5ನೇ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ; ಬೆಂಗಳೂರಿನ ಈ ನಗರಗಳಿಗೆ ಭಾರಿ ಅನುಕೂಲ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿಯಲ್ಲಿನ ಬೆಂಗಳೂರು ಜಲಮಂಡಳಿ ಜಲಶುದ್ದೀಕರಣ ಘಟಕದ ಆವರಣದಲ್ಲಿ ಅದ್ಧೂರಿ ಸಮಾರಂಭ ಏರ್ಪಡಿಸಲಾಗಿದ್ದು ಸಮೃದ್ದ ಬೆಂಗಳೂರು ಧ್ಯೇಯವಾಕ್ಯದ ಅಡಿಯಲ್ಲಿ ಕಾವೇರಿ ಐದನೇ ಹಂತದ ಯೋಜನೆ ಲೋಕಾರ್ಪಣೆಗೊಳಿಸಲಾಗಿದೆ.
ಬೆಂಗಳೂರು, ಅ.16: ಬೆಂಗಳೂರಿಗರಿಗೆ BWSSB ಯಿಂದ ಗುಡ್ ನ್ಯೂಸ್. ದಶಕದ ಕನಸು ಕೊನೆಗೂ ನನಸಾಗಿದೆ. ಬೆಂಗಳೂರಿಗರಿಗೆ ಅನುಕೂಲವಾಗಲಿರುವ ಮಹತ್ವಾಕಾಂಕ್ಷೆ ಯೋಜನೆ 5ನೇ ಹಂತದ ಕಾವೇರಿ ಕುಡಿಯುವ ನೀರಿನ (Cauvery 5th Phase Project) ಯೋಜನೆಗೆ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಲೋಕಾರ್ಪಣೆಗೊಳಿಸಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹೊರವಲಯದ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷಿಯ ಯೋಜನೆ ಇದಾಗಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿಯಲ್ಲಿನ ಬೆಂಗಳೂರು ಜಲಮಂಡಳಿ ಜಲಶುದ್ದೀಕರಣ ಘಟಕದ ಆವರಣದಲ್ಲಿ ಅದ್ಧೂರಿ ಸಮಾರಂಭ ಏರ್ಪಡಿಸಲಾಗಿದ್ದು ಸಮೃದ್ದ ಬೆಂಗಳೂರು ಧ್ಯೇಯವಾಕ್ಯದ ಅಡಿಯಲ್ಲಿ ಕಾವೇರಿ ಐದನೇ ಹಂತದ ಯೋಜನೆ ಲೋಕಾರ್ಪಣೆಗೊಳಿಸಲಾಗಿದೆ.
ಜಪಾನ್ ಇಂಟರ್ ನ್ಯಾಷನಲ್ ಕೋ ಅಪರೇಶನ್ ಏಜೆನ್ಸಿ ಜೈಕಾ ಸಂಸ್ಥೆಯ ಸಹಭಾಗಿತ್ವದಲ್ಲಿ 4336 ಕೋಟಿ ರೂ.ವೆಚ್ಚದಲ್ಲಿ ಕೈಗೊಂಡಿರುವ ಈ ಯೋಜನೆಗೆ ನೀರು ಶುದ್ದೀಕರಣ ಘಟಕದ ಬಟನ್ ಪ್ರೆಸ್ ಮಾಡುವ ಮೂಲಕ ಚಾಲನೆ ನೀಡಲಾಯಿತು. ಬೆಂಗಳೂರಿಗೆ ಪ್ರತಿನಿತ್ಯ 2,250 ಎಂ.ಎಲ್.ಡಿಯಷ್ಟು ನೀರು ಬೇಕು. ಸಧ್ಯ ಕೇವಲ 1450 ಎಂ.ಎಲ್.ಡಿಯಷ್ಟು ಮಾತ್ರ ಸರಬರಾಜು ಆಗ್ತಿದೆ. ಹೀಗಾಗಿ ಕಾವೇರಿ 5ನೇ ಹಂತ ಭಾರಿ ಅನಿವಾರ್ಯವಾಗಿತ್ತು. ಸಧ್ಯ ಇದರಿಂದ 775 ಎಂ.ಎಲ್.ಡಿಯಷ್ಟು ನೀರನ್ನ ಸರಬರಾಜು ಮಾಡಬಹುದು.
ಇದನ್ನೂ ಓದಿ: ತಲಕಾವೇರಿಯಲ್ಲಿ ಗುರುವಾರ ಕಾವೇರಿ ಜಾತ್ರೆ, ತೀರ್ಥೋದ್ಭವಕ್ಕೆ ಕ್ಷಣಗಣನೆ
ಈ ಯೋಜನೆಯಿಂದ ಯಾರಿಗೆಲ್ಲಾ ಲಾಭ?
ಈ ಯೋಜನೆಯಿಂದ ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಟಿ.ದಾಸರಹಳ್ಳಿ, ಮಹದೇವಪುರ, ಯಲಹಂಕ, ರಾಜರಾಜೇಶ್ವರಿನಗರ ಹಾಗೂ ಬೊಮ್ಮನಹಳ್ಳಿ ವಲಯದ ವಿವಿಧ ಹಳ್ಳಿಗಳ ಮನೆ ಮನೆಗೂ ನೀರು ಸಪ್ಲೈ ಆಗಲಿದೆ. ಜಲ ಮಂಡಳಿಯಿಂದ ಬೆಂಗಳೂರು ನಗರದಲ್ಲಿ 10.64 ಲಕ್ಷ ಕಾವೇರಿ ನೀರಿನ ಸಂಪರ್ಕ ನೀಡಲಾಗಿದೆ. ಈ ಯೋಜನೆ ಜಾರಿ ಬಳಿಕ 4 ಲಕ್ಷ ಹೊಸ ಸಂಪರ್ಕ ನೀಡಲಾಗುತ್ತಿದೆ. ಇದುವರೆಗೆ ಪ್ರತಿ ತಿಂಗಳು ಬೆಂಗಳೂರಿನಲ್ಲಿ 1.58 ಟಿಎಂಸಿ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ಈ ಯೋಜನೆಯಿಂದ ಪ್ರತಿ ತಿಂಗಳು 2.4 ಟಿಎಂಸಿ ನೀರು ಸರಬರಾಜು ಆಗಲಿದೆ. ಕಳೆದ ಬೇಸಿಗೆಯಲ್ಲಿ ಬೆಂಗಳೂರಿಗರು ನೀರಿಗಾಗಿ ತತ್ತರಿಸಿ ಹೋಗಿದ್ದರು. ಈ ಯೋಜನೆ ನೀರಿನ ದಾಹ ತಣಿಸಲಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾವೇರಿ ನೀರನ್ನು ಹಂತ ಹಂತವಾಗಿ ಶುದ್ಧೀಕರಣವಾಗಿ ಬೆಂಗಳೂರಿಗೆ ತಲುಪಲಿದೆ. ಕಾವೇರಿ ನೀರು ಜಲ್ಲಿ, ಮರಳು ಹಾಗೂ ಇದ್ದಿಲಿನಿಂದ ಮೆದು ಮಾಡಲಾಗುತ್ತೆ. ಅಲ್ಲಿಂದ STP ಘಟಕಗಳಲ್ಲಿ ಶುದ್ಧೀಕರಣ ಮಾಡಲಾಗುತ್ತೆ. ಬಳಿಕ 2000 ಎಂಎಂ ವ್ಯಾಸದ ಪೈಪ್ ಲೈನ್ ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತೆ. ಸಧ್ಯ ತೊರೆಕಾಡನಹಳ್ಳಿಯಿಂದ ಹಾರೋ ಹಳ್ಳಿ ಪಂಪ್ ಮಾಡಲಾಗುತ್ತೆ. ಅಲ್ಲಿಂದ ಬೆಂಗಳೂರಿನ 110 ಹಳ್ಳಿಗೆ ನೀರು ಸರಬರಾಜು ಮಾಡಲಾಗುತ್ತೆ. ಮೊದಲಿಗೆ ಬೆಂಗಳೂರು ದಕ್ಷಿಣ ಹಾಗೂ ಪಶ್ಚಿಮ ಭಾಗಕ್ಕೆ ನೀರು ಪೂರೈಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ