
ಬೆಂಗಳೂರು, (ಅಕ್ಟೋಬರ್ 08): ಕೆಪಿಎಸ್‌ಸಿಯಿಂದ ಪಶುವೈದ್ಯಕೀಯ ನೇಮಕಾತಿ ಹಗರಣ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಅಂದು ಕೆಪಿಎಸ್ ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಡೆಯಿಂದ ಅಂದಿನ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ, ಪರೀಕ್ಷೆ ಮುಂಚಿತವಾಗಿಯೇ 80 ಪ್ರಶ್ನೆಗಳ ಉತ್ತರಗಳನ್ನು ಪಡೆದುಕೊಂಡು ನೇರವಾಗಿ ಅಭ್ಯರ್ಥಿಗಳ ಜೊತೆ ಡೀಲ್ಗೆ ಇಳಿದಿರುವುದು ತನಿಖೆ ವೇಳೆ ಬಯಲಾಗಿದೆ. ಈ ಸಂಬಂಧ ಸ್ವತಃ ಇಡಿ ಮಾಧ್ಯಮ ಪ್ರಕರಣೆ ಮೂಲಕ ಸ್ಪಷ್ಟಪಡಿಸಿದೆ.
ಶಿವಶಂಕರಪ್ಪ ಸಾಹುಕರ್ ಹಾಗೂ ಗೀತಾ ಬಂಧನದ ಬಳಿಕ ಇಡಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಪ್ರಶ್ನೆಪತ್ರಿಕೆ, ಕೀ ಉತ್ತರನ್ನು ಸೋರಿಕೆ, 1:3 ಮೆರಿಟ್ ನಲ್ಲಿ ಸೋರಿಕೆ ಮಾಡಿ ಹಣ ಪಡೆದಿದ್ದಾರೆ. ಕೆಲವು ಅಭ್ಯರ್ಥಿಗಳಿಗೆ ಪರೀಕ್ಷೆ ಒಂದು ದಿನ ಮುಂಚಿತವಾಗಿ ಕೀ ಉತ್ತರ ನೀಡಲಾಗಿತ್ತು. ಇದಕ್ಕಾಗಿ ಪ್ರತಿ ಅಭ್ಯರ್ಥಿಯಿಂದ 20 ಲಕ್ಷದಿಂದ 40 ಲಕ್ಷದವರೆಗೆ ಲಂಚ ಪಡೆಯಲಾಗಿದೆ ಎನ್ನುವ ಅಂಶ ತನಿಖೆಯನ್ನು ಗೊತ್ತಾಗಿದೆ.
ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಕಡೆಯಿಂದ ಬಿ.ವಿ ಗೀತಾ ಮೊದಲ 80 ಪ್ರಶ್ನೆಗಳ ಸರಿಯಾದ ಉತ್ತರಗಳನ್ನ ಪಡೆದುಕೊಂಡಿದ್ದಾರೆ. ಬಳಿಕ ಗೀತಾ ಒಬ್ಬ ಅಭ್ಯರ್ಥಿಯಿಂದ ಡೀಲ್ ಮಾಡಿಕೊಂಡಿದ್ದರು. 40 ಲಕ್ಷದಲ್ಲಿ 20 ಲಕ್ಷವನ್ನು ಮುಂಗಡವಾಗಿ ನಗದು ರೂಪದಲ್ಲಿ ಪಡೆದಿದ್ದಾರೆ. ಶಿವಶಂಕರಪ್ಪ ಸಾಹುಕಾರ್ ಸಹ ಅಭ್ಯರ್ಥಿ ಜೊತೆ 20 ಲಕ್ಷಕ್ಕೆ ಡೀಲ್ ಮಾಡಿಕೊಂಡು ಮುಂಗಡವಾಗಿ 10 ಲಕ್ಷ ರೂ. ಪಡೆದಿದ್ದಾರೆ. ಹೀಗೆ ಒಟ್ಟು 6 ಅಭ್ಯರ್ಥಿಗಳ ಜೊತೆ ಇಬ್ಬರು ಡೀಲ್ ಮಾಡಿಕೊಂಡಿರೋದು ತನಿಖೆಯಲ್ಲಿ ಪತ್ತೆಯಾಗಿದೆ.

ಇನ್ನು ಡೀಲ್ ಆದ ಅಭ್ಯರ್ಥಿಗಳು ಅಂತಿಮ ಆಯ್ಕೆ ಪಟ್ಟಿಯಲ್ಲಿ ರ್ಯಾಂಕ್ ಪಡೆದಿದ್ದಾರೆ. ಈ ಆಧಾರದಲ್ಲಿ ಸೆಪ್ಟೆಂಬರ್ 06 ರಂದು ಶಿವಶಂಕರಪ್ಪ ಸಾಹುಕಾರ್ ಮತ್ತು ಗೀತಾರನ್ನ ಬಂಧಿಸಲಾಗಿದೆ. ಇವರಿಬ್ಬರನ್ನ PMLA ಪ್ರಕರಣಗಳ ವಿಶೇಷ ನ್ಯಾಯಾಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ED ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ಮಾಡಲಾಗ್ತಿದೆ ಎಂದು ಇಡಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
Published On - 2:47 pm, Thu, 8 October 26