ಕರ್ನಾಟಕದ ಉಪಚುನಾವಣೆ ಬಳಿಕ ಇದೀಗ ಮಹಾರಾಷ್ಟ್ರ ಚುನಾವಣಾ ಅಖಾಡಕ್ಕಿಳಿಯಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಜ್ಜಾಗಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಮಹಾರಾಷ್ಟ್ರದಲ್ಲಿ ಅಬ್ಬರದ ಮತಬೇಟೆ ನಡೆಸಲಿದ್ದಾರೆ. ಇಂದು ಮೊದಲ ದಿನವಾಗಿದ್ದು ಭೀವಂಡಿ, ಚಾಂಡಿವಾಲಿ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.
ಪ್ರಚಾರ ಮುಗಿಸಿ ಮತ್ತೆ ಬೆಂಗಳೂರಿಗೆ ವಾಪಸಾಗಲಿದ್ದಾರೆ, ನಾಳೆ(ನವೆಂಬರ್ 16) ಸೊಲ್ಲಾಪುರಕ್ಕೆ ತೆರಳಲಿದ್ದಾರೆ, ನಾಡಿದ್ದು ಮತ್ತೆ ಸರಣಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಳೆ ಜಾಟ್, ಅಕ್ಕಾಲ್ಕೋಟ್,ಸೊಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ನಾಡಿದ್ದು, ಲಾಥೂರ್ ಕ್ಷೇತ್ರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪ್ರಚಾರ ಮಾಡಲಿದ್ದಾರೆ.
ಇಂದು ಬೆಳಗ್ಗೆ 9.55ಕ್ಕೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ಮುಂಬೈಗೆ ತೆರಳಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಮುಂಬೈ ಏರ್ಪೋರ್ಟ್ಗೆ ತಲುಪಲಿದ್ದಾರೆ. ಅಲ್ಲಿಂದ ರಸ್ತೆಯ ಮೂಲಕ ಸಾಗಿ ಮುಂಬೈ ವೆಸ್ಟ್ ವಿಧಾನಸಭಾ ಕ್ಷೇತ್ರವಾದಂತ ಭೀವಂಡಿಯಲ್ಲಿ ಪ್ರಚಾರ ನಡೆಸಲಿದ್ದಾರೆ.
ಸಂಜೆ 5 ಗಂಟೆಗೆ ಚಾಂಡೀವಲಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಲಿರುವಂತ ಅವರು, ರಾತ್ರಿ 7.55ಕ್ಕೆ ಮುಂಬೈನಿಂದ ವಿಮಾನದಲ್ಲಿ ಹೊರಟು, ಬೆಂಗಳೂರನ್ನು ರಾತ್ರಿ 9.55ಕ್ಕೆ ತಲುಪಲಿದ್ದಾರೆ. ನ.16ರಂದು ಸೊಲ್ಲಾಪುರದಲ್ಲಿಯೇ ಉಳಿದುಕೊಳ್ಳಲಿದ್ದು, 17ರಂದು ಭಾನುವಾರ ಬೆಳಗ್ಗೆ 11 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಲಾತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಮತಪ್ರಚಾರ ನಡೆಸಲಿದ್ದಾರೆ.
ಮಹಾರಾಷ್ಟ್ರದಲ್ಲಿ ಎಂವಿಎ ಮೈತ್ರಿಯೊಂದಿಗೆ ಕಾಂಗ್ರೆಸ್, ಶಿವಸೇನಾ (ಯುಬಿಟಿ) ಮತ್ತು ನ್ಯಾಷನಲ್ ಕಾಂಗ್ರೆಸ್ ಪಕ್ಷ (ಎಸ್ಪಿ) ಸ್ಪರ್ಧಿಸುತ್ತಿದೆ. ನವೆಂಬರ್ 20ರಂದು ಮಹಾರಾಷ್ಟ್ರದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 23ಕ್ಕೆ ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಚಾರ ನಡೆಸಿದ್ದಾರೆ.
ಮತ್ತಷ್ಟು ಓದಿ: ಮಹಾರಾಷ್ಟ್ರ: ಅಜಿತ್ ಪವಾರ್ ಇದ್ದ ಹೆಲಿಕಾಪ್ಟರ್, ಬ್ಯಾಗ್ಗಳನ್ನು ಪರಿಶೀಲಿಸಿದ ಚುನಾವಣಾ ಆಯೋಗದ ಅಧಿಕಾರಿಗಳು
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ನವೆಂಬರ್ 20 ರಂದು ರಾಜ್ಯದ 288 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಜಾರ್ಖಂಡ್ ಜೊತೆಗೆ ರಾಜ್ಯದ ಚುನಾವಣಾ ಫಲಿತಾಂಶಗಳು ನವೆಂಬರ್ 23 ರಂದು ಪ್ರಕಟಗೊಳ್ಳಲಿವೆ. ಬಿಜೆಪಿ, ಕಾಂಗ್ರೆಸ್, ಶಿವಸೇನೆ ಮತ್ತು ಎನ್‌ಸಿಪಿಯ ಎರಡೂ ಪಾಳಯಗಳು ಸೇರಿದಂತೆ ಒಟ್ಟು 158 ಪಕ್ಷಗಳು ಉತ್ತರ ಪ್ರದೇಶದ ನಂತರ ದೇಶದ ಎರಡನೇ ಅತಿದೊಡ್ಡ ರಾಜ್ಯ ಚುನಾವಣಾ ಸ್ಪರ್ಧೆಯಲ್ಲಿ ಕಣದಲ್ಲಿವೆ.
ಈ ಪಕ್ಷಗಳ ಹೊರತಾಗಿ ರಾಜ್ಯದಲ್ಲಿ 2086 ಸ್ವತಂತ್ರ ಅಭ್ಯರ್ಥಿಗಳೂ ಇದ್ದಾರೆ. ಚುನಾವಣಾ ಆಯೋಗದ ಪ್ರಕಾರ, ರಾಜ್ಯದ 288 ಸ್ಥಾನಗಳಿಗೆ ಒಟ್ಟು 4136 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 161 ಸ್ಥಾನಗಳನ್ನು ಗೆದ್ದಿತ್ತು. ಯುಪಿಎ 98 ಸ್ಥಾನ ಪಡೆದಿತ್ತು. ಇತರರು 29 ಸ್ಥಾನ ಪಡೆದಿದ್ದರು. ಇದರಲ್ಲಿ ಸಣ್ಣ ಪಕ್ಷಗಳು 16 ಸ್ಥಾನಗಳನ್ನು ಪಡೆದಿವೆ. 13 ಸ್ಥಾನಗಳಲ್ಲಿ ಪಕ್ಷೇತರರು ಗೆದ್ದಿದ್ದರು.
ಮಹಾರಾಷ್ಟ್ರ ಚುನಾವಣೆಯಲ್ಲಿ ಆರು ಪ್ರಮುಖ ಪಕ್ಷಗಳನ್ನು ಹೊರತುಪಡಿಸಿ 152 ಸಣ್ಣ ಪಕ್ಷಗಳು ಇವೆ. ಇವುಗಳಲ್ಲಿ ಟಿಪ್ಪು ಸುಲ್ತಾನ್ ಪಕ್ಷ, ಉತ್ತರ ಭಾರತ ವಿಕಾಸ ಸೇನೆ, ಪೀಸ್ ಪಾರ್ಟಿ, ನೇತಾಜಿ ಕಾಂಗ್ರೆಸ್ ಸೇನೆ, ನಿರ್ಭಯ್ ಮಹಾರಾಷ್ಟ್ರ ಪಕ್ಷ, ರಾಷ್ಟ್ರೀಯ ವಿಶ್ವ ನಾಯಕ ಪಕ್ಷ, ರಾಷ್ಟ್ರೀಯ ಉಲಮಾ ಕೌನ್ಸಿಲ್, ಜೈ ವಿದರ್ಭ ಪಕ್ಷದಂತಹ ಪಕ್ಷಗಳು ಸೇರಿವೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜನತಾದಳ ಸೆಕ್ಯುಲರ್ (ಜೆಡಿಎಸ್) ಕೂಡ ಕಣದಲ್ಲಿದೆ.
ರೈಟ್ ಟು ರೀಕಾಲ್ ಪಕ್ಷವು 18 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ರಾಜ್ಯದ 288 ಸ್ಥಾನಗಳಿಗೆ ಒಟ್ಟು 4136 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ