ಟೆಕ್ಕಿಗಳ ಕಂಪನಿಯಲ್ಲಿ ರೈತರೇ ಬೇಕಂತೆ ಉದ್ಯೋಗಕ್ಕೆ ಯಾಕೆ ಗೊತ್ತಾ?

ಟೆಕ್ಕಿಗಳ ಕಂಪನಿಯಲ್ಲಿ ರೈತರೇ ಬೇಕಂತೆ ಉದ್ಯೋಗಕ್ಕೆ ಯಾಕೆ ಗೊತ್ತಾ?

ಮಂಡ್ಯ: ಎಲ್ಲೆಡೆ ಕೊರೊನಾ ಹಾವಳಿಯಿಂದಾಗಿ ಜನಜೀವನ ಅಸ್ತ್ಯವ್ಯಸ್ತವಾಗಿದೆ. ಕೆಲ ಆರೋಗ್ಯವಂತರೂ ಕೊರೊನಾ ಪೀಡಿತರಾಗತ್ತಿದ್ದಾರೆ, ಸಾಕಷ್ಟು ಯುವಕರು ಇದ್ದ ಕೆಲಸವನ್ನೂ ಕಳೆದುಕೊಳ್ಳುತ್ತಿದ್ದಾರೆ. ಇಂಥ ಸಂಕಷ್ಟದ ಸಮಯದಲ್ಲಿಯೂ ಕೆಲ ಸಾಫ್ಟೇವೇರ್‌ ಟೆಕ್ಕಿಗಳು ಮಂಡ್ಯದಲ್ಲಿ ತಾವೇ ಇತರರಿಗೆ ಉದ್ಯೋಗ ನೀಡಲು ಮುಂದಾಗಿದ್ದಾರೆ.

ಸಿಟಿ ಬಿಟ್ಟು ಹಳ್ಳಿ ಸೇರಿದ ಟೆಕ್ಕಿಗಳು
ಹೌದು ಅವರೆಲ್ಲ ದೊಡ್ಡ ದೊಡ್ಡ ಸಾಫ್ಟ್ ವೇರ್ ಕಂಪನಿಗಳಲ್ಲಿ ಇಂಜಿನಿಯರ್ ಆಗಿದ್ದವರು. ಕೈ ತುಂಬ ಸಂಬಳ ಪಡೆಯುತ್ತಾ ಮೆಟ್ರೋ ಸಿಟಿ ಬೆಂಗಳೂರಿನಲ್ಲಿ ಹೈ ಫೈ ಲೈಫ್‌ ಎಂಜಾಯ್‌ ಮಾಡುತ್ತಿದ್ದವರು. ಆದರೆ, ಹಳ್ಳಿಗಾಡಿನ ಬದುಕು ಮತ್ತು ಭವಣೆ ಎರಡನ್ನೂ ಕಂಡವರು. ಹಳ್ಳಿಯ ಜನರು ಉದ್ಯೋಗಕ್ಕಾಗಿ ಪಟ್ಟಣ ಸೇರುತ್ತಿರುವುದನ್ನ ಕಣ್ಣಾರೆ ಕಂಡಿದ್ದಾರೆ. ಹೀಗಾಗಿಯೇ ಈಗ ವಾಪಸ್ಸು ಹಳ್ಳಿಗೆ ಬಂದು ಏನಾದ್ರೂ ಸಾಧನೆ ಮಾಡಬೇಕೆಂದುಕೊಂಡಿದ್ದಾರೆ. ಇದಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನೆಲಮನೆ ಗ್ರಾಮ.

ಸಾಫ್ಟ್‌ವೇರ್‌ ಬಿಟ್ಟು ಗಾಣದೆಣ್ಣೆ ಹಿಡಿದ ಟೆಕ್ಕಿಗಳು
ಸಾಫ್ಟ್ ವೇರ್ ಇಂಜನಿಯರ್ ಆಗಿದ್ದ ಕಮಲೇಶ್ ತಾಯಿ ಮೂಲತಹ ನೆಲಮನೆ ಗ್ರಾಮದವರೆ. ಚಿಕ್ಕಂದಿನಿಂದಲೂ ಹಳ್ಳಿಯಲ್ಲೇ ಹುಟ್ಟಿ ಬೆಳೆದಿದ್ದ ಇವರು ಓದಿ ಇಂಜನಿಯರ್ ಆಗಿದ್ದರೂ ಕೈ ತುಂಬ ಸಂಬಳ ಬರುತ್ತಿದ್ದ ಕೆಲಸ ಬಿಟ್ಟು ನೆಲಮನೆಗೆ ಬಂದಿದ್ದಾರೆ. ಹಳ್ಳಿಗಾಡಿನ ಜನರಿಗೆ ಅನುಕೂಲವಾಗಬೇಕು ತಮ್ಮ ಬದುಕು ನಡೆಯಬೇಕೆಂಬ ಉದ್ದೇಶದಿಂದ ಎತ್ತಿನ ಗಾಣ ನಡೆಸಿ ಎಣ್ಣೆ ತೆಗೆಯುವ ಕಾಯಕ ಶುರುಮಾಡಿದ್ದಾರೆ. ಅದಕ್ಕೆ ಅವರು ಆಯ್ಕೆ ಮಾಡಿಕೊಂಡಿದ್ದು ಒಂದು ಪಾಳು ಬಿದ್ದ ಆಲೆ ಮನೆ.

ಸ್ಥಳೀಯ ರೈತರಿಗೆ ಉದ್ಯೋಗ ನೀಡುತ್ತಿರುವ ಯುವಕರು
ಪಾಳು ಬಿದ್ದಿದ್ದ ಆಲೆಮನೆಗೆ ಎತ್ತಿನ ಗಾಣ ನಡೆಸಲು ಬೇಕಾದ ಅಗತ್ಯ ಪರಿಕರಗಳನ್ನ ಅಳವಡಿಸಿ ಎಣ್ಣೆ ತೆಗೆಯುವ ಕಾಯಕ ಆರಂಭಿಸಿದ್ದಾರೆ. ಜೊತೆಗೆ ತಮ್ಮ ಜೊತೆಗೆ ಸ್ಥಳೀಯ ರೈತರಿಗೂ ಉದ್ಯೋಗ ನೀಡಬೇಕು ಮತ್ತು ತಮ್ಮ ಈ ಉದ್ಯೋಗಕ್ಕೂ ನೆರವಾಗಿರಬೇಕು ಅನ್ನೋ ಉದ್ದೇಶದಿಂದ ರೈತರನ್ನು ತಮ್ಮ ಜತೆ ಸೇರಿಸಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕಾಗಿ ರೈತರು ಬೇಕಾಗಿದ್ದಾರೆ ಅನ್ನೋ ಜಾಹಿರಾತು ನೀಡಿದ್ದಾರೆ. ತಿಂಗಳ ವೇತನದ ಜೊತೆಗೆ ಅವರಿಗೆ ಊಟ, ವಸತಿಯನ್ನೂ ನೀಡುವುದಾಗಿ ತಿಳಿಸಿದ್ದಾರೆ.

ಸದ್ಯ ಕೊರೊನಾ ಸಂಕಷ್ಟದ ಕಾಲದಲ್ಲಿ ಬಹುತೇಕ ಕಂಪನಿಗಳು ತಮ್ಮಲ್ಲಿರುವ ಕೆಲಸಗಾರರನ್ನ ಕೆಲಸದಿಂದ ವಜಾ ಮಾಡುತ್ತಿದ್ದಾರೆ. ಆದರೆ ಈ ಯುವಕರ ತಂಡ ಮಾತ್ರ ರೈತರಿಗೆ ಉದ್ಯೋಗ ನೀಡಲು ಮುಂದೆ ಬಂದಿರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.-ರವಿ ಲಾಲಿಪಾಳ್ಯ

Click on your DTH Provider to Add TV9 Kannada