೆ ಸತ್ಯ ಬಾಯ್ಬಿಟ್ಟಿದ್ದಾರೆ. ಇದರ ಬೆನ್ನಲ್ಲೇ ಇಡಿ ಅಧಿಕಾರಿಗಳು ಇಂದು (ಅಕ್ಟೊಬರ್ 06) KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಮನೆ ಮೇಲೆ ಎರಡನೇ ಬಾರಿಗೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಅಲ್ಲದೇ ಮನೆಯಲ್ಲೇ ಇದ್ದ ಶಿವಶಂಕರಪ್ಪನನ್ನು ವಿಚಾರಣೆ ನಡೆಸಿ ವಶಕ್ಕೆ ಪಡೆದುಕೊಂಡಿದೆ.
ಜ್ಞಾನೇಂದ್ರ ಬಾಯ್ಬಿಟ್ಟ ಸತ್ಯದಿಂದ ಮಾಜಿ ಅಧ್ಯಕ್ಷ ಲಾಕ್
ಹೌದು…ಬೆಂಗಳೂರಿನ ಡಾಲರ್ಸ್ ಕಾಲೋನಿಯ ಅಪಾರ್ಟ್ಮೆಂಟ್ನ ಫ್ಲ್ಯಾಟ್ನಲ್ಲಿ ದಾಳಿ ಮಾಡೋ ಮೂಲಕ ಇಡಿ ವಶಕ್ಕೆ ಪಡೆದಿದೆ. ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಇದ್ದ ಫ್ಲ್ಯಾಟ್ ಮೇಲೆ ಇಡಿ ದಾಳಿ ಮಾಡಿದೆ. 2 ಕಾರುಗಳಲ್ಲಿ ಆಗಮಿಸಿದ ನಾಲ್ವರು ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಹಿಂದೆಯೂ ಇಡಿ ಅಧಿಕಾರಿಗಳು ದಾಳಿ ಮಾಡಿದ್ರು. ಇದೀಗ 2ನೇ ಬಾರಿ ದಾಳಿ ಮಾಡೋ ಮೂಲಕ ಲಾಕ್ ಮಾಡಿದ್ದಾರೆ. ಇನ್ನು KPSC ಸದಸ್ಯೆ ಗೀತಾ ನಿವಾಸದ ಮೇಲೂ ಇಡಿ ಅಧಿಕಾರಿಗಳ ದಾಳಿ ಆಗಿದೆ. ಬೆಂಗಳೂರಿನ ಮನೆಯಲ್ಲಿ ಅವರನ್ನೂ ಸಹ ಇಡಿ ವಶಕ್ಕೆ ಪಡೆದುಕೊಂಡಿದೆ.
ಇದನ್ನೂ ನೋಡಿ: ಕೆಪಿಎಸ್ಸಿ ನೇಮಕಾತಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ, ಸದಸ್ಯೆ ಗೀತಾ ಇಡಿ ವಶಕ್ಕೆ
ಕಳ್ಳಾಟದ ಬಗ್ಗೆಯೂ ಬಾಯ್ಬಿಟ್ಟ ಐಎಎಸ್ ಅಧಿಕಾರಿ
ಇಷ್ಟೆಲ್ಲಾ ಬೆಳವಣಿಗೆಗೆ ಪ್ರಮುಖ ಕಾರಣ ಆಗಿದ್ದೇ ಜ್ಞಾನೇಂದ್ರ ಕುಮಾರ್ ನೋಡಿ, ಹೇಗೆ ಕಳ್ಳಾಟ ಆಡಲಾಗಿತ್ತು ಎಂದು ಇಡಿ ಅಧಿಕಾರಿಗಳ ಮುಂದೆ ಇಂಚಿಂಚೂ ಬಿಚ್ಚಿಟ್ಟಿದ್ದಾನೆ. ವಿಚಾರಣೆ ವೇಳೆ ನಾಲ್ವರ ಹೆಸರು ಬಹಿರಂಗಪಡಿಸಿದ್ದಾನೆ. ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಬಿ.ವಿ.ಗೀತಾ, ಶಾಂತಾ ಹೊಸಮನಿ ಸೇರಿದಂತೆ ನಾಲ್ವರಿಗೆ ಸಂಕಷ್ಟ ಶುರುವಾಗಿದೆ. ಏನ್ ಆ ಡೀಲ್ ಅನ್ನೋದು ನೋಡೋದಾದ್ರೆ, ಅಭ್ಯರ್ಥಿಗಳು ಪಡೆದಿರುವ ಅಂಕ, ಸ್ಥಾನದ ಅನುಗುಣಕ್ಕೆ ಲಂಚ ಸ್ವೀಕಾರ ಮಾಡಲಾಗ್ತಿತ್ತು ಎಂದು ಸ್ವತಃ ಇಡಿ ವಿಚಾರಣೆ ವೇಳೆ ಜ್ಞಾನೇಂದ್ರ ಬಾಯ್ಬಿಟ್ಟಿದ್ದಾನೆ. ಮೆರಿಟ್ ಲಿಸ್ಟ್ನ ಇದ್ದ ಅಭ್ಯರ್ಥಿಗಳ ಮಾಹಿತಿ ಸಂಗ್ರಹ ಮಾಡಲಾಗ್ತಿತ್ತು. ಅಂತಹ ಅಭ್ಯರ್ಥಿಗಳ ಮಾಹಿತಿಯನ್ನ ಸದಸ್ಯರು, ಸಿಬ್ಬಂದಿ ಸಂಗ್ರಹ ಮಾಡ್ತಿದ್ರು. ಕೂಡಲೇ ಮಧ್ಯವರ್ತಿಗಳ ಮೂಲಕ ಸಂಪರ್ಕಿಸಿ ಅಭ್ಯರ್ಥಿಗಳಿಗೆ ಉದ್ಯೋಗ ಕೊಡಿಸುವ ಭರವಸೆ ನೀಡುತ್ತಿದ್ದು, ಮುಂಗಡವಾಗಿ 5 ಲಕ್ಷದಿಂದ 10 ಲಕ್ಷ ರೂ. ಹಣ ಪಡೆಯುತ್ತಿದ್ದರು. ಈ ಎಲ್ಲಾ ವಿಚಾರವನ್ನು ಇಡಿ ಮುಂದೆ ಜ್ಞಾನೇಂದ್ರ ಕುಮಾರ್ ಸತ್ಯಬಿಚ್ಚಿಟ್ಟಿದ್ದಾನೆ.
13 ಇಲಾಖೆಯಲ್ಲಿ ಡೀಲ್ ಆಗಿದೆ ಎಂದ ಜ್ಞಾನೇಂದ್ರ
ಎರಡ್ಮೂರು ವರ್ಷದಲ್ಲಿ ಒಟ್ಟು 13 ಇಲಾಖೆಯಲ್ಲಿ ಡೀಲ್ ಆಗಿದೆ ಎಂದು ಜ್ಞಾನೇಂದ್ರ ತನಿಖಾ ತಂಡದ ಮುಂದೆ ಬಾಯ್ಬಿಟ್ಟಿದ್ದಾನೆ. ಕಳೆದ 2-3 ವರ್ಷಗಳಲ್ಲಿ ಪಶುವೈದ್ಯಾಧಿಕಾರಿಗಳ ನೇಮಕ, ಕೆಎಎಸ್ ಅಧಿಕಾರಿಗಳು, ಸಾರಿಗೆ ಇಲಾಖೆ ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್, ಆರೋಗ್ಯ ಇಲಾಖೆ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಾಯಕ ಎಂಜಿನಿಯರ್ಗಳು ಹಾಗೂ ಮೀನುಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆ ಪಶುವೈದ್ಯಾಧಿಕಾರಿಗಳ ಹುದ್ದೆ ಸೇರಿ ಒಟ್ಟು 13 ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಿದ್ದೇವೆ. ಎಲ್ಲದ್ರಲ್ಲೂ ಅಕ್ರಮ ನಡೆದಿದೆ ಅಂತಾ ಇಡಿ ವಿಚಾರಣೆ ವೇಳೆ ಜ್ಞಾನೇಂದ್ರ ಗಂಗ್ವಾರ್ ಹೇಳಿಕೆ ನೀಡಿದ್ದಾನೆ.
ಅದೇನೇ ಹೇಳಿ, ಟಿವಿ9 ಬಯಲು ಮಾಡಿದ್ದ ಕೆಪಿಎಸ್ಸಿ ಹಗರಣದಲ್ಲಿ ಇಡಿ ಅತಿದೊಡ್ಡ ಬೇಟೆಯಾಡಿದೆ. ದೊಡ್ಡ ದೊಡ್ಡ ರಾಜಕೀಯ ನಾಯಕರಿಗೂ ಟೆನ್ಷನ್ ಶುರು ಆಗಿದೆ. ಪ್ರಭಾವಿಗಳ ಪಾತ್ರವೂ ಹಗರಣದಲ್ಲಿದೆ ಎನ್ನಲಾಗ್ತಿದೆ. ಆದ್ರೆ ಎಲ್ಲವೂ ತನಿಖೆಯಿಂದಲೇ ಬಯಲಾಗಬೇಕಿದೆ.




