ಮದನ್ ಗೋಪಾಲ್ ಮನದಮಾತು: ಗ್ರಾಮದ ನೆಮ್ಮದಿ, ಏಕತೆಗೆ ಸುವ್ಯವಸ್ಥಿತ ಕೆರೆ ಇರಬೇಕು

ಇದು ಸರ್ಕಾರದ ವತಿಯಿಂದ ಮಾಡುವ ಕೆಲಸ ಅಲ್ಲ. ಸಮುದಾಯ ಆಧಾರಿತ ಮತ್ತು ಊರಿನ ಗ್ರಾಮಸಭೆಗಳ ಮೂಲಕ ಅವುಗಳನ್ನು ನಿರ್ವಹಣೆ ಮಾಡಿದರೆ ಮಾತ್ರ ಕೆರೆಗಳನ್ನು ನೊಡಿಕೊಳ್ಳಲು ಸಾಧ್ಯ.

ಮದನ್ ಗೋಪಾಲ್ ಮನದಮಾತು: ಗ್ರಾಮದ ನೆಮ್ಮದಿ, ಏಕತೆಗೆ ಸುವ್ಯವಸ್ಥಿತ ಕೆರೆ ಇರಬೇಕು
ಕೆರೆಗಳ ಅಭಿವೃದ್ಧಿ
Follow us
preethi shettigar
|

Updated on:Apr 19, 2021 | 4:34 PM

ನೀರಿಗಾಗಿ ಹಾಹಾಕಾರ ಸೃಷ್ಟಿಯಾದಾಗ ಸಮಾಜವನ್ನು ಸಮಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ನೀರ ಕಾಳಜಿ ಈ ಸಂದರ್ಭದಲ್ಲಿ ಬಹಳ ಮುಖ್ಯ ಎನಿಸಿಕೊಳ್ಳುತ್ತದೆ. ಇಂತಹ ಸಾಮಾಜಿಕ ಕಳಕಳಿಯನ್ನು ಹೊತ್ತ ಅದಷ್ಟೋ ಜನರು ನಮ್ಮ ನಡುವೆ ಇದ್ದಾರೆ. ಮುಂದಿನ ಪೀಳಿಗೆಗೆ ನೀರು ಉಳಿಸಬೇಕು ಎಂಬ ಮಹತ್ತರ ಆಕಾಂಕ್ಷೆಯೊಂದಿಗೆ ಶ್ರಮಿಸಿದ ಅಧಿಕಾರಿಗಳ ಸಂಖ್ಯೆಯೂ ದೊಡ್ಡದು. ಅಂಥವರ ಪಟ್ಟಿಯಲ್ಲಿ ಮೊದಲಿಗರಾಗುತ್ತಾರೆ ನಿವೃತ್ತ ಐಎಎಸ್​ ಅಧಿಕಾರಿ ಮದನ ಗೋಪಾಲ್. ಕೆರೆ ಅಭಿವೃದ್ಧಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅವರು ಕೆರೆಗಳ ಪಾಲನೆಗೆ  ರೂಪಿಸಿದ್ದ ಯೋಜನೆಯ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಕೆರೆಗಳಿಗೆ ಕಾಯಕಲ್ಪ ನೀಡಲೆಂದು ಜಾರಿ ಮಾಡಿದ ಜಲಸಮೃದ್ಧಿ ಯೋಜನೆ ಕರ್ನಾಟಕದಲ್ಲಿ ಮನೆಮಾತಾದ ಕಾರ್ಯಕ್ರಮ. ಈ ಯೋಜನೆ ಬಗ್ಗೆ ಮಾತನಾಡುವಾಗ ಅಂದಿನ ಮುಖ್ಯಮಂತ್ರಿ ಎಸ್​.ಎಂ.ಕೃಷ್ಣ ಅವರ ಸಹಕಾರ  ನೆನೆಯಬೇಕು. ಆ ಹೊತ್ತಿಗಾಗಲೇ ನಮ್ಮಲ್ಲಿ ಜಲಾನಯನ ಅಭಿವೃದ್ಧಿ (ವಾಟರ್ ಶೆಡ್ ಡೆವಲಪ್​ಎಂಟ್) ಮತ್ತು ಕುಡಿಯುವ ನೀರಿನ ಯೋಜನೆ ಬಗ್ಗೆ ವಿಶ್ವಬ್ಯಾಂಕ್​ಗೆ ಪ್ರಸ್ತಾವ ಕಳಿಸಿದ್ದೆವು. ನೀರಿಗೆ ಸಂಬಂಧಪಟ್ಟಂತೆ ಯಾವ ಯೋಜನೆ ಮಾಡಬೇಕು ಎಂದು ಯೋಚನೆ ಮಾಡುವಾಗ ಜಲ ಸಮೃದ್ಧಿ ಯೋಜನೆಯ ಪ್ರಸ್ತಾವನೆ ಬಂದಿತ್ತು. ಆ ಸಂದರ್ಭದಲ್ಲಿ ಕುಡಿಯುವ ನೀರಿನ ಯೋಜನೆ, ಜಲಾನಯನ ಅಭಿವೃದ್ಧಿ ಮತ್ತು ಜಲಸಮೃದ್ಧಿ ಯೋಜನೆ -ಮೂರಕ್ಕೂ ಒಂದಕ್ಕೆ ಒಂದು ಸಂಬಂಧ ಇರುವುದು ತಿಳಿದು ಸಮಗ್ರವಾದ ದೃಷ್ಟಿಕೋನದಿಂದ ಒಂದು ಯೋಜನೆಯನ್ನು ಜಾರಿಗೆ ತರಲಾಯಿತು.

ಅದರಲ್ಲಿ ಪ್ರಮುಖವಾದದ್ದು ಕೆರೆ ಬಳಕೆದಾರರ ಸಂಘ. ಈ ಸಂಘವನ್ನು ಮಾಡುವಾಗ ನಾವು ಮೀನುಗಾರಿಕೆ ಮಾಡುವವರು, ನೀರಾವರಿ ಮಾಡುವವರು ಸೇರಿದಂತೆ ಕೆರೆ ಆಶ್ರಿತರನ್ನು ಗಮನದಲ್ಲಿರಿಕೊಂಡು ಸಂಘಗಳನ್ನು ರೂಪಿಸಿದೆವು. ಪ್ರತಿ 40 ಕೆರೆಗಳಿಗೆ ಒಂದೊಂದು ತಂಡ ಮಾಡಿದ್ದೆವು. ಆ ತಂಡದಲ್ಲಿ ಐವರು ಮುಖ್ಯಸ್ಥರು ಇರುತ್ತಾರೆ. ಸಾಮಾನ್ಯವಾಗಿ ಇವರು ಅದೇ ಊರಿನವರೇ ಆಗಿರುತ್ತಿದ್ದರು. ನೀರಾವರಿ, ಮೀನುಗಾರಿಕೆ, ತೋಟಗಾರಿಕೆ ಬೆಳೆ, ಮೇವುಗಳ ಬಗ್ಗೆ ಈ ಸಂಸ್ಥೆಯು ತರಬೇತಿಯನ್ನೂ ಸಂಘಟಿಸುತ್ತಿತ್ತು. ಕೆರೆ ಬಳಕೆದಾರರ ಸಂಘದಲ್ಲಿ ಯಾರು ಕೆಲಸ ಮಾಡಬೇಕು ಎಂದು ನಾವು ಯೋಚನೆ ಮಾಡಿದಾಗ ಸ್ವಯಂಸೇವಾ ಸಂಸ್ಥೆಗಳನ್ನು ಗುರುತಿಸಿದೆವು. ನಂತರದಲ್ಲಿ ಕೆರೆ ಬಳಕೆದಾರರ ಸಂಘ ಮತ್ತು ಸ್ವಯಂಸೇವಾ ಸಂಸ್ಥೆಗಳಿಗೆ ತರಬೇತಿ ನೀಡಲು ಎನ್‌ಜಿಒಗಳನ್ನು ಗುರುತಿಸಿದೆವು.

ಭಾರತೀಯ ನಿರೂಪಣಾ ಎನ್‌ಜಿಒ ಫೇಡರೇಷನ್ ಎಂದು ಇದೆ. ತಜ್ಞರಾದ ಸಿ.ಎನ್.ರೆಡ್ಡಿ, ಪ್ರೇರಣಾ ಎನ್ನುವ ಸಂಸ್ಥೆಯಿಂದ ಪ್ರಮೋದ್ ಕುಲಕರ್ಣಿ, ಆಕ್ಸಲಾಂ ರಾಮಪ್ಪ ಇದ್ದರು. ಇದರ ಜೊತೆಗೆ ತರಬೇತಿಗೆ ಸೃಜನಾ ಎನ್ನುವ ಸಂಸ್ಥೆಯನ್ನು ಕೂಡ ಸೇರಿಸಿದ್ದೇವು. ಹೀಗಾಗಿ ಇದು ಯಾವುದೇ ಒಬ್ಬರ ಪ್ರಯತ್ನ ಅಲ್ಲ. ಹಲವಾರು ಸಂಘ ಸಂಸ್ಥೆಗಳ ಮುಂದಾಳತ್ವದಲ್ಲಿ ಕೆರೆಗಳ ಅಭಿವೃದ್ಧಿ ಕಾರ್ಯ ಆಗಿದೆ. ಈ ಸಂಸ್ಥೆಗಳಲ್ಲಿನ ತಜ್ಞರ ಪ್ರಯತ್ನದಿಂದ ಕೆರೆಗಳನ್ನು ಗುರುತಿಸಲಾಯಿತು. ಯಾವ ಕೆರೆಗಳಲ್ಲಿ ಹೇಗೆ ಅಭಿವೃದ್ಧಿ ಕಾರ್ಯವನ್ನು ಮಾಡಬೇಕು ಎನ್ನುವುದರ ಬಗ್ಗೆ ಸಂಶೋಧನೆ ಮಾಡಲಾಯಿತು.

ತಜ್ಞರ ಸಂಶೋಧನೆ, ಕೃಷಿ ವಿಶ್ವವಿದ್ಯಾಲಯದಿಂದ ಕೆರೆಗಳ ಬಗ್ಗೆಯೂ ಮಾಹಿತಿ ಪಡೆದು, ಕೆರೆಗಳಲ್ಲಿ ನೀರು ಹೆಚ್ಚು ಬಂದಾಗ ಯಾವ ರೀತಿಯ ಕ್ರಮ ಬೇಕು. ಯಾವ ರೀತಿಯ ಕೃಷಿ ಅಭ್ಯಾಸ ಬೇಕು ಮತ್ತು ಎಷ್ಟು ಇಳುವರಿ ಬೇಕು ಎಂಬ ಬಗ್ಗೆ ಮಾಹಿತಿ ಪಡೆದೆವು ಮತ್ತು ಹೂಳನ್ನು ಹೇಗೆ ಬಳಸಬಹುದು? ಅರಣ್ಯ ಮತ್ತು ತೋಟಗಾರಿಕೆ ಇಲಾಖೆಯಿಂದ ಕೆರೆಗಳ ಸುತ್ತಮುತ್ತ ಇರುವ ಗಿಡಗಳನ್ನು ಯಾವ ರೀತಿ ಬೆಳೆಸಿ ಅದರಿಂದ ಬಂದ ಆದಾಯವನ್ನು ಕೆರೆ ಅಭಿವೃದ್ಧಿ ಸಂಘಗಳಿಗೆ ಯಾವ ರೀತಿಯಾಗಿ ತಲುಪಿಸಬೇಕು ಇತ್ಯಾದಿ ಅಂಶಗಳನ್ನು ಸಮಗ್ರವಾಗಿ ಯೋಚನೆ ಮಾಡಿ ಈ ಯೋಜನೆಯನ್ನು ಜಾರಿಗೆ ತಂದೆವು.

ಕೆರೆಗಳ ಪ್ರಾಮುಖ್ಯತೆ ನಮ್ಮ ಊರಿನಲ್ಲಿ ದೇವಸ್ಥಾನ ಹೇಗೋ ಕೆರೆಗಳು ಹಾಗೆ. ಅದು ಒಂದು ಸಮುದಾಯದ ಆಸ್ತಿ. ಇಂಡಿಯನ್ ಲಾ ಇಂಡಸ್ಟ್ರಿ ಅವರು ಕೆರೆಗಳ ಬಗ್ಗೆ ಒಂದು ಸಂಶೋಧನೆ ಮಾಡಿದ್ದಾರೆ. ಅದರಲ್ಲಿ ಹೇಳಿರುವ ಪ್ರಕಾರ ಮೈಸೂರು ರಾಜ್ಯದಲ್ಲಿ (ಕರ್ನಾಟಕಕ್ಕೆ ಮೊದಲು ಇದ್ದ ಹೆಸರು) 19,000 ಕೆರೆಗಳಿವೆ. ಇದರಿಂದ ಹೇಗೆ ಆದಾಯ ಪಡೆಯಬಹುದು ಎನ್ನುವುದರ ಬಗ್ಗೆ ಒಂದು ಇಲಾಖೆ ಸ್ಥಾಪನೆ ಮಾಡಿದ್ದರು. ಆದರೆ ಇದು ಸರ್ಕಾರದ ವತಿಯಿಂದ ಮಾಡುವ ಕೆಲಸ ಅಲ್ಲ. ಸಮುದಾಯ ಆಧಾರಿತ ಮತ್ತು ಊರಿನ ಗ್ರಾಮ ಸಭೆಗಳ ಮೂಲಕ ಅವುಗಳನ್ನು ನಿರ್ವಹಣೆ ಮಾಡಿದರೆ ಮಾತ್ರ ಕೆರೆಗಳನ್ನು ನೊಡಿಕೊಳ್ಳಲು ಸಾಧ್ಯ.

ಹಳ್ಳಿಗಳಲ್ಲಿ ಯಾವ ರೀತಿಯ ಜನಜೀವನ ಇರುತ್ತದೆ. ಜಾತ್ರೆ ಇರುತ್ತದೆ. ಊರಿನಲ್ಲಿ ಒಬ್ಬರ ಮನೆಗೆ ಒಬ್ಬರು ಸಹಾಯ ಮಾಡುವುದಕ್ಕೆ ಬರುತ್ತಾರೆ ಆ ರೀತಿ ಒಂದು ಕಲ್ಪನೆ ಇಟ್ಟುಕೊಂಡಾಗ ಕೆರೆ ನಿರ್ವಹಣೆ ಸಾಧ್ಯ. ಸೆಲ್ಫ್ ಡ್ರಿವನ್ ಎಕನಾಮಿ (ನಮಗಾಗಿ ನಾವು ದುಡಿಯುವುದು) ಇಟ್ಟುಕೊಂಡು ಕೆಲಸ ಮಾಡಬೇಕು. ಅದು ಹಿಂದೆ ಇತ್ತು. ಆದರೆ ಈಗ ಇಲ್ಲ. ಮಳೆ ಮೇಲೆ ಆಧರಿತವಾಗಿರುವ ಕೃಷಿ ಹೆಚ್ಚು ನಮ್ಮಲ್ಲಿ. ಹೀಗಾಗಿ ಕೆರೆಗಳು ನೈಸರ್ಗಿಕವಾಗಿ ಚೈನ್‌ಸಿಸ್ಟಮ್ ಅಡಿಯಲ್ಲಿ ಬಂದಿವೆ. ಕರ್ನಾಟಕದಲ್ಲಿ ಇಂಥ ಸುಮಾರು 36,000 ಕೆರೆಗಳು ಕರ್ನಾಟಕದಲ್ಲಿ ಇವೆ.

ಅದರಲ್ಲಿ 4 ಹೆಕ್ಟೇರ್​ಗಿಂತ ಕಡಿಮೆ ಗಾತ್ರದ ಕೆರೆಗಳು ಗ್ರಾಮ ಪಂಚಾಯತಿಗೆ ಬರುತ್ತದೆ. 4 ರಿಂದ 40 ಹೆಕ್ಟರ್‌ ಇರುವ ಕೆರೆಗಳು ಜಿಲ್ಲಾ ಪಂಚಾಯತಿ ವ್ಯಾಪ್ತಿಗೆ ಬರುತ್ತವೆ. 40 ರಿಂದ 2000 ಹೆಕ್ಟರ್ ಇರುವುದು ಸಣ್ಣ ನಿರಾವರಿಗೆ ಬರುತ್ತದೆ. 2000  ಹೆಕ್ಟೇರ್​ಗಿಂತ ಹೆಚ್ಚು ಇರುವ ಕೆರೆಗಳು ನೀರಾವರಿ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಗ್ರಾಮದ ಆರ್ಥಿಕ ವ್ಯವಸ್ಥೆ, ಸಾಮಾಜಿಕ ಏಕತೆಯನ್ನು ಕೆರೆಗಳ ಮೂಲಕ ಸಾಧ್ಯವಾಗಿಸುವುದು ನಮ್ಮ ಉದ್ದೇಶವಾಗಿತ್ತು. ಗ್ರಾಮಗಳ ಕೇಂದ್ರಬಿಂದುವೇ ಈ ಕೆರೆಗಳು.

ಪರಿಕಲ್ಪನೆ ಮತ್ತು ನಿರೂಪಣೆ: ಪ್ರೀತಿ ಶೆಟ್ಟಿಗಾರ್

ಇದನ್ನೂ ಓದಿ: ನೀರೆಚ್ಚರದ ಬದುಕು | ಬೆಂಗಳೂರಿನಲ್ಲಿ ಜನಪ್ರಿಯವಾಗಿರುವ ಇಂಗುಬಾವಿ ಪರಿಕಲ್ಪನೆ ಇಡೀ ಕರ್ನಾಟಕ ರಾಜ್ಯಕ್ಕೆ ಹಬ್ಬಬೇಕಿದೆ: ಶ್ರೀಪಡ್ರೆ

( Madan gopal shares his idea about lake development )

Published On - 4:08 pm, Mon, 19 April 21